ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠ ಹಾಗೂ ಉತ್ತರಾದಿ ಮಠದ ನಡುವೆ ಅನೇಕ ವರ್ಷಗಳಿಂದ ನಡೆದಿರುವ ಸಂಘರ್ಷ ಕೊನೆಗೊಳ್ಳುವ ಕಾಲ ಸನ್ನಿಹಿತವಾಗಿದೆ. ಶ್ರೀರಾಘವೇಂದ್ರ ಸ್ವಾಮಿಗಳ ಮಠಕ್ಕೂ, ಉತ್ತರದಿಮಠಕ್ಕೂ ಇರುವ ನವಬೃಂದಾವನ ಇತ್ಯಾದಿ ನ್ಯಾಯಾಲಯದ ವಿವಾದವನ್ನು ಉಭಯ ಮಠದವರು ಸಾಮರಸ್ಯದಿಂದ ಚರ್ಚೆ ಮಾಡಿ ಇತ್ಯರ್ಥ ಮಾಡಿಕೊಳ್ಳಬೇಕು ಎಂದು ಸರ್ವೋಚ್ಛ ನ್ಯಾಯಾಲಯ ಸೂಚನೆ ಮಾಡಿತ್ತು. ಇದರ ಅನುಗುಣವಾಗಿ ಚೆನ್ನೈ ನಲ್ಲಿ ನಿವೃತ್ತ ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರ ಮಧ್ಯಸ್ಥಿಕೆಯಲ್ಲಿ ಉಭಯ ಮಠಗಳ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥರು ಹಾಗೂ ಸತ್ಯಾತ್ಮ ತೀರ್ಥರು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಪ್ರತಿಕ್ರಿಯಿಸಿರುವ ಶ್ರೀಗಳು, ಉಭಯ ಮಠಗಳ ಅಸಂಖ್ಯೆ ಭಕ್ತರ ಶ್ರೇಯೋಭಿವೃದ್ಧಿಗಾಗಿ ನಾವು ಶ್ರಮಿಸುತ್ತಿದ್ದೇವೆ. ಸಮಾಜದ ಹಿತಕ್ಕಾಗಿ, ಒಳ್ಳೆ ರೀತಿಯಲ್ಲಿ ವಿವಾದಗಳು ಆದಷ್ಟು ಬೇಗ ಪರಿಹರವಾಗಲಿ. ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಬೇಕಿದೆ. ಎಲ್ಲರೂ ಒಗ್ಗಟ್ಟಾಗಿ ಪರಿಷ್ಕಾರ ಕಂಡುಕೊಳ್ಳಲು ಪ್ರಯತ್ನ ಮಾಡಲಾಗುವುದು. ವಿವಾದ ಆದಷ್ಟು ಬೇಗ ಇತ್ಯರ್ಥವಾಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುವುದಾಗಿ ತಿಳಿಸಿದ್ದಾರೆ.
ವಿವಾದ ಹಿನ್ನಲೆ: ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಆನೆಗುಂದಿಯ ತುಂಗಭದ್ರಾ ನದಿ ನಡುಗಡೆಯಲ್ಲಿರುವ ನವವೃಂದಾವನದ ಯತಿಗಳ ಬೃಂದಾವನ ಪೂಜೆ ವಿಚಾರದಲ್ಲಿ ಅನೇಕ ದಶಕಗಳಿಂದ ಎರಡು ಮಠಗಳ ನಡುವೆ ಸಾಕಷ್ಟು ಜಗಳಾಗಿತ್ತು. ಯತಿಗಳ ಆರಾಧನೆ ವೇಳೆ ನವ ವೃಂದಾವನ ಗಡ್ಡೆಯಲ್ಲಿ ಬಹಳ ಸೂಕ್ಷ್ಮ ಪರಿಸ್ಥಿತಿ ನಿರ್ಮಾಣವಾಗಿರುತ್ತಿತ್ತು. ಯತಿಗಳ ಪೂಜೆಗೆ ನಮಗೆ ಅವಕಾಶ ನೀಡಬೇಕು ಎನ್ನುವುದು ಉಭಯ ಮಠಗಳ ಬೇಡಿಕೆ ಹಿನ್ನಲೆಯಲ್ಲಿ ವಿವಾದಗಳು ನಡೆಯುತ್ತಿದ್ದವು.
ಈ ವಿವಾದ ಇತ್ಯರ್ಥಕ್ಕೆ ಉಭಯ ಮಠಗಳು ನ್ಯಾಯಾಲಯ ಮೆಟ್ಟಿಲು ಏರಿದ್ದವು. ಸ್ಥಳೀಯ ನ್ಯಾಯಲಯಗಳು ಎರಡೂ ಮಠಕ್ಕೂ ಒಂದೂವರೆ ದಿನದ ಆಧಾರದಲ್ಲಿ ಪೂಜೆಗೆ ಅವಕಾಶ ನೀಡಿದ್ದರೂ ವಿವಾದ ಕೊನೆಗೊಂಡಿರಲಿಲ್ಲ. ಈಗ ಮಾತುಕತೆಯಿಂದ ಸಮಸ್ಯೆ ಬಗೆ ಹರಿಸಿಕೊಳ್ಳಲು ಸುಪ್ರಿಂ ಕೋರ್ಟ್ ಸೂಚನೆ ನೀಡಿರುವುದು ಭಕ್ತರಲ್ಲಿ ಆಶಾಭಾವನೆ ಮೂಡಿಸಿದೆ.