ಹುಬ್ಬಳ್ಳಿ: ಬೇಕಾಬಿಟ್ಟಿ ಬೈಕ್ ಚಲಾವಣೆ ಮಾಡುವ ಮೂಲಕ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುವಂತಹ ದೃಶ್ಯಗಳನ್ನು ಸಾಮಾಜಿಕ ಜಾಲತಾಣ ಹರಿಬಿಡುತ್ತಿದ್ದ ದುಷ್ಕರ್ಮಿಯೊಬ್ಬನ್ನು ಪೊಲೀಸರು ಬಂಧಿಸಿ, ದ್ವಿಚಕ್ರ ವಾಹನ ಜಪ್ತಿ ಮಾಡಿದ್ದಾರೆ.
ಇಲ್ಲಿಯ ಗೋಪನಕೊಪ್ಪ ನಿವಾಸಿ ಸಚಿನ್ ಎಂಬಾತ ಬಂಧಿತ ಆರೋಪಿ. ಐಷಾರಾಮಿ ಬೈಕ್ ಮೂಲಕ ರಸ್ತೆಯಲ್ಲಿ ಅಲೆದಾಡುತ್ತಿದ್ದ ಮಹಿಳೆಯರು ಹಾಗೂ ಯುವತಿಯರಿಗೆ ಪಕ್ಕದಲ್ಲಿ ಹೋಗಿ ವೇಗವಾಗಿ ಬೈಕ್ ಚಲಾಯಿಸುವುದು ಹಾಗೂ ಶಬ್ದ ಮಾಲಿನ್ಯ ಉಂಟು ಮಾಡಿ ತೊಂದರೆ ನೀಡುತ್ತಿದ್ದ. ಅಂತಹ ದೃಶ್ಯಗಳನ್ನು ಸ್ನೇಹಿತರ ಮೂಲಕ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದನು ಎನ್ನಲಾಗಿದೆ. ಈ ವಿಷಯ ಗಮನಕ್ಕೆ ಬಂದ ಬಳಿಕ ಪೂರ್ವ ಸಂಚಾರಿ ಪೊಲೀಸ್ ಠಾಣೆಯ ಸಿಬ್ಬಂದಿ ಆತನನ್ನು ಬಂಧಿಸಿದ್ದಾರೆ.