ಪಿಕಾರ್ಡ್ ಬ್ಯಾಂಕ್ ಷರತ್ತಿಗೆ ಖಂಡನೆ: ನಿರ್ದೇಶಕರಿಗೆ ಕ್ಷೌರ ಮಾಡದಂತೆ ಎಚ್ಚರಿಕೆ

ರಾಯಚೂರು: ಇಲ್ಲಿನ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್(ಪಿಕಾರ್ಡ್)ನ ಮಳಿಗೆಗಳ ಸಂಬಂಧಿಸಿದಂತೆ ಈಚೆಗೆ ಹರಾಜು ಪ್ರಕಟಣೆಯನ್ನು ನೀಡಿದ್ದು, ಈ ಪ್ರಕಟಣೆಯಲ್ಲಿ ಕಟಿಂಗ್ ಶಾಪ್(ಕ್ಷೌರಿಕ ಅಂಗಡಿ) ನಡೆಸಲು ಅವಕಾಶ ನೀಡುವುದಿಲ್ಲವೆಂದು ನಮೂದಿಸಿರುವ ಕ್ರಮವನ್ನು ಖಂಡಿಸಿ ಹಡಪದ ಸಮಾಜದ ಪದಾಧಿಕಾರಿಗಳು ಮಂಗಳವಾರ ಪಿಕಾರ್ಡ್ ಬ್ಯಾಂಕ್‌ನ ಎದುರು ಪ್ರತಿಭಟನೆ ನಡೆಸಿದ್ದರು.
ಬ್ಯಾಂಕ್‌ನ ವಿರುದ್ಧ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದ್ದಾರೆ. ಅಲ್ಲದೇ ಬ್ಯಾಂಕಿನ ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ಸರ್ವ ನಿರ್ದೇಶಕರು ನಮ್ಮ ಕಟಿಂಗ್ ಶಾಪ್‌ಗಳಿಗೆ ಬರುವುದಿಲ್ಲವೆಂದು ದೇವರ ಮೇಲೆ ಪ್ರಮಾಣ ಮಾಡಬೇಕು. ತಮ್ಮ ಕಟಿಂಗ್ ಹಾಗೂ ಶೇವಿಂಗ್ ತಾವೇ ಮಾಡಿಕೊಳ್ಳಲು ಸಿದ್ಧರಾಗಬೇಕು, ಇಲ್ಲವಾದಲ್ಲಿ ನಾವೇ ಬ್ಯಾಂಕ್ ಆಡಳಿತ ಮಂಡಳಿಯ ಎಲ್ಲ ನಿರ್ದೇಶಕರ ಕ್ಷೌರ ಸೇವೆಯನ್ನು ಸರ್ವ ವೃತ್ತಿಪರ ಅಂಗಡಿಗಳಲ್ಲಿ ಅವರ ಭಾವಚಿತ್ರ ಅಂಟಿಸಿ ಕ್ಷೌರ ಸೇವೆ ನಿಷೇಧ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ ಪ್ರಸಂಗವೂ ನಡೆದಿದೆ.