ಲಕ್ಷ್ಮೇಶ್ವರ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ್ದ ಪ್ರಕರಣ: ಆರೋಪಿಗಳಿಗೆ ಕಾರಾಗೃಹ ಶಿಕ್ಷೆ

ಗದಗ: ಲಕ್ಷ್ಮೇಶ್ವರ ಪೊಲೀಸ್ ಠಾಣೆಗೆ 2017ರಲ್ಲಿ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಆರೋಪ ಸಾಬೀತಾಗಿರುವುದರಿಂದ ನ್ಯಾಯಾಲಯವು ಸೋಮವಾರ ಸಂಜೆ 23 ಆಪಾದಿತರಿಗೆ ಕಾರಾಗೃಹ ಶಿಕ್ಷೆ ಮತ್ತು ದಂಡ ವಿಧಿಸಿ ಆದೇಶ ಹೊರಡಿಸಿತು.
ನಗರದ ನ್ಯಾಯಾಲಯದಲ್ಲಿ ಶಿಕ್ಷೆ ಆದೇಶ ಪ್ರಕಟಿಸಿದ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ರಾಜೇಶ್ವರ ಶೆಟ್ಟಿ ಅವರು, ಪ್ರಕರಣದ ಆರೋಪಿಗಳಾಗಿರುವ ರವಿ ಹನುಮಂತಪ್ಪ ಹತ್ತಾಳ, ರಾಜು ಉಡಚಪ್ಪ ಹೊಳಲಾಪುರ ಅವರಿಗೆ ಐದು ವರ್ಷಗಳ ಕಠಿಣ ಕಾರಾಗೃಹವಾಸ ಮತ್ತು ಐದು ಲಕ್ಷ ರೂಪಾಯಿ ದಂಡ ವಿಧಿಸಿ ಆದೇಶಿಸಿದರು.
ಉಳಿದ ಆರೋಪಿಗಳಿಗೆ ಮೂರು ವರ್ಷಗಳ ಸಾದಾ ಶಿಕ್ಷೆ ಹಾಗೂ ಐದು ಸಾವಿರ ರೂಪಾಯಿ ದಂಡ ವಿಧಿಸಿ ಆದೇಶಿಸಿದರು.
05-02-2017ರ ಪ್ರಕರಣವಿದು. ಅಕ್ರಮ ಮರಳು ಸಾಗಿಸುತ್ತಿದ್ದ ಬಟ್ಟೂರ ಗ್ರಾಮದ ಶಿವಪ್ಪ ಡೋಣಿ ಎಂಬಾತನ ವಾಹನ ತಡೆದ ಪೊಲೀಸರು ತಪಾಸಣೆ ನಡೆಸಿದ ನಂತರ ಠಾಣೆಯಲ್ಲೇ ಶಿವಪ್ಪ ಡೋಣಿ ಸಾವನ್ನಪ್ಪಿದ್ದನು. ಇದರಿಂದ ರೊಚ್ಚಿಗೆದ್ದ ನೂರಾರು ಜನರು ಲಕ್ಷ್ಮೇಶ್ವರ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಬೆಂಕಿ ಹಚ್ಚಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು 112 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಈಗಾಗಲೇ ಎಂಟು ಜನರು ಮೃತಪಟ್ಟಿದ್ದು, ಓರ್ವ ಬಾಲಪರಾಧಿ ಇದ್ದಾನೆ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ಮಲ್ಲನಗೌಡ ದೊಡ್ಡಗೌಡರ ವಕಾಲತ್ತು ವಹಿಸಿದ್ದರು.