ಬೆಂಗಳೂರಿನ ಪ್ರವಾಹಕ್ಕೆ ಪರಿಹಾರವೇ ಇಲ್ಲವೆ?

ಸಾಮಾನ್ಯವಾಗಿ ಮಳೆಗಾಲದಲ್ಲಿ ಬೆಂಗಳೂರು ನಗರಕ್ಕೆ ಕೆಲವು ದಿನ ಧಾರಾಕಾರ ಮಳೆ ಸುರಿದು ಕೆಲವು ಪ್ರದೇಶಗಳು ನೀರಿನಲ್ಲಿ ಮುಳುಗಿ ಜನದೋಣಿಯಲ್ಲಿ ಓಡಾಡುವ ಪರಿಸ್ಥಿತಿ ತಲೆದೋರುತ್ತಿದೆ. ಪ್ರತಿ ಬಾರಿ ಪ್ರವಾಹ ಬಂದಾಗ ಜನ ಬಿಬಿಎಂಪಿಗೆ ಹಿಡಿಶಾಪ ಹಾಕುವುದು ಮಾತ್ರ ನಿಂತಿಲ್ಲ. ಬೆಂಗಳೂರು ನೈಸರ್ಗಿಕವಾಗಿ ಆಯಕಟ್ಟಿನ ಪ್ರದೇಶದಲ್ಲಿದೆ. ಸಮುದ್ರ ಮಟ್ಟದಿಂದ ೩೦೨೦ ಅಡಿ ಎತ್ತರದಲ್ಲಿದೆ. ಮಳೆ ನೀರು ಸುಲಭವಾಗಿ ಹರಿದು ಹೋಗುತ್ತದೆ. ಬೆಟ್ಟ ಗುಡ್ಡಗಳ ನಾಡು. ಹಿಂದೆ ೧ ಸಾವಿರ ಕೆರೆಗಳಿದ್ದವು. ಮಳೆ ನೀರು ಇಲ್ಲಿಗೆ ಹರಿದುಹೋಗುತ್ತಿದ್ದವು. ಅರ್ಕಾವತಿ ಮತ್ತು ವೃಷಭಾವತಿ ನದಿಗಳು ಹರಿಯುತ್ತಿದ್ದವು. ಈಗ ಇವುಗಳ ಕೊಳಚೆ ನೀರಿನ ತಾಣಗಳಾಗಿವೆ. ಈಗ ಅಲಸೂರು, ಹೆಬ್ಬಾಳ, ಸ್ಯಾಂಕಿ, ಮಡಿವಾಳ ಸೇರಿದಂತೆ ಪ್ರಮುಖ ಕೆರೆಗಳು ಮಾತ್ರ ಉಳಿದುಕೊಂಡಿವೆ. ಈಗ ಜನಸಂಖ್ಯೆ ೧.೫೦ ಕೋಟಿ ದಾಟಿದೆ. ಪ್ರತಿ ವರ್ಷ ೨.೭೬ ರಷ್ಟು ಬೆಳವಣಿಗೆ ಕಾಣುತ್ತಿವೆ. ಒಟ್ಟು ವಿಸ್ತೀರ್ಣ೭೪೧ ಚದರ ಕಿಮೀ ಹೊಂದಿರುವ ನಗರ ಈಗ ಸುತ್ತಮುತ್ತ ಎಲ್ಲ ದಿಕ್ಕಿನಲ್ಲಿ ವ್ಯಾಪಿಸುತ್ತಿದೆ. ರಾಮನಗರ, ತುಮಕೂರು, ದೊಡ್ಡಬಳ್ಳಾಪುರ, ದೇವನಹಳ್ಳಿ, ಮಾಗಡಿ, ಕುಣಿಗಲ್ ದಿಕ್ಕಿನಲ್ಲಿ ನಗರ ಬಹಳ ವೇಗದಲ್ಲಿ ಬೆಳೆಯುತ್ತಿದೆ.
ಹಿಂದೆ ಮಳೆ ನೀರು ಹರಿದು ಹೋಗಲು ವೃಷಭಾವತಿ, ಕೋರಮಂಗಲ, ಚಲ್ಲಘಟ್ಟ, ಹೆಬ್ಬಾಳ ಕಣಿವೆಗಳಿದ್ದವು. ಇದಕ್ಕೆ ಸಂಪರ್ಕ ಕಲ್ಪಿಸುವ ರಾಜಾಕಾಲುವೆಗಳಿದ್ದವು. ಇವುಗಳು ನಗರದೊಳಗೆ ೫೦ ಮೀಟರ್ ಅಗಲವಿದ್ದವು. ಹೀಗಾಗಿ ಮಳೆ ಎಷ್ಟೇ ಬಂದರೂ ನೀರು ಹರಿದುಹೋಗಲು ಸಹಕಾರಿಯಾಗಿದ್ದವು. ನಗರ ಬೆಳೆದಂತೆ ರಾಜಕಾಲುವೆ ೬ ಮೀಟರ್‌ಗೆ ಇಳಿಯಿತು. ಇದರಿಂದ ಮಳೆ ನೀರು ರಸ್ತೆಯಲ್ಲಿ ಹರಿಯುವಂತಾಗಿದೆ. ರಾಜಾಕಾಲುವೆ ಒತ್ತುವರಿ ಮಾಡಿಕೊಂಡವರು ಬಡವರಲ್ಲ. ಜೋಪಡಿ ಹಾಕಿಕೊಂಡಿಲ್ಲ. ಎಲ್ಲರೂ ದೊಡ್ಡ ದೊಡ್ಡ ಬಂಗಲೆ ಕಟ್ಟಿಸಿಕೊಂಡಿದ್ದಾರೆ. ಇವುಗಳನ್ನು ಪಡೆದು ರಾಜಾಕಾಲುವೆಗೆ ಅವಕಾಶ ಮಾಡಿಕೊಡುವ ದಿಟ್ಟ ವ್ಯಕ್ತಿ ಇನ್ನೂ ಬಂದಿಲ್ಲ. ಎಲ್ಲ ರಾಜಕೀಯ ಪಕ್ಷಗಳ ನಾಯಕರು ಈ ಅವ್ಯವಹಾರದಲ್ಲಿ ಫಲಾನುಭವಿಯಾಗಿರುವುದರಿಂದ ಯಾರೂ ಚಕಾರ ಎತ್ತುವುದಿಲ್ಲ. ಮನೆಗಳ ನಿರ್ಮಾಣ ಬಿಬಿಎಂಪಿ ಹಿಡಿತದಲ್ಲಿ ಇಲ್ಲವೆ ಇಲ್ಲ. ಬಹುಮಹಡಿ ಕಟ್ಟಡಗಳು ಲೈಸನ್ಸ್ ಇಲ್ಲದೆ ನಿರ್ಮಾಣಗೊಳ್ಳುತ್ತವೆ. ಅವುಗಳು ಬಿದ್ದರೂ ಕ್ರಮ ಕೈಗೊಳ್ಳಲು ಬರುವುದಿಲ್ಲ.
ಇದರಿಂದ ಮಹದೇವಪುರ, ಬಿಟಿಎಂ ಲೇಔಟ್, ಕೋರಮಂಗಲ, ಯಲಹಂಕ, ಶಾಂತಿ ನಗರ, ಹೆಬ್ಬಾಳ, ಕೆಂಗೇರಿ ಮುಂತಾದ ೨೦೯ ತಗ್ಗುಪ್ರದೇಶಗಳಲ್ಲಿ ನೀರು ನಿಲ್ಲುತ್ತಿದೆ. ಅಗ್ನಿಶಾಮಕ ದಳಕ್ಕೆ ಅಲ್ಲಿಯ ಜನರನ್ನು ರಕ್ಷಿಸುವುದೇ ದೊಡ್ಡ ಕೆಲಸ. ಐಟಿಬಿಟಿ ಉದ್ಯಮ ಬೃಹದಾಕಾರವಾಗಿ ಬೆಳೆದ ಮೇಲೆ ಮಳೆ-ಪ್ರವಾಹ ಎಲ್ಲರ ಗಮನ ಸೆಳೆಯುತ್ತಿದೆ. ರಾಜ್ಯ ಸರ್ಕಾರಕ್ಕೆ ಇದರಿಂದ ಕೆಟ್ಟ ಹೆಸರು ಬಂದಿರುವುದಂತೂ ನಿಜ. ಆಡಳಿತದಲ್ಲಿರುವವರು ಏನೋ ಒಂದುಕಾರಣ ನೀಡಿ ಬಚಾವ್ ಆಗಲು ಯತ್ನಿಸುತ್ತಾರೆ. ಮಳೆ ನೀರು ಹರಿದು ಹೋದ ಮೇಲೆ ಜನ- ಸರ್ಕಾರ ಇಬ್ಬರೂ ಮರೆತುಬಿಡುತ್ತಾರೆ, ಜನರ ಪ್ರತಿಭಟನೆ ಅಧಿಕಗೊಂಡಲ್ಲಿ ಯಾರೋ ಬಿಬಿಎಂಪಿ ನೌಕರರನ್ನು ಅಮಾನತುಗೊಳಿಸುವ ಕಾಟಾಚಾರದ ಕೆಲಸ ನಡೆಯುತ್ತದೆ. ಬೆಂಗಳೂರಿನ ಇಂದಿನ ಪರಿಸ್ಥಿತಿಗೆ ರಾಮಕೃಷ್ಣ ಹೆಗಡೆ ಕಾಲದಿಂದ ನಡೆದು ಬಂದ ಅಕ್ರಮಗಳು ಕಾರಣ. ಲಕ್ಷö್ಮಣರಾವ್ ಕಾಲದಲ್ಲಿ ಜಯನಗರ ಬಡಾವಣೆ ತಲೆಎತ್ತಿತು. ಆಮೇಲೆ ಸರ್ಕಾರವೇ ಬಿಡಿಎ ಬೆಳೆಯಲು ಬಿಡಲಿಲ್ಲ. ಅನಧಿಕೃತ ಖಾಸಗಿ ಲೇಔಟ್‌ಗಳು ತಲೆ ಎತ್ತಿದವು. ಅದರ ಫಲವೇ ಕೆರೆಗಳು ಮಾಯವಾದವು, ರಾಜಾಕಾಲುವೆಗಳು ಮುದುರಿಕೊಂಡವು. ಬಿಬಿಎಂಪಿ ಜನಪ್ರತಿನಿಧಿಗಳಿದ್ದ ಕಾಲದಲ್ಲಿ ಜನ ಅವರನ್ನು ಪ್ರಶ್ನಿಸುತ್ತಿದ್ದರು. ಈಗ ಪಾಲಿಕೆ ಸದಸ್ಯರೇ ಇಲ್ಲ. ಸರ್ಕಾರಕ್ಕೆ ಚುನಾವಣೆ ನಡೆಸುವ ಉದ್ದೇಶವೇ ಇಲ್ಲ. ಹೈಕೋರ್ಟ್ ಮುಂದ ಚುನಾವಣೆ ವಿಷಯ ಬಂದಾಗ ಯಾವುದಾದರೊಂದು ಕಾರಣ ನೀಡಿ ಚುನಾವಣೆ ಮುಂದೂಡುವುದರಲ್ಲೇ ಅಧಿಕಾರಿಗಳ ಬುದ್ಧಿವಂತಿಕೆಯಲ್ಲ ಬಳಕೆಯಾಗಿ ಹೋಗುತ್ತದೆ. ಈಗ ಗ್ರೇಟರ್ ಬೆಂಗಳೂರು ಆಗಿದೆ. ಮಳೆಗೆ ಇದರ ವ್ಯತ್ಯಾಸವೇನೂ ತಿಳಿಯುವುದಿಲ್ಲ. ಎಂದಿನಂತೆ ತಗ್ಗುಪ್ರದೇಶದಲ್ಲಿ ನೀರು ನಿಲ್ಲುತ್ತದೆ. ವಾರ್ ರೂಂನಲ್ಲೇ ಡಿಸಿಎಂ ಕುಳಿತರೂ ನೀರೇನೂ ಹಿಂತಿರುಗಿ ಹೋಗಲ್ಲ. ಶ್ರೀಮಂತರು ಬಹುಮಹಡಿ ಕಟ್ಟಡಗಳಲ್ಲಿ ವಾಸಿಸುವುದರಿಂದ ಮಳೆ ನೀರಿನಿಂದ ಅವರಿಗೆ ತೊಂದರೆ ಏನೂ ಇಲ್ಲ. ಬಡವರ ಮನೆಗಳು ತಗ್ಗುಪ್ರದೇಶದಲ್ಲಿದ್ದರೆ ದೇವರೇ ಕಾಪಾಡಬೇಕು. ಮಳೆ ನೀರು ಸಂಗ್ರಹಿಸಿಟ್ಟುಕೊಳ್ಳಿ ಎಂದು ಸರ್ಕಾರ ಎಲ್ಲ ಕಡೆ ಪ್ರಚಾರ ಮಾಡುತ್ತದೆ. ಬೆಂಗಳೂರಿನಲ್ಲಿ ಮಳೆ ನೀರು ಹಿಡಿದಿಟ್ಟುಕೊಳ್ಳುವುದರಲ್ಲಿ ವಿಫಲವಾಗಿದೆ. ಮಳೆ ನೀರನ್ನು ಕೋಲಾರ ಜಿಲ್ಲೆಗೆ ಪಂಪ್ ಮಾಡುವ ಪ್ರಯತ್ನ ನಡೆಯುತ್ತಿದೆ. ಅದೇರೀತಿ ತಮಿಳುನಾಡಿಗೂ ಸುಲಭವಾಗಿ ಹರಿದು ಹೋಗುವಂತೆ ಮಾಡಬಹುದು. ಜನಪ್ರತಿನಿಧಿಗಳಿಗೆ ರಾಜಕೀಯ ಇಚ್ಛಾಶಕ್ತಿ ಬೇಕು. ಹಣದ ಸಮಸ್ಯೆ ತಲೆದೋರುವುದಿಲ್ಲ. ಒಂದು ಕಡೆ ಕಾವೇರಿ ನೀರಿನ ಪಾಲಿಗೆ ಹೊಡೆದಾಡುತ್ತೇವೆ. ಮತ್ತೊಂದು ಕಡೆ ಮಳೆ ನೀರು ಸಂಗ್ರಹಿಸಲು ಯಾವ ಕ್ರಮವನ್ನೂ ಕೈಗೊಳ್ಳುವುದಿಲ್ಲ. ಬೆಂಗಳೂರು ನಗರ ಅಂತಾರಾಷ್ಟ್ರೀಯ ಮನ್ನಣೆ ಗಳಿಸಿದ್ದರೂ ಗಾರ್ಬೇಜ್ ಸಿಟಿ, ಮಳೆಗಾಲದಲ್ಲ ಕೊಳಚೆ ನಗರ ಎಂಬ ಅಪಖ್ಯಾತಿಯಿಂದ ಪಾರಾಗಲು ಇನ್ನೂ ಸಾಧ್ಯವಾಗಿಲ್ಲ.