ಮನೆ ಗೋಡೆ ಕುಸಿದು ರೈತ ಸ್ಥಳದಲ್ಲೇ ಸಾವು

ಕುಷ್ಟಗಿ: ತಾಲೂಕಿನ ಚಿಕ್ಕನಂದಿಹಾಳ ಗ್ರಾಮದಲ್ಲಿ ಬಿರುಗಾಳಿ, ಮಳೆಗೆ ತೋಟದಲ್ಲಿನ ಜನತಾ ಮನೆ ಇಟ್ಟಿಗೆ ವ್ಯಕ್ತಿಯ ಮೇಲೆ ಬಿದ್ದು ಸ್ಥಳದಲ್ಲಿಯೇ ರೈತ ಸಾವನ್ನಪ್ಪಿದ ಮನಕಲುಕುವ ಘಟನೆ ನಡೆದಿದೆ.
ಚಿಕ್ಕನಂದಿಹಾಳ ಗ್ರಾಮದ ರೈತ ಶರಣಪ್ಪ ಭೀಮಪ್ಪ ಬಾವಿಕಟ್ಟೆ (೩೮) ಎಂದಿನಂತೆ ಹೊಲಕ್ಕೆ ಹೋಗಿದ್ದಾನೆ. ಸಾಯಂಕಾಲ ಬಿರುಗಾಳಿ, ಮಳೆಗೆ ಸುರಿದು ಇದರಿಂದಾಗಿ ತಗಡಿನ ಜನತಾ ಮನೆಯೊಳಗೆ ಕುಳಿತುಕೊಂಡಿದ್ದ ಸಂದರ್ಭದಲ್ಲಿ ಮನೆಯ ಮೇಲ್ಛಾವಣಿಯ ತಗಡು ಮತ್ತು ಗೋಡೆ ಶರಣಪ್ಪನ ಮೈ, ಮುಖದ ಮೇಲೆ ಬಿದ್ದಿರುವುದರಿಂದ ಸ್ಥಳದಲ್ಲಿ ಸಾವನ್ನಪ್ಪಿದ್ದಾನೆ.
ಮೃತಪಟ್ಟ ರೈತ ಶರಣಪ್ಪ ರಾತ್ರಿಯಾದರೂ ಮನೆಗೆ ಬಾರದ ಹಿನ್ನೆಲೆಯಲ್ಲಿ ಸಂಬಂಧಿಕರು ತೋಟಕ್ಕೆ ಹೋಗಿ ಅಲ್ಲೇ ಇದ್ದ ತೋಟದ ಮನೆ ಹತ್ತಿರ ನೋಡಿದಾಗ ಮೈಮೇಲೆ ಸಿಮೆಂಟ್ ಇಟ್ಟಂಗಿ ಹಾಗೂ ತಗಡು ಬಿದ್ದಿದ್ದು ನೋಡಿದಾಗ ಸಾವನಪ್ಪಿರುವುದು ಗಮನಕ್ಕೆ ಬಂದಿದೆ.
ತಕ್ಷಣ ಸಿಪಿಐ ಯಶವಂತ ಬಿಸನಹಳ್ಳಿ, ಪಿಎಸ್‌ಐ ಹನುಮಂತಪ್ಪ ತಳವಾರ್ ಹಾಗೂ ತಹಶೀಲ್ದಾರ ಅಶೋಕ್ ಶಿಗ್ಗಾವಿ ಅವರಿಗೆ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸ್ ಸಿಬ್ಬಂದಿಗಳೊಂದಿಗೆ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲಿಸಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಸರ್ಕಾರದ ವತಿಯಿಂದ ೫ ಲಕ್ಷ ರೂ. ಪರಿಹಾರ ವಿತರಿಸಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ. ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಮೂಲಗಳು ಖಚಿತಪಡಿಸಿವೆ.