ಉಡುಪಿ: ಮೀನು ಕದ್ದ ಆರೋಪದಡಿ ಲಮಾಣಿ ಜನಾಂಗಕ್ಕೆ ಸೇರಿದ ಪರಿಶಿಷ್ಟ ಜಾತಿಯ ಮಹಿಳೆಯೋರ್ವರನ್ನು ಕಟ್ಟಿಹಾಕಿ ಥಳಿಸಿದ ಘಟನೆ ಮಲ್ಪೆ ಮೀನುಗಾರಿಕೆ ಬಂದರಿನಲ್ಲಿ ನಡೆದಿದ್ದು, ಆ ವೀಡಿಯೊ ವೈರಲ್ ಆಗಿದೆ.
ಬುದ್ದಿವಂತರ ಜಿಲ್ಲೆಯಲ್ಲಿ ನಡೆದ ಈ ಅಮಾನವೀಯ ಘಟನೆಯನ್ನು ತಡೆಯುವ ಬದಲು, ನೆರೆದ ಅಷ್ಟೂ ಮಂದಿ ವೀಡಿಯೊ ಚಿತ್ರೀಕರಣ ಹಾಗೂ ವಿಕೃತ ಸಂತಸ ವ್ಯಕ್ತಪಡಿಸುತ್ತಿರುವುದು ಜನತೆಯ ಮನಃಸ್ಥಿತಿಗೆ ಕನ್ನಡಿಯಂತಿದೆ. ಘಟನೆ ಕುರಿತು ಜಿಲ್ಲಾಧಿಕಾರಿಯನ್ನು ಪ್ರಶ್ನಿಸಿದಾಗ, ಪ್ರಕರಣ ಮಲ್ಪೆ ಠಾಣೆಯಲ್ಲಿ ದಾಖಲಾಗಿದ್ದು, ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚಿಸಿರುವುದಾಗಿ ಡಿಸಿ ಡಾ.ವಿದ್ಯಾಕುಮಾರಿ ತಿಳಿಸಿದರು. ಕಾನೂನು ಕೈಗೆತ್ತಿಕೊಳ್ಳುವುದು ಕೂಡದು. ಇಂಥ ಅಮಾನವೀಯ ಮರುಕಳಿಸದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.