ರಾಜ್ಯ ಕಾಂಗ್ರೆಸ್ ಸರ್ಕಾರದಿಂದ‌‌ ಸೇಡಿನ ರಾಜಕೀಯ

ಕಲ್ಯಾಣ ಭಾಗದ ರೈತರಿಗೆ ಮಲತಾಯಿ ಧೋರಣೆ

ಯಾದಗಿರಿ: ಹೈಕೋರ್ಟ್ ಕಲಬುರಗಿ ಪೀಠ ನಾರಾಯಣಪುರ ಜಲಾಶಯದಿಂದ ಕಾಲುವೆಗೆ‌ ನೀರು ಹರಿಸುವಂತೆ ಆದೇಶ ನೀಡಿದರೂ ರಾಜ್ಯ ಸರ್ಕಾರ ಈ ಆದೇಶದ ಬಗ್ಗೆ ಮೇಲ್ಮನವಿ ಸಲ್ಲಿಸಿ ತಡೆಯಾಜ್ಞೆ ತಂದಿದೆ ಎಂದು ಮಾಜಿ ಸಚಿವ ನರಸಿಂಹ ನಾಯಕ್ ( ರಾಜುಗೌಡ ) ಆರೋಪಿಸಿದರು.

ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮುಖ್ಯಮಂತ್ರಿಗಳು ಮಹಾರಾಷ್ಟ್ರ ಸರ್ಕಾರಕ್ಕೆ ಪತ್ರ ಬರೆದು ಮೂರು ಟಿಎಂಸಿ ನೀರು ಹರಿಸುವಂತೆ ಪತ್ರ ಬರೆದಿರುವುದು ಕೇವಲ ನಾಟಕ ಮಾತ್ರ. ತೆಲಂಗಾಣಕ್ಕೆ ಜಲಾಶಯದಿಂದ ನೀರು ಹರಿಸಲು ಕಾಳಜಿ ವಹಿಸಿದ ರಾಜ್ಯ ಸರ್ಕಾರ ವಿಶೇಷವಾಗಿ ನಾರಾಯಣಪುರ ಜಲಾಶಯ ವ್ಯಾಪ್ತಿಯ ರೈತರ ಬಗ್ಗೆ ಯಾಕಿಷ್ಟು ಮತ್ಸರ ತೋರುತ್ತಿದೆ ಎಂಬುದು ತಿಳಿಯುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯಾದಗಿರಿ, ಕಲಬುರಗಿ ಮತ್ತು ರಾಯಚೂರು ಜಿಲ್ಲೆಗಳ ಬಗ್ಗೆ ಸರ್ಕಾರ ಸಂಪೂರ್ಣ ಮಲತಾಯಿ ಧೋರಣೆ ತೋರುತ್ತಿದೆ ಎಂಬುದು ಈ ತಡೆಯಾಜ್ಞೆ ತರುವ ಮೂಲಕ‌ ಸಾಬೀತು ಪಡಿಸಿದೆ. ಈ ಹೋರಾಟ ಕೇವಲ ರಾಜುಗೌಡನಿಗಲ್ಲ. ನಾನು ಸೇರಿದಂತೆ ಕನ್ನಡಪರ, ರೈತ ಸಂಘಟನೆಗಳು ಹೋರಾಟ ನಡೆಸಿದ್ದೇವೆ. ಯಾದಗಿರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದರೂ ಈ ಸರ್ಕಾರಕ್ಕೆ ರೈತರ ಗೋಳು ಕೇಳಿಸುತ್ತಿಲ್ಲ ಎಂದು ಕಿಡಿ ಕಾರಿದರು.

ಯಾದಗಿರಿ ಜಿಲ್ಲೆಯ ಕಾಂಗ್ರೆಸ್ ಶಾಸಕರು ತಡೆಯಾಜ್ಞೆ ಬಗ್ಗೆ ಚಕಾರ ಎತ್ತುತ್ತಿಲ್ಲ. ಈಗಾಗಲೇ ಜಿಲ್ಲೆಯಲ್ಲಿ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನೀರಿಗಾಗಿ ಕೆಂಭಾವಿ ಸಮೀಪದ ಮುದನೂರಿನಲ್ಲಿ ಕಾಲುವೆ ಗೇಟ್ ಮುರಿದು ಹಾಕಿದ್ದಾರೆ ಎಂದರು.

ಸಿಎಂ ಸಿದ್ಧರಾಮಯ್ಯ ಬಗ್ಗೆ ನಮಗೆವಗೌರವ ಇತ್ತು. ಆದರೆ, ಇಂದು ನಮ್ಮ ಭಾಗದ ರೈತರ ಬಗ್ಗೆ ನಿಷ್ಕಾಳಜಿ ವಹಿಸಿದ ಕಾರಣ ಅವರ ಮೇಲಿನ ಗೌರವ ಇಲ್ಲದಂತಾಗಿದೆ. ಕಾಲುವೆಗೆ ರೈತರಿಗೆ ನೀರು ಹರಿಸಿ ಎಂದು ನಾನು‌ ಮತ್ತೊಮ್ಮೆ ಜಿಲ್ಲೆಯ ಕಾಂಗ್ರೆಸ್ ಶಾಸಕರಿಗೆ ಮನವಿ ಮಾಡುತ್ತೇನೆ.‌ ದಯವಿಟ್ಟು ರೈತರ ಬಗ್ಗೆ ಕಾಳಜಿ ವಹಿಸಬೇಕು ಎಂದು ಹೇಳಿದರು.

ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯದ‌ ನೀರು ತರಕಾರಿ ಮಾರುಕಟ್ಟೆಯಾಗಿದೆ.‌ ಬಾಗಲಕೋಟ, ವಿಜಯಪುರ ಜಿಲ್ಲೆಯ ಜನಪ್ರತಿನಿಧಿಗಳು ತಮ್ಮ ಕ್ಷೇತ್ರಗಳಿಗೆ ಡ್ಯಾಂನಿಂದ‌ ಪ್ರತ್ಯೇಕ ನೀರು ಬಿಡಿಸಿಕೊಳ್ಳುತ್ತಾರೆ. ಆದರೆ, ನಮ್ಮ ಜಿಲ್ಲೆಯ ಶಾಸಕರು ನೀರಿನ ವಿಷಯದಲ್ಲಿ ದುರ್ಬಲರಾಗಿದ್ದಾರೆ.
ಪ್ರಮುಖರಾದ ದೇವೇಂದ್ರನಾಥ ನಾದ್, ಜಿಲ್ಲಾ ವಕ್ತಾರ ಹಣಮಂತ ಇಟಗಿ, ಭೀಮುನಾಯಕ, ಶಂಕರ ನಾಯಕ, ಭೀಮಣ್ಣ ಬೇವಿನಾಳ ಇದ್ದರು.