ಗದಗ: ಐದು ವರ್ಷಗಳ ಹಿಂದೆ ಬ್ರೇಕ್‌ಅಪ್ ಮಾಡಿಕೊಂಡಿದ್ದ ಪಾಗಲ್ ಪ್ರೇಮಿಯ ಕಿರುಕುಳಕ್ಕೆ ಬೇರೆ ಯುವಕನೊಂದಿಗೆ ವಿವಾಹ ನಿಶ್ಚಿತವಾಗಿದ್ದ ಪ್ರತಿಭಾವಂತ ಕ್ರೀಡಾಪಟು, ದೈಹಿಕ ಶಿಕ್ಷಕಿ ನೇಣಿಗೆ ಶರಣಾಗಿದ್ದಾಳೆ.
ಮೇ ೮ರಂದು ವಿವಾಹ ನಿಶ್ಚಿತವಾಗಿದ್ದ ಕ್ರೀಡಾಪಟುವಿನ ವಿವಾಹದ ತಯಾರಿ ಅದ್ದೂರಿಯಿಂದಲೇ ನಡೆದಿತ್ತು. ಯುವತಿ ಸಹ ತನಗೆ ಬೇಕಾದ ಬಟ್ಟೆ, ಚಿನ್ನಾಭರಣ ಖರೀದಿಸಿದ್ದಳು. ಯುವತಿಯ ಪೋಷಕರು ವಿವಾಹಕ್ಕೆ ಅವಶ್ಯವಿರುವ ಇನ್ನಿತರ ಸಾಮಗ್ರಿ ಖರೀದಿಸಲು ಮಾರುಕಟ್ಟೆಗೆ ತೆರಳಿದಾಗ ಕ್ರೀಡಾಪಟು ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮದುವೆ ಸಂಭ್ರಮದಲ್ಲಿ ಇದ್ದ ಮನೆಯಲ್ಲಿ ಇದೀಗ ಸೂತಕದ ಛಾಯೆ ಆವರಿಸಿದೆ.
ದೈಹಿಕ ಶಿಕ್ಷಕಿ ಅಸುಂಡಿ ಗ್ರಾಮದ ಸಾಯಿರಾಬಾನು ನದಾಫ್. ಏಳು ವರ್ಷಗಳ ಹಿಂದೆ ಮೈಲಾರಿ ಎಂಬ ಯುವಕನೊಂದಿಗೆ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದಳಂತೆ. ಯುವಕ ಯುವತಿಗೆ ತಿಳಿಯದಂತೆ ಕೆಲ ಖಾಸಗಿ ಕ್ಷಣಗಳನ್ನು ವಿಡೀಯೊ ಮಾಡಿಕೊಂಡಿದ್ದಾನೆ. ಕ್ಷುಲ್ಲಕ ಕಾರಣಕ್ಕಾಗಿ ಯುವಕನೊಂದಿಗಿನ ಪ್ರೀತಿ ಬ್ರೇಕ್ ಅಪ್ ಆಗಿದೆ. ಈ ಮಧ್ಯೆ ಯುವತಿಯ ಮನೆಯಲ್ಲಿನ ಹಿರಿಯರು ಯುವತಿಯ ಒಪ್ಪಿಗೆ ಪಡೆದು ಬೇರೆ ಯುವಕನೊಂದಿಗೆ ವಿವಾಹ ನಿಶ್ಚಯ ಮಾಡಿದ್ದಾರೆ.
ತನ್ನ ಹಳೆಯ ಪ್ರೇಮಿಯ ವಿವಾಹ ನಿಶ್ಚಯವಾದ ಸಂಗತಿ ತಿಳಿಯುತ್ತಲೇ ಮೈಲಾರಿ ಯುವತಿಯನ್ನು ಸಂಪರ್ಕಿಸಿ ಭೇಟಿಯಾಗು ಎಂದು ಮನವಿ ಮಾಡಿದ್ದಾನೆ. ಯುವತಿ ಭೇಟಿ ಮಾಡಿದಾಗ ಆಕೆಯ ಜನ್ಮದಿನ ಆಚರಿಸಿದ. ನಂತರ ತನ್ನ ಬಳಿಯಿರುವ ವಿವಿಧ ಫೋಟೊಗಳು, ಖಾಸಗಿ ವಿಡಿಯೋಗಳನ್ನು ವೈರಲ್ ಮಾಡುವುದಾಗಿ ಬೆದರಿಸಿದ್ದಾನೆ. ಇದರಿಂದ ಬೆದರಿದ ಯುವತಿ ಮರ್ಯಾದೆಗೆ ಅಂಜಿ ನೇಣು ಹಾಕಿಕೊಳ್ಳುತ್ತಿರುವುದಾಗಿ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಮೂಲಗಳು ತಿಳಿಸಿವೆ.
ಘಟನಾ ಸ್ಥಳಕ್ಕೆ ಗ್ರಾಮೀಣ ಪಿಎಸ್‌ಐ ಲಾಲಸಾಬ ಜೂಲಕಟ್ಟಿ ಭೇಟಿ ಪರಿಶೀಲನೆ ಮಾಡಿದ್ದಾರೆ.