ಒಬ್ಬ ಗೃಹಿಣಿ ಹೊಸ ಮನೆಗೆ ಬಂದಾಗ ಕಿಟಕಿಯ ಮೂಲಕ ಎದುರು ಮನೆಯ ಗೋಡೆಯನ್ನು ನೋಡುತ್ತಿದ್ದಳು. ಆಕೆ ಯಾವಾಗಲೂ ಆ ಮನೆಯ ಗೋಡೆ ಎಷ್ಟು ಕೊಳಕಾಗಿದೆ ಎಂದು ಗಂಡನ ಬಳಿ ದೂರುತ್ತಿದ್ದಳು. ಒಂದು ದಿನ ಗೋಡೆ ಸ್ವಚ್ಛವಾಗಿದೆ ಎಂದು ಆಕೆಗೆ ಅನ್ನಿಸಿತು. ಅದನ್ನು ಗಂಡನಿಗೂ ಹೇಳಿದಳು. ಆದರೆ ಆ ಗೋಡೆ ಮೊದಲಿನಿಂದಲೂ ಸ್ವಚ್ಛವಾಗಿಯೇ ಇತ್ತು, ನಮ್ಮ ಮನೆಯ ಕಿಟಕಿಯ ಗಾಜಿನಲ್ಲೇ ಕೊಳಕು ತುಂಬಿತ್ತು. ಅದನ್ನು ಸ್ವಚ್ಛ ಮಾಡಿದ್ದರಿಂದ ಈಗ ಗೋಡೆ ಸ್ವಚ್ಛವಾಗಿ ಕಾಣುತ್ತಿದೆ ಎಂದು ಗಂಡ ಹೇಳುತ್ತಾನೆ.
ಇದೊಂದು ನೀತಿ ಕಥೆ ಅಷ್ಟೆ. ಈ ಕಥೆ ರಾಜ್ಯ ಬಿಜೆಪಿಗೆ ಸರಿಯಾಗಿ ಹೊಂದುತ್ತದೆ. ತಮ್ಮ ಮನೆಯ ಕಿಟಕಿಯನ್ನೇ ಸ್ವಚ್ಛವಾಗಿಟ್ಟುಕೊಳ್ಳದ ಇವರು ಕಾಂಗ್ರೆಸ್ ಗೋಡೆ ಕೊಳಕಾಗಿದೆ ಎಂದು ಬಾಯಿ ಬಡಿದುಕೊಳ್ಳುತ್ತಿದ್ದಾರೆ. ಕೊಳಕಾಗಿರುವುದು ಅವರ ಕಿಟಕಿಯೇ ಹೊರತು ನಮ್ಮ ಗೋಡೆಯಲ್ಲ ಎಂಬುದು ಇನ್ನೂ ಅವರಿಗೆ ತಿಳಿದಿಲ್ಲ. ಈಗ ಜನಾಕ್ರೋಶ ಎಂಬ ಹೋರಾಟದ ಮೂಲಕ ರಾಜ್ಯ ರಾಜಕೀಯದಲ್ಲಿ ಸಕ್ರಿಯವಾಗಿರಲು ಬಿಜೆಪಿ ನಾಯಕರು ಮುಂದಾಗಿದ್ದಾರೆ. ರಾಜ್ಯಾಧ್ಯಕ್ಷರಾದ ವಿಜಯೇಂದ್ರ, ಪ್ರತಿಪಕ್ಷ ನಾಯಕ ಆರ್.ಅಶೋಕ ಹಾಗೂ ಬಿಜೆಪಿ ನಾಯಕರು ತಮ್ಮ ಕಿಟಕಿ ಕೊಳೆಯನ್ನು ತೆಗೆಯಲು ಯತ್ನಿಸಿದ್ದರೆ ಇಂತಹ ಹೋರಾಟದ ಅಗತ್ಯವೇ ಇರಲಿಲ್ಲ.ಸಿಎಂ ಸಿದ್ದರಾಮಯ್ಯರವರ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದ ನಮ್ಮ ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿಗಳ ಮೂಲಕ ಪ್ರತಿ ಕುಟುಂಬಕ್ಕೆ ವಾರ್ಷಿಕ ಸುಮಾರು ೫೫ ಸಾವಿರ ರೂ. ನೀಡುತ್ತಿದೆ. ಇವು ಕುಟುಂಬಗಳ ಆರ್ಥಿಕ ಶಕ್ತಿಯನ್ನು, ಖರೀದಿ ಸಾಮರ್ಥ್ಯವನ್ನು ಹೆಚ್ಚಿಸಿದೆ. ಆದರೆ ಕಳೆದ ಹನ್ನೊಂದು ವರ್ಷಗಳಿಂದ ಕೇಂದ್ರ ಸರ್ಕಾರ ಮಾಡುತ್ತಿರುವ ಬೆಲೆ ಏರಿಕೆ ಹಾಗೂ ತೆರಿಗೆ ಹಂಚಿಕೆಯಲ್ಲಿನ ಮೋಸದ ಬಗ್ಗೆಯೂ ಜನಾಕ್ರೋಶದ ಹೋರಾಟ ಮಾಡಬಹುದು. ಅಡುಗೆ ಅನಿಲದ ಬೆಲೆ ಏರಿಕೆಯನ್ನೂ ಈಗ ರಾಜ್ಯ ಬಿಜೆಪಿ ನಾಯಕರು ಸಮರ್ಥಿಸಿಕೊಳ್ಳುತ್ತಿದ್ದಾರೆ. ಮೋದಿಯವರು ಅಮೆರಿಕಕ್ಕೆ ಹೋಗಿ ಅಲ್ಲಿನ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್ ಅವರ ಸ್ನೇಹ ಬೆಳೆಸಿದರೂ, ಅವರೇನೂ ತೆರಿಗೆ ಬರೆಯನ್ನು ಹಾಕುವುದರಿಂದ ಹಿಂದಡಿ ಇಟ್ಟಿಲ್ಲ.
ಈ ತೆರಿಗೆ ಸಮರದಿಂದಾಗಿ ಕಚ್ಚಾ ತೈಲದ ದರ ಒಂದು ಬ್ಯಾರೆಲ್‌ಗೆ (೧೫೯ ಲೀಟರ್) ಸುಮಾರು ೧೦ ಡಾಲರ್ (ಅಂದಾಜು ೮೫೦ ರೂ.) ಇಳಿಕೆಯಾಗಿದೆ. ಹಾಗಿದ್ದರೂ ಅಡುಗೆ ಅನಿಲ ದರ ೫೦ ರೂ.ಗೆ ಏರಿಸಿ ಹೊರೆ ಹಾಕಿರುವುದು ಬಿಜೆಪಿಯ ಜನ ವಿರೋಧಿತನವನ್ನು ಎತ್ತಿ ತೋರಿಸುತ್ತದೆ.
ಜೊತೆಗೆ ಪೆಟ್ರೋಲ್-ಡೀಸೆಲ್ ಮೂಲಕ ೩೬.೫೮ ಲಕ್ಷ ಕೋಟಿ ರೂ. ಮೊತ್ತವನ್ನು ಕೇಂದ್ರ ಸರ್ಕಾರ ಸಂಗ್ರಹಿಸುತ್ತಿದೆ. ಇದು ಗ್ಯಾರಂಟಿಗಳಂತಹ ಯೋಜನೆಗಳ ಮೂಲಕ ಜನರನ್ನೇನೂ ಮರಳಿ ತಲುಪುತ್ತಿಲ್ಲ. ಹಾಗಾದರೆ ಈ ಹಣ ಎಲ್ಲಿ ಹೋಗುತ್ತಿದೆ ಎಂಬುದೇ ಯಕ್ಷ ಪ್ರಶ್ನೆ. ಸಿನಿಮಾ ನೋಡುವಾಗ ತಿನ್ನುವ ಪಾಪ್‌ಕಾರ್ನ್‌ಗೂ ಜಿಎಸ್‌ಟಿ ತಪ್ಪಿಲ್ಲ. ಜೀವ ವಿಮೆ, ಅರೋಗ್ಯ ವಿಮೆಗಳ ಮೇಲೂ ೧೮% ಜಿಎಸ್‌ಟಿ ಹೇರಲಾಗಿದೆ.
ಕರ್ನಾಟಕದಿಂದ ಕೇಂದ್ರಕ್ಕೆ ವರ್ಷಕ್ಕೆ ೪.೫೦ ಲಕ್ಷ ಕೋಟಿ ರೂ. ತೆರಿಗೆ ಹೋಗುತ್ತಿದೆ. ಕೇಂದ್ರ ಸರ್ಕಾರ ತೆರಿಗೆ ಹಂಚಿಕೆಯಾಗಿ ೪೫,೦೦೦ ಕೋಟಿ ರೂ. ಮತ್ತು ಅನುದಾನದ ರೂಪದಲ್ಲಿ ೧೫,೦೦೦ ಕೋಟಿ ರೂ. ಮಾತ್ರ ನೀಡುತ್ತಿದೆ. ಅಂದರೆ ೧ ರೂಪಾಯಿಗೆ ಪ್ರತಿಯಾಗಿ ೧೩ ಪೈಸೆ ಮಾತ್ರ ಸಿಗುತ್ತಿದೆ. ರಾಜಧಾನಿ ಬೆಂಗಳೂರಿಗೆ ಹೆಚ್ಚು ಅನುದಾನ ನೀಡಿ ಎಂದು ನಮ್ಮ ಮುಖ್ಯಮಂತ್ರಿಗಳು ಬಜೆಟ್ ವೇಳೆ ಮನವಿ ಮಾಡಿದ್ದರೂ ಅದಕ್ಕೆ ಕೇಂದ್ರದ ಆರ್ಥಿಕ ಸಚಿವರು ಸ್ಪಂದಿಸಲಿಲ್ಲ. ತೆರಿಗೆ ಮರು ಹಂಚಿಕೆಯ ವಿಚಾರದಲ್ಲಿ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಬಿಜೆಪಿ ಸಂಸದರು ಒಂದೇ ಒಂದು ಪ್ರಶ್ನೆ ಎತ್ತಿಲ್ಲ. ಕಳೆದ ೧೦ ವರ್ಷದ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಹೆಚ್ಚುವರಿ ತೆರಿಗೆ ವಿಧಿಸುವ ಮೂಲಕ ಕೇಂದ್ರ ಸರ್ಕಾರ ೩೪ ಲಕ್ಷ ಕೋಟಿಗೂ ಅಧಿಕ ಆದಾಯ ಗಳಿಸಿದೆ. ರಿಲಯನ್ಸ್ ಇಂಡಸ್ಟ್ರೀಸ್ ಸೇರಿದಂತೆ ೮ ತೈಲ ಕಂಪನಿಗಳು ೨.೨೯ ಲಕ್ಷ ಕೋಟಿ ಲಾಭ ಗಳಿಸಿವೆ. ಈ ಲಾಭ ಜನರ ಜೇಬಿಂದ ಪಡೆಯಲಾಗಿದೆ.
ಕಾಂಗ್ರೆಸ್ ಕೇಂದ್ರದ ಅಧಿಕಾರದಿಂದ ಹೊರ ನಡೆದಾಗ, ಪೆಟ್ರೋಲ್ ಮೇಲೆ ಅಬಕಾರಿ ಸುಂಕ ರೂ.೯.೨೦ ಪ್ರತಿ ಲೀಟರ್ ಮತ್ತು ಡೀಸೆಲ್ ಮೇಲೆ ರೂ.೩.೪೬ ಪ್ರತಿ ಲೀಟರ್ ಇತ್ತು. ಇಂದಿನ ಸ್ಥಿತಿಯಲ್ಲಿ, ಅದು ರೂ.೧೯.೯೦ ಪ್ರತಿ ಲೀಟರ್ ಆಗಿದೆ. ಡೀಸೆಲ್ ಮೇಲಿನದು ರೂ.೧೫.೮೦ ಪ್ರತಿ ಲೀಟರ್ ಆಗಿದೆ.
ಕರ್ನಾಟಕದಲ್ಲಿ ವಾರ್ಷಿಕವಾಗಿ ಪೆಟ್ರೋಲ್ ಮಾರಾಟವು ೬೯೨.೪೩ ಕೋಟಿ ಲೀಟರ್ ಆಗಿದ್ದು, ಡೀಸೆಲ್ ಮಾರಾಟವು ೧೬೧೩.೬೬ ಕೋಟಿ ಲೀಟರ್ ಆಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ರೂ.೨ ಕಡಿಮೆ ಮಾಡಿದ್ದರೆ ಗ್ರಾಹಕರಿಗೆ ರೂ.೪,೫೦೪ ಕೋಟಿ ರೂಪಾಯಿ ಪ್ರಯೋಜನವಾಗುತ್ತಿತ್ತು. ಆದರೆ ಈ ಪ್ರಯೋಜನವನ್ನೂ ಕೇಂದ್ರ ಸರ್ಕಾರ ತೆಗೆದುಕೊಂಡು, ಜನರ ಮೇಲೆ ರೂ.೪,೫೦೪ ಕೋಟಿ ಹೆಚ್ಚುವರಿ ಭಾರವನ್ನು ಹಾಕಿದೆ. ಇದು ಕನ್ನಡಿಗರ ಮೇಲಿನ ಆರ್ಥಿಕ ದಾಳಿ.