ಮಹಾಲಕ್ಷ್ಮೀ ದೇವಾಲಯದಲ್ಲಿ ಕಳ್ಳತನಕ್ಕೆ ಯತ್ನ: ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಚಳ್ಳಕೆರೆ: ಚಳ್ಳಕೆರೆ ಪಟ್ಟಣದ ಶಿವನಗರದಲ್ಲಿರುವ ಶ್ರೀ ಮಹಾಲಕ್ಷ್ಮೀ ದೇವಾಲಯದಲ್ಲಿ ಕಳೆದ ರಾತ್ರಿ ಕಳ್ಳತನ ಯತ್ನ ನಡೆದಿದ್ದು, ಕಳ್ಳನ ಪ್ರಯತ್ನ ವಿಫಲವಾಗಿದೆ. ಈ ಕೃತ್ಯದ ಸಂಪೂರ್ಣ ದೃಶ್ಯಾವಳಿ ದೇವಾಲಯದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಬೆಳಗಿನ ಜಾವ ಸುಮಾರು 3 ಗಂಟೆ ಸುಮಾರಿಗೆ ಮಂಕಿಕ್ಯಾಪ್ ಧರಿಸಿದ್ದ ಒಬ್ಬ ಕಳ್ಳ ದೇವಾಲಯದ ಆವರಣ ಪ್ರವೇಶಿಸಿದ್ದಾನೆ. ದೇವಾಲಯದ ಹುಂಡಿ ಪೆಟ್ಟಿಗೆಯನ್ನು ಒಡೆಯಲು ಆತ ಎಷ್ಟೇ ಪ್ರಯತ್ನಿಸಿದರೂ, ಬೀಗ ಮುರಿಯಲು ಸಾಧ್ಯವಾಗದೆ ಕಡೆಗೆ ವಿಫಲನಾಗಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಇದರಿಂದ ದೇವಾಲಯಕ್ಕೆ ಯಾವುದೇ ನಷ್ಟ ಉಂಟಾಗಿಲ್ಲ.
ಘಟನೆ ಕುರಿತು ಮಾಹಿತಿ ಪಡೆದ ಚಳ್ಳಕೆರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಕಳ್ಳನನ್ನು ಪತ್ತೆಹಚ್ಚಲು ತನಿಖೆ ಆರಂಭಿಸಿದ್ದಾರೆ. ಈ ಕುರಿತಂತೆ ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.