ಮುಸಲ್ಮಾನರ ಕಲ್ಯಾಣಕ್ಕೆ ಸರ್ಕಾರ ಏನೂ ಮಾಡಿಲ್ಲ

ಜಗದೀಶ ಶೆಟ್ಟರ್‌

ಹುಬ್ಬಳ್ಳಿ: ಮುಸಲ್ಮಾನರ ಕಲ್ಯಾಣಕ್ಕಾಗಿ ಕಾಂಗ್ರೆಸ್ ಸರ್ಕಾರ ಏನನ್ನೂ ಮಾಡುತ್ತಿಲ್ಲ, ಕೇವಲ ಚುನಾವಣೆಗೋಸ್ಕರ ಅವರನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಮತ್ತು ಸಂಸದ ಜಗದೀಶ ಶೆಟ್ಟರ ಆರೋಪಿಸಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಸತಿ ಯೋಜನೆಯಲ್ಲಿ ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡುವುದಾಗಿ ಸರ್ಕಾರ ಘೋಷಿಸಿದೆ. ಕಾಂಗ್ರೆಸ್ ಪಕ್ಷಕ್ಕೆ ಕೇವಲ ಮುಸಲ್ಮಾನರು ಮಾತ್ರ ಬೆಂಬಲ ನೀಡಿದ್ದಾರಾ ? ಬೇರೆ ಧರ್ಮದವರು ಬೆಂಬಲ ನೀಡದೇ ಇವರು ಅಧಿಕಾರಕ್ಕೆ ಬಂದಿದ್ದಾರಾ ? ಹೀಗಿರುವಾಗ ಎಲ್ಲರನ್ನೂ ಸಮನಾಗಿ ಕಾಣುವುದನ್ನು ಬಿಟ್ಟು ಕೇವಲ ತುಷ್ಠೀಕರಣ ರಾಜಕಾರಣ ಮಾಡುವುದು ಸರಿಯಲ್ಲ. ಇದು ಹೀಗೇ ಮುಂದುವರೆದರೆ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡು ಪರದಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಅಮೇರಿಕಾ ಅಧ್ಯಕ್ಷ ಟ್ರಂಪ್‌ನಿಂದ ಭಾರತ-ಪಾಕಿಸ್ತಾನ್ ಕದನ ವಿರಾಮ ವಿಚಾರವಾಗಿ ಮಾತನಾಡಿದ ಅವರು, ಮೋದಿ ಅವರು ಸಭೆಗಾಗಿ ಕೆನಡಾಕ್ಕೆ ಹೋಗಿದ್ದರು, ಅಲ್ಲಿಯೇ ಟ್ರಂಪ್ ಜೊತೆ ಮಾತನಾಡಿದ್ದಾರೆ. ಈ ವೇಳೆ `ಇಬ್ಬರು ಬುದ್ದಿವಂತರು, ಮನವಿ ಮಾಡಿಕೊಂಡು ಯುದ್ಧ
ನಿಲ್ಲಿಸಿದ್ದಾರೆ’ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ. ಅದಾಗ್ಯೂ ಕಾಂಗ್ರೆಸ್ ನಾಯಕರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಕೆಲವು ವಿಚಾರಗಳನ್ನ ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ ಎಂದರು.

ಹಿಂದೂಗಳನ್ನ ಟಾರ್ಗೆಟ್ ಮಾಡಲಾಗುತ್ತಿದೆ ಎಂಬ ವಿಚಾರಕ್ಕೆ ಪ್ರತಿಕ್ರಯಿಸಿದ ಅವರು, ಮಂಗಳೂರಲ್ಲಿ ಆಗಿರುವ ಘಟನೆಯಿಂದ ನಮಗೂ ಬೇಸರವಿದೆ. ಆರೋಪಿಗಳನ್ನು ಶಿಕ್ಷೆಗೆ ಒಳಪಡಿಸಿ. ಆದರೆ, ಇಡೀ ಹಿಂದೂ ಸಮಾಜವನ್ನ ಟಾರ್ಗೆಟ್ ಮಾಡುವುದು ಸಮಂಜಸವಲ್ಲ. ಅಲ್ಲಿ
ಕಾನೂನು ಸುವ್ಯವಸ್ಥೆ ಸಮರ್ಪಕವಾಗಿದ್ದರೆ ಯಾವ ಘಟನೆಗಳೂ ನಡೆಯುತ್ತಿರಲಿಲ್ಲ. ಅದನ್ನು ಬಿಟ್ಟು ಸಿಎಂ ಕುರ್ಚಿಗೆ, ಸಚಿವರಾಗಲು ಫೈಟ್ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು. ಅಲ್ಲದೆ, ಲೋಕಾಯುಕ್ತ ಎಸ್‌ಪಿ ಒಬ್ಬರ ಮೇಲೆ ಗಂಭೀರ ಭ್ರಷ್ಟಾಚಾರ ಆರೋಪ ಕೇಳಿ ಬಂದಿದೆ.
ಇದು ಬೇಲಿಯೇ ಎದ್ದು ಹೊಲ ಮೇಯ್ದ ಕಥೆಯಂತಿದೆ. ಕಂದಾಯ ಇಲಾಖೆಯಲ್ಲಿನ ಭ್ರಷ್ಟಾಚಾರವನ್ನು ಖುದ್ದು ಕೃಷ್ಣ ಭೈರೇಗೌಡರೇ ಹೊರ ಹಾಕಿದ್ದಾರೆ. ಇವೆಲ್ಲವೂ ಸಚಿವರ ಗಮನಕ್ಕೆ ಇಲ್ಲವೇ ಎಂದು ಗುಡುಗಿದರು.