ಮೂವರು ಬಾಲಕರು ಕೃಷ್ಣಾ ನದಿ ಪಾಲು

ಬೆನಕಟ್ಟಿ(ಬಾಗಲಕೋಟೆ): ಕೃಷ್ಣಾ ನದಿಯಲ್ಲಿ ಮೂವರು ವಿದ್ಯಾರ್ಥಿಗಳು ಮುಳುಗಿ ಮೃತಪಟ್ಟ ಘಟನೆ ಯುಗಾದಿಯ ದಿನದಂದೇ ಸಂಭವಿಸಿದೆ. ಹಬ್ಬದ ಸಂಭ್ರಮದಲ್ಲಿದ್ದ ಕುಟುಂಬ ಮತ್ತು ಊರಿಗೆ ಊರೇ ದುಃಖದ ಮಡುವಿನಲ್ಲಿ ಮುಳುಗಿತ್ತು.
ಆಲಮಟ್ಟಿ ಜಲಾಶಯದ ಕೆಳಗಿನ ಭಾಗದ ಕೃಷ್ಣಾ ನದಿಯಲ್ಲಿ ಪೂರ್ಣಾನಂದ ಆಶ್ರಮದ ಕೆಳಭಾಗದಲ್ಲಿ ರವಿವಾರ ಮಧ್ಯಾಹ್ನ ನಡೆದ ಈ ದುರ್ಘಟನೆಯಲ್ಲಿ ಬಾಗಲಕೋಟೆ ತಾಲೂಕಿನ ಇಲಾಳ ವಿದ್ಯಾರ್ಥಿಗಳಾದ ಪರನಗೌಡ ಮಲ್ಲಪ್ಪ ಬೀಳಗಿ (೧೭), ಮಲ್ಲಪ್ಪ ಬಸಪ್ಪ ಬಗಲಿ (೧೫) ಹಾಗೂ ಸೋಮಶೇಖರ ಬೊಮ್ಮಣ್ಣ ದೇವರಮನಿ (೧೪) ಸಾವನ್ನಪ್ಪಿದ್ದು, ಇವರ ಜೊತೆಗಿದ್ದ ಇಬ್ಬರು ವಿದ್ಯಾರ್ಥಿಗಳನ್ನು ಜನ ರಕ್ಷಣೆ ಮಾಡಿದ್ದಾರೆ.
ಇಲಾಳದ ಬೊಮ್ಮಲಿಂಗೇಶ್ವರ ಜಾತ್ರೆ ಮುಂದಿನ ಸೋಮವಾರ (ಏ.೭) ನಡೆಯಲಿದೆ. ಆ ಪ್ರಯುಕ್ತ ಯುಗಾದಿ ಪಾಡ್ಯದ ದಿನ ಪದ್ಧತಿಯಂತೆ ಬೊಮ್ಮಲಿಂಗೇಶ್ವರ ದೇವರ ಮೂರ್ತಿಯನ್ನು ಪಲ್ಲಕ್ಕಿಯೊಂದಿಗೆ ನದಿ ಸ್ನಾನಕ್ಕೆ ತೆಗೆದುಕೊಂಡು ಹೋದಾಗ ೫ ಜನ ಬಾಲಕರು ನದಿ ನೀರಲ್ಲಿ ಜಳಕಕ್ಕೆ ಎಂದು ಮುಂದಕ್ಕೆ ಸಾಗಿದ್ದಾರೆ. ಈಜು ಬಾರದ ಈ ಬಾಲಕರು ಆಳವಾದ ತಗ್ಗಿಗೆ ಇಳಿಯುತ್ತಿದ್ದಂತೆ ನೀರಲ್ಲಿ ಮುಳುಗಿದ್ದಾರೆ. ಇದನ್ನು ನೋಡಿದ ಪಕ್ಕದಲ್ಲಿದ್ದ ಜನ ತಕ್ಷಣ ನೀರಿಗಿಳಿದು ಇಬ್ಬರನ್ನು ರಕ್ಷಿಸಿದ್ದಾರೆ. ಅಷ್ಟರೊಳಗೆ ಮೂವರು ಮುಳುಗಿ ಸಾವನ್ನಪ್ಪಿದರು.
ಸೋಮಶೇಖರ ದೇವರಮನಿ ಮೃತದೇಹ ರವಿವಾರ ಸಂಜೆ ಪತ್ತೆಯಾಗಿದ್ದು, ಇನ್ನಿಬ್ಬರ ಮೃತದೇಹಗಳ ಪತ್ತೆ ಕಾರ್ಯ ಸೋಮವಾರವೂ ಮುಂದುವರೆದಿದೆ. ಅಗ್ನಿ ಶಾಮಕದಳದ ತಂಡ ಇಬ್ಬರು ಬಾಲಕರ ಮೃತದೇಹ ಪತ್ತೆ ಕಾರ್ಯ ನಡೆಸಿದ್ದು, ಇಲಾಳ ಗ್ರಾಮದ ಯುವಕರು ಸಹ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ. ಘಟನಾ ಸ್ಥಳಕ್ಕೆ ಹೆಚ್ಚುವರಿ ಎಸ್.ಪಿ.ಮಹಾಂತೇಶ ದಿಡ್ಡಿ, ಡಿವೈಎಸ್‌ಪಿ ಗಜಾನನ ಸುತಾರ, ಗ್ರಾಮೀಣ ಸಿಪಿಐ ಎಚ್.ಆರ್.ಪಾಟೀಲ, ಪಿಎಸ್‌ಐ ಆರ್.ಡಿ.ಲಮಾಣಿ ಭೆಟ್ಟಿ ನೀಡಿದ್ದರು.