ರಸ್ತೆ ಅಪಘಾತ: ದಂಪತಿ ಸಾವು

ಬಸವಕಲ್ಯಾಣ: ಬೈಕ್‌ಗೆ ಸ್ಕಾರ್ಪಿಯೊ ವಾಹನ ಡಿಕ್ಕಿಯಾಗಿ ದಂಪತಿ ಮೃತಪಟ್ಟ ಘಟನೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ-65ರ ಮೇಲಿರುವ ಯರಬಾಗ್ ಕ್ರಾಸ್ ಬಳಿ ಜರುಗಿದೆ.
ತಾಲೂಕಿನ ನಾರಾಣಪೂರ ಗ್ರಾಮದ‌ ನಿವಾಸಿಗಳಾದ ಪ್ರಕಾಶ ರೇಕುಳಗೆ(50) ಹಾಗೂ ಅವರ ಪತ್ನಿ ಬಬಿತಾ(45) ಘಟನೆಯಲ್ಲಿ ಮೃತಪಟ್ಟ ದಂಪತಿ.
ತನ್ನ ಪತ್ನಿ ಜತೆಗೆ ಪ್ರಕಾಶ್ ಬೈಕ್ ಮೇಲೆ ಇಟಗಾ ಗ್ರಾಮಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಮಾರ್ಗ ಮಧ್ಯೆ ಯರಬಾಗ್ ಕ್ರಾಸ್ ಬಳಿ ಬೈಕ್‌ಗೆ ಮುಂಬೈ ಕಡೆಯಿಂದ ವೇಗವಾಗಿ ಬಂದ ಸ್ಕಾರ್ಪಿಯೋ ವಾಹನ ಡಿಕ್ಕಿಯಾಗಿ ಘಟನೆ ಸಂಭವಿಸಿದೆ.
ಅಪಘಾತದಲ್ಲಿ ಮಹಿಳೆ ಸ್ಥಳದಲ್ಲೇ ಮೃತಪಟ್ಟರೆ ಇವಳ ಪತಿಗೆ ಕಲಬುರಗಿ ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾನೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಸ್ಕಾರ್ಪಿಯೋ ವಾಹನದ ಚಾಲಕನಿಗೆ ಹುಮ್ನಾಬಾದನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ‌.
ಸುದ್ದಿ ತಿಳಿದ ಸಿಪಿಐ ಅಲಿಸಾಬ್, ಸಂಚಾರಿ ರಾಣಿ ಪಿಎಸ್ಐ ಸಿದ್ದೇಶ್ವರ ಸೇರದಂತೆ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ತನಿಖೆ ಮುಂದುವರಿಸಿದ್ದಾರೆ‌‌. ಈ ಕುರಿತು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ