ರಾಜೀವ್ ತಾರಾನಾಥ್
ವಿಶ್ವ ಶ್ರೇಷ್ಠ ಸರೋದ್ ವಾದಕ ಪಂಡಿತ್ ರಾಜೀವ್ ತಾರಾನಾಥ್ (೯೧) ಜೂನ್ ೧೧ರಂದು ನಿಧನರಾದರು. ಬೆಂಗಳೂರಿನಲ್ಲಿ ಜನಿಸಿದ ರಾಜೀವ್ ತಾರಾನಾಥರು ತಂದೆ ಪಂಡಿತ ತಾರಾನಾಥರಿಂದ ಸಂಗೀತದಲ್ಲಿ ಆರಂಭಿಕ ತರಬೇತಿಯನ್ನು ಪಡೆದು, ೯ನೇ ವಯಸ್ಸಿನಲ್ಲಿಯೇ ಸಾರ್ವಜನಿಕ ಕಾರ್ಯಕ್ರಮ ನೀಡಿದ್ದರು. ೨೦ನೇ ವಯಸ್ಸಿನಲ್ಲಿ ಅಕಾಶವಾಣಿ ರೇಡಿಯೋಗೆ ಹಾಡಿ ಖ್ಯಾತಿ ಪಡೆದಿದ್ದರು. ಮಹಾನ್ ಸರೋದ್ ವಾದಕ ಎಂದೇ ಪ್ರಸಿದ್ಧರಾಗಿದ್ದ ಉಸ್ತಾದ್ ಅಲಿ ಅಕ್ಬರ್ ಖಾನ್ ಅವರ ಶಿಷ್ಯರಾದ ರಾಜೀವ್ ಅವರು ಪಂಡಿತ್ ರವಿಶಂಕರ್ ಮತ್ತು ಅನ್ನಪೂರ್ಣಾದೇವಿಯವರ ಮಾರ್ಗದರ್ಶನವನ್ನೂ ಪಡೆದರು. ಅವರ ಸರೋದ್ನ ಪಾಂಡಿತ್ಯವನ್ನು ಗುರುತಿಸಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಪದ್ಮಶ್ರೀ ಸೇರಿದಂತೆ ಹಲವಾರು ಪುರಸ್ಕಾರಗಳನ್ನು ನೀಡಿ ಗೌರವಿಸಲಾಗಿದೆ.
ಉಸ್ತಾದ್ ರಶೀದ್ ಖಾನ್
ಹೆಸರಾಂತ ಹಿಂದುಸ್ಥಾನಿ ಗಾಯಕ ಉಸ್ತಾದ್ ರಶೀದ್ ಖಾನ್ (೫೫) ಜನವರಿ ೯ರಂದು ಕೋಲ್ಕತ್ತಾದಲ್ಲಿ ನಿಧನರಾದರು. ೧೯೬೮ರ ಜುಲೈ ೧ರಂದು ಜನಿಸಿದ್ದ ರಶೀದ್ ಖಾನ್, ರಾಮಪುರ-ಸಹಸ್ವಾನ್ ಘರಾಣೆಗೆ ಸೇರಿದವರು. ಈ ಘರಾಣೆಯ ಸಂಸ್ಥಾಪಕ ಇನಾಯತ್ ಹುಸೇನ್ ಖಾನ್ ಅವರ ಮೊಮ್ಮಗನೂ ಹೌದು. ರಶೀದ್ ಖಾನ್ ಅವರ ದನಿಯನ್ನು ಕೇಳಿದ ಭಾರತರತ್ನ ಪಂ. ಭೀಮ್ಸೇನ್ ಜೋಶಿ ಅವರೇ ಒಮ್ಮೆ, ಹಿಂದುಸ್ಥಾನಿ ಸಂಗೀತದ ಭವಿಷ್ಯದ ಭರವಸೆ ಎಂದು ಹೊಗಳಿದ್ದರು. ೨೦೨೨ರಲ್ಲಿ ಅವರಿಗೆ ದೇಶದ ಮೂರನೇ ಅತ್ಯುನ್ನತ ನಾಗರಿಕ ಪುರಸ್ಕಾರವಾದ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.
ಡಾ. ಪ್ರಭಾ ಅತ್ರೆ
ಪ್ರಸಿದ್ಧ ಹಿಂದೂಸ್ತಾನಿ ಗಾಯಕಿ ಡಾ. ಪ್ರಭಾ ಅತ್ರೆ (೯೨) ಅವರು ಜನವರಿ ೧೩ರಂದು ಪುಣೆಯಲ್ಲಿರುವ ಅವರ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದರು. ೧೯೩೨ರ ಸೆಪ್ಟೆಂಬರ್ ೧೩ರಂದು ಜನಿಸಿದ ಅವರು ಕಾನೂನು ಪದವೀಧರರಾಗಿದ್ದರು. ಸಂಗೀತದಲ್ಲಿ ಡಾಕ್ಟರೇಟ್ ಪಡೆದಿದ್ದರು. ಬಹುಮುಖಿ ವ್ಯಕ್ತಿತ್ವದ ಅವರು ಗಾಯಕಿ ಮಾತ್ರವಲ್ಲದೆ ಶಿಕ್ಷಣತಜ್ಞೆಯಾಗಿ, ಸಂಶೋಧಕಿಯಾಗಿ, ಲೇಖಕಿಯಾಗಿ ಗುರುತಿಸಿಕೊಂಡಿದ್ದರು. ಕಿರಾಣಾ ಘರಾಣೆಯ ಗಾಯಕಿಯಾಗಿದ್ದ ಅವರಿಗೆ ೧೯೯೦ರಲ್ಲಿ ಪದ್ಮಶ್ರೀ, ೨೦೦೨ರಲ್ಲಿ ಪದ್ಮಭೂಷಣ ಹಾಗೂ ೨೦೨೨ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.
ಪಂಡಿತ್ ರಾಮ್ ನಾರಾಯಣ್
ಖ್ಯಾತ ಸಾರಂಗಿ ವಾದಕ ಪಂಡಿತ್ ರಾಮ್ ನಾರಾಯಣ್ (೯೬) ಅವರು ನವೆಂಬರ್ ೯ರಂದು ನಿಧನರಾದರು. ವಯಸ್ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾರು. ರಾಜಸ್ಥಾನ ಮೂಲದ ರಾಮ್ ನಾರಾಯಣ್ ಅವರು ೧೯೨೭ರಲ್ಲಿ ಮೇವಾಡದಲ್ಲಿ ಜನಿಸಿದ್ದರು. ಸಾರಂಗಿ ಮಾಂತ್ರಿಕ ಎಂದು ಗುರುತಿಸಿಕೊಂಡಿದ್ದರು ಅವರಿಗೆ ಪದ್ಮಭೂಷಣ, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಗಳು ಸೇರಿದಂತೆ ಅನೇಕ ಪುರಸ್ಕಾರಗಳು ಲಭಿಸಿದ್ದವು.
ಉಸ್ತಾದ್ ಜಾಕಿರ್ ಹುಸೇನ್
ಅಂತಾರಾಷ್ಟ್ರೀಯ ಖ್ಯಾತಿಯ ತಬಲಾ ಮಾಂತ್ರಿಕ ಜಾಕಿರ್ ಹುಸೇನ್ (೭೩) ಹೃದಯಸಂಬಂಧಿ ಕಾಯಿಲೆಯಿಂದ ಡಿ. ೧೫ರಂದು ಅಮೆರಿಕದಲ್ಲಿ ನಿಧನರಾಗಿದರು. ಅವರ ಆರೋಗ್ಯ ಸ್ಥಿತಿ ತೀರ ಗಂಭೀರವಾಗಿದ್ದರಿಂದ ಸ್ಯಾನ್ಫ್ರಾನ್ಸಿಸ್ಕೋದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಖ್ಯಾತ ತಬಲಾ ವಾದಕ ಅಲ್ಲಾ ರಖಾ ಅವರ ಹಿರಿಯ ಮಗನಾಗಿ ೧೯೫೧ರ ಮಾರ್ಚ್ ೯ರಂದು ಮುಂಬೈನಲ್ಲಿ ಜನಿಸಿದ ಅವರು, ಬಾಲ್ಯದಿಂದಲೇ ತಬಲಾ ಅಭ್ಯಾಸ ಮಾಡಿದವರು. ತಬಲಾ ವಾದನದ ಜತೆಗೆ ಸಂಗೀತ ನಿರ್ದೇಶನದಲ್ಲಿಯೂ ತೊಡಗಿಸಿಕೊಂಡಿದ್ದರು. ೫ ಬಾರಿ ಗ್ರ್ಯಾಮಿ ಪ್ರಶಸ್ತಿಗಳನ್ನು ಗೆದ್ದಿದ್ದ ಅವರು ಜಗತ್ತಿನಾದ್ಯಂತ ಸಾವಿರಾರು ಸಂಗೀತ ಕಛೇರಿಗಳನ್ನು ನೀಡಿದ್ದರು. ಅವರ ಅಸಾಧಾರಣ ಸಾಧನೆಗೆ ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿಗಳೂ ಸಂದಿವೆ.
ಶ್ಯಾಮ್ ಬೆನಗಲ್
ಖ್ಯಾತ ಚಿತ್ರ ನಿರ್ದೇಶಕ ಶ್ಯಾಮ್ ಬೆನಗಲ್(೯೦) ಡಿಸೆಂಬರ್ ೨೩ರ ಸಂಜೆ ಮುಂಬಯಿಯಲ್ಲಿ ನಿಧನರಾದರು. ಕಿಡ್ನಿ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿದ್ದ ಅವರು ಮುಂಬೈನ ವೊಕಾರ್ಡ್ ಆಸ್ಪತ್ರೆಯಲ್ಲಿ ನಿಧನರಾಗಿದರು. ಮಂಥನ್, ಜುಬೇದಾ ಮತ್ತು ಸರ್ದಾರಿ ಬೇಗಂ ಅವರ ಪ್ರಸಿದ್ಧ ಚಲನಚಿತ್ರಗಳು. ಭಾರತ ಸರ್ಕಾರ ೧೯೭೬ರಲ್ಲಿ ಪದ್ಮಶ್ರೀ ಮತ್ತು ೧೯೯೧ರಲ್ಲಿ ಪದ್ಮಭೂಷಣ ನೀಡಿ ಶ್ಯಾಮ ಅವರನ್ನು ಗೌರವಿಸಿತ್ತು. ಶ್ಯಾಮ್ ಬೆನಗಲ್ ಡಿಸೆಂಬರ್ ೧೪ರಂದು ಸ್ನೇಹಿತರು ಮತ್ತು ಕುಟುಂಬದೊಂದಿಗೆ ೯೦ನೇ ಜನ್ಮದಿನವನ್ನು ಆಚರಿಸಿಕೊಂಡಿದ್ದರು.
ಎಂ. ಟಿ. ವಾಸುದೇವನ್ ನಾಯರ್
ಖ್ಯಾತ ಮಲಯಾಳಂ ಲೇಖಕ, ಚಲನಚಿತ್ರ ನಿರ್ದೇಶಕ ಎಂ. ಟಿ. ವಾಸುದೇವನ್ ನಾಯರ್(೯೧) ಡಿಸೆಂಬರ್ ೨೬ರಂದು ಕೋಯಿಕ್ಕೋಡ್ನಲ್ಲಿ ನಿಧನರಾದರು. ಕಾದಂಬರಿಗಳು, ಸಣ್ಣ ಕಥೆಗಳು, ಚಿತ್ರಕಥೆಗಳು, ಮಕ್ಕಳ ಸಾಹಿತ್ಯ, ಪ್ರವಾಸ ಬರವಣಿಗೆ ಮತ್ತು ಪ್ರಬಂಧಗಳು ಹೀಗೆ ಹಲವಾರು ಪ್ರಕಾರಗಳಲ್ಲಿ ಬರೆದು ಛಾಪು ಮೂಡಿಸಿದ್ದರು. ಅವರು ಮಲಯಾಳಂ ಚಿತ್ರರಂಗದ ಕ್ಲಾಸಿಕ್ ಚಿತ್ರ `ನಿರ್ಮಾಲ್ಯಂ’ ಮತ್ತು ಎರಡು ಸಾಕ್ಷ್ಯಚಿತ್ರಗಳು ಸೇರಿದಂತೆ ಆರು ಚಿತ್ರಗಳನ್ನು ನಿರ್ದೇಶಿಸಿದ್ದರು. ಜ್ಞಾನಪೀಠ ಪ್ರಶಸ್ತಿ, ಪದ್ಮಭೂಷಣ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದಿದ್ದರು. ಮೂರು ಬಾರಿ ಕೇರಳದ ಅತ್ಯುತ್ತಮ ಚಲನಚಿತ್ರ ನಿರ್ದೇಶಕ ಪ್ರಶಸ್ತಿ ಪಡೆದಿದ್ದರು. ಅವರ ಚಿತ್ರಕಥೆಗಳು ನಾಲ್ಕು ಬಾರಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಮತ್ತು ೧೧ ಬಾರಿ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದಿವೆ.
ತುಳಸಿ ಗೌಡ
ಪದ್ಮಶ್ರೀ ಪುರಸ್ಕೃತ ವೃಕ್ಷ ಮಾತೆ ತುಳಸಿಗೌಡ (೮೬) ಡಿಸೆಂಬರ್ ೧೬ರಂದು ನಿಧನರಾದರು. ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಹೊನ್ನಳ್ಳಿ ಗ್ರಾಮದ ಹಾಲಕ್ಕಿ ಬುಡಕಟ್ಟು ಕುಟುಂಬದಲ್ಲಿ ಜನಿಸಿದ್ದ ಅವರು ಪರಿಸರವೇ ನನ್ನ ಉಸಿರು' ಎಂದು ತಮ್ಮ ಜೀವನದುದ್ದಕ್ಕೂ ಲಕ್ಷಾಂತರ ಮರಗಳನ್ನು ಬೆಳೆಸಿ ಪಾಲನೆ ಪೋಷಣೆ ಮಾಡುವ ಮೂಲಕ
ವೃಕ್ಷ ಮಾತೆ’ ಎಂದು ಕರೆಯಲ್ಪಡುತ್ತಿದ್ದರು. ಯಾವುದೇ ಔಪಚಾರಿಕ ಶಿಕ್ಷಣವಿಲ್ಲದಿದ್ದರೂ ಶಾಲಾ ಮಕ್ಕಳಿಗೆ ಗಿಡಗಳನ್ನು ಬೆಳೆಸುವ ತರಬೇತಿ ನೀಡುತ್ತಿದ್ದರು. ಪ್ರತಿ ವರ್ಷ ೩೦ ಸಾವಿರ ಸಸಿಗಳನ್ನು ಪೋಷಿಸಿದ ಕೀರ್ತಿಗೆ ಭಾಜನರಾಗಿದ್ದರು. ಯಾವ ಯಾವ ಮರದಿಂದ ಏನೇನು ಪ್ರಯೋಜನ, ಯಾವ ಜಾತಿಯ ಸಸಿಗಳಿಗೆ ಎಷ್ಟು ನೀರಿನ ಅವಶ್ಯಕತೆ ಇದೆ ಮುಂತಾದ ಹಲವಾರು ಮಾಹಿತಿಗಳ ಕಣಜವಾಗಿದ್ದ ತುಳಸಿಗೌಡ `ಅರಣ್ಯದ ವಿಶ್ವಕೋಶ’ ಎಂದೇ ಜನಜನಿತರಾಗಿದ್ದರು. ಅವರ ಪರಿಸರ ಕಾಯಕಕ್ಕೆ ಕೇಂದ್ರ ಸರ್ಕಾರದಿಂದ ಪದ್ಮಶ್ರೀ ಪ್ರಶಸ್ತಿ, ಪ್ರಿಯದರ್ಶಿನಿ ವೃಕ್ಷಮಿತ್ರ ಪ್ರಶಸ್ತಿಗಳಲ್ಲದೆ ರಾಜ್ಯೋತ್ಸವ ಪ್ರಶಸ್ತಿಗೂ ಸಹ ಭಾಜನರಾಗಿದ್ದರು.
ಕೆ. ಟಿ. ಗಟ್ಟಿ
ಕರ್ನಾಟಕ ಸಹಿತ್ಯ ಅಕಾಡಮಿ ಗೌರವ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದಿರುವ ಖ್ಯಾತ ಕಾದಂಬರಿಕಾರ ಕೆ. ಟಿ. ಗಟ್ಟಿ ಫೆಬ್ರವರಿ ೧೯ರಂದು ನಿಧನರಾದರು. ಕಾಸರಗೋಡಿನ ಕೂಡ್ಲುವಿನವರಾದ ಅವರು ಪ್ರಾಧ್ಯಾಪಕರಾಗಿ ದುಡಿದವರು. ಪತ್ರಿಕಾ ಕಾದಂಬರಿಗಳ ಮೂಲಕ ಹೆಸರುವಾಸಿಯಾಗಿದ್ದರು. ಕಲಿಕೆಯಲ್ಲಿ ನಿರಂತರ ಆಸಕ್ತಿ ಹೊಂದಿದ ಅವರು ಇಂಗ್ಲೆಂಡಿನ ಟ್ರಿನಿಟಿ ಮತ್ತು ಆಕ್ಸಫರ್ಡ್ ಕಾಲೇಜುಗಳಿಂದ ಇಂಗ್ಲಿಷ್ ಕಲಿಕೆಯಲ್ಲಿ ಡಿಪ್ಲೋಮ ಗಳಿಸಿದರು. ಇಥಿಯೋಪಿಯದಲ್ಲಿನ ಪ್ರಾಧ್ಯಾಪದ ವೃತ್ತಿಜೀವನದಿಂದ ಹಿಂತಿರುಗಿದ ಅವರು ನಂತರ ಉಜಿರೆಯಲ್ಲಿ ವಾಸವಾಗಿ ಕೃಷಿಯಲ್ಲಿ ತೊಡಗಿದ್ದರು. ಶಬ್ದಗಳು, ಕಾಮಯಜ್ಞ, ಅಬ್ರಾಹ್ಮಣ, ಅಮುಕ್ತ, ಅವಿಭಕ್ತರು, ಕರ್ಮಣ್ಯೇವಾಧಿಕಾರಸ್ತೇ, ಕೂಪ, ಬಿಸಿಲುಗುದುರೆ, ಯುಗಾಂತರ, ಶಿಲಾತಪಸ್ವಿ, ಸ್ವರ್ಣಮೃಗ ಅವರ ಕೆಲವು ಪ್ರಮುಖ ಕೃತಿಗಳು.
ಕೆಳದಿ ಗುಂಡಾ ಜೋಯಿಸ್
ಕರ್ನಾಟಕದ ಪ್ರಮುಖ, ಹಿರಿಯ ಇತಿಹಾಸತಜ್ಞರಾಗಿದ್ದ ಕೆಳದಿ ಗುಂಡಾ ಜೋಯಿಸ್ (೯೪) ಜೂನ್ ೪ರಂದು ಕೊನೆಯುಸಿರೆಳೆದರು. ಕೆಳದಿ ರಾಜ್ಯದ ಇತಿಹಾಸಕ್ಕೆ ಸಂಬಂಧಿಸಿದ ಸಂಶೋಧನಾ ಕಾರ್ಯಗಳಿಂದ ಪ್ರಸಿದ್ಧರಾಗಿದ್ದ ಅವರು ಹಳೆಯ ಕಾಲದ ಮೋಡಿ ಲಿಪಿಯನ್ನು, ತಾಳೆಗರಿ ಗ್ರಂಥಗಳನ್ನು ಓದಬಲ್ಲ ಕೆಲವೇ ಕೆಲವು ತಜ್ಞರಲ್ಲಿ ಒಬ್ಬರಾಗಿದ್ದರು. ಇತಿಹಾಸ ಮತ್ತು ಲಿಪಿ ಕ್ಷೇತ್ರದಲ್ಲಿ ಅವರ ಸಾಧನೆಗಳು ಹಿರಿಯವು. ೨೦೦೪ರಲ್ಲಿ ಹೊನ್ನಾಳಿಯಲ್ಲಿ ನಡೆದ ಕರ್ನಾಟಕ ಇತಿಹಾಸ ಅಕಾಡೆಮಿಯ ೧೮ನೇ ವಾರ್ಷಿಕ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು. ೨೦೧೮ರಲ್ಲಿ ಬಾದಾಮಿಯಲ್ಲಿ ನಡೆದ ೩೨ನೇ ವಾರ್ಷಿಕ ಸಮ್ಮೇಳನದಲ್ಲಿ `ಇತಿಹಾಸ ಸಂಸ್ಕೃತಿ ಶ್ರೀ’ ಪ್ರಶಸ್ತಿಗೆ ಭಾಜನರಾಗಿದ್ದರು.
ಅಮೃತ ಸೋಮೇಶ್ವರ
ಕನ್ನಡದ ಖ್ಯಾತ ಸಾಹಿತಿ ಪ್ರೊ. ಅಮೃತ ಸೋಮೇಶ್ವರ(೮೯) ಜನವರಿ ೬ರಂದು ನಿಧನರಾದರು. ಸಾಹಿತಿಯಾಗಿ, ಸಂಶೋಧಕರಾಗಿ, ಯಕ್ಷಗಾನ ಪ್ರಸಂಗಕರ್ತರಾಗಿ, ಸಹೃದಯಿಯಾಗಿ ಅವರು ಪರಿಚಿತರಾಗಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ಕೋಟೆಕಾರು ಸಮೀಪದ ಅಡ್ಯ ಎಂಬಲ್ಲಿ ೧೯೫೩ ಸೆಪ್ಟೆಂಬರ್ ೨೭ರಂದು ಜನಿಸಿದ ಸೋಮೇಶ್ವರ ಅವರು ಮದರಾಸು ವಿಶ್ವವಿದ್ಯಾಲಯದಿಂದ ಕಲಾ ವಿಭಾಗದಲ್ಲಿ ಪದವಿ ಪಡೆದಿದ್ದರು. ಅಲೋಷಿಯಸ್ ಕಾಲೇಜಿನಲ್ಲಿಯೇ ಅಧ್ಯಾಪಕರಾಗಿ ಕೆಲಸ ಆರಂಭಿಸಿದ ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ. ಎ. ಪದವಿ ಪಡೆದ ನಂತರ ಪುತ್ತೂರಿನ ಸೇಂಟ್ ಫಿಲೋಮಿನ ಕಾಲೇಜಿನಲ್ಲಿ ಉಪನ್ಯಾಸಕರಾಗಿ ನಂತರ ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ, ೧೯೯೩ರಲ್ಲಿ ನಿವೃತ್ತಿ ಹೊಂದಿದ್ದರು. ತುಳು ಭಾಷೆಯ ಬೆಳವಣಿಗೆಗಾಗಿ ಶ್ರಮಿಸಿದ ಅವರ ಮೊದಲ ಕೃತಿ `ಎಲೆಗಿಳಿ’ ೧೯೫೭ರಲ್ಲಿ ಪ್ರಕಟವಾಗಿತ್ತು.
ಎಚ್. ಎಸ್. ಗೋಪಾಲರಾವ್
ಕನ್ನಡದ ಖ್ಯಾತ ಇತಿಹಾಸಜ್ಞ, ಶಾಸನಶಾಸ್ತçಜ್ಞ, ಕಾದಂಬರಿಕಾರ, ಬೋಧಕ ಡಾ. ಎಚ್. ಎಸ್. ಗೋಪಾಲರಾವ್ ಅಕ್ಟೋಬರ್ ೧ರಂದು ನಿಧನರಾದರು. ಕರ್ನಾಟಕ ಏಕೀಕರಣ ಇತಿಹಾಸ ರಚನೆಯಲ್ಲಿ ಅವರ ಕೆಲಸ ಪ್ರಾತಃಸ್ಮರಣೀಯವಾಗಿದೆ. ೧೯೪೬ರ ನವೆಂಬರ್ ೧೮ರಂದು ನೆಲಮಂಗಲ ತಾಲ್ಲೂಕಿನ ಹುಲ್ಲೇಗೌಡನಹಳ್ಳಿಯಲ್ಲಿ ಜನಿಸಿದ ಅವರು, ಇಲೆಕ್ಟ್ರಿಕಲ್ ಇಂಜಿನಿಯರಿಂಗ್ ಡಿಪ್ಲೊಮಾದ ನಂತರ ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ.ಎ. ಪದವಿ ಗಳಿಸಿದರು. `ಶಾಸನಗಳ ಹಿನ್ನೆಲೆಯಲ್ಲಿ ಕಲ್ಯಾಣ ಚಾಲುಕ್ಯ ದೇವಾಲಯಗಳು: ಒಂದು ಸಾಂಸ್ಕೃತಿಕ ಅಧ್ಯಯನ’ ಎಂಬ ಮಹಾಪ್ರಬಂಧ ಮಂಡಿಸಿ ಪಿಎಚ್. ಡಿ. ಪದವಿ ಪಡೆದಿದ್ದರು. ಅವರು ಕರ್ನಾಟಕ ಇತಿಹಾಸ ಅಕಾಡೆಮಿಯ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಶಾಸನಶಾಸ್ತ್ರ ಬೋಧಕರಾಗಿಯೂ ಕಾರ್ಯ ನಿರ್ವಹಿಸಿದ್ದರು. ಅವರಿಗೆ ಶಂಬಾ ಜೋಶಿ ಸಂಶೋಧನಾ ಪ್ರಶಸ್ತಿ (೨೦೦೭), ಕರ್ನಾಟಕ ಏಕೀಕರಣ ಇತಿಹಾಸ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಸಂದಿವೆ.
ಎಂ. ಎಸ್. ತಿಮ್ಮಪ್ಪ
ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿದ್ದ ಎಂ. ಎಸ್. ತಿಮ್ಮಪ್ಪ (೮೩) ನವೆಂಬರ್ ೧೨ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಜನಿಸಿದ ಅವರು ಮನೋವಿಜ್ಞಾನದ ಪ್ರೊಫೆಸರ್ ಆಗಿ, ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿ ಹಾಗೂ ಎರಡು ಅವಧಿಗಳಿಗೆ ರಿಜಿಸ್ರ್ಟ್ರಾರ ಆಗಿ ಸೇವೆ ಸಲ್ಲಿಸಿದ್ದರು. ಮನೋವಿಜ್ಞಾನದ ಪ್ರಾಧ್ಯಾಪಕರಾಗಿ ಹಲವಾರು ಡಾಕ್ಟರೇಟ್ ಮತ್ತು ಎಂಫಿಲ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದರು. ೨೦೦೦ದಲ್ಲಿ ತಮ್ಮ ಏಕೈಕ ಮಗಳನ್ನು ಮತ್ತು ೨೦೦೭ರಲ್ಲಿ ಪತ್ನಿಯನ್ನು ಕಳೆದುಕೊಂಡಿದ್ದ ಅವರು ನಿವೃತ್ತಿಯ ನಂತರ ಏಕಾಂಗಿಯಾಗಿ ವಾಸಿಸುತ್ತಿದ್ದರು.
ಸದಾನಂದ ಸುವರ್ಣ
ಹಿರಿಯ ರಂಗಕರ್ಮಿ ಹಾಗೂ ರಾಷ್ಟç ಪ್ರಶಸ್ತಿ ವಿಜೇತ ಖ್ಯಾತ ಚಲನಚಿತ್ರ ನಿರ್ಮಾಪಕ, ನಿರ್ದೇಶಕ ಸದಾನಂದ ಸುವರ್ಣ (೯೩) ಜುಲೈ ೧೬ರಂದು ಮಂಗಳೂರಿನಲ್ಲಿ ನಿಧನರಾದರು. ಕನ್ನಡ, ತುಳು ರಂಗ ಭೂಮಿಯಲ್ಲಿ ನೂರಾರು ನಾಟಕಗಳನ್ನು ರಚಿಸಿ ನಿರ್ದೇಶಿಸಿದ್ದ ಸದಾನಂದ ಸುವರ್ಣ, ಘಟಶ್ರಾದ್ಧ, ಕುಬಿ ಮತ್ತು ಇಯಾಲದಂತಹ ಸಿನಿಮಾಗಳನ್ನು, ಗುಡ್ಡದ ಭೂತದಂತಹ ಧಾರಾವಾಹಿಗಳನ್ನು ಕೊಟ್ಟವರು. ದ. ಕ. ಜಿಲ್ಲೆಯ ಮೂಲ್ಕಿಯವರಾದ ಅವರು ಮುಂಬಯಿಯಲ್ಲಿ ಹೈಸ್ಕೂಲ್ ಶಿಕ್ಷಣ ಪಡೆದವರು. ನಾಟಕ ರಚನೆ, ನಟನೆ, ನಿರ್ದೇಶನದಲ್ಲಿ ಐದು ದಶಕ ಶ್ರಮಿಸಿದ ಅವರು ಸಣ್ಣ ಕತೆ, ಕಾದಂಬರಿಗಳನ್ನೂ ಬರೆದಿದ್ದರು. ತಬರನ ಕತೆ, ಮನೆ, ಕ್ರೌರ್ಯ ಚಿತ್ರಗಳ ನಿರ್ವಾಹಕ ನಿರ್ಮಾಪಕರು. ಶಿವರಾಮ ಕಾರಂತ, ನಾರಾಯಣ ಗುರು, ತುಳುನಾಡು ಒಂದು ಇಣುಕುನೋಟ ಎಂಬ ಸಾಕ್ಷ್ಯಚಿತ್ರ ನಿರ್ದೇಶಿಸಿದ್ದರು.
ವಸಂತ ನಾಡಿಗೇರ
ಕನ್ನಡದ ಹಿರಿಯ ಪತ್ರಕರ್ತ ವಸಂತ ನಾಡಿಗೇರ್(೫೯) ಅವರು ಸೆಪ್ಟೆಂಬರ್ ೯ರಂದು ಹೃದಯಾಘಾತದಿಂದ ನಿಧನರಾದರು. ಮೂಲತಃ ಹಾವೇರಿ ಜಿಲ್ಲೆಯ ರಾಣಿಬೆನ್ನೂರಿನವರಾದ ಅವರು ಹುಟ್ಟೂರಲ್ಲೇ ಪ್ರಾಥಮಿಕ, ಪ್ರೌಢ ಶಿಕ್ಷಣ ಪಡೆದ ಬಳಿಕ ಧಾರವಾಡದಲ್ಲಿ ಬಿಎಸ್ಸಿ, ಎಂಎಸ್ಸಿ ಪದವಿ ಪಡೆದರು. ಸಂಯುಕ್ತ ಕರ್ನಾಟಕ ದಿನಪತ್ರಿಕೆಯಿಂದ ವೃತ್ತಿಯನ್ನು ಆರಂಭಿಸಿ ಹಲವು ಪತ್ರಿಕೆಗಳಲ್ಲಿ ಉಪಸಂಪಾದಕರಾಗಿ, ಸುದ್ದಿ ಸಂಪಾದಕರಾಗಿ ಹಾಗೂ ಸಂಪಾದಕರಾಗಿ ಯಶಸ್ಸು ಕಂಡಿದ್ದರು. ಶೀರ್ಷಿಕೆಗಳನ್ನು ಕೊಡುವುದರಲ್ಲಿ ಹಲವು ವಿನೂತನ ಪ್ರಯೋಗಗಳನ್ನು ಕೈಗೊಂಡು, ಕನ್ನಡ ಪತ್ರಿಕೋದ್ಯಮಕ್ಕೆ ಹೊಸ ಆಯಾಮ ನೀಡಿದ್ದರು. ಲತಾ ಮಂಗೇಶಕರ್ ಜೀವನ ಚರಿತ್ರೆಯನ್ನು ಕನ್ನಡದಲ್ಲಿ ಬರೆದಿದ್ದರು. ಕಳೆದ ಎರಡು ವರ್ಷಗಳಿಂದ ಸಂಯುಕ್ತ ಕರ್ನಾಟಕದಲ್ಲಿ ಸಂಪಾದಕರಾಗಿ ಕೆಲಸ ಮಾಡುತ್ತಿದ್ದರು. ಅವರಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಖಾದ್ರಿ ಶಾಮಣ್ಣ ಪ್ರಶಸ್ತಿ ಲಭಿಸಿತ್ತು.
ಎಂ. ಕೆ. ಭಾಸ್ಕರ್ ರಾವ್
ಹಿರಿಯ ಪತ್ರಕರ್ತ ಎಂ. ಕೆ. ಭಾಸ್ಕರರಾವ್ ಅವರು ಏಪ್ರಿಲ್ ೩ರಂದು ಬೆಂಗಳೂರಿನಲ್ಲಿ ನಿಧನರಾದರು. ಮೂಲತಃ ಶಿರಸಿ ತಾಲ್ಲೂಕಿನವರಾದ ಅವರು ಬೆಳೆದಿದ್ದು ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ. ಅಲ್ಲಿಯೇ ಶಿಕ್ಷಣ ಮುಗಿಸಿ ನಂತರ ಪತ್ರಿಕೋದ್ಯಮ ಸೇರಿದವರು. ಪ್ರಜಾವಾಣಿ ಪತ್ರಿಕೆಯಲ್ಲಿ ಮೂರು ದಶಕಕ್ಕೂ ಅಧಿಕ ಕಾಲ ಕೆಲಸ ಮಾಡಿದ್ದರು. ಬೆಂಗಳೂರಿನಲ್ಲಿ ಸಿನಿಮಾ ಪತ್ರಕರ್ತರಾಗಿಯೂ ಕೆಲವು ಕಾಲ ಭಾಸ್ಕರರಾವ್ ಕಾರ್ಯನಿರ್ವಹಿಸಿದ್ದ ಅವರು, ದಿನೇಶ್ ಬಾಬು ನಿರ್ದೇಶನದ `ಹಾಲಿವುಡ್’ ಸಿನಿಮಾ ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದರು.
ರಾಜಾ ಚೆಂಡೂರ್
ಖ್ಯಾತ ಕಾದಂಬರಿಕಾರ, ಅನುವಾದಕ, ಚಿತ್ರಸಾಹಿತಿ, ನಿರ್ದೇಶಕ ರಾಜಾ ಚೆಂಡೂರ್ (೬೫) ಸೆಪ್ಟೆಂಬರ್ ೩ರಂದು ಬೆಂಗಳೂರಿನಲ್ಲಿ ನಿಧನರಾದರು. ಮೂಲತಃ ಚಿಕ್ಕಬಳ್ಳಾಪುರದವರಾದ ಅವರು ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು. ಹತ್ತು ಸ್ವತಂತ್ರ ಕಾದಂಬರಿಗಳನ್ನು ಕನ್ನಡ ಸಾಹಿತ್ಯಕ್ಕೆ ಕೊಡುಗೆಯಾಗಿ ನೀಡಿರುವ ಅವರು ಅನುವಾದಕರಾಗಿಯೂ ಪ್ರಸಿದ್ಧರಾಗಿದ್ದರು. ತೆಲುಗಿನ ಪ್ರಖ್ಯಾತ ಕಾದಂಬರಿಕಾರ ಯಂಡಮೂರಿ ವೀರೇಂದ್ರನಾಥ ಅವರ `ರಕ್ತ ಸಿಂಧೂರ’ ಕಾದಂಬರಿ ಅನುವಾದದ ಮೂಲಕ ಅನುವಾದಕರಾದ ಅವರು ನಂತರದ ದಿನಗಳಲ್ಲಿ ಯಂಡಮೂರಿ ಅವರ ೪೦ಕ್ಕೂ ಹೆಚ್ಚು ಕಾದಂಬರಿಗಳನ್ನು ಕನ್ನಡಕ್ಕೆ ತಂದಿದ್ದರು. ಅಲ್ಲದೆ, ತೆಲುಗಿನ ಮಲ್ಲಾದಿ ವೆಂಕಟಕೃಷ್ಣಮೂರ್ತಿ, ಸೂರ್ಯದೇವರ ರಾಮಮೋಹನರಾವ್ ಮೊದಲಾದವರ ಕೃತಿಗಳನ್ನೂ ಕನ್ನಡಕ್ಕೆ ಪರಿಚಯಿಸಿದ್ದರು. ಧಾರಾವಾಹಿಗಳಿಗೆ ಕೆಲಸ ಮಾಡಿದ್ದ ಅವರು ಸಾಹಿತ್ಯ, ಚಿತ್ರಕಥೆ ಬರೆದು ನಾಲ್ಕು ಧಾರಾವಾಹಿಗಳನ್ನು ನಿರ್ದೇಶಿಸಿದ್ದರು.
ಸುಬ್ರಹ್ಮಣ್ಯ ಧಾರೇಶ್ವರ
ಬಡಗುತಿಟ್ಟಿನ ಯಕ್ಷಗಾನದಲ್ಲಿ ಹೊಸ ಅಲೆ ಎಬ್ಬಿಸಿದ್ದ ಭಾಗವತ ಶ್ರೇಷ್ಠ ಸುಬ್ರಹ್ಮಣ್ಯ ಧಾರೇಶ್ವರ (೬೭) ಏಪ್ರಿಲ್ ೨೫ರಂದು ನಿಧನರಾದರು. ಯಕ್ಷಗಾನರಂಗ ಕಂಡ ಪ್ರಯೋಗಶೀಲ ಭಾಗವತರಾಗಿದ್ದ ಅವರು ೪೬ ವರ್ಷ ಈ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದರು. ೧೯೫೭ರಲ್ಲಿ ಗೋಕರ್ಣದಲ್ಲಿ ಜನಿಸಿದ್ದ ಅವರು ಶಾಸ್ತ್ರೀಯ ಸಂಗೀತಾಭ್ಯಾಸವನ್ನೂ ಮಾಡಿದ್ದರು. ಪೆರ್ಡೂರು ಮೇಳವೊಂದರಲ್ಲೇ ೨೮ ವರ್ಷ ಪ್ರಧಾನ ಭಾಗವತರಾಗಿದ್ದ ಅವರು ಅದಕ್ಕೂ ಮೊದಲು ಅಮೃತೇಶ್ವರಿ ಮೇಳದಲ್ಲಿ ತಮ್ಮ ತಿರುಗಾಟ ಆರಂಭಿಸಿದ್ದರು. ಹಿರೇಮಹಾಲಿಂಗೇಶ್ವರ ಮೇಳ ಹಾಗೂ ಶಿರಸಿ ಮೇಳದಲ್ಲೂ ಭಾಗವತರಾಗಿ ಬಳಿಕ ಪೆರ್ಡೂರು ಮೇಳದ ರಂಗಮಂಚವೇರಿದವರು ಯಶಸ್ಸಿನ ಶಿಖರ ತಲುಪಿದ್ದರು.
ಕೆ. ಹೆಚ್. ಶ್ರೀನಿವಾಸ್
ಹಿರಿಯ ರಾಜಕಾರಣಿ, ಸಮಾಜವಾದಿ ಚಿಂತಕ, ಜನತಾ ಪರಿವಾರದ ಹಿರಿಯ ನಾಯಕ ಕೆ. ಹೆಚ್. ಶ್ರೀನಿವಾಸ್(೮೫) ಅವರು ಆಗಸ್ಟ್ ೩೦ರಂದು ನಿಧನರಾದರು. ರಾಜಕೀಯದ ಜೊತೆಗೆ ಕಲೆ, ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದ ಬಹುಮುಖಿ ವ್ಯಕ್ತಿ ಶ್ರೀನಿವಾಸ್ ಅವರು ಹಳೆಯ ಮತ್ತು ಹೊಸ ತಲೆಮಾರಿನ ರಾಜಕಾರಣದ ಕೊಂಡಿಯಾಗಿದ್ದರು. ಸಾಂಸ್ಕೃತಿಕ ವಲಯದಲ್ಲೂ ಗುರುತಿಸಿಕೊಂಡಿದ್ದರು. ವಕೀಲರು, ಕೃಷಿಕರೂ ಆಗಿದ್ದರು. ಕವನ ಸಂಕಲನಗಳನ್ನೂ ರಚಿಸಿದ್ದ ಅವರು ಸಿನಿಮಾದಲ್ಲೂ ಅಭಿನಯಿಸಿದ್ದರು.
ವಿಜಯ ಸಿಂಧೂರ
ಅಂತಾರಾಷ್ಟ್ರೀಯ ಖ್ಯಾತಿಯ ಹಿರಿಯ ವರ್ಣಚಿತ್ರ ಕಲಾವಿದ ವಿಜಯ ಸಿಂಧೂರ್ ಅವರು ಜಮಖಂಡಿಯ ಸ್ವಗೃಹದಲ್ಲಿ ಸೆಪ್ಟೆಂಬರ್ ೨೮ರಂದು ನಿಧನರಾಗಿದ್ದರು. ವಿಜಯ ಸಿಂಧೂರ ೧೯೪೦ರ ಜೂನ್ ೭ರಂದು ಬಿಜಾಪುರ ಜಿಲ್ಲೆಯ ಬನಹಟ್ಟಿಯಲ್ಲಿ ಜನಿಸಿದರು. ಬಾಲ್ಯದಿಂದಲೇ ರವಿವರ್ಮನ ಚಿತ್ರಗಳಿಂದ ಆಕರ್ಷಿತರಾಗಿ ತಾವೂ ಅದರಂತೆ ಮಾಡಬೇಕೆಂದು ಚಿತ್ರಕಲೆಗೆ ತೊಡಗಿ ಶಿವ-ಪಾರ್ವತಿ ಚಿತ್ರ ಬರೆದಿದ್ದರು. ಪುಣೆಯ ಅಭಿನವ ಕಲಾ ವಿದ್ಯಾಲಯದ ಎಸ್. ಎಸ್. ಕಾಮತ್ ಮತ್ತು ಮುಂಬೈನ ದಂಡಾವತಿ ಅವರ ನೂತನ ವಿದ್ಯಾಶಾಲೆಯಲ್ಲಿ ಚಿತ್ರಕಲಾಭ್ಯಾಸ ಮಾಡಿದರು. ತೈಲವರ್ಣ ಮಾಧ್ಯಮದಲ್ಲಿ ಅಪಾರ ಸಾಧನೆ ಮಾಡಿದ ಅವರ ವರ್ಣಚಿತ್ರಗಳಲ್ಲಿ ಜೀವಕಳೆ ತುಂಬಿರುತ್ತಿತ್ತು. ಅವರಿಗೆ ಬಾಂಬೆ ಆರ್ಟ್ ಸೊಸೈಟಿ ಪ್ರಶಸ್ತಿ, ಕೇಂದ್ರ ಲಲಿತಕಲಾ ಅಕಾಡೆಮಿ ಪ್ರಶಸ್ತಿ, ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಲಭಿಸಿದ್ದವು.
ಶರತ್ ಜೋಯಿಸ್
ಖ್ಯಾತ ಯೋಗ ಗುರು ಶರತ್ ಜೋಯಿಸ್ (೫೩) ಅಮೆರಿಕಾದ ವರ್ಜೀನಿಯಾದಲ್ಲಿ ನವೆಂಬರ್ ೧೧ರಂದು ನಿಧನರಾದರು. ಯೋಗ ಜಗತ್ತಿನಲ್ಲಿ ಗೌರವಾನ್ವಿತ ವ್ಯಕ್ತಿಯಾಗಿರುವ ಶರತ್ ಜೋಯಿಸ್ ತಮ್ಮ ತಾತನವರಾದ ಕೆ. ಪಟ್ಟಾಭಿ ಜೋಯಿಸ್ ಅವರ ಹೆಜ್ಜೆಗಳನ್ನು ಅನುಸರಿಸಿ ಅಷ್ಟಾಂಗ ಯೋಗದ ಅಭ್ಯಾಸವನ್ನು ಜಗತ್ತಿನಾದ್ಯಂತ ಕಲಿಸಲು ಮತ್ತು ಹರಡಲು ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು. ಅವರ ವ್ಯಾಪಕವಾದ ಬೋಧನೆ ಮತ್ತು ಆಳವಾದ ಬದ್ಧತೆಯ ಮೂಲಕ, ಅವರು ಜಾಗತಿಕವಾಗಿ ಅಸಂಖ್ಯಾತ ವಿದ್ಯಾರ್ಥಿಗಳನ್ನು ಪ್ರೇರೇಪಿಸಿದ್ದಾರೆ, ಅಷ್ಟಾಂಗ ಯೋಗದ ಸಾಂಪ್ರದಾಯಿಕ ವಿಧಾನಗಳನ್ನು ಸಂರಕ್ಷಿಸಲು ಮತ್ತು ಉತ್ತೇಜಿಸಲು ಸಹಕಾರ ನೀಡಿದ್ದರು.
ಪ್ರಮೋದ್ ಮುತಾಲಿಕ್
ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಪ್ರಮೋದ್ ಮುತಾಲಿಕ್ (೬೮) ಅವರು ಡಿಸೆಂಬರ್ ೨ರಂದು ನಿಧನರಾದರು. ಮೂಲತಃ ಬೆಳಗಾವಿ ಜಿಲ್ಲೆಯ ಹುಕ್ಕೇರಿಯವರಾದ ಪ್ರಮೋದ್ ಮುತಾಲಿಕ್ ಅವರು ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ ೩೭ ವರ್ಷ ಆಂಗ್ಲ ಭಾಷೆಯ ಅಧ್ಯಾಪಕರಾಗಿ, ಕೆಲ ವರ್ಷಗಳ ಕಾಲ ಉಪ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದರು. ಆಂಗ್ಲ ಮತ್ತು ಕನ್ನಡ ಭಾಷೆಗಳಲ್ಲಿ ಪ್ರಭುತ್ವ ಹೊಂದಿದ್ದ ಅವರು ಅನುವಾದ ಮತ್ತು ವಿಮರ್ಶೆಯಲ್ಲಿ ಸಾಕಷ್ಟು ಕೃಷಿ ಮಾಡಿದ್ದರು. ಜಗತ್ತಿನ ಶ್ರೇಷ್ಠ ಕೃತಿಗಳನ್ನು ಕನ್ನಡಕ್ಕೆ ಮತ್ತು ಕನ್ನಡದ ಶ್ರೇಷ್ಠ ಕೃತಿಗಳನ್ನು ಆಂಗ್ಲ ಭಾಷೆಗೆ ಅನುವಾದಿಸಿದ್ದರು. ಜಗತ್ತಿನ ಅಪರೂಪದ ಕಥೆಗಳನ್ನು ಕನ್ನಡಕ್ಕೆ ಕಣಜ ಎಂಬ ಹೆಸರಿನಲ್ಲಿ ಪರಿಚಯಿಸಿದ್ದರು. ಶಿವರಾಮ ಕಾರಂತರ ಅಳಿದ ಮೇಲೆ ಕಾದಂಬರಿಯನ್ನು ಆಂಗ್ಲ ಭಾಷೆಗೆ ಅನುವಾದಿಸಿದ್ದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ೨೦೧೯ನೇ ಸಾಲಿನ ಅನುವಾದ ಪುರಸ್ಕಾರ ನೀಡಿದೆ.
ಪಂಕಜ್ ಉಧಾಸ್ಚಿಟ್ಟಿ ಆಯಿ ಹೈ',
ಚಾಂದ್ ಜೈಸಾ ರಂಗ್’ನಂತಹ ಗಝಲ್ಗಳನ್ನು ಹಾಡಿ ಖ್ಯಾತಿ ಪಡೆದಿದ್ದ ಖ್ಯಾತ ಗಾಯಕ, ಪದ್ಮಶ್ರೀ ಪ್ರಶಸ್ತಿ ವಿಜೇತ ಪಂಕಜ್ ಉಧಾಸ್ (೭೨) ಫೆಬ್ರವರಿ ೨೬ರಂದು ನಿಧನರಾದರು. ೧೯೮೦ರ ದಶಕದಲ್ಲಿ ಪಂಕಜ್ ಉಧಾಸ್ ಗಝಲ್ ಗಾಯನದ ಮೂಲಕ ಖ್ಯಾತರಾಗಿದ್ದರು. ಬಳಿಕ ಅವರು ಹಿಂದಿ ಸಿನಿಮಾ ಹಾಗೂ ಭಾರತೀಯ ಪಾಪ್ ಹಿನ್ನೆಲೆ ಸಂಗೀತಕ್ಕೆ ಗಣನೀಯ ಕೊಡುಗೆ ನೀಡಿದ್ದರು. ಕನ್ನಡದ ಸ್ಪರ್ಶ' ಸಿನಿಮಾದ
ಬರೆಯದ ಮೌನದ ಕವಿತೆ ಹಾಡಾಯಿತು’, `ಚಂದಕಿಂತ ಚಂದ ನೀನೇ ಸುಂದರ’ ಹಾಡುಗಳು ಪಂಕಜ್ ಉಧಾಸ್ ಅವರ ಕಂಠದಲ್ಲಿ ಮೂಡಿಬಂದಿದ್ದವು.
ರೇಡಿಯೊ ನಿರೂಪಕ ಅಮೀನ್ ಸಯಾನಿ
ಜನಪ್ರಿಯ ರೇಡಿಯೊ ಕಾರ್ಯಕ್ರಮ ಬಿನಾಕಾ ಗೀತ್ ಮಾಲಾ'ದ ನಿರೂಪಕ ಅಮೀನ್ ಸಯಾನಿ (೯೧) ಫೆಬ್ರವರಿ ೨೧ರಂದು ಹೃದಯಾಘಾತದಿಂದ ನಿಧನರಾದರು. ಅಮೀನ್ ಸಯಾನಿ ಜನಿಸಿದ್ದು ಸಾಹಿತ್ಯದ ಹಿನ್ನೆಲೆಯುಳ್ಳ ಕುಟುಂಬದಲ್ಲಿ. ಅವರ ತಾಯಿ ರೆಹಬರ್ ಎಂಬ ಸುದ್ದಿಪತ್ರವನ್ನು ನಡೆಸುತ್ತಿದ್ದರು ಮತ್ತು ಅವರ ಸಹೋದರ ಪ್ರಸಿದ್ಧ ಇಂಗ್ಲಿಷ್ ಕಾರ್ಯಕ್ರಮ ನಿರೂಪಕರಾದ ಹಮೀದ್ ಸಯಾನಿ. ೧೯೫೨ರಲ್ಲಿ ರೇಡಿಯೊ ಸಿಲೋನ್ನಲ್ಲಿ ವೃತ್ತಿಜೀವನವನ್ನು ಪ್ರಾರಂಭಿಸಿದ ಅಮೀನ್ ಸಯಾನಿ
ಬಿನಾಕಾ ಗೀತ್ ಮಾಲಾ’ ಕಾರ್ಯಕ್ರಮದ ನಿರೂಪಣೆಯ ಮೂಲಕ ಜನಪ್ರಿಯರಾದರು. ಈ ಕಾರ್ಯಕ್ರಮ ೨೫ ವರ್ಷಗಳಿಗೂ ಹೆಚ್ಚು ಕಾಲ ಪ್ರಸಾರಗೊಂಡಿತ್ತು.
ಯಾಮಿನಿ ಕೃಷ್ಣಮೂರ್ತಿ
ಖ್ಯಾತ ಭರತನಾಟ್ಯ ಕಲಾವಿದೆ ಯಾಮಿನಿ ಕೃಷ್ಣಮೂರ್ತಿ (೮೪) ಆಗಸ್ಟ್ ೩ರಂದು ನಿಧನರಾದರು. ಆಂಧ್ರಪ್ರದೇಶದ ಮದನಪಲ್ಲಿಯಲ್ಲಿ ೧೯೪೦ರ ಡಿಸೆಂಬರ್ ೨೦ರಂದು ಜನಿಸಿದ್ದ ಅವರು ಐದನೇ ವಯಸ್ಸಿನಿಂದಲೇ ಭರತನಾಟ್ಯ ಕಲಿಕೆಯಲ್ಲಿ ತೊಡಗಿದ್ದರು. ಕೂಚಿಪುಡಿಯಲ್ಲಿಯೂ ಪ್ರವೀಣರಾಗಿದ್ದ ಅವರು ಪಂಕಜ್ ಒಡಿಸ್ಸಿ ನೃತ್ಯ ಕಲಿತಿದ್ದರು. ವಿವಿಧ ನೃತ್ಯಪ್ರಕಾರಗಳನ್ನು ಕಲಿಯುವುದರ ಜೊತೆಗೆ, ಕರ್ನಾಟಕ ಶಾಸ್ತ್ರೀಯ ಗಾಯನ ಮತ್ತು ವೀಣೆಯಲ್ಲಿ ತರಬೇತಿ ಪಡೆದರು. ೨೮ನೇ ವಯಸ್ಸಿನಲ್ಲಿದ್ದಾಗಲೇ `ಪದ್ಮಶ್ರೀ’ ಪ್ರಶಸ್ತಿ ಪುರಸ್ಕೃತರಾಗಿದ್ದ ಯಾಮಿನಿ ೧೯೭೭ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದರು. ೨೦೦೧ರಲ್ಲಿ ಪದ್ಮಭೂಷಣ, ೨೦೧೬ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿಗಳು ಅವರಿಗೆ ಸಂದಿದ್ದವು.
ಸ್ವಾಮಿ ಸ್ಮರಣಾನಂದ ಮಹಾರಾಜ್
ಬೇಲೂರು ರಾಮಕೃಷ್ಣಮಠ ಮತ್ತು ಮಿಷನ್ ಅಧ್ಯಕ್ಷರಾದ ಸ್ವಾಮಿ ಸ್ಮರಣಾನಂದ ಮಹಾರಾಜ್ (೯೫) ಮಾರ್ಚ್ ೨೬ರಂದು ದೇಹತ್ಯಾಗ ಮಾಡಿದರು. ತಮಿಳುನಾಡಿನ ತಂಜಾವೂರು ಜಿಲ್ಲೆ ಅಂದಾಮಿಯಲ್ಲಿ ೧೯೨೯ರಲ್ಲಿ ಜನಿಸಿದ್ದ ಸ್ಮರಣಾನಂದರು ೧೯೫೮ರಲ್ಲಿ ಕೋಲ್ಕತಾದ ಅದ್ವೈತ ಆಶ್ರಮಕ್ಕೆ ನಿಯೋಜಿತಗೊಂಡಿದ್ದರು. ೧೯೮೩ರಲ್ಲಿ ರಾಮಕೃಷ್ಣ ಮಠದ ಟ್ರಸ್ಟಿಯಾಗಿ ನೇಮಕಗೊಂಡಿದ್ದರು. ೧೯೯೭ರಲ್ಲಿ ಸಂಸ್ಥೆ ಪ್ರಧಾನ ಕಾರ್ಯದರ್ಶಿ, ೨೦೦೭ರಲ್ಲಿ ಉಪಾಧ್ಯಕ್ಷರಾಗಿದ್ದರು. ಸ್ವಾಮಿ ಆತ್ಮಸ್ಥಾನಂದರು ಮುಕ್ತರಾದ ನಂತರ ೨೦೧೭ರ ಜುಲೈ ೧೭ರಂದು ಸ್ವಾಮಿ ಸ್ಮರಣಾನಂದ ಮಹಾರಾಜರು ರಾಮಕೃಷ್ಣ ಮಠ ಮತ್ತು ಮಿಷನ್ನ ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡಿದ್ದರು.
ಜನಪದ ವಿದ್ವಾಂಸ ಎಂ. ಜಿ. ಈಶ್ವರಪ್ಪ
ಜನಪದ ವಿದ್ವಾಂಸ, ನಿವೃತ್ತ ಪ್ರಾಂಶುಪಾಲ ಎಂ. ಜಿ. ಈಶ್ವರಪ್ಪ (೭೬) ಜೂನ್ ಒಂದರಂದು ಶ್ವಾಸಕೋಶ ಸೋಂಕಿನಿಂದ ಮೃತಪಟ್ಟಿದ್ದರು. ಮೂಲತಃ ಶಿವಮೊಗ್ಗ ಜಿಲ್ಲೆಯ ಹಾಡೋನಹಳ್ಳಿಯವರಾದ ಈಶ್ವರಪ್ಪ, ಶಿಕ್ಷಣ ಕ್ಷೇತ್ರದಲ್ಲಿ ಸುಮಾರು ೫೦ ವರ್ಷಗಳ ಸೇವೆ ಸಲ್ಲಿಸಿದ್ದರು. ರಂಗಭೂಮಿಯ ನಂಟು ಹೊಂದಿದ್ದ ಈಶ್ವರಪ್ಪ ಚಂಪಾ ಅವರ `ಕೊಡೆಗಳು’ ನಾಟಕದಲ್ಲಿ ಅಭಿನಯಿಸಿದ್ದರು. ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಜಿಲ್ಲಾ ಮತ್ತು ರಾಜ್ಯಮಟ್ಟದ ಪ್ರಶಸ್ತಿಗಳು ಬಂದಿದ್ದವು.
ಸುನಯನಾ ಕೇಜ್ರಿವಾಲ್
ಮುಂಬೈನ ಕಮಲ್ ನಯನ್ ಬಜಾಜ್ ಹಾಲ್ ಮತ್ತು ಆರ್ಟ್ ಗ್ಯಾಲರಿಯ ನಿರ್ದೇಶಕಿ ಸುನಯನಾ ಕೇಜ್ರಿವಾಲ್ ಅವರು ಅಕ್ಟೋಬರ್ ೫ರಂದು ಮುಂಬೈಯಲ್ಲಿ ನಿಧನ ಹೊಂದಿದರು. ಕ್ಯಾನ್ಸರ್ನಿಂದ ಬಳಲುತ್ತಿದ್ದ ಅವರಿಗೆ ೫೩ ವರ್ಷ ವಯಸ್ಸಾಗಿತ್ತು. ಮುಂಬೈಯ ಭಾವು ದಾಜಿ ಲಾಡ್ ಮ್ಯೂಸಿಯಂನಿಂದ `ದಿ ಹಿಸ್ಟರಿ ಆಫ್ ಇಂಡಿಯನ್ ಆರ್ಟ್-ಮಾಡರ್ನ್ ಆಂಡ್ ಕಂಟೆಂಪರರಿ ಆಂಡ್ ಕ್ಯುರೇಟರಿಯಲ್ ಸ್ಟಡೀಸ್’ನಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಪದವಿ ಪಡೆದಿದ್ದರು. ರಂಗಭೂಮಿ ಮತ್ತು ಪ್ರವಾಸದ ಬಗ್ಗೆ ಸುನಯನಾ ಅಪಾರ ಆಸಕ್ತಿ ಹೊಂದಿದ್ದ ಅವರು ಜವಳಿ ಕ್ಷೇತ್ರದಲ್ಲಿ ಪರಿಣತಿ ಪಡೆದಿದ್ದರು. ಮುಂಬೈಯ ಸೋಫಿಯಾ ಕಾಲೇಜಿನಲ್ಲಿ ಸಿಲ್ಕ್ ಸ್ಕ್ರೀನ್ ಪ್ರಿಂಟಿಂಗ್ ಶಿಕ್ಷಣ ಪೂರೈಸಿದ್ದರು. ಸುನಯನಾ ಕೇಜ್ರಿವಾಲ್ ಅವರು ಬಜಾಜ್ ಆಟೋದ ಮಾಜಿ ಅಧ್ಯಕ್ಷ ಕೈಗಾರಿಕೋದ್ಯಮಿ ರಾಹುಲ್ ಬಜಾಜ್ ಅವರ ಪುತ್ರಿ.
ಪಂಡಿತ್ ಲಕ್ಷ್ಮೀಕಾಂತ್ ಮಧುರಾನಾಥ್ ದೀಕ್ಷಿತ್
ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ವಿಧಿವಿಧಾನ ನೆರವೇರಿಸಿದ್ದ ವಾರಾಣಸಿಯ ಅರ್ಚಕ ಪಂಡಿತ್ ಲಕ್ಷ್ಮೀಕಾಂತ್ ಮಧುರಾನಾಥ್ ದೀಕ್ಷಿತ್ (೮೬) ಜೂನ್ ೨೨ರಂದು ಕೊನೆಯುಸಿರೆಳೆದರು. ವೈದಿಕ ಪರಂಪರೆಯ ವಿಧಿಬದ್ಧ ಆಚರಣೆಗೆ ಹೆಸರುವಾಸಿಯಾದ ಅವರು, ರಾಮಲಲ್ಲಾ ಪ್ರಾಣಪ್ರತಿಷ್ಠಾ ಕಾರ್ಯಕ್ರಮದಲ್ಲಿ ೧೨೧ ವಿದ್ವಾಂಸರ ತಂಡವನ್ನು ಮುನ್ನಡೆಸಿದ್ದರು. ಅವರಿಗೆ ೮೬ ವರ್ಷ ವಯಸ್ಸಾಗಿದ್ದು, ವಯೋಸಹಜ ಖಾಯಿಲೆಯಿಂದ ವಿಧಿವಶರಾಗಿದ್ದರು. ದೀಕ್ಷಿತ್ ಅವರು ಮೂಲತಃ ಉತ್ತರ ಪ್ರದೇಶದ ವಾರಣಾಸಿಯವರು. ಅವರ ಸಾವಿಗೆ ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ್ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದರು.
ಲಾಲ ಜಾಡಿಂಗಿ
೧೯೮೦ರಲ್ಲಿ ಶೌರ್ಯ ಪ್ರಶಸ್ತಿಗೆ ಭಾಜನರಾಗಿದ್ದ ಲಾಲಜಾಡಿಂಗಿ (೭೨) ಕ್ಯಾನ್ಸರ್ನಿಂದ ಜುಲೈ ೧೯ರಂದು ಮೃತಪಟ್ಟಿದ್ದರು. ಲಾಲಜಾಡಿಂಗಿ ೨೬ ವರ್ಷದವರಿದ್ದಾಗ ಕಾಡಿಗೆ ಹೋಗಿದ್ದ ಸಂದರ್ಭದಲ್ಲಿ ಅವರಿಗೆ ಹುಲಿ ಮುಖಾಮುಖಿಯಾಗಿತ್ತು. “ಮರವನ್ನು ಕತ್ತರಿಸುತ್ತಿದ್ದಾಗ ಏನೋ ಶಬ್ದ ಕೇಳಿಸಿತ್ತು, ಮೊದಲು ಕಾಡುಹಂದಿ ಇರಬಹುದು ಎಂದು ಕೊಂಡೆ. ಸ್ನೇಹಿತರನ್ನು ಕರೆದೆ ಆದರೆ ಯಾರಿಗೂ ಕೇಳಿಸಲಿಲ್ಲ, ಪೊದೆಯಿಂದ ಒಮ್ಮೆಲೆ ಹುಲಿ ಕಾಣಿಸಿಕೊಂಡಾಗ ಭಯವಾಯಿತು. ಯೋಚಿಸಲು ಸಮಯ ಇರಲಿಲ್ಲ, ತಕ್ಷಣ ಅದರ ಹಣೆಗೆ ಕೊಡಲಿಯಿಂದ ಹೊಡೆದೆ ಒಂದೇ ಹೊಡೆತಕ್ಕೆ ಹುಲಿ ಸತ್ತಿದ್ದು ನನ್ನ ಅದೃಷ್ಟ, ಒಂದೊಮ್ಮೆ ಬೇರೆ ಭಾಗಕ್ಕೆ ಪೆಟ್ಟಾಗಿದ್ದರೆ ಹುಲಿ ನನಗೆ ಎರಡನೇ ಅವಕಾಶ ನೀಡುತ್ತಿರಲಿಲ್ಲ” ಎಂದು ಅವರು ಘಟನೆ ಬಗ್ಗೆ ವಿವರಿಸಿದ್ದರು. ಈ ಕಾರಣಕ್ಕಾಗಿ ೧೯೮೦ರಲ್ಲಿ ಭಾರತ ಸರ್ಕಾರ ಶೌರ್ಯ ಪ್ರಶಸ್ತಿ ನೀಡಿತ್ತು. ರಾಷ್ಟ್ರಪತಿ ನೀಲಂ ಸಂಜೀವರೆಡ್ಡಿ ಅವರಿಂದ ಲಾಲಜಾಡಿಂಗಿ ಪ್ರಶಸ್ತಿ ಸ್ವೀಕರಿಸಿದ್ದರು.
ಲಕ್ಕೂರು ಆನಂದ
ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪ್ರಶಸ್ತಿ ಪುರಸ್ಕೃತ ಸಾಹಿತಿ ಲಕ್ಕೂರು ಆನಂದ (೪೪) ಮೇ ೨೦ರಂದು ಅನುಮಾನಾಸ್ಪದವಾಗಿ ಮೃತಪಟ್ಟಿದ್ದರು. ಕಲಬುರಗಿ ತಾಲೂಕಿನ ಕಡಗಂಚಿ ಬಳಿ ಅವರ ಶವ ಪತ್ತೆಯಾಗಿತ್ತು. ಮೂಲತಃ ಕೋಲಾರ ಜಿಲ್ಲೆಯ ಲಕ್ಕೂರಿನವರಾಗಿದ್ದ ಆನಂದ, ಕೆಂಗೇರಿ ಶೇಷಾದ್ರಿಪುರಂ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಕಲಬುರಗಿ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಪಿಎಚ್ಡಿ ಮಾಡುತ್ತಿದ್ದರು. ಇದುವರೆಗೆ ಐದು ಕವನ ಸಂಕಲನ, ಐದು ಅನುವಾದಿತ ಕೃತಿಗಳು ಹಾಗೂ ಒಂದು ಸಂಶೋಧನಾ ಗ್ರಂಥವನ್ನು ಹೊರತಂದಿದ್ದರು. ಮಾತಂಗ ಮಾದಿಗರ ಸಂಸ್ಕöÈತಿಯ ಬಗ್ಗೆ ಅವರು ಆಳವಾದ ಅಧ್ಯಯನ ನಡೆಸಿದ್ದರು. ಇತ್ತೀಚೆಗೆ ತೆಲುಗು ಭಾಷೆಯಿಂದ ರಾಣಿ ಶಿವ ಶಂಕರ ಶರ್ಮರ `ಕೊನೆಯ ಬ್ರಾಹ್ಮಣ’ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿ ಪ್ರಕಟಿಸಿದ್ದರು.
ರಾಮ್ ನಾರಾಯಣ್ ಅಗರ್ವಾಲ್
ಭಾರತದ ಅಗ್ನಿ ಕ್ಷಿಪಣಿಯ ಪಿತಾಮಹ, ಖ್ಯಾತ ಡಿಆರ್ಡಿಒ ಕ್ಷಿಪಣಿ ವಿಜ್ಞಾನಿ, ಪದ್ಮಭೂಷಣ ಪುರಸ್ಕೃತ ರಾಮ್ ನಾರಾಯಣ್ ಅಗರ್ವಾಲ್ (೮೪) ಆಗಸ್ಟ್ ೧೫ರಂದು ವಯೋಸಹಜ ಖಾಯಿಲೆಯಿಂದಾಗಿ ಹೈದರಾಬಾದ್ನಲ್ಲಿ ನಿಧನರಾದರು. ಡಿಆರ್ಡಿಒ ವಿಜ್ಞಾನಿ ರಾಮ್ ನಾರಾಯಣ್ ಅಗರ್ವಾಲ್ ಭಾರತವನ್ನು ಪ್ರಮುಖ ಕ್ಷಿಪಣಿ ಶಕ್ತಿಯನ್ನಾಗಿ ಮಾಡುವಲ್ಲಿ ಬಹಳ ಪ್ರಮುಖ ಪಾತ್ರವನ್ನು ಹೊಂದಿದ್ದರು. ಭಾರತದ ದೀರ್ಘ-ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿ ಕಾರ್ಯಕ್ರಮದಲ್ಲಿ ಅಗರ್ವಾಲ್ ಪ್ರಮುಖ ಪಾತ್ರ ವಹಿಸಿದ್ದರು. ಅವರು ಅಗ್ನಿ ಕ್ಷಿಪಣಿಗಳ ಮೊದಲ ಕಾರ್ಯಕ್ರಮ ನಿರ್ದೇಶಕರಾಗಿದ್ದರು. ರಾಮ್ ನಾರಾಯಣ ಅಗರ್ವಾಲ್ ಅವರನ್ನು ಅಗ್ನಿ ಪುರುಷ ಎಂದೂ ಕರೆಯುತ್ತಾರೆ ಎಂದು ಡಿಆರ್ಡಿಒ ಅಧಿಕಾರಿಯೊಬ್ಬರು ಹೇಳಿದ್ದರು.
ಪಪ್ಪಮ್ಮಾಳ್
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಆರ್. ಪಪ್ಪಮ್ಮಾಳ್ ವಯೋಸಹಜ ಕಾಯಿಲೆಯಿಂದ ಸೆಪ್ಟೆಂಬರ್ ೨೭ರಂದು ನಿಧನರಾದರು. ೧೦೯ ವರ್ಷದ ಪಪ್ಪಮ್ಮಾಳ್ ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಅವರು ಮೆಟ್ಟುಪಾಳ್ಯಂ ಬಳಿಯ ತೆಕ್ಕಂಪಟ್ಟಿ ಗ್ರಾಮದಲ್ಲಿ ಕೊನೆಯುಸಿರೆಳೆದರು. ೨೦೨೧ರಲ್ಲಿ ಭಾರತದಲ್ಲಿ ಸಾವಯವ ಕೃಷಿಯನ್ನು ಜನಪ್ರಿಯಗೊಳಿಸಿದ್ದಕ್ಕಾಗಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಲಾಗಿತ್ತು. ೧೯೭೦ರಿಂದ ೪೫ ವರ್ಷಗಳ ಕಾಲ ತಮಿಳುನಾಡು ಕೃಷಿ ವಿಶ್ವವಿದ್ಯಾಲಯದ ರೈತರ ಸಮಾಲೋಚನಾ ಸಮಿತಿಯ ಸದಸ್ಯರಾಗಿ ತಮಿಳುನಾಡು ಕೃಷಿ ವಿಶ್ವವಿದ್ಯಾಲಯದೊಂದಿಗೆ ನಿಕಟವಾಗಿ ಕೆಲಸ ಮಾಡಿದರು. ಪಪ್ಪಮ್ಮಾಳ್ ತನ್ನ ಕೊನೆ ದಿನದವರೆಗೂ ಕೃಷಿ ಕ್ಷೇತ್ರಗಳಲ್ಲಿ ಶ್ರಮಿಸಿದರು.
ಶಾರದಾ ಸಿನ್ಹಾ
ಹೆಸರಾಂತ ಹಾಗೂ ಜನಪ್ರಿಯ ಜಾನಪದ ಗಾಯಕಿ ಶಾರದಾ ಸಿನ್ಹಾ (೭೨) ದೆಹಲಿಯಲ್ಲಿ ನವೆಂಬರ್ ೫ರಂದು ನಿಧನರಾದರು. ಭೋಜಪುರಿ, ಮೈಥೀಲಿ ಮತ್ತು ಹಿಂದಿ ಗಾಯನ ರಂಗದಲ್ಲಿ ತಮ್ಮ ಇಂಪಾದ ಧ್ವನಿಯ ಮೂಲಕ ಪ್ರಖ್ಯಾತಿಗಳಿಸಿದ್ದ ಶಾರದಾ, ಭಾರತೀಯ ಜನಪದ ಸಂಗೀತದಲ್ಲಿ ಅನನ್ಯ ಗುರುತನ್ನು ಸಂಪಾದಿಸಿದ್ದರು. ೨೦೧೮ರಲ್ಲಿ ಅವರಿಗೆ ಪದ್ಮಭೂಷಣ ಪ್ರಶಸ್ತಿಯನ್ನು ನೀಡುವ ಮೂಲಕ ರಾಷ್ಟçವು ಗೌರವ ಅರ್ಪಿಸಿತ್ತು. ಅವರ ಪ್ರಸಿದ್ಧ ಗೀತೆಗಳು ಜನಮನದಲ್ಲಿ ಆಳವಾಗಿ ನೆಲೆಸಿದೆ.