ವಿಜಯಪುರ: ವಕೀಲ ಖಾದ್ರಿ ಹಾಗೂ ಆಲಮೇಲ ಭಾಗದ ಕೆಲವು ಮುಖಂಡರು ಯತ್ನಾಳರ ಕುರಿತು ಅವಾಚ್ಯವಾಗಿ ಮಾತನಾಡಿರುವುದು ಸರಿಯಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹೇಳಿದ್ದಾರೆ.
ಪ್ರವಾದಿಗಳ ಕುರಿತು ಅವಾಚ್ಯವಾಗಿ ನಿಂದಿಸಿರುವ ಯತ್ನಾಳರದ್ದು ಮೊದಲನೇ ತಪ್ಪು. ಎರಡನೇಯದಾಗಿ ಆ ವಿಚಾರವನ್ನಿಟ್ಟುಕೊಂಡು ವೈಯಕ್ತಿಕವಾಗಿ ನಿಂದಿಸಿರುವುದು, ತಂದೆ-ತಾಯಿಯನ್ನು ನಿಂದಿಸಿರುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.
ಈ ಕುರಿತಂತೆ ಎರಡೂ ಕಡೆಯವರ ವಿಡಿಯೋಗಳನ್ನು ಆಧರಿಸಿ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜೊತೆ ಮಾತನಾಡಿದ್ದಾಗಿ ಅವರು ತಿಳಿಸಿದರು.
ಪಾಪ ತಂದೆ-ತಾಯಿ ಏನು ಮಾಡಿದ್ದಾರೆ? ವೈಯಕ್ತಿಕ ದಾಳಿ ಸರಿಯಲ್ಲ. ರಾಜಕೀಯವಾಗಿ ಏನು ಬೇಕಾದರೂ ಮಾತನಾಡಲಿ. ಸೈದ್ಧಾಂತಿಕವಾಗಿ ಮಾತನಾಡಲಿ. ಅದನ್ನು ಬಿಟ್ಟು ಬಸವನಾಡಿನಲ್ಲಿ ವೈಯಕ್ತಿಕ ಟೀಕೆ ಶೋಭೆ ತರುವಂಥದ್ದಲ್ಲ. ಈ ಇಬ್ಬರ ಜಗಳದಲ್ಲಿ ಬಸವನಾಡಿನ ಮರ್ಯಾದೆ ಹರಾಜಾಗುತ್ತಿದೆ ಎಂದರು.