ಭಾರತದ ಭವಿಷ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ ಖರ್ಗೆ

ಗದಗ: ಆರೋಗ್ಯ, ಕೃಷಿ, ಸಹಕಾರ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಆದ್ಯತೆ ತೀರ ಕಡಿಮೆ ಆಗಿರುವುದರಿಂದ ಭವ್ಯ ಭಾರತದ ಭವಿಷ್ಯದ ಬಗ್ಗೆ ಆತಂಕ ಉಂಟಾಗುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭಾ ವಿರೋಧಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಪರೋಕ್ಷವಾಗಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಸಹಕಾರ ರಂಗದ ಭೀಷ್ಮ ದಿ. ಕೆ.ಎಚ್.ಪಾಟೀಲ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ನಗರದ ಕೋ-ಆಪರೇಟಿವ್ ಕಾಟನ್ ಸೇಲ್ಸ್ ಸೊಸೈಟಿ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದಿ.ಕೆ.ಎಚ್. ಪಾಟೀಲ್ ಅವರು ಜನರ ಅಭ್ಯುದಯಕ್ಕೆ ಹಾಗೂ ರಾಜ್ಯದ ಅಭಿವೃದ್ಧಿಯ ದೃಷ್ಟಿಯಿಂದ ಶ್ರಮಿಸಿದವರು. ಯಾವತ್ತೂ ಅನ್ಯಾಯವನ್ನು ಸಹಿಸದ ಅವರ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ ರಾಜ್ಯ, ದೇಶಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಹೋರಾಡಲು ನಾವೆಲ್ಲರೂ ಪಣ ತೊಡಬೇಕಿದೆ. ಇಲ್ಲವಾದರೆ, ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮಕ್ಕೆ ಅರ್ಥವೇ ಇರುವುದಿಲ್ಲ ಎಂದರು.
ಜನ ಸುಶಿಕ್ಷಿತರಾದಾಗ ಮಾತ್ರ ರಾಜ್ಯ, ದೇಶ ಅಭಿವೃದ್ಧಿ ಹೊಂದಲು ಸಾಧ್ಯ. ಆದರೆ, ಕೇಂದ್ರ ಸರ್ಕಾರದ ತಪ್ಪು ನಿರ್ಧಾರ, ದ್ವಂದ್ವ ನಿಲುವುಗಳಿಂದ ನವೋದಯ, ಕೇಂದ್ರೀಯ ವಿದ್ಯಾಲಯ, ಹಾಗೂ ಕೇಂದ್ರ ವಿಶ್ವ ವಿದ್ಯಾಲಯಗಳ ಅಸ್ತಿತ್ವಕ್ಕೆ ಧಕ್ಕೆ ಬಂದಿದೆ. ಒಟ್ಟಾರೆ ಶಿಕ್ಷಣ ಕ್ಷೇತ್ರದಲ್ಲಿ ಶೇ. ೫೦ ರಷ್ಟು ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಅಗತ್ಯಕ್ಕೆ ತಕ್ಕಂತೆ ಶಿಕ್ಷಕರೇ ಇಲ್ಲದಿದ್ದಾಗ ಗುಣಮಟ್ಟದ ಶಿಕ್ಷಣ ನೀಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಅವರು, ಬ್ರಿಟೀಷರ ಆಳ್ವಿಕೆ ಹೆಚ್ಚಾಗಿದ್ದ ಉತ್ತರ ಕರ್ನಾಟಕ ಭಾಗದ ಜನ ಶೈಕ್ಷಣಿಕವಾಗಿ ಸ್ವಲ್ಪ ಮುಂದೆ ಇದ್ದಾರೆ. ಆದರೆ, ಇನ್ನುಳಿದ ಕಡೆಗಳಲ್ಲಿ ಶಿಕ್ಷಣ ಅಷ್ಟಕ್ಕಷ್ಟೆ. ಹೈದ್ರಾಬಾದ್ ಕರ್ನಾಟಕಕ್ಕೆ ೩೭೧ಜೆ ಮೀಸಲಾತಿ ಸಿಕ್ಕರೂ ೩೭ ಸಾವಿರ ಶಿಕ್ಷಕರ ಕೊರತೆ ಇದೆ ಎಂದು ಆಕ್ರೋಷ ಹೊರಹಾಕಿದರು.
ಇಡೀ ದೇಶದಲ್ಲಿ ೯೦ ಸಾವಿರ ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು ಮುಚ್ಚಲಾಗಿದೆ. ಈ ಪೈಕಿ ೫೦ ಸಾವಿರ ಶಾಲೆಗಳು ಉತ್ತರ ಪ್ರದೇಶ, ಬಿಹಾರದಲ್ಲಿದ್ದರೆ ಇನ್ನುಳಿದ ೪೦ ಸಾವಿರ ಶಾಲೆಗಳು ಇತರೆ ರಾಜ್ಯಗಳಲ್ಲಿವೆ. ವಿಶ್ವ ವಿದ್ಯಾಲಯಗಳಲ್ಲಿ ೫೪೦೦ ಹುದ್ದೆ, ನವೋದಯದಲ್ಲಿ ೪೦ ಸಾವಿರ ಹಾಗೂ ಕೇಂದ್ರೀಯ ವಿದ್ಯಾಲಯಗಳಲ್ಲಿ ೭೪೦೦ ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಆದರೆ, ಖಾಸಗಿ ಶಾಲೆಗಳ ಸಂಖ್ಯೆ ಮಾತ್ರ ಶೇ.೧೪ರಷ್ಟು ಹೆಚ್ಚಾಗಿದೆ. ಮೇಲಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ಸವಲತ್ತು ಸಿಗದೇ ಅವರೆಲ್ಲ ಶಿಕ್ಷಣದಿಂದ ವಿಮುಖರಾಗುತ್ತಿದ್ದಾರೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಬಡವರ ಮಕ್ಕಳು ಶಿಕ್ಷಣದಿಂದ ವಂಚಿತರಾಗುವುದು ಗ್ಯಾರಂಟಿ ಎಂದು ಕಳವಳ ವ್ಯಕ್ತಪಡಿಸಿದರು.
ಶಿಕ್ಷಣ ಮಾತ್ರವಲ್ಲದೇ ಸಹಕಾರಿ ಸಂಘಟನೆ ಹಾಗೂ ಫೆಡರಲ್‌ಗೂ ಕೇಂದ್ರದಿಂದ ಅನ್ಯಾಯವಾಗುತ್ತಿದೆ. ಕಾಲಕಾಲಕ್ಕೆ ಅಗತ್ಯ ನೆರವು ದೊರೆಯುತ್ತಿಲ್ಲ. ಸಹಕಾರ ರಂಗಕ್ಕೆ ನಬಾರ್ಡ್ ನಿಂದ ಬರಬೇಕಾದ ಶೇ.೫೭ ರಷ್ಟು ಅನುದಾನವನ್ನು ಕಡಿತಗೊಳಿಸಲಾಗುತ್ತಿದೆ. ಈ ಅನ್ಯಾಯವನ್ನು ಖಂಡಿಸಲು ಜನ ಸಜ್ಜಾಗಬೇಕು. ರಾಜ್ಯದ ವಿಷಯ ಬಂದಾಗ ಪಕ್ಷಾತೀತವಾಗಿ ಹೋರಾಟ ಮಾಡಬೇಕು ಎಂದರು.
ಮಾಜಿ ಶಾಸಕರು ಹಾಗೂ ಲೋಕ ಶಿಕ್ಷಣ ಟ್ಸಸ್ಟ್‌ನ ಧರ್ಮದರ್ಶಿ ಡಿ.ಆರ್. ಪಾಟೀಲ ಸ್ವಾಗತಿಸಿದರು. ಕಾನೂನು ಮತ್ತು ಸಂಸದೀಯ ವ್ಯವಹಾರ ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಅವರು ವಂದಿಸಿದರು.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಸಚಿವರಾದ ಈಶ್ವರ ಖಂಡ್ರೆ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಕೋ ಆಪರೇಟಿವ್ ಫೆಡರೇಷನ್ ಅಧ್ಯಕ್ಷ ಮತ್ತು ಶಾಸಕ ಜಿ.ಟಿ.ದೇವೇಗೌಡ ಮಾತನಾಡಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಮತ್ತು ಲೋಕಶಿಕ್ಷಣ ಟ್ರಸ್ಟ್‌ನ ಧರ್ಮದರ್ಶಿ ಯು.ಬಿ. ವೆಂಕಟೇಶ, ಶಾಸಕರಾದ ಎನ್.ಎಚ್ ಕೋನರಡ್ಡಿ, ಪ್ರಸಾದ ಅಬ್ಬಯ್ಯ ಸೇರಿದಂತೆ ಅನೇಕರಿದ್ದರು.