ರಾಜ್ಯದ ಉದ್ದಗಲಕ್ಕೂ ಸಂಘಟನೆ ಬೆಳೆಸಿದ ಹಾರನಹಳ್ಳಿ
ಇತ್ತೀಚಿನ ದಿನಮಾನಸದಲ್ಲಿ ಜಾತಿ ಸಮ್ಮೇಳನಗಳು, ರಾಜಕೀಯ ಸಮ್ಮೇಳನಗಳು, ವ್ಯಕ್ತಿ ಕೇಂದ್ರಿತ ಸಮಾವೇಶಗಳು ನಡೆಯುವುದು ಹೊಸದಲ್ಲ. ಈ ಬಗ್ಗೆ ಆಶ್ಚರ್ಯ ಪಡಬಹುದಾದ ಯಾವುದೇ ವಿಷಯಗಳು ಇಲ್ಲವೆನ್ನಿ. ಆದರೆ ಇತ್ತೀಚಿನ ದಿನಗಳಲ್ಲಿ ಬ್ರಾಹ್ಮಣ ಸಮುದಾಯವು ಕೂಡ ಅವಕಾಶ ಸಿಕ್ಕಾಗೆಲ್ಲ ತಮ್ಮ ಅಸ್ತಿತ್ವವನ್ನು ಪ್ರತಿಪಾದಿಸುವ ಯಾವೊಂದು ಅವಕಾಶವನ್ನು ಕೈ ಬಿಡುತ್ತಿಲ್ಲ ಎಂದರೆ ತಪ್ಪಾಗಲಾರದು.
ನಾವೆಲ್ಲರೂ ನಮ್ಮವರು ಯಾರಾದರೂ ಇರಲಿ, ಕಷ್ಟ ಬಂದಾಗ ನಮ್ಮ ಕೈ ಹಿಡಿಯಲಿ ಎಂದು ಒಟ್ಟಾರೆಯಾಗಿ ಸಂಘ ಸಂಸ್ಥೆಗಳನ್ನು ಕಟ್ಟಿಕೊಂಡ ಉದಾಹರಣೆಗಳಿವೆ. ಅದೇ ರೀತಿ ಕೆಲವು ಸಂಘ ಸಂಸ್ಥೆಗಳು ಕೆಲವು ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡಲೆಂದೇ ಹುಟ್ಟಿ ಕೊಂಡಿರುತ್ತವೆ. ಅದೇ ಹಾದಿಯಲ್ಲಿ ಹುಟ್ಟಿಕೊಂಡದ್ದು ಜಾತಿ ಆಧಾರಿತ ಸಂಘಟನೆಗಳು. ಕಾಲ ಕ್ರಮೇಣ ಈ ಜಾತಿ ಆಧಾರಿತ ಸಂಘಟನೆಗಳು ತಮ್ಮ ತಮ್ಮ ಸಮುದಾಯದ ಕುಂದು ಕೊರತೆಗಳಿಗೆ ದನಿಯಾಗುವ ಸಂಘಟನೆಯಾಗಿ ಹೊರಹೊಮ್ಮಿದವು, ಪರಿಣಾಮವಾಗಿ ಜಾತಿ ಆಧಾರಿತ ಸಂಘಟನೆಗಳು ಸಾರ್ವತ್ರಿಕ ಚುನಾವಣೆಗಳಲ್ಲಿ ಪ್ರಮುಖ ಪಾತ್ರ ವಹಿಸಲು ಪ್ರಾರಂಭವಾಯಿತು. ಸ್ವಾತಂತ್ರö್ಯ ನಂತರ ಕೆಲವು ಚುನಾವಣೆಗಳನ್ನು ಹೊರತುಪಡಿಸಿ ಇನ್ನುಳಿದ ಎಲ್ಲ ಚುನಾವಣೆಗಳು ಜಾತಿಯ ಸುತ್ತ ಮುತ್ತ ಗಿರಕಿ ಹೊಡೆದಿವೆ ಎಂದರೆ ತಪ್ಪಲ್ಲ. ಹಾಗೆ ನೋಡಿದರೆ ಸಂವಿಧಾನ ಬಯಸಿದ್ದು ಜಾತಿ ವ್ಯವಸ್ಥೆ ಎಂಬುದು ಬೇಕಿದ್ದರೆ ಅವರವರ ಮನೆ ಮನಸುಗಳಲ್ಲಿ ಮನೆ ಮಾಡಿರಲಿ ದೇಶ ಸೇವೆಯ ವಿಷಯ ಬಂದಾಗ ಅಥವಾ ದೇಶವನ್ನು ಮುನ್ನಡೆಸುವ ಪ್ರಜಾಸತ್ತಾತ್ಮಕ ಆಡಳಿತದ ವಿಷಯ ಬಂದಾಗ ಅಥವಾ ನಾಯಕನ ಆಯ್ಕೆಯಲ್ಲಾಗಲಿ ಜಾತಿ ಎಂಬ ಕಿಡಿ ಜ್ವಾಲೆಯ ಮಹತ್ವ ಕ್ಷೀಣಗೊಂಡು ಸರ್ವೇ ಜನ ಸುಖಿನೋ ಭವಂತು, ಸಕಲ ಸನ್ಮಂಗಳಾನಿ ಭವಂತು ಋಷಿ ವಾಕ್ಯ ನಿರಂತರವಾಗಿ ಮೊಳಗುತ್ತಿರಲಿ ಎಂಬುದಾಗಿತ್ತು.
ಬ್ರಿಟಿಷ್ ವಸಾಹತುಶಾಹಿ ಆಡಳಿತ ಬಿತ್ತಿದ ಬ್ರಾಹ್ಮಣ ವಿರೋಧಿ ಮನೋಭಾವ ಭಾರತಕ್ಕೆ ಸ್ವತಂತ್ರ ಬಂದು ಎಪ್ಪತೈದು ವರುಷಗಳಲ್ಲಿ ಅಳಿಸಿಹೋಗಬೇಕಿತ್ತು, ವಿಪರ್ಯಾಸವೆಂದರೆ ಅದು ಅಳಿಸಿ ಹೋಗುವ ಬದಲು ಅದಕ್ಕೊಂದಿಷ್ಟು ರೆಕ್ಕೆ ಪುಕ್ಕಗಳನ್ನು ಸೃಷ್ಟಿಸಿ ಇನ್ನಷ್ಟು ಬೆಳೆಸುವ ಮನೋಭಾವ ಸೃಷ್ಟಿಯಾಗುತ್ತಲೇ ಇದೆ. ಅದಕ್ಕೆ ಇನ್ನಷ್ಟು ತುಪ್ಪ ಸುರಿದಿದ್ದು ದ್ರಾವಿಡ ಹಾಗೂ ಆರ್ಯ ಎಂಬ ಅನಗತ್ಯ ವಾದಗಳು. ಇದೆಲ್ಲವನ್ನು ಸದ್ದಿಲದೆ ಗಮನಿಸುತ್ತಿದ್ದ ಬ್ರಾಹ್ಮಣ ಸಮಾಜ ಅದುವರೆಗೆ ತಮ್ಮಲ್ಲಿದ್ದ ಮತ ಪಂಥಗಳ ಪರದೆ ಕಳಚಿ ತಮಗೊಂದು ಸಂಘಟನೆ ಇರಲಿ ಎಂದು ಯೋಚಿಸಿ ಹಲವಾರು ವರುಷಗಳ ಹಿಂದೆಯೇ ಕರ್ನಾಟಕದ ಮಟ್ಟಿಗೆ ಐವತ್ತು ವಸಂತಗಳ ಹಿಂದೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಎಂಬ ಸಂಸ್ಥೆ ಉದಯಿಸಲು ನಾಂದಿ ಹಾಡಿತು. ಹಾಗೆ ಉದಯಿಸಿದ್ದ ಸಂಸ್ಥೆಯ ಪ್ರಪ್ರಥಮ ಅಧ್ಯಕ್ಷರಾಗಿದ್ದವರು ಯಾವ ವಿಷಯವನ್ನೇ ಆಗಲಿ ನಿರ್ಭಿಡೆಯಿಂದ ಹೇಳುತ್ತಿದ್ದ, ಸರ್ಕಾರಗಳಿಗೆ ಮಾತಿನಿಂದಲೇ ಚಾಟಿ ಬೀಸುತಿದ್ದ ಮಾಸ್ಟರ್ ಹಿರಣ್ಣಯ್ಯನವರು. ಅಂದು ಮಾಸ್ಟರ್ ಹಿರಣ್ಣಯ್ಯನವರ ನೇತೃತ್ವದಲ್ಲಿ ಸ್ಥಾಪನೆಗೊಂಡ ಮಹಾಸಭೆ ಇಂದು ಅಶೋಕ ಹಾರನಹಳ್ಳಿ ಅವರ ನೇತೃತ್ವದವರೆಗೆ ಕೆಲವೊಮ್ಮೆ ಅಂಬೆಗಾಲಿಡುತ್ತ, ಕೆಲವೊಂದು ಪುಟ್ಟ ಪುಟ್ಟ ಹೆಜ್ಜೆಗಳಿಡುತ್ತ, ಕೆಲವೊಮ್ಮೆ ಓಡುತ್ತ, ನಡೆಯುತ್ತಾ ಸಾಗಿ ಬಂದಿದೆ. ಅಂತಹ ಸಂಘಕ್ಕೀಗ ಸುವರ್ಣ ಸಂಭ್ರಮ. ಅಂದರೆ ಐವತ್ತು ವಸಂತಗಳನ್ನು ಪೂರೈಸಿದ ಸಂತಸ. ಇದುವರೆಗೆ ಹತ್ತು ಸಮ್ಮೇಳನಗಳು ನಡೆದಿವೆ ಹಾಗೂ ಪ್ರತಿ ಸಮ್ಮೇಳನವು ಅದರದೇ ದೃಷ್ಟಿಯಿಂದ ಮಹತ್ವದ ಸಮ್ಮೇಳನವು ಆಗಿವೆ. ಈ ಐವತ್ತು ವರುಷಗಳಲ್ಲಿ ಹತ್ತು ಸಮ್ಮೇಳನವನ್ನು ಯಶಸ್ವಿಯಾಗಿ ನಿರ್ವಹಿಸಿ ಇದೀಗ ಹನ್ನೊಂದನೇ ಬ್ರಾಹ್ಮಣ ಮಹಾ ಸಮ್ಮೇಳನಕ್ಕೆ ಇಡೀ ವಿಪ್ರ ಲೋಕ ಸಜ್ಜಾಗಿದೆ. ಈ ಬ್ರಾಹ್ಮಣ ಮಹಾ ಸಮ್ಮೇಳನ ಹಲವು ಕಾರಣಗಳಿಗೆ ಮಹತ್ವದಾಗಿದೆ. ಇದುವರೆಗೂ ಬ್ರಾಹ್ಮಣ ಮಹಾ ಸಮ್ಮೇಳನಗಳು ಬೆಂಗಳೂರು ದಕ್ಷಿಣದ ನ್ಯಾಷನಲ್ ಕಾಲೇಜು ಮೈದಾನ ಅಥವಾ ಇನ್ನಿತರ ನಗರಗಳಲ್ಲಿ ನಡೆಯುತಿತ್ತು. ಇದೇ ಮೊದಲ ಬಾರಿಗೆ ಬ್ರಾಹ್ಮಣ ಮಹಾಸಭೆ ಅರಮನೆ ಮೈದಾನದಲ್ಲಿ ವಿಜೃಂಭಣೆಯಿಂದ ನೆರವೇರಿಸಲು ತೀರ್ಮಾನಿಸಿದೆ. ಮಹಾಸಭೆ ಅಶೋಕ ಹಾರನಹಳ್ಳಿ ಅವರ ನೇತೃತ್ವದಲ್ಲಿ ಅಖಿಲ ಕರ್ನಾಟಕವಾಗಿದೆ. ಕೇವಲ ಕೆಲವೇ ಪ್ರಾಂತ್ಯಕ್ಕೆ ಸೀಮಿತವಾಗಿದ್ದ ಮಹಾಸಭೆಯ ಕಾರ್ಯ ಚಟುವಟಿಕೆಗಳು ಪ್ರತಿ ಜಿಲ್ಲೆ, ನಗರ ಪಟ್ಟಣಗಳಲ್ಲಿ ಅವ್ಯಾಹತವಾಗಿ ಸಾಗುತ್ತಿದ್ದೆ. ಮೊದಲ ಬಾರಿ ಮಹಾಸಭೆ ಅರಮನೆ ಮೈದಾನದತ್ತ ದಾಪುಗಾಲಿಟ್ಟಿದೆ. ಪ್ರತಿ ಸಮ್ಮೇಳನವು ಒಂದಲ್ಲ ಒಂದು ಕಾರಣಗಳಿಂದ ಮಹತ್ವದ್ದಾಗಿತ್ತು ಎಂದು ಪದಾಧಿಕಾರಿಗಳು ಹಾಗೂ ಅಂದಿನ ಕೆಲವು ವಿಪ್ರ ಮುಖಂಡರು ನೆನಪು ಮಾಡಿ ಕೊಳ್ಳುತ್ತಾರೆ. ಹಾಗಾದರೆ ಈ ಸಮ್ಮೇಳನದ ಮಹತ್ವವೇನು ಅಥವಾ ಔಚಿತ್ಯವೇನು ಎಂದು ಕೇಳಿದಾಗ ಸಂಘಟನೆಯೇ ಆಗಿರಲಿದೆ ಎಂದು ಹೇಳುವ ಹಲವು ಸಂಘಟಕರು ಕಾಣ ಸಿಗುತ್ತಾರೆ. ನಾಡಿನ ವಿಪ್ರ ಸಮುದಾಯದಲ್ಲೊಂದು ಸಂಘಟನೆಯ ಮನೋಭಾವ ನಾನಾ ಕಾರಣಗಳಿಗೆ ಜಾಗ್ರತವಾಗಿದೆ. ಈ ಒಂದು ವಿಷಯಕ್ಕಾಗಿಯೇ ಇನ್ನಿಲ್ಲದಂತೆ, ಕರ್ನಾಟಕದ ಎರಡೂ ಪ್ರಮುಖ ಪಕ್ಷಗಳು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯ ಸುವರ್ಣ ಮಹೋತ್ಸವವನ್ನು ಅತ್ಯಂತ ಜಾಗರೂಕತೆಯಿಂದ ನೋಡುತ್ತಿದೆ. ಹಾಗೆ ನೋಡಿದರೆ ಈ ಸಂಘಟನೆಯ ಚುಕ್ಕಾಣಿ ಹಿಡಿದ ಅಶೋಕ ಹಾರನಹಳ್ಳಿ ಒಬ್ಬ ಹೆಸರಾಂತ ವಕೀಲರು, ಯಡಿಯೂರಪ್ಪನವರ ಆಡಳಿತಾವಧಿಯಲ್ಲಿ ಅಡ್ವೋಕೇಟ್ ಜನರಲ್ ಹುದ್ದೆಯನ್ನು ಅಲಂಕರಿಸಿ ಕ್ಯಾಬಿನೆಟ್ ಹುದ್ದೆಗೆ ಸಮನಾದ ಹುದ್ದೆಯನ್ನು ಅಲಂಕರಿಸಿದ್ದವರು. ಹೀಗೆ ಕ್ಯಾಬಿನೆಟ್ ದರ್ಜೆಯ ಹುದ್ದೆಯನ್ನೊಮ್ಮೆ ಅಲಂಕರಿಸಿದವರು, ಬಿಡುವಿಲ್ಲದ ವಕೀಲ ವೃತ್ತಿಯಲ್ಲಿರುವವರು ಮಹಾಸಭೆಯ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ದಿಸಿದಾಗ ಇವರು ಸಂಘಟನೆಗೆ ಸಮಯ ಕೊಟ್ಟಾರೆಯೇ ಎಂಬ ಸಣ್ಣ ದನಿ ಕೇಳಿ ಬಂದಿತ್ತು. ಆದರೆ ನಂತರ ನಡೆದದ್ದು ಇತಿಹಾಸ. ಇಂದು ಮಹಾಸಭೆ ಅಶೋಕ ಹಾರನಹಳ್ಳಿ ನೇತೃತ್ವದಲ್ಲಿ ತಲುಪದ ಜಿಲ್ಲೆಯಿಲ್ಲ, ಪಟ್ಟಣಗಳಿಲ್ಲ. ಒಮ್ಮೆ ರಾಷ್ಟ್ರೀಯ ಪಕ್ಷದ ಕರ್ನಾಟಕದ ಅಧ್ಯಕ್ಷರೊಬ್ಬರು ಲೋಕಾರೂಡಿಯಾಗಿ ಮಾತಾಡುವಾಗ ಏನ್ ಸರ ನೀವು ನಮನ್ನೆ ಮೀರಿಸುವಷ್ಟು ಪ್ರವಾಸ ಕೈಗೊಂಡಿದ್ದೀರಲ್ಲ ಎಂದು ಹೇಳಿದ್ದರಂತೆ. ಅಂದರೆ ಪ್ರಪ್ರಥಮವಾಗಿ ಎರಡು ರಾಜಕೀಯ ಪಕ್ಷಗಳು ಬ್ರಾಹ್ಮಣ ಸಮುದಾಯವನ್ನು ಹಾಗೂ ಸಮುದಾಯದ ಸಂಘಟನೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದಾಯಿತು. ಅಷ್ಟರ ಮಟ್ಟಿಗೆ ಇದೇ ಬರುವ ಜನವರಿ ೧೮ ಮತ್ತು ೧೯ ರಂದು ತ್ರಿಪುರ ವಾಸಿನಿ ಅರಮನೆ ಮೈದಾನದಲ್ಲಿ ನಡೆಯಲಿರುವ ಬ್ರಾಹ್ಮಣ ಮಹಾ ಸಮ್ಮೇಳನ ಎಲ್ಲರ ಗಮನ ಸೆಳೆಯುತ್ತಿದೆ. ಬದಲಾದ ಸನ್ನಿವೇಶದಲ್ಲಿ ಬ್ರಾಹ್ಮಣ ಸಮುದಾಯ ಅದೆಷ್ಟೇ ಅಪ್ಯಾಯಮಾನವಾದ ಪಕ್ಷವಾಗಿರಲಿ ತಮ್ಮನ್ನು ಮತ ಬ್ಯಾಂಕ್ ನಂತೆ ಕಾಣುವ ರಾಜಕೀಯ ಪಕ್ಷಗಳಿಗೆ ನಿರ್ಭಿಡೆಯಿಂದ ಪ್ರಶ್ನೆಗಳನ್ನು ಕೇಳುತ್ತಿದೆ. ಒಟ್ಟಿನಲ್ಲಿ ಬದಲಾವಣೆಯ ಪರ್ವ ಪ್ರಾರಂಭವಾಗಿದೆ. ಮುಂದೊಂದು ದಿನ ಬ್ರಾಹ್ಮಣ ಸಮುದಾಯ ಅದೆಷ್ಟೇ ಅಪ್ಯಾಯಮಾನವಾದ ಪಕ್ಷವಾಗಿರಲಿ ಸನಾತನ ಧರ್ಮಕ್ಕೆ ಒತ್ತು ಕೊಡುವ ಸೂಕ್ತ ಪರ್ಯಾಯ ಸೃಷ್ಟಿಯಾದಲ್ಲಿ ಆ ದಿಕ್ಕಿನಲ್ಲಿ ಏಕೆ ಚಿಂತಿಸಬಾರದು ಎಂದು ಬಹಿರಂಗವಾಗಲ್ಲದಿದ್ದರೂ ತಮ್ಮ ತಮ್ಮಲ್ಲೆ ಪಿಸು ಮಾತಿನಲ್ಲಿ ಅಭಿಪ್ರಾಯ ವ್ಯಕ್ತಪಡಿಸುತ್ತಿದೆ. ಇದು ರಾಜಕೀಯ ಪಕ್ಷಗಳಿಗೆ ಎಚ್ಚರಿಕೆಯ ಗಂಟೆ.