ಸಿದ್ಧಗಂಗೆಯ ಶಿವಕುಮಾರ ಮಹಾಸ್ವಾಮಿಗಳಿಗೆ ‘ಭಾರತ ರತ್ನʼ ನೀಡಬೇಕು
ತುಮಕೂರು: ಸಿದ್ಧಗಂಗೆಯ ಶಿವಕುಮಾರ ಮಹಾಸ್ವಾಮಿಗಳಿಗೆ ‘ಭಾರತ ರತ್ನʼ ನೀಡಬೇಕು ಎಂಬ ಪ್ರಾರ್ಥನೆ ನನ್ನದು ಎಂದು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ ಹೇಳಿದ್ದಾರೆ.
ಇಂದು ತುಮಕೂರಿನ ಸಿದ್ದಗಂಗಾ ಮಠದಲ್ಲಿ ನಡೆದ ಶಿವೈಕ್ಯ ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳ 118 ನೇ ಜಯಂತಿ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು ‘ಗುರುವಿಂದ ಬಂಧುಗಳು, ಗುರುವಿಂದ ದೈವಗಳು, ಗುರುವಿಂದಲಿಹುದು ಪುಣ್ಯವದು, ಜಗಕೆಲ್ಲ ಗುರುವಿಂದ ಮುಕ್ತಿʼ ಎಂಬ ಸರ್ವಜ್ಞರ ಉಕ್ತಿಯಂತೆ, ದೇವರ ಸ್ವರೂಪಿ ಶಿವಕುಮಾರ ಮಹಾಸ್ವಾಮಿಗಳ ಆಚಾರ- ವಿಚಾರಗಳನ್ನು ಮೈಗೂಡಿಸಿಕೊಂಡರೆ ಮೋಕ್ಷ ಸಾಧ್ಯ ಎಂಬ ನಂಬಿಕೆ ನನ್ನದು.
‘ಅಂಗಳಕ್ಕೆ ಆಚಾರವೇ ಆಶ್ರಯ, ಆಚಾರಕ್ಕೆ ಪ್ರಾಣವೇ ಆಶ್ರಯ; ಪ್ರಾಣಕ್ಕೆ ಜ್ಞಾನವೇ ಆಶ್ರಯ, ಜ್ಞಾನಕ್ಕೆ ಲಿಂಗವೇ ಆಶ್ರಯ; ಲಿಂಗಕ್ಕೆ ಜಂಗಮವೇ ಆಶ್ರಯʼ. ಅಕ್ಷರ- ಅನ್ನ, ಧರ್ಮ, ಸಂಸ್ಕಾರ, ಧ್ಯಾನಗಳನ್ನು ಧಾರೆ ಎರೆದು, ಮನುಷ್ಯನನ್ನ ರೂಪಿಸುವ ಮಠವಿದು. ದಿ.ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭ, ಸಂಪುಟದಲ್ಲಿ ನಾನು ಸಚಿವನಾಗಿದ್ದಾಗ ಈ ಮಠಕ್ಕೆ ಭೇಟಿ ನೀಡಿದ್ದೆವು. ಮಠದಲ್ಲಿನ ಅನ್ನದಾಸೋಹವನ್ನು ಕಣ್ಣಾರೆ ಕಂಡಿದ್ದ ಕೃಷ್ಣ ಅವರು, ಸರ್ಕಾರದಿಂದ ಶಾಲೆಗಳಲ್ಲಿ ಅನ್ನದಾಸೋಹವನ್ನು ಆರಂಭಿಸಿದ್ದರು. ಈ ಅನ್ನದಾಸೋಹಕ್ಕೆ ಶ್ರೀ ಸಿದ್ಧಗಂಗಾ ಮಠವೇ ಪ್ರೇರಣೆ.
ಧರ್ಮವೆಂದರೆ ಮನುಷ್ಯತ್ವ. ಬಡವ- ಬಲ್ಲಿದನೆಂಬ ಭೇದವಿಲ್ಲದೇ, ಕೇವಲ ಮನುಷ್ಯತ್ವದ ಆಧಾರದಲ್ಲಿ ನಡೆಯುತ್ತಿರುವ ಮಠವಿದು. ಈ ಮಠದ ಮೂಲಕ ಹಸಿದ ಹೊಟ್ಟೆಗೆ ಅನ್ನ ನೀಡಿ, ಕೈಹಿಡಿದು ಅಕ್ಷರಾಭ್ಯಾಸ ಮಾಡಿಸಿ ಜೀವನ ರೂಪಿಸಿದ ಮಹಾನ್ ಚೇತನವನ್ನು ಸ್ಮರಿಸುವ ಭಾಗ್ಯ ನನಗೆ ಒಲಿದು ಬಂದಿದ್ದು ಪುಣ್ಯವದು.
‘ಪ್ರಯತ್ನ ವಿಫಲವಾಗಬಹುದು, ಪ್ರಾರ್ಥನೆ ವಿಫಲವಾಗುವುದಿಲ್ಲʼ ಎಂಬ ನಂಬಿಕೆ ನನ್ನದು. ಸಿದ್ಧಗಂಗೆಯ ಶಿವಕುಮಾರ ಮಹಾಸ್ವಾಮಿಗಳಿಗೆ ‘ಭಾರತ ರತ್ನʼ ನೀಡಬೇಕು ಎಂಬ ಪ್ರಾರ್ಥನೆ ನನ್ನದು. ಇದು ಸರ್ಕಾರದ ಬೇಡಿಕೆಯಷ್ಟೇ ಅಲ್ಲ, ಇದು ಕನ್ನಡಿಗರ ಬೇಡಿಕೆ ಎಂದರು.