ರಾಜ್ಯಕ್ಕೆ ಬೇಸಿಗೆ ಕಾಲಿರಿಸುತ್ತಿದೆ. ವಿದ್ಯುತ್ ಬೇಡಿಕೆ ಅಧಿಕಗೊಳ್ಳುತ್ತಿದೆ. ಈಗಲೇ ದಿನದ ಬಳಕೆ ೩೦೮ ದಶಲಕ್ಷ ಯೂನಿಟ್ ತಲುಪಿದೆ. ಈಗ ಪ್ರತಿದಿನ ೨೫ ದಶಲಕ್ಷ ಯೂನಿಟ್ ಕೊರತೆ ಇದೆ. ಇದು ೫೦ ದಶಲಕ್ಷ ಯೂನಿಟ್‌ಗೆ ವಿಸ್ತರಿಸುವ ಸಂಭವವಿದೆ. ಅದರಿಂದ ಈಗಲೇ ವಿದ್ಯುತ್ ಖರೀದಿಗೆ ಪ್ರಕ್ರಿಯೆ ಆರಂಭಗೊಂಡಿದೆ. ಕಳೆದ ವರ್ಷವೂ ಇದೇ ಅವಧಿಯಲ್ಲಿ ವಿದ್ಯುತ್ ಖರೀದಿ ನಡೆದಿತ್ತು. ಪಂಜಾಬ್‌ನಿಂದ ಹೆಚ್ಚುವರಿ ವಿದ್ಯುತ್ ಪಡೆದು ನಂತರದ ದಿನಗಳಲ್ಲಿ ಅವರ ವಿದ್ಯುತ್ ಹಿಂತಿರುಗಿಸಲಾಯಿತು. ಈಗ ವಿದ್ಯುತ್ ಖರೀದಿ ಮಾಡಬೇಕು ಎಂದರೆ ಮುಂಗಡ ಹಣ ಕೊಡಬೇಕು. ಈ ಬಾರಿಯೂ ೨ ಸಾವಿರ ಮೆಗಾವ್ಯಾಟ್ ಹೆಚ್ಚುವರಿ ವಿದ್ಯುತ್ ಬೇಕಾಗಬಹುದು ಎಂದು ಅಂದಾಜು ಮಾಡಲಾಗಿದೆ. ಪ್ರತಿ ಯೂನಿಟ್ ಖರೀದಿ ದರ ೬.೮೦ ರಿಂದ ೭.೦೦ ರೂ ಆಗಲಿದೆ. ಇದಕ್ಕೆ ಕೆಇಆರ್‌ಸಿ ಅನುಮೋದನೆ ಪಡೆಯಬೇಕು. ಈ ಬಾರಿ ಜಲ ವಿದ್ಯುತ್ ಸಂಗ್ರಹ ಸಾಕಷ್ಟಿದೆ. ಈಗ ಪ್ರತಿದಿನ ೫೩ ದಶಲಕ್ಷ ಜಲ ವಿದ್ಯುತ್ ಬಳಕೆಯಾಗುತ್ತಿದೆ. ಇದೇ ಪ್ರಮಾಣದಲ್ಲಿ ಬಳಸಿದರೆ ಇನ್ನೂ ೧೮೧ ದಿನಗಳು ಜಲ ವಿದ್ಯುತ್ ಲಭಿಸಲಿದೆ. ಇದು ಅತ್ಯಂತ ಕಡಿಮೆ ವೆಚ್ಚದಲ್ಲಿ ದೊರಕುವ ವಿದ್ಯುತ್ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಜಲ ವಿದ್ಯುತ್ ಪ್ರಮಾಣವನ್ನು ಹೆಚ್ಚಿಸಲು ಶರಾವತಿ ಪಂಪ್ಡ್ ಸ್ಟೋರೇಜ್ ಸಿಸ್ಟಂಗೆ ಅನುಮೋದನೆ ಪಡೆಯುವ ಹುಮ್ಮಸ್ಸಿನಲ್ಲಿ ರಾಜ್ಯ ಸರ್ಕಾರ ಇದೆ. ಇದಕ್ಕಿಂತ ಉತ್ತಮ ವಿಧಾನ ಎಂದರೆ ಬ್ಯಾಟರಿ ಮೂಲಕ ವಿದ್ಯುತ್ ದಾಸ್ತಾನು ಮಾಡುವುದು. ಇದರ ಬಗ್ಗೆ ಇನ್ನೂ ಜಾಗೃತಿ ಮೂಡಿಲ್ಲ.
೨೫ ವರ್ಷಗಳ ದರ ನಿಗದಿ
ಪ್ರತಿ ವರ್ಷ ಕೆಇಆರ್‌ಸಿ ವಿದ್ಯುತ್ ದರ ನಿಗದಿಪಡಿಸುತ್ತ ಬಂದಿದೆ. ಹಿಂದೆ ಸಾರ್ವಜನಿಕ ವಿಚಾರಣೆಗೆ ಹೆಚ್ಚು ಜನ ಬರುತ್ತಿದೆ. ಈ ವರ್ಷ ಫೆಬ್ರವರಿಯಲ್ಲಿ ದರ ಪರಿಷ್ಕರಣೆಯ ಬಗ್ಗೆ ಸಾರ್ವಜನಿಕ ವಿಚಾರಣೆ ನಡೆಸಲು ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಹಿಂದೆ ರೈತರ ಪಂಪ್‌ಸೆಟ್‌ಗಳಿಗೆ ನೀಡುವ ವಿದ್ಯುತ್ ದರ ನಿಗದಿಪಡಿಸಬೇಕಿತ್ತು. ಅದರಿಂದ ರೈತ ಸಂಘಟನೆಗಳು ಸಾರ್ವಜನಿಕ ವಿಚಾರಣೆಗೆ ಹಾಜರಾಗುತ್ತಿದ್ದವು. ಈಗ ಉಚಿತ ವಿದ್ಯುತ್ ಲಭಿಸುವುದರಿಂದ ಆ ಸಂಘಟನೆಗಳು ಬಹಿರಂಗ ವಿಚಾರಣೆಗೆ ಬರುತ್ತಿಲ್ಲ. ಅದೇರೀತಿ ಗೃಹ ಬಳಕೆದಾರರರಿಗೆ ಮಾಸಿಕ ೨೦೦ ಯೂನಿಟ್ ವಿದ್ಯುತ್ ಉಚಿತವಾಗಿ ನೀಡುತ್ತಿರುವುದರಿಂದ ನಾಗರಿಕ ಸಮಿತಿಗಳು ವಿಚಾರಣೆಯಲ್ಲಿ ಆಸಕ್ತಿ ತೋರುತ್ತಿಲ್ಲ. ಇನ್ನು ಉಳಿದಿರುವವರು ಕೈಗಾರಿಕೆ ಮತ್ತು ವಾಣಿಜ್ಯ ಬಳಕೆದಾರರು. ಅವರಿಗೆ ಪ್ರತಿವರ್ಷ ವಿದ್ಯುತ್ ದರ ಏರಿಕೆಯಾಗುತ್ತಿರುವುದನ್ನು ಕಂಡು ನಿರಾಶೆ ಮೂಡಿದೆ. ಒಂದೇ ಒಂದು ಬಾರಿ ಮಾತ್ರ ದರ ಇಳಿಕೆಯಾಗಿತ್ತು. ಆದರೆ ಅದನ್ನು ಎಸ್ಕಾಂಗಳು ಜಾರಿಗೆ ಬಾರದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದವು. ಕಳೆದ ೨೫ ವರ್ಷಗಳಿಂದ ಆಗಿರುವ ಸಾಧನೆ ಎಂದರೆ ವಿದ್ಯುತ್ ನಷ್ಟ ಕಡಿಮೆಯಾಗಿರುವುದು. ಶೇ. ೩೦ರಷ್ಟು ಇದ್ದ ನಷ್ಟ ಈಗ ಶೇ. ೧೫ಕ್ಕೆ ಇಳಿದಿದೆ. ಇದನ್ನು ಶೇ. ೧೦ಕ್ಕೆ ತಂದರೆ ದೊಡ್ಡ ಸಾಧನೆ ಆಗಲಿದೆ. ಸರ್ಕಾರಿ ನಿಯಂತ್ರಿತ ವಿದ್ಯುತ್ ವಿತರಣ ಕಂಪನಿಗಳು ನಷ್ಟದಲ್ಲಿ ಮುಳುಗಿವೆ. ಸುಮಾರು ೫೨ ಸಾವಿರ ಕೋಟಿ ರೂ.ಗಳನ್ನು ಸರ್ಕಾರ ವಿದ್ಯುತ್ ರಂಗಕ್ಕೆ ನೀಡಬೇಕಿದೆ. ಇದನ್ನು ಬಜೆಟ್‌ನಲ್ಲಿ ಒದಗಿಸುವುದು ಕಷ್ಟ. ಎಸ್ಕಾಂ ಕಂಪನಿಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಒದಗಿಸಲು ಕೇಂದ್ರ ಸರ್ಕಾರವನ್ನು ರಾಜ್ಯ ಒತ್ತಾಯಿಸಿದೆ. ವಿದ್ಯುತ್ ರಂಗದ ಸಾಲ ಸೌಲಭ್ಯ ನೋಡಿಕೊಳ್ಳಲು ಪಿಎಫ್‌ಸಿ ಕೆಲಸ ಮಾಡುತ್ತಿದೆ. ಖಾಸಗಿ ವಿದ್ಯುತ್ ಉತ್ಪಾದನೆ ಕಂಪನಿಗಳಿಗೆ ಸಕಾಲದಲ್ಲಿ ವಿದ್ಯುತ್ ದರ ಪಾವತಿಸಲು ಪಿಎಫ್‌ಸಿ ಕ್ರಮ ಕೈಗೊಳ್ಳುತ್ತದೆ. ಸರ್ಕಾರಿ ವಿದ್ಯುತ್ ಉತ್ಪಾದನೆ ಕಂಪನಿಗಳಿಗೆ ಎಸ್ಕಾಂಗಳು ಕೋಟ್ಯಂತರ ರೂ. ಸಾಲ ಉಳಿಸಿಕೊಂಡಿದೆ. ಕೆಪಿಸಿಗೆ ಎಸ್ಕಾಂಗಳು ಬಾಕಿ ಉಳಿಸಿಕೊಂಡಿರುವುದನ್ನು ಚುಕ್ತಾ ಮಾಡಲು ಇನ್ನೂ ಸಾಧ್ಯವಾಗಿಲ್ಲ. ಬೇಸಿಗೆ ಕಾಲದಲ್ಲಿ ವಿದ್ಯುತ್ ಖರೀದಿ ಮಾಡಬೇಕು ಎಂದರೆ ಹೆಚ್ಚಿನ ದರವನ್ನು ಮುಂಗಡ ಪಾವತಿ ಮಾಡಬೇಕು. ಬೇಸಿಗೆ ಕಾಲದಲ್ಲಿ ಕೃಷಿ ಚಟುವಟಿಕೆ ಕಡಿಮೆಯಾದರೂ ವಾಣಿಜ್ಯ ಮತ್ತು ಕೈಗಾರಿಕೆ ಕಾಮಗಾರಿಗಳು ನಿಲ್ಲುವುದಿಲ್ಲ. ಲೋಡ್‌ಶೆಡ್ಡಿಂಗ್ ಮಾಡೋಲ್ಲ ಎಂದು ವಿದ್ಯುತ್ ಸಚಿವರು ಈಗಾಗಲೇ ಪ್ರಕಟಿಸಿದ್ದಾರೆ. ಅದರಿಂದ ಹೆಚ್ಚಿನ ದರದಲ್ಲಿ ವಿದ್ಯುತ್ ಖರೀದಿ ಅನಿವಾರ್ಯ. ಇದಕ್ಕೆ ಕೆಇಆರ್‌ಸಿ ಕೂಡ ಅನುಮೋದನೆ ನೀಡಬೇಕು. ಇದಲ್ಲದೆ ಪ್ರತಿ ವರ್ಷ ವಿದ್ಯುತ್ ಏರಿಕೆಯ ವಿಮರ್ಶೆ ಕೈಗೊಳ್ಳಬೇಕಿದ್ದು ಕೆಇಆರ್‌ಸಿಗೆ ಬೆಸ್ಕಾಂ ಪ್ರತಿ ಯೂನಿಟ್‌ಗೆ ೧.೫೦ ರೂ, ಇತರ ಎಸ್ಕಾಂಗಳು ಪ್ರತಿ ಯೂನಿಟ್‌ಗೆ ೧.೨೦ ರೂ. ಹೆಚ್ಚಿಸುವಂತೆ ಒತ್ತಾಯಿಸಿವೆ. ಇದರ ಬಗ್ಗೆ ಸಾರ್ವಜನಿಕ ವಿಚಾರಣೆ ನಡೆಸಿ ಏಪ್ರಿಲ್ ೧ರಿಂದ ಹೊಸ ದರ ಜಾರಿಗೆ ಬರುವಂತೆ ಆದೇಶಿಸಬೇಕಿದೆ.
ಕನ್ನಡಕ್ಕೆ ಒತ್ತಾಯ
ಕೆಇಆರ್‌ಸಿ ಸಾರ್ವಜನಿಕ ವಿಚಾರಣೆ ವೇಳೆ ಕನ್ನಡ ಬಳಕೆ ಕಡಿಮೆಯಾಗುತ್ತಿದೆ ಎಂದು ಹಲವು ಸಂಘಟನೆಗಳು ಅಪಸ್ವರ ಎತ್ತಿವೆ. ಹಿಂದಿನಿಂದಲೂ ಕನ್ನಡ ಬಳಕೆ ಕಡಿಮೆ ಎಂದೇ ಹೇಳಬಹುದು. ಇದರಿಂದಲೂ ಸಾರ್ವಜನಿಕರು ವಿಚಾರಣೆಯಲ್ಲಿ ಮುಕ್ತವಾಗಿ ಭಾಗವಹಿಸಲು ಹಿಂಜರಿಯುತ್ತಿದ್ದಾರೆ. ಕನ್ನಡದಲ್ಲಿ ಕೆಲವು ಪಾರಿಭಾಷಿಕ ಶಬ್ದಗಳನ್ನು ಬಳಸುವುದು ಕಷ್ಟ. ಅಲ್ಲದೆ ವಿದ್ಯುತ್ ರಂಗ ಹೆಚ್ಚು ತಾಂತ್ರಿಕ ಅಂಶ ಹೊಂದಿರುವುದರಿಂದ ಜನಸಾಮಾನ್ಯರಿಗೆ ಅರ್ಥವಾಗುವುದು ಕಷ್ಟ. ಎಷ್ಟೋ ಬಾರಿ ಕೆಇಆರ್‌ಸಿಗೆ ಪ್ರತಿಕ್ರಿಯೆ ಕಂಡು ಬಾರದೇ ಇರುವುದಕ್ಕೆ ಕನ್ನಡದ ಕೊರತೆಯೂ ಕಾರಣ. ಇದರ ಬಗ್ಗೆ ಕೆಇಆರ್‌ಸಿ ಗಂಭೀರ ಚಿಂತನೆ ನಡೆಸಿಲ್ಲ. ರಾಜ್ಯ ಸರ್ಕಾರದಲ್ಲಿ ಕನ್ನಡ ಅನುವಾದವೇ ಪ್ರಮುಖ ಕೆಲಸ. ಇಲ್ಲಿ ಅನುವಾದವೇ ಗೌಣವಾಗಿದೆ. ಅಲ್ಲದೆ ಅರ್ಜಿ ಸಲ್ಲಿಸುವುದಕ್ಕೂ ಹೆಚ್ಚು ಹಣ ಬೇಕು. ಮೇಲ್ಮನವಿಯಂತೂ ದುಬಾರಿ. ಕೈಗಾರಿಕೆ ಮತ್ತು ವಾಣಿಜ್ಯ ಉದ್ಯಮಿಗಳು ಮಾತ್ರ ಮೇಲ್ಮನವಿ ಸಲ್ಲಿಸಲು ಸಾಧ್ಯ. ಕೆಇಆರ್‌ಸಿ ಹೆಚ್ಚು ಪಾರದರ್ಶವಾಗಿ ಕೆಲಸ ಮಾಡಬೇಕು ಎಂದರೆ ಕನ್ನಡದ ಬಳಕೆ ಅಧಿಕಗೊಳ್ಳಬೇಕು. ಇದಕ್ಕೆ ಮಾನಸಿಕ ದೃಢತೆ ಬೇಕು.
ಸೋಲಾರ್ ವಿದ್ಯುತ್ ಬಳಕೆ ಅಧಿಕಗೊಂಡಂತೆ ಉತ್ಪಾದಿಕರ ಸಂಖ್ಯೆ ಅಧಿಕಗೊಳ್ಳಲಿದೆ. ಅಲ್ಲದೆ ಗ್ರಮೀಣ ಜನ ವಿದ್ಯುತ್ ಉತ್ಪಾದನೆಯಲ್ಲಿ ಭಾಗವಹಿಸುವ ಅವಕಾಶಗಳಿವೆ. ಆಗ ಕನ್ನಡದ ಬಳಕೆ ಮತ್ತಷ್ಟು ಹೆಚ್ಚಿಸುವುದು ಅಗತ್ಯ.
ಕ್ರಾಸ್ ಸಬ್ಸಿಡಿ
ಕೈಗಾರಿಕೆ ಮತ್ತು ವಾಣಿಜ್ಯ ಬಳಕೆದಾರರ ಮೇಲೆ ಬಿದ್ದಿರುವ ಕ್ರಾಸ್ ಸಬ್ಸಿಡಿಯನ್ನು ಕಡಿಮೆ ಮಾಡಲು ಕೆಇಆರ್‌ಸಿ ಇಷ್ಟಪಟ್ಟಿದ್ದರೂ ಸರ್ಕಾರ ಕ್ರಾಸ್ ಸಬ್ಸಿಡಿ ಹೊರೆಯನ್ನು ಕಡಿಮೆ ಮಾಡಲು ಸಿದ್ಧವಿಲ್ಲ. ಉಚಿತ ಗ್ಯಾರಂಟಿ ಯೋಜನೆಗೆ ಸಾಲ ಮಾಡಲು ಸಿದ್ಧವಿರುವ ಸರ್ಕಾರ ಕ್ರಾಸ್ ಸಬ್ಸಿಡಿ ಕಡಿಮೆ ಮಾಡಲು ಆಸಕ್ತಿ ತೋರುತ್ತಿಲ್ಲ. ಇದನ್ನು ಕಡಿಮೆ ಮಾಡಿದರೆ ಹೊರ ರಾಜ್ಯಗಳ ಕೈಗಾರಿಕೆಗಳು ರಾಜ್ಯಕ್ಕೆ ಬರುತ್ತವೆ. ವಿದೇಶಿ ನೇರ ಬಂಡವಾಳ ಬರಬೇಕು ಎಂದರೆ ವಿದ್ಯುತ್ ದರವೂ ಕಡಿಮೆ ಇರಬೇಕು. ವಾಣಿಜ್ಯ ಬಳಕೆದಾರರೂ ಇದನ್ನೇ ನೋಡುತ್ತಾರೆ.