ಯಾವಾಗ ಬೇಕಾದರೂ ಕೇಂದ್ರದ ವರಿಷ್ಠರು ರಾಜ್ಯಕ್ಕೆ ಬರಲಿದ್ದಾರೆ

ತುಮಕೂರು: ಸಚಿವ ರಾಜಣ್ಣನವರು ನಮ್ಮ ಪಕ್ಷದವರಲ್ಲ. ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ಯತ್ನಾಳ್‌ಗೆ ನೋಟಿಸ್ ಕೊಡುವುದಕ್ಕೆ ವಿಜಯೇಂದ್ರಗೆ ತಾಕತ್ ಇಲ್ಲ ಎಂಬ ಸಚಿವ ಕೆ.ಎನ್ ರಾಜಣ್ಣ ಹೇಳಿಕೆ ವಿಚಾರಕ್ಕೆ ಬೆಳ್ಳಾವಿ ಕಾರದ ಮಠದಲ್ಲಿ ಪ್ರತಿಕ್ರಿಯಿಸಿ, ರಾಜಣ್ಣನವರು ನಮ್ಮ ಪಕ್ಷದವರಲ್ಲ. ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡುವುದಿಲ್ಲ. ಈಗಾಗಲೇ ಕೇಂದ್ರದ ಶಿಸ್ತು ಸಮಿತಿ ನೋಟಿಸ್ ಕೊಟ್ಟಿದೆ. ನಮ್ಮ ವರಿಷ್ಠರು ಎಲ್ಲವನ್ನೂ ಗಮನಿಸುತ್ತಿದ್ದಾರೆ. 20ನೇ ತಾರೀಖಿನೊಳಗೆ ಉತ್ತರ ಸಿಗುತ್ತದೆ ಎಂದು ಅಂದೇ ಹೇಳಿದ್ದೇನೆ. ಜಿಲ್ಲಾಧ್ಯಕ್ಷರ ನೇಮಕ ಬಳಿಕ ದೆಹಲಿಯಲ್ಲಿ ಪ್ರಕ್ರಿಯೆ ನಡೆಯುತ್ತಿದೆ. ಯಾವಾಗ ಬೇಕಾದರೂ ಕೇಂದ್ರದ ವರಿಷ್ಠರು ರಾಜ್ಯಕ್ಕೆ ಬರಲಿದ್ದಾರೆ. ಎಲ್ಲ ಶಾಸಕರ ಜೊತೆ ಚರ್ಚಿಸಿ ಅಂತಿಮ ನಿರ್ಧಾರ ಮಾಡುತ್ತಾರೆ ಎಂದರು.
ಒಂಭತ್ತು ವಿವಿಗಳ ಮುಚ್ಚುವ ನಿರ್ಧಾರ ವಿಚಾರಕ್ಕೆ ಉತ್ತರಿಸಿ ಇದೊಂದು ಬಹಳ ದುರದೃಷ್ಟಕರ ವಿಚಾರವಾಗಿದೆ. ಬಿಜೆಪಿ ಸರ್ಕಾರದಲ್ಲಿ ಹೊಸ ವಿವಿಗಳಾಗಿದ್ದವು. 300-400 ಕೋಟಿ ರೂ. ಅನುದಾನ ನೀಡಬೇಕಾಗುತ್ತದೆ. ಅದನ್ನು ಮುಚ್ಚುವಂತ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಅನುದಾನ ನೀಡಿದರೆ ಮಾತ್ರ ವಿವಿಗಳು ಕೆಲಸ ಮಾಡಲು ಸಾಧ್ಯ. ಈ ನಿರ್ಧಾರ ಕಾಂಗ್ರೆಸ್ ಸರ್ಕಾರಕ್ಕೆ ಶೋಭೆ ತರುವುದಿಲ್ಲ. ಇದರಿಂದ ಮಕ್ಕಳಿಗೆ ಅನಾನುಕೂಲವಾಗಲಿದೆ. ಈಗಲಾದರೂ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು, ನಿರ್ಧಾರ ಬದಲಿಸಲಿ ಎಂದರು.