ಪಾಕ್ ಬಂಡವಾಳ ಬಿಚ್ಚಿಟ್ಟ ರಕ್ಷಣಾ ಸಚಿವ ಆಸಿಫ್

ತನ್ನ ದೇಶ ಭಯೋತ್ಪಾದಕರಿಗೆ ತರಬೇತಿಯನ್ನೂ ನೀಡಿ, ಹಣವನ್ನೂ ಕೊಟ್ಟು ಬೆಳೆಸಿದೆ ಎಂದು ಸ್ವತಃ ಪಾಕಿಸ್ತಾನದ ರಾಜಕಾರಣಿಯ ಬಾಯಿಂದಲೇ ಹೊರಬಿದ್ದಿದೆ. ಹಾಗೆ ಹೇಳಿರುವುದು ಇನ್ಯಾರೂ ಅಲ್ಲ ಸ್ವತಃ ಅಲ್ಲಿನ ರಕ್ಷಣಾ ಸಚಿವ ಖ್ವಾಜಾ ಆಸಿಫ್.
ಪಾಕಿಸ್ತಾನ ಇದನ್ನು ಒಪ್ಪಿಕೊಳ್ಳುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಪ್ರಧಾನಿಯಾಗಿದ್ದ ಇಮ್ರಾನ್ ಖಾನ್ ಕೂಡ ಹೇಳಿಕೊಂಡಿದ್ದರು. ಪಾಶ್ಚಿಮಾತ್ಯ ದೇಶಗಳಿಂದಲೇ ಭಯೋತ್ಪಾದನೆಗೆ ಇಳಿಯಬೇಕಾಯಿತು ಎಂದು ಹೇಳುವುದು ಇಮ್ರಾನ್ ಖಾನ್ ಉದ್ದೇಶವಾಗಿತ್ತು. ಈ ಬಾರಿ ಸ್ಕೈನ್ಯೂಸ್ ಪತ್ರಕರ್ತ, ಹಾಕಿದ ಪ್ರಶ್ನೆಗೆ ಆಸಿಫ್ ಅನಿವಾರ್ಯವಾಗಿ ಒಪ್ಪಿಕೊಳ್ಳಬೇಕಾಯಿತು.
ಏಕೆಂದರೆ ಜಗತ್ತಿನಾದ್ಯಂತ ಅನೇಕ ದೇಶಗಳಲ್ಲಿ ಭಯೋತ್ಪಾದನೆ ನಡೆಸುತ್ತಿರುವವರಿಗೆ ತರಬೇತಿ ದೊರೆಯುತ್ತಿರುವುದು ಪಾಕಿಸ್ತಾನದ ನೆಲದಲ್ಲಿಯೇ ಎನ್ನುವುದು ಪಾಶ್ಚಿಮಾತ್ಯ ದೇಶಗಳಿಗೆ ಚೆನ್ನಾಗಿಯೇ ಗೊತ್ತಿದೆ. ಅವರ ಇಶಾರೆಯ ಮೇಲೆಯೇ ಪಾಕಿಸ್ತಾನವೂ ಈ ದಂಧೆಯನ್ನು ಶುರು ಮಾಡಿತ್ತು ಎನ್ನುವುದೂ ಸತ್ಯವೇ. ಬೇರೆ ದೇಶಗಳಲ್ಲಿ ತಾನೊಬ್ಬ ಅಮಾಯಕ ದೇಶ ಎಂದು ಬಿಂಬಿಸಿಕೊಳ್ಳಲು ಪ್ರಯತ್ನಿಸುವ ಪಾಕಿಸ್ತಾನ, ಪಾಶ್ಚಿಮಾತ್ಯ ದೇಶಗಳಲ್ಲಿ ಸತ್ಯವನ್ನು ಒಪ್ಪಿಕೊಳ್ಳುತ್ತದೆ. ಹೀಗಾಗಿ ಅಲ್ಲಿ ಮುಚ್ಚಿಡುವುದಕ್ಕೆ ಏನೂ ಇರಲಿಲ್ಲ. ಹೀಗಾಗಿ ಸ್ಕೈನ್ಯೂಸ್ ಪತ್ರಕರ್ತ ಕೇಳಿದ ನೇರಾನೇರ ಪ್ರಶ್ನೆಗೆ ಅಷ್ಟೇ ನೇರವಾದ ಉತ್ತರ ಆಸಿಫ್ ನೀಡಿರುವುದು ಚರ್ಚೆಗೆ ಕಾರಣವಾಗಿದೆ. ಉತ್ತರ ಬಾಯಿಬಿಡಿಸಿದ್ದಕ್ಕೆ ಪ್ರತಿಯಾಗಿ ಆಸಿಫ್, ಅಮೆರಿಕ, ಬ್ರಿಟನ್ ಸೇರಿದಂತೆ ಪಾಶ್ಚಿಮಾತ್ಯ ದೇಶಗಳೇ ಇದಕ್ಕೆ ಕಾರಣ ಎಂದು ಹೇಳಿರುವುದು ಗಮನಿಸಬೇಕಾದ ಸಂಗತಿ.
ಅದೇನೇ ಇರಲಿ, ಆಸಿಫ್ ೧೯೯೩ರಿಂದ ೧೯೯೯ರವರೆಗೆ, ೨೦೦೨ರಿಂದ ಈಗಿನವರೆಗೆ ಪಾಕಿಸ್ತಾನ ನ್ಯಾಷನಲ್ ಅಸೆಂಬ್ಲಿ ಸದಸ್ಯರಾಗಿ ಆಯ್ಕೆಯಾಗಿರುವ ಆಸಿಫ್, ೨೦೧೭ರಿಂದ ೨೦೧೮ರವರೆಗೆ ಅಬ್ಬಾಸಿ ಕ್ಯಾಬಿನೆಟ್‌ನಲ್ಲಿ ವಿದೇಶಾಂಗ ಸಚಿವರಾಗಿ, ನಂತರ ಷರೀಫ್ ಅವರ ಕ್ಯಾಬಿನೆಟ್‌ನಲ್ಲಿ ರಕ್ಷಣೆ, ನೀರು, ವಿದ್ಯುತ್ ಸಚಿವರಾಗಿ ಯೂ ಕೆಲಸ ಮಾಡಿದ್ದಾರೆ.
ಕಾಶ್ಮೀರ ಮೂಲದ ಪಂಜಾಬಿ ಕುಟುಂಬದಲ್ಲಿ ಹುಟ್ಟಿದ ಆಸಿಫ್, ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಮಾಸ್ಟರ್ಸ್ ಮಾಡಕೊಂಡಿರುವ ವ್ಯಕ್ತಿ. ರಾಜಕಾರಣಕ್ಕೆ ಬರುವ ಮುನ್ನ ಯುಎಇಯ ವಿವಿಧ ಬ್ಯಾಂಕುಗಳಲ್ಲಿ ಕೆಲಸ ಮಾಡಿರುವ ಅನುಭವವೂ ಇದೆ. ರಾಜಕಾರಣಿಯಾಗಿದ್ದ ಅವರ ತಂದೆ ನಿಧನದ ನಂತರ, ೧೯೯೧ರಲ್ಲಿ ಪಾಕಿಸ್ತಾನಕ್ಕೆ ವಾಪಸ್ಸಾಗಿ ವಿವಿಧ ಹುದ್ದೆಗಳನ್ನು ಅನುಭವಿಸಿದ್ದಾರೆ. ಅಕ್ರಮ ಆಸ್ತಿ ಗಳಿಕೆ ಮತ್ತು ಭ್ರಷ್ಟಾಚಾರದ ಆರೋಪದ ಮೇಲೆ ಜೈಲೂ ಕಂಡು ಬಂದಿರುವ ಹಿನ್ನೆಲೆ ಅವರಿಗಿದೆ. ಇಷ್ಟೆಲ್ಲ ಅಧಿಕಾರಗಳನ್ನು ಅನುಭವಿಸುತ್ತಲೂ, ಯುಎಇ ವರ್ಕ್ ಪರ್ಮಿಟ್ ಇಟ್ಟುಕೊಂಡಿದ್ದ ಪ್ರಕರಣವೂ ಹೆಗಲೇರಿ, ಅವರನ್ನು ಪಾಕಿಸ್ತಾನ ಎಲೆಕ್ಷನ್ ಕಮೀಷನ್ ನ್ಯಾಷನಲ್ ಅಸೆಂಬ್ಲಿ ಸ್ಥಾನದಿಂದ ಕೆಳಗಿಳಿಸಿತ್ತು. ಸುಪ್ರೀಂ ಕೋರ್ಟ್ ಮೂಲಕ ಮತ್ತೆ ಅಧಿಕಾರ ಸ್ಥಾನಕ್ಕೆ ಬಂದಿದ್ದಾರೆ.
೨೦೧೬ರ ಸೆಪ್ಟೆಂಬರ್‌ನಲ್ಲಿ ಟಿವಿ ಸಂದರ್ಶನವೊಂದರಲ್ಲಿ ಭಾರತದ ವಿರುದ್ಧ ಅಣ್ವಸ್ತ್ರ ಬಳಸಲು ಹಿಂಜರಿಯುವುದಿಲ್ಲ ಎಂದು ಖ್ವಾಜಾ ಹೇಳಿದ್ದು ಸುದ್ದಿಯಾಗಿತ್ತು. ಭಾರತವನ್ನು ಹೇಳಹೆಸರಿಲ್ಲದಂತೆ ಮಾಡುತ್ತೇವೆ ಎಂದೂ ಹೇಳಿದ್ದ ಈ ಪುಣ್ಯಾತ್ಮ. ಪಾಕ್ ಸರ್ಕಾರದಲ್ಲಿ ನಾನಾ ಅಧಿಕಾರ ಅನುಭವಿಸಿದ ನಂತರ ನೀಡಿರುವ ಹೇಳಿಕೆಯಿಂದಾಗಿ ಅದಕ್ಕೆ ಮಹತ್ವವಿದೆ.