ಮತ್ತೆ ಸದ್ದು ಮಾಡುತ್ತಿದೆ ದೂರವಾಣಿ ಕದ್ದಾಲಿಕೆ

ಕರ್ನಾಟಕದ ರಾಜಕೀಯಕ್ಕೂ ದೂರವಾಣಿ ಕದ್ದಾಲಿಕೆಗೂ ಸಂಬಂಧ ಇರುವಂತೆ ಕಂಡು ಬರುತ್ತಿದೆ. ವಿಧಾನಸಭೆ ಅಧಿವೇಶನದಲ್ಲಿ ಹನಿಟ್ರ್ಯಾಪ್ ಹಗರಣ ಅಲ್ಲೋಲಕಲ್ಲೋಲಕ್ಕೆ ಕಾರಣವಾದ ಮೇಲೆ ಈಗ ದೂರವಾಣಿ ಕದ್ದಾಲಿಕೆ ದೂರು ಕೇಳಿ ಬರುತ್ತಿದೆ. ಕೆಲವು ಶಾಸಕರು ಮತ್ತು ಸಚಿವರು ಮುಖ್ಯಮಂತ್ರಿಗಳಿಗೆ ತಮ್ಮ ದೂರವಾಣಿ ಕದ್ದಾಲಿಕೆ ಬಗ್ಗೆ ದೂರು ಸಲ್ಲಿಸಿದ್ದಾರೆ. ಸಾಮಾನ್ಯವಾಗಿ ಗುಪ್ತಚರ ಇಲಾಖೆ ಈ ಕೆಲಸವನ್ನು ಕೈಗೊಳ್ಳುತ್ತದೆ. ಅಧಿಕಾರದಲ್ಲಿರುವವರ ಸೂಚನೆ ಇಲ್ಲದೆ ಇವುಗಳು ನಡೆಯವುದಿಲ್ಲ. ಅದರಲ್ಲೂ ರಾಜಕೀಯ ಚಟುವಟಿಕೆಯ ಮೇಲೆ ಕಣ್ಣಿಡಲು ಗುಪ್ತಚರ ಇಲಾಖೆ ಇದನ್ನು ಒಂದು ಸಾಧನವಾಗಿ ಬಳಸುವುದು ನಿಜ. ಹಿಂದೆ ಮೊಬೈಲ್ ದೂರವಾಣಿ ಇರಲಿಲ್ಲ. ದೂರವಾಣಿ ವಿನಿಮಯ ಕೇಂದ್ರದ ಮೂಲಕ ಎಲ್ಲ ದೂರವಾಣಿಗಳು ಕೆಲಸ ಮಾಡುತ್ತಿದ್ದವು. ಅದರಿಂದ ಕದ್ದಾಲಿಕೆ ಸುಲಭವಾಗಿತ್ತು. ಈಗ ಮೊಬೈಲ್ ಕಾಲ. ಕದ್ದಾಲಿಕೆ ಕಷ್ಟದ ಕೆಲಸ. ಆದರೂ ಇದು ರಹಸ್ಯವಾಗಿ ನಡೆಯುವುದುಂಟು. ಕೇಂದ್ರದ ಟೆಲಿಗ್ರಾಫ್ ಕಾಯ್ದೆ ಅನ್ವಯ ದೇಶದ ಸಂರಕ್ಷಣೆ ದೃಷ್ಟಿಯಿಂದ ದೂರವಾಣಿ ಕದ್ದಾಲಿಕೆಗೆ ಅವಕಾಶ ನೀಡಲಾಗಿತ್ತು. ಆದರೆ ಇದು ರಾಜಕೀಯಕ್ಕೆ ದುರುಪಯೋಗವಾಗುವುದು ಮೊದಲಿನಿಂದಲೂ ಕೇಳಿ ಬರುತ್ತಿರುವ ಆರೋಪ. ಹಿಂದೆ ಪ್ರತಿಪಕ್ಷದವರು ಈ ರೀತಿ ಆರೋಪ ಮಾಡುತ್ತಿದ್ದರು. ಈ ಬಾರಿ ಆಡಳಿತ ಪಕ್ಷದವರೇ ಆರೋಪ ಮಾಡಿರುವುದು ಆಶ್ಚರ್ಯ ತಂದಿದೆ. ಪ್ರತಿ ರಾಜ್ಯದಲ್ಲೂ ಆಡಳಿತ ಪಕ್ಷದಲ್ಲಿ ಭಿನ್ನ ಗುಂಪುಗಳು ಇರುವುದು ಸಹಜ. ಪ್ರಬಲ ಹಾಗೂ ಆಡಳಿತಕ್ಕೆ ಹತ್ತಿರ ಇರುವ ಗುಂಪು ಮತ್ತೊಂದು ಗುಂಪಿನ ಚಟುವಟಿಕೆ ತಿಳಿದುಕೊಳ್ಳಲು ಯತ್ನಿಸುವುದು ಸಾಮಾನ್ಯ. ಕರ್ನಾಟಕದಲ್ಲಿ ಈಗ ಆಡಳಿತ ಪಕ್ಷದಲ್ಲಿ ಎರಡು ಗುಂಪು ಇರುವುದು ರಹಸ್ಯವಾಗಿ ಉಳಿದಿಲ್ಲ. ಗುಪ್ತಚರ ಇಲಾಖೆ ಮುಖ್ಯಮಂತ್ರಿ ಕೈಯಲ್ಲಿ ಇರುವುದರಿಂದ ಸಹಜವಾಗಿ ಅವರಿಗೆ ದೂರು ಬರುವುದು ಸಹಜ. ಇದರ ಬಗ್ಗೆ ತನಿಖೆ ನಡೆಸುವುದಾಗಿ ಸಿಎಂ ಹೇಳಿದ್ದರೂ ಅವರಿಗೆ ತಿಳಿಯದೆ ದೂರವಾಣಿ ಕದ್ದಾಲಿಕೆ ನಡೆಯುವುದು ಕಷ್ಟ. ಇಂಥ ವಿಷಯದಲ್ಲಿ ಅಧಿಕಾರಿಗಳು ಸ್ವಯಂ ನಿರ್ಧಾರ ಕೈಗೊಳ್ಳುವುದಿಲ್ಲ. ರಾಜಕೀಯ ಚಟುವಟಿಕೆ ಚುರುಕುಗೊಂಡಾಗ ಅಧಿಕಾರಿಗಳು ಈ ಮಾರ್ಗವನ್ನೂ ಅನುಸರಿಸುತ್ತಾರೆ. ಜನಸಾಮಾನ್ಯರ ದೃಷ್ಟಿಯಲ್ಲಿ ಇದು ಅನೈತಿಕ. ರಾಜಕೀಯ ಕಾರಣಗಳಿಗೆ ಬಳಸುವುದು ತಪ್ಪು. ಆದರೆ ಕದ್ದಾಲಿಕೆಯನ್ನೇ ನಿಷೇಧಿಸಲು ಬರುವುದಿಲ್ಲ. ದೇಶದ ರಕ್ಷಣೆ ಇದು ಇದ್ದೇ ಇರುತ್ತದೆ. ಅಫಿಷಿಯಲ್ ಸಿಕ್ರೆಟ್ಸ್ ಕಾಯದೆ ಇದ್ದಂತೆ. ಕಾಯ್ದೆಯ ಹೆಸರನ್ನು ಬದಲಿಸಬಹುದು. ಕೆಲಸ ಮಾತ್ರ ಅದೇ. ಉಪಗ್ರಹ ಉಡಾವಣೆಯಲ್ಲೂ ಗಡಿ ಭಾಗದ ಮೇಲೆ ನಿಗಾವಹಿಸಲು ಹಲವು ಕ್ರಮಗಳನ್ನು ಗುಪ್ತವಾಗಿ ಕೈಗೊಳ್ಳಲಾಗುವುದು. ಇದನ್ನು ಬಹಿರಂಗ ಪಡಿಸುವುದಿಲ್ಲ. ಅದೇರೀತಿ ದೂರವಾಣಿ ಕದ್ದಾಲಿಕೆ. ಬಹಿರಂಗಗೊಂಡಾಗ ಒಂದಿಬ್ಬರ ತಲೆದಂಡವಾಗುತ್ತದೆ. ಕದ್ದಾಲಿಕೆ ನಿಲ್ಲುವುದಿಲ್ಲ.
೧೯೮೮ ರಲ್ಲಿ ಡಾ. ಸುಬ್ರಮಣಿಯನ್ ಸ್ವಾಮಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಮೇಲೆ ದೂರವಾಣ ಕದ್ದಾಲಿಕೆ ಆರೋಪ ಮಾಡಿದ್ದರು. ಮೌಲ್ಯಾಧಾರಿತ ರಾಜಕಾರಣದ ಹೆಸರಿನಲ್ಲಿ ರಾಜೀನಾಮೆ ಸಲ್ಲಿಸಿದರು. ಅದರಿಂದ ಅವರ ಜನಪ್ರಿಯತೆ ಅಧಿಕಗೊಂಡಿತೇ ಹೊರತು ಕಡಿಮೆ ಆಗಲಿಲ್ಲ. ಈಗ ಮತ್ತೆ ದೂರವಾಣಿ ಕದ್ದಾಲಿಕೆ ದೂರು ಕೇಳಿ ಬಂದಿದೆ. ಈಗ ನೈತಿಕತೆ ಪ್ರಶ್ನೆ ಎಲ್ಲೂ ಕೇಳಿ ಬರುತ್ತಿಲ್ಲ. ತನಿಖೆ ನಡೆಯಬೇಕೆಂಬ ಕೂಗು ಕೇಳಿ ಬರುತ್ತಿದೆಯೇ ಹೊರತು ಯಾರ ರಾಜೀನಾಮೆಯನ್ನೂ ಯಾರೂ ಕೇಳಿಲ್ಲ. ಈಗ ಕಾಲ ಬದಲಾಗಿದೆ. ಮೌಲ್ಯಗಳೂ ಬದಲಾಗಿವೆ. ಹನಿಟ್ರ್ಯಾಪ್ ಮುಂದೆ ಇದು ದೊಡ್ಡ ಹಗರಣವಾಗಿ ಕಂಡು ಬರುತ್ತಿಲ್ಲ. ವಿಡಿಯೋ ಕದ್ದಾಲಿಕೆ ನಡಯುತ್ತಿರುವಾಗ ದೂರವಾಣಿ ಕದ್ದಾಲಿಕೆ ದೊಡ್ಡ ವಿಷಯವಾಗಿ ಬಿಂಬಿತವಾಗುತ್ತಿಲ್ಲ. ನೈತಿಕವಾಗಿ ಇದು ಅಪರಾಧ. ಆದರೆ ದೇಶದ ಹಿತ ಬಂದಾಗ ಇದು ತಪ್ಪೇನಲ್ಲ. ಇಂಥ ಸಂದರ್ಭದಲ್ಲಿ ಕೆಲವು ನಿಯಮಗಳನ್ನು ಕೈಬಿಡಲು ಬರುವುದಿಲ್ಲ. ದೂರವಾಣಿ ಧ್ವನಿಗಳನ್ನು ನಕಲು ಮಾಡುವ ಉಪಕರಣಗಳೂ ಬಂದಿವೆ. ಇದು ಅಸಲಿಯೋ ನಕಲಿಯೋ ಎಂದು ಕಂಡು ಹಿಡಿಯುವ ಯಂತ್ರಗಳೂ ಬಂದಿವೆ. ರಾಜಕೀಯ ರಂಗದಲ್ಲಿ ಯಾವುದು ತಪ್ಪು ಎಂದು ಪರಿಗಣಿತವಾಗುತ್ತದೆ ಎಂದು ಹೇಳಲು ಬರುವುದಿಲ್ಲ. ಈಗ ಹನಿಟ್ರ್ಯಾಪ್ ಬಹಳ ಸುದ್ದಿಯಲ್ಲಿದೆ. ಜನಪ್ರತಿನಿಧಿಗಳು ಪಕ್ಷಾತೀತವಾಗಿ ಇದನ್ನು ಖಂಡಿಸಿದ್ದಾರೆ. ಹಿಂದೆ ದೂರವಾಣಿ ಕದ್ದಾಲಿಕೆಗೂ ಇದೇ ರೀತಿ ತೀವ್ರ ವಿರೋಧ ಕಂಡು ಬಂದಿತ್ತು. ಅದರಿಂದ ಆಗ ರಾಮಕೃಷ್ಣ ಹೆಗಡೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದರು. ಈಗ ಕಾಲ ಬದಲಾಗಿದೆ. ಜನಪ್ರತಿನಿಧಿಗಳೂ ಇದನ್ನು ಮಹಾಪರಾಧ ಎಂದು ಪರಿಗಣಿಸುತಿಲ್ಲ. ಆದರೆ ನೈತಿಕ ಪ್ರಶ್ನೆ ಬಂದಾಗ ಇದೂ ಅಪರಾಧ ಎಂಬುದರಲ್ಲಿ ಸಂದೇಹವಿಲ್ಲ. ಜನಸಾಮಾನ್ಯರು ಇದನ್ನು ಗಂಭೀರವಾಗಿ ಪರಿಗಣಿಸಿದರೆ ಮಾತ್ರ ಜನಪ್ರತಿನಿಧಿಗಳು ಎಚ್ಚರವಹಿಸುತ್ತಾರೆ. ಹಿಂದೆ ಜನಪ್ರತಿನಿಧಿಗಳ ಬಗ್ಗೆ ನ್ಯಾಯಾಲಯಗಳು ಮೌಖಿಕವಾಗಿ ಹೇಳಿದರೂ ಜನ ಅದನ್ನು ಗಂಭೀರವಾಗಿ ಪರಿಗಣಿಸುತ್ತಿದ್ದರು. ಈಗ ನ್ಯಾಯಾಲಯ ಲಿಖಿತವಾಗಿ ಹೇಳಿದರೂ ಸರ್ಕಾರ ಸ್ಪಂದನೆ ಮಂದಗತಿಯಲ್ಲಿದೆ. ಇದು ಸರ್ಕಾರದ ಸೂಕ್ಷ್ಮತೆಯ ಪ್ರಶ್ನೆ.