ಬರದ ನಾಡಿನಲ್ಲಿ ಕಾಶ್ಮೀರಿ ಸೇಬು

ಸೇಬು ಎಂದಾಕ್ಷಣ ಥಟ್ಟನೆ ನೆನಪಿಗೆ ಬರುವುದು ಉತ್ತರ ಭಾರತದ ಹಿಮಪ್ರದೇಶಗಳಾದ ಕಾಶ್ಮೀರ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳು. ಅಲ್ಲಿರುವ ದಟ್ಟಣೆಯ ಹಿಮದಲ್ಲಿ ಕಾಶ್ಮೀರದ ಸುಂದರ ತರುಣಿಯರಂತೆ ನಳನಳಿಸುತ್ತ ಬೆಳೆಯುತ್ತಿರುವ ಗುಲಾಬಿ, ಕೆಂಪು, ಹಳದಿ ಮತ್ತು ಹಸಿರು ಬಣ್ಣದ ಸೇಬು ಹಣ್ಣುಗಳು ನೋಡುಗರ ಕಣ್ಮನ ಸೆಳೆಯುತ್ತವೆ. ಅಲ್ಲಿ ಬೆಳೆಯುವ ಸೇಬು ಹಣ್ಣುಗಳು ದೇಶ-ವಿದೇಶಗಳಿಗೆ ರಫ್ತಾಗುವುದರಿಂದ ಜಗದ್ವಿಖ್ಯಾತಿ ಗಳಿಸಿರುವುದು ಸುಳ್ಳೇನಲ್ಲ. ಇಂತಹ ಹಣ್ಣುಗಳು ಕೇವಲ ಉತ್ತರ ಭಾರತದ ಭೂಮಿಗೆ ಮಾತ್ರ ಸೀಮಿತವಾಗಿವೆಯೆ ಎಂಬುದು ಭಾರತದಲ್ಲಿರುವ ಪ್ರತಿಯೊಬ್ಬ ರೈತರ ಪ್ರಶ್ನೆಯಾಗಿದೆ.
ಭಾರತದ ರೈತರೆಂದರೆ ಸಾಮಾನ್ಯರಲ್ಲ, ಅನಕ್ಷರಸ್ಥರಿದ್ದರೂ ಯಾವುದೆ ಕೃಷಿವಿಜ್ಞಾನಿಗಳಿಗೆ ಕಡಿಮೆಯಿಲ್ಲ. ಕೃಷಿಯನ್ನೇ ಜಗತ್ತಿಗೆ ಪರಿಚಯಿಸಿದ ಭಾರತೀಯ ರೈತರು ಕಾಶ್ಮೀರದಲ್ಲಿ ಬೆಳೆಯುವ ಸೇಬು ಕೃಷಿಯನ್ನು ಭಾರತದ ಇನ್ನಿತರ ಸ್ಥಳಗಳಿಗೆ ಪರಿಚಯಿಸದೆ ಇರಲಾರರು. ಇಂತವರ ಸಾಲಿನಲ್ಲಿ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಗೋಠೆ ಗ್ರಾಮದ(ವಿಜಯಪುರ ಜಿಲ್ಲಾ ಸರಹದ್ದು) ಧರೆಪ್ಪ ವಿಠ್ಠಲ ಮಸಳಿ ಸ್ವಂತ ಜಮೀನಿನ ಅರ್ಧ ಎಕರೆ ಕೃಷಿಭೂಮಿಯಲ್ಲಿ ಸೇಬು ಕೃಷಿಯನ್ನು ಯಶಸ್ವಿಯಾಗಿ ಕೈಗೊಳ್ಳುವ ಮೂಲಕ ಬರದ ನಾಡಿನಲ್ಲಿ ಅಚ್ಛರಿ ಮೂಡಿಸಿದ್ದಾರೆ. ಈ ಗ್ರಾಮವು ಗರಸು ಭೂಮಿಯನ್ನು ಹೊಂದಿದ್ದು ಹೆಚ್ಚಾಗಿ ಒಣಬೇಸಾಯದ ಪ್ರದೇಶವನ್ನೊಳಗೊಂಡಿದೆ. ಬಿಸಿಲು ಭೂಮಿಯ ಗ್ರಾಮದಲ್ಲಿ ಇಂತಹ ಸಾಧನೆ ಮಾಡಿರುವುದು ಸೋಜಿಗವಾಗಿದೆಯಲ್ಲದೆ, ಕಾಶ್ಮೀರ ಮತ್ತು ತಂಪಾದ ಪ್ರದೇಶಗಳನ್ನು ಹೊರತುಪಡಿಸಿ ಬಿಸಿಲು ನಾಡಿನಲ್ಲಿಯೂ ಗುಣಮಟ್ಟದ ಸೇಬುಹಣ್ಣುಗಳನ್ನು ಬೆಳೆಯಬಹುದು ಎಂಬುದನ್ನು ಸಾಭೀತುಪಡಿಸಿದ್ದಾನೆ.
ಅರ್ಧ ಎಕರೆಯಲ್ಲಿ ನಾಟಿ
ಕಳೆದ ೨೦೨೩, ಜೂನ ತಿಂಗಳಿನಲ್ಲಿ ರೂ.೩೨೦ಕ್ಕೆ ಒಂದರಂತೆ ಮುಂಬೈ ಮೂಲದ ಅನ್ನ ತಳಿ ಸಂಸ್ಥೆಯಿಂದ ಸೇಬು ಸಸಿಗಳನ್ನು ಖರೀದಿಸಿ ಅರ್ಧ ಎಕರೆ ಭೂಮಿಯಲ್ಲಿ ನಾಟಿ ಮಾಡಿದ್ದಾರೆ. ಯಾವುದೆ ಕೃತಕ ವ್ಯವಸ್ಥೆಯಿಲ್ಲದೆ ಸಾಧ್ಯವಾದಷ್ಟು ಸೇಬು ಕೃಷಿಗೆ ಪೂರಕವಾದ ನೈಸರ್ಗಿಕವಾಗಿ ವಾತಾವರಣವನ್ನು ನಿರ್ಮಾಣ ಮಾಡಿದ್ದಾರೆ. ನಾಟಿ ಪೂರ್ವದಲ್ಲಿ ಮಣ್ಣನ್ನು ಮಾಗಿ ಉಳುಮೆಯ ಮೂಲಕ ನಿಯಮಿತವಾಗಿ ಹದಗೊಳಿಸಿ ೧೦*೧೦ ಅಳತೆಯಲ್ಲಿ ಒಂದು ಅಡಿ ಸುತ್ತಳತೆಯ ೧೫೪ ಗುಂಡಿಗಳನ್ನು ತೋಡಿದ್ದಾರೆ. ಪ್ರತಿಯೊಂದು ಗುಂಡಿಯಲ್ಲಿ ೧೦ ಕೆ.ಜಿ. ಚೆನ್ನಾಗಿ ಕಳೆತ ತಿಪ್ಪೆಗೊಬ್ಬರ ಅಥವಾ ಸಾವಯವ ಗೊಬ್ಬರವನ್ನು ಮಣ್ಣಿನೊಂದಿಗೆ ಬೆರೆಸಿ ಸೇಬು ಸಸಿಗಳನ್ನು ನಾಟಿ ಮಾಡಿದ್ದಾನೆ. ಆರು ತಿಂಗಳವರೆಗೆ ತಜ್ಞರ ಸಲಹೆಯಂತೆ ನಿಯಮಿತವಾಗಿ ಚಾಟ್ನಿ(ಚಿಗುರು ಚಿವುಟುವುದು) ಮಾಡುವುದು ಮತ್ತು ಡ್ರಿಪ್ ಮೂಲಕ ದಿನ ಬಿಟ್ಟು ದಿನ ವಾತಾವರಣವನ್ನು ಆಧರಿಸಿ ಪ್ರತಿಯೊಂದು ಸಸಿಗಳಿಗೆ ನೀರುಣಿಸಲಾಗಿದೆ. ಈ ಬೆಳೆಗೆ ಸಾಧ್ಯವಾದಷ್ಟು ಸಿಹಿಯಾಗಿರುವ ನೀರು ಕಡ್ಡಾಯ. ಸರಿಯಾಗಿ ಚಾಟ್ನಿ ಮಾಡಿದ ಆರು ತಿಂಗಳ ನಂತರದಿಂದ ಪ್ರತಿಯೊಂದು ಗಿಡಕ್ಕೆ ೪೦ ರಿಂದ ೪೫ ಸೇಬು ಹಣ್ಣುಗಳು ಬೆಳೆದಿವೆ.
ತಿಪ್ಪೆಗೊಬ್ಬರದ ಹಿರಿಮೆ
ಎರಡನೇ ವರ್ಷದ ಬೆಳೆಯ ಸಮಯದಲ್ಲಿ ನಿಯಮಿತವಾಗಿ ಚಾಟ್ನಿ ಕೈಗೊಳ್ಳುವುದು ಮತ್ತು ಸಮಯಾನುಸಾರ ತಿಪ್ಪೆಗೊಬ್ಬರಗಳನ್ನು ಉಪಯೋಗಿಸಿದ ಪರಿಣಾಮದಿಂದ ಪ್ರತಿಯೊಂದು ಗಿಡಗಳು ಗುಣಮಟ್ಟದ ಸರಾಸರಿ ೧೦೦ ಹಣ್ಣುಗಳನ್ನು ಕೊಟ್ಟಿರುತ್ತವೆ. ಪ್ರಸಕ್ತ ವರ್ಷ ಪ್ರತಿಯೊಂದು ಗಿಡದಿಂದ ಹಣ್ಣುಗಳ ಸಂಖ್ಯೆಯು ಇನ್ನಷ್ಟು ಹೆಚ್ಚಾಗುವ ವಿಶ್ವಾಸವಿದೆ ಎನ್ನುತ್ತಾರೆ ಪ್ರಗತಿಪರ ರೈತ ಧರೆಪ್ಪ ವಿಠ್ಠಲ ಮಸಳಿ. ಸೇಬುಹಣ್ಣುಗಳ ಕಟಾವು ಅವಧಿಯು ವಿಶೇಷವಾಗಿ ಸಪ್ಟೆಂಬರ್‌ದಿಂದ ಫೆಬ್ರುವರಿಯಾಗಿದೆ. ಒಂದು ಸೇಬು ಗಿಡವು ತನ್ನ ಆಯುಷ್ಯದೊಳಗಾಗಿ ಅಂದರೆ ೧೦ ರಿಂದ ೧೫ ವರ್ಷದ ಅವಧಿಯಲ್ಲಿ ಗರಿಷ್ಠ ೫೦೦೦ ಹಣ್ಣುಗಳನ್ನು ಕೊಡುತ್ತದೆ ಎಂದು ಸಸಿ ಪೂರೈಸಿದ ಕಂಪನಿಯವರ ಸಲಹೆಯಂತೆ ಅಂದಾಜಿಸಲಾಗಿದೆ.
ಇನ್ನೊಂದು ವಿಶೇಷವೇನೆಂದರೆ, ಪ್ರಸ್ತುತ ಸೇಬು ಬೆಳೆಗೆ ಯಾವುದೇ ರಾಸಾಯನಿಕಗಳನ್ನು ಉಪಯೋಗಿಸದಿರುವುದು ಗಮನಾರ್ಹ. ಹಲವಾರು ರೈತರು ಮತ್ತು ಸಸಿ ಪೂರೈಸಿದ ಸಂಸ್ಥೆಯವರು ಬೆಳವಣಿಗೆಯ ವಿವಿಧ ಹಂತದಲ್ಲಿ ರಾಸಾಯನಿಕಗಳ ಬಳಕೆ ಮಾಡಲು ಸಲಹೆ ನೀಡಿದರೂ ಗಟ್ಟಿ ಧೈರ್ಯ ಮಾಡಿ ಉತ್ತಮವಾದ ಬೆಳೆ ಪಡೆಯುವುದರೊಂದಿಗೆ ಸೈ ಎನಿಸಿಕೊಂಡಿದ್ದಾರೆ. ರಾಸಾಯನಿಕಗಳ ಬಳಕೆಯಿಂದ ಮಣ್ಣು ಮತ್ತು ಹಣ್ಣುಗಳ ಗುಣಮಟ್ಟ ಹಾಳಾಗುತ್ತದೆ ಎಂಬುದು ಮನವರಿಕೆಯಾಗಿದೆ. ರಾಸಾಯನಿಕಗಳ ಬಳಕೆಯಿಲ್ಲದ ಕಾರಣ ಇಲ್ಲಿನ ಸೇಬು ಗಿಡಗಳಿಗೆ ಯಾವುದೆ ರೋಗಗಳಿಲ್ಲದಿರುವುದು ವಿಶೇಷವಾಗಿದೆ. ಗರಸು ಭೂಮಿಯು ಶಾಖಯುಕ್ತ ಭೂಮಿಯಾಗಿದ್ದರಿಂದ ನೈಸರ್ಗಿಕವಾಗಿಯೇ ರೋಗಗಳ ಭಾಧೆಯು ಕಡಿಮೆಯಿರುತ್ತದೆ.
ಇಲ್ಲಿ ಬೆಳೆಯಲಾಗುತ್ತಿರುವ ಹಣ್ಣುಗಳು ಕಾಶ್ಮೀರದಲ್ಲಿ ಬೆಳೆಯಲಾಗುತ್ತಿರುವ ಹಣ್ಣುಗಳ ಗಾತ್ರ, ಗುಣಮಟ್ಟ ಮತ್ತು ರುಚಿಯಲ್ಲಿ ಯಾವುದೇ ರೀತಿಯ ವ್ಯತ್ಯಾಸವಿಲ್ಲ. ಬಿಸಿಲು ನಾಡಿನಲ್ಲಿ ಬೆಳೆಯುತ್ತಿರುವುದರಿಂದ ಇಲ್ಲಿ ಬೆಳೆಯುತ್ತಿರುವ ಹಣ್ಣುಗಳ ಬಾಳಿಕೆಯು ಸಹ ಹೆಚ್ಚಾಗಿದೆ. ಉತ್ತರ ಭಾರತದಲ್ಲಿ ಬೆಳೆಯಲಾದ ಸೇಬು ಹಣ್ಣುಗಳಿಗೆ ಬಾಳಿಕೆಗೋಸ್ಕರ ಹಲವಾರು ರೀತಿಯಿಂದ ರಾಸಾಯನಿಕಗಳನ್ನು ಸಿಂಪಡಿಸಲಾಗಿರುತ್ತದೆ.
ಧರೆಪ್ಪನ ಒಟ್ಟು ಭೂಮಿಯು ೮ ಎಕರೆಯಷ್ಟಿದೆ. ತೋಟದ ಅರ್ಧ ಎಕರೆಯಲ್ಲಿ ವಾಸಸ್ಥಳವಿದ್ದು, ೪ ಎಕರೆ ದ್ರಾಕ್ಷಿ, ೩ ಎಕರೆ ಗೋವಿನಜೋಳ ಇದೆ. ಈ ಬೆಳೆಗಳಿಗೆ ಶಿಫಾರಸು ಪ್ರಮಾಣದಲ್ಲಿ ರಾಸಾಯನಿಕಗಳನ್ನು ಬಳಸಲಾಗುತ್ತದೆ. ೫ನೇಯ ವರ್ಗದವರೆಗೆ ಶಿಕ್ಷಣ ಪಡೆದಿರುವ ಧರೆಪ್ಪನು, ಮನೆಯಲ್ಲಿ ೨ ಆಕಳು ಮತ್ತು ಒಂದು ಹೋರಿಯನ್ನು ಸಾಕಾಣೆ ಮಾಡಿದ್ದಾನೆ. ಇವುಗಳ ಸಗಣಿ ಮತ್ತು ಗಂಜಲಿನ ಸಮರ್ಪಕ ಬಳಕೆಯೊಂದಿಗೆ ಪ್ರತಿವರ್ಷ ಅಂದಾಜು ೧೦ ಟನ್ನನಷ್ಟು ಕುರಿಗೊಬ್ಬರವನ್ನು ಖರೀದಿಸಿ ಪ್ರತಿ ಬೆಳೆಗೆ ಉಪಯೋಗಿಸುತ್ತಾನೆ. ಈ ಸಾಧನೆಗಾಗಿ ರೈತ ಧರೆಪ್ಪನನ್ನು ಕೃಷಿ ವಿಶ್ವವಿದ್ಯಾಲಯ ಧಾರವಾಡದಲ್ಲಿ ನಡೆದ ಕೃಷಿ-ಮೇಳದಲ್ಲಿ ಗೌರವಿಸಲಾಗಿದೆ. ಈತನ ಪ್ರತಿಯೊಂದು ಕೃಷಿ ಕೆಲಸದಲ್ಲಿ ಪತ್ನಿ ರಾಜಶ್ರೀ ಭಾಗಿಯಾಗಿ ಪತಿಗೆ ಸಾಥ್ ಕೊಟ್ಟಿದ್ದಾಳೆ. ಧರೆಪ್ಪನ ಮೊಬೈಲ್ ನಂಬರ ೯೧೬೪೯೮೮೪೨೦.