ಪಾಕಿಸ್ತಾನದ ಕೈಯಲ್ಲಿ ಯುದ್ಧ ಅಸಾಧ್ಯ!

ಪಾಕಿಸ್ತಾನ ಈಗಾಗಲೇ ಆಂತರಿಕವಾಗಿ ರಾಜಕೀಯ ಕದನಗಳು, ಆರ್ಥಿಕ ಸಮಸ್ಯೆ, ಹೆಚ್ಚುತ್ತಿರುವ ಭಯೋತ್ಪಾದನೆ ಮತ್ತು ಜನರ ಅಸಮಾಧಾನಗಳಂತಹ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ. ಇವೆಲ್ಲ ಸಮಸ್ಯೆಗಳು ಪಾಕಿಸ್ತಾನಕ್ಕೆ ಭಾರತದ ಮೇಲೆ ಯುದ್ಧ ಮಾಡುವುದನ್ನು ಊಹಿಸುವುದೇ ಕಷ್ಟಕರ ಎನ್ನುವಂತೆ ಮಾಡಿವೆ. ಕಾಶ್ಮೀರದಲ್ಲಿ ಇತ್ತೀಚಿನ ಭಯೋತ್ಪಾದನಾ ದಾಳಿಯ ಬಳಿಕ ಉದ್ವಿಗ್ನತೆಗಳು ಹೆಚ್ಚಾಗಿದ್ದರೂ, ಸದ್ಯಕ್ಕಂತೂ ಪಾಕಿಸ್ತಾನ ಭಾರತದೊಡನೆ ಪೂರ್ಣ ಪ್ರಮಾಣದ ಯುದ್ಧಕ್ಕಿಳಿಯುವ ಸಾಧ್ಯತೆಗಳಿಲ್ಲ. ಅದೇಕೆ ಎಂದು ಇಲ್ಲಿ ಗಮನಿಸೋಣ.
ರಾಜಕೀಯ ಅಸ್ಥಿರತೆಗಳು
ಪಾಕಿಸ್ತಾನದ ರಾಜಕೀಯ ಪರಿಸ್ಥಿತಿ ಕೋಲಾಹಲದಲ್ಲಿದೆ. ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಂಧನ ದೇಶಾದ್ಯಂತ ಪ್ರತಿಭಟನೆಗಳು ಮತ್ತು ಹೊಡೆದಾಟಗಳಿಗೆ ಕಾರಣವಾಯಿತು. ಇಂದಿಗೂ ಅವರ ಪಕ್ಷವಾದ ಪಿಟಿಐ ಭಾರೀ ಜನಬೆಂಬಲ ಹೊಂದಿದೆ. ಇನ್ನು ಪಾಕಿಸ್ತಾನದಲ್ಲಿ ಹೆಚ್ಚಿನ ನಿಯಂತ್ರಣ ಹೊಂದಿರುವ ಪಾಕಿಸ್ತಾನಿ ಸೇನೆ ಮತ್ತು ನಾಗರಿಕ ನಾಯಕರು ಒಂದೇ ಮನಸ್ಥಿತಿಯಲ್ಲಿಲ್ಲ. ರಾಜಕಾರಣಿಗಳು ಮತ್ತು ಮಿಲಿಟರಿ ನಾಯಕರ ನಡುವಿನ ಕದನಗಳು ಪಾಕಿಸ್ತಾನದ ವ್ಯವಸ್ಥೆಯನ್ನೇ ದುರ್ಬಲಗೊಳಿಸಿವೆ. ಇಂತಹ ಕುಸಿದಿರುವ ರಾಜಕೀಯ ಪರಿಸ್ಥಿತಿಯಲ್ಲಿ ಯಾವುದೇ ರಾಜಕಾರಣಿಗೂ ಭಾರತದ ಮೇಲೆ ಯುದ್ಧ ನಡೆಸಲು ಸಾಧ್ಯವಿಲ್ಲ.
ಕುಸಿತದ ಅಂಚಿನಲ್ಲಿ ಆರ್ಥಿಕತೆ
ಪಾಕಿಸ್ತಾನದ ಆರ್ಥಿಕತೆ ಈಗ ಭಾರೀ ಬಿಕ್ಕಟ್ಟಿನಲ್ಲಿ ಸಿಲುಕಿದೆ. ಹಣದುಬ್ಬರ ಅತಿಯಾಗಿದ್ದು, ಆಹಾರ ವಸ್ತುಗಳೂ ದುಬಾರಿಯಾಗಿವೆ. ಇನ್ನು ವಿದೇಶೀ ವಿನಿಮಯ ಮೀಸಲಂತೂ ಅಪಾಯದ ಅಂಚಿನ ಕುಸಿತ ಕಂಡಿದೆ. ಐಎಂಎಫ್‌ನಿಂದ ೭ ಬಿಲಿಯನ್ ಡಾಲರ್ ಸಾಲ ಪಡೆದುಕೊಂಡರೂ ಪರಿಸ್ಥಿತಿ ಸುಧಾರಿಸುತ್ತಿಲ್ಲ. ಪಾಕಿಸ್ತಾನ ಆಮದನ್ನು ಮಿತಿಗೊಳಿಸಿ, ಅಂಗಡಿಗಳನ್ನು ಬೇಗನೇ ಮುಚ್ಚಿ, ಇನ್ನುಷ್ಟು ಧನಸಹಾಯ ಯಾಚಿಸುತ್ತಿದೆ. ಆದರೂ ಒಂದು ಯುದ್ಧ ಮಾಡುವಷ್ಟ ಹಣ ಪಾಕಿಸ್ತಾನದ ಬಳಿ ಇಲ್ಲ. ಆದರೆ ಭಾರತದ ಆರ್ಥಿಕತೆ ಬಹಳಷ್ಟು ಗಟ್ಟಿಯಾಗಿದ್ದು, ಇನ್ನೂ ಅಭಿವೃದ್ಧಿ ಹೊಂದುತ್ತಿದೆ. ಭಾರತದೊಡನೆ ಮಿಲಿಟರಿ ಸ್ಪರ್ಧೆ ಪಾಕಿಸ್ತಾನಕ್ಕೆ ಅಪಾಯಕಾರಿಯಾಗಿದೆ.
ಆಂತರಿಕ ಯುದ್ಧ ನಿರತ ಪಾಕಿಸ್ತಾನ
ಪಾಕಿಸ್ತಾನಿ ಸೇನೆ ಈಗಾಗಲೇ ತನ್ನ ಗಡಿಯೊಳಗೇ ಯುದ್ಧದಲ್ಲಿ ತೊಡಗಿದೆ. ವಾಯುವ್ಯ ದಿಕ್ಕಿನಲ್ಲಿ ಪಾಕಿಸ್ತಾನಿ ತಾಲಿಬಾನ್ (ಟಿಟಿಪಿ) ಭೀಕರ ದಾಳಿಗಳನ್ನು ಮುಂದುವರಿಸಿದೆ. ನೈಋತ್ಯ ದಿಕ್ಕಿನಲ್ಲಿ ಬಲೋಚ್ ಬಂಡುಕೋರರು ಮೂಲಭೂತ ವ್ಯವಸ್ಥೆಗಳು ಮತ್ತು ಚೀನೀ ಯೋಜನೆಗಳ ಮೇಲೆ ದಾಳಿ ನಡೆಸುತ್ತಿದ್ದಾರೆ. ತಮ್ಮ ಸ್ಥಳೀಯ ಪ್ರದೇಶಗಳನ್ನು ಕಡೆಗಣಿಸಿ, ತಮ್ಮ ಸಂಪನ್ಮೂಲಗಳನ್ನು ಕಸಿದುಕೊಳ್ಳುತ್ತಿದೆ ಎಂದು ಬಂಡಾಯಗಾರರು ಸರ್ಕಾರದ ಕುರಿತು ಅಸಮಾಧಾನ ಹೊಂದಿದ್ದಾರೆ. ೨೦೨೪ರಲ್ಲೇ ಆಂತರಿಕ ಯುದ್ಧದಲ್ಲಿ ೭೫೦ ಜನರು ಸಾವಿಗೀಡಾಗಿದ್ದಾರೆ. ಇವೆಲ್ಲ ಸಮಸ್ಯೆಗಳಿಂದ ಪಾಕಿಸ್ತಾನಕ್ಕೆ ಭಾರತದೊಡನೆ ಯುದ್ಧಕ್ಕಿಳಿಯುವ ಅವಕಾಶಗಳಿಲ್ಲ.
ಹೆಚ್ಚುತ್ತಿರುವ ಸಾಮಾಜಿಕ ಸಮಸ್ಯೆಗಳು
ರಾಜಕೀಯ ಮತ್ತು ಮಿಲಿಟರಿ ಸಮಸ್ಯೆಗಳ ಹೊರತಾಗಿ, ಸಾಮಾಜಿಕ ಸಮಸ್ಯೆಗಳೂ ಹೆಚ್ಚುತ್ತಿವೆ. ೨೦೨೨ರ ಭಾರೀ ಪ್ರವಾಹದ ಬಳಿಕ, ಲಕ್ಷಾಂತರ ಜನರು ಮನೆ, ಕೆಲಸ ಕಳೆದುಕೊಂಡಿದ್ದಾರೆ. ಧಾರ್ಮಿಕ ಮತ್ತು ಜನಾಂಗೀಯ ಅಲ್ಪಸಂಖ್ಯಾತರ ಮೇಲೆ ದಾಳಿಗಳಾಗುತ್ತಿವೆ. ಇವನ್ನು ತಡೆಯಲು ಸರ್ಕಾರದ ವೈಫಲ್ಯ ಜನರನ್ನು ಇನ್ನಷ್ಟು ಕೋಪಗೊಳಿಸಿದೆ. ಲಕ್ಷಾಂತರ ಅಫ್ಘನ್ನರಿಗೆ ಆಶ್ರಯ ನೀಡಿರುವುದೂ ಸಮಸ್ಯೆಗಳನ್ನು ಉದ್ವಿಗ್ನಗೊಳಿಸಿದೆ.
ಜಾಗತಿಕ ಒತ್ತಡಗಳು ಮತ್ತು ಏಕಾಂಗಿತನ
ಪಾಕಿಸ್ತಾನ ತನ್ನ ನೆರೆಹೊರೆಯಡನೆ ಸಮಸ್ಯೆಗಳನ್ನು ಹೊಂದಿದೆ. ಭಯೋತ್ಪಾದನೆಯ ಕಾರಣದಿಂದ ಅಫ್ಘಾನಿಸ್ತಾನದೊಡನೆಯೂ ಪಾಕಿಸ್ತಾನದ ಸಂಬಂಧ ಉದ್ವಿಗ್ನಗೊಂಡಿದೆ. ಸಿಪಿಇಸಿ ಕಾರಿಡಾರ್ ಮೇಲಿನ ದಾಳಿಯಿಂದಾಗಿ ಚೀನಾ ಸಹ ಪಾಕಿಸ್ತಾನದೊಡನೆ ಅಸಮಾಧಾನಗೊಂಡಿದೆ. ಭಾರತ ಸಿಂಧೂ ನೀರಿನ ಹಂಚಿಕೆಯ ಒಪ್ಪಂದವನ್ನು ಅಮಾನತುಗೊಳಿಸಿರುವುದೂ ಸಮಸ್ಯೆಯನ್ನು ಉದ್ವಿಗ್ನಗೊಳಿಸಿದೆ. ಒಂದು ವೇಳೆ ಪಾಕಿಸ್ತಾನ ಏನಾದರೂ ಯುದ್ಧಕ್ಕಿಳಿದರೆ, ಅದು ಇನ್ನಷ್ಟು ಜಾಗತಿಕ ಬೆಂಬಲ ಕಳೆದುಕೊಳ್ಳಲಿದೆ.
ಇನ್ನೂ ಪಾಕಿಸ್ತಾನ ದಾಳಿ ಮಾಡಬಲ್ಲದೇ?
ಪಾಕಿಸ್ತಾನದ ಬಳಿ ಸುಭದ್ರ ಸೇನೆ ಮತ್ತು ಪರಮಾಣು ಶಸ್ತ್ರಾಸ್ತ್ರಗಳಿವೆ. ಆದರೆ ಪೂರ್ಣ ಪ್ರಮಾಣದ ಯುದ್ಧಕ್ಕೆ ಇವಷ್ಟೇ ಸಾಲದು. ಸೇನೆ ಈಗಾಗಲೇ ಪಾಕಿಸ್ತಾನದೊಳಗೆ ಭಯೋತ್ಪಾದಕರೊಡನೆ ಸೆಣಸುತ್ತಿದೆ. ಸುದೀರ್ಘ ಯುದ್ಧಕ್ಕೆ ಪಾಕಿಸ್ತಾನಿ ಆರ್ಥಿಕತೆಯೂ ಸಿದ್ಧವಾಗಿಲ್ಲ. ಪಾಕಿಸ್ತಾನ ಆಕ್ರಮಣಕಾರಿಯಾಗಿ ವರ್ತಿಸಿದರೆ ಜಗತ್ತೂ ಅದನ್ನು ಬೆಂಬಲಿಸದು. ಆದ್ದರಿಂದಲೇ ಪಾಕಿಸ್ತಾನ ನೇರ ಯುದ್ಧದ ಬದಲು ಭಯೋತ್ಪಾದನಾ ಸಂಘಟನೆಗಳಿಗೆ ನೆರವು ನೀಡುತ್ತಿದೆ. ಲಷ್ಕರ್ ಎ ತೈಬಾದಂತಹ ಸಂಘಟನೆಗಳೇ ಪಹಲ್ಗಾಮ್ ದಾಳಿ ನಡೆಸಿದ್ದು, ಪಾಕ್ ಸರ್ಕಾರ ತನಗೆ ಅವುಗಳೊಡನೆ ಸಂಪರ್ಕವಿಲ್ಲ ಎಂದಿದೆ.
ಇಂತಹ ‘ಪ್ರಾಕ್ಸಿ’ ಯುದ್ಧ ನೇರ ಯುದ್ಧವಿಲ್ಲದೆ ಭಾರತದ ಮೇಲೆ ಒತ್ತಡ ಹೇರಲು ಪಾಕಿಸ್ತಾನಕ್ಕೆ ನೆರವಾಗುತ್ತಿದೆ. ಆದರೆ, ಇದೂ ಅಪಾಯಕಾರಿಯೇ. ಒಂದು ವೇಳೆ ಪರಿಸ್ಥಿತಿ ಕೈಮೀರಿದರೆ, ಸಣ್ಣ ಕಿಡಿಯೂ ಕಾಳ್ಗಿಚ್ಚು ಹಬ್ಬಿಸಬಲ್ಲದು.
ಭಾರತ ಸದಾ ಸಿದ್ಧವಾಗಿರಬೇಕು
ಭಾರತ ಸದಾ ಜಾಗರೂಕವಾಗಿ, ಎಚ್ಚರವಾಗಿರಬೇಕು. ಪಾಕಿಸ್ತಾನ ನೇರ ಯುದ್ಧ ನಡೆಸುವುದಿಲ್ಲವಾದರೂ, ಅದು ಭಯೋತ್ಪಾದಕರಿಗೆ ನೀಡುವ ಬೆಂಬಲ ಸಮಸ್ಯೆ ಸೃಷ್ಟಿಸೀತು. ಭಾರತ ತನ್ನ ಗಡಿಯನ್ನು ಸಶಕ್ತಗೊಳಿಸಿ, ಗುಪ್ತಚರ ವ್ಯವಸ್ಥೆಯನ್ನು ಬಲಪಡಿಸಿ, ಸದಾ ಸಿದ್ಧವಾಗಿರಬೇಕು. ರಾಜತಾಂತ್ರಿಕ ಒತ್ತಡಗಳು ಮುಂದುವರಿದು, ಪಾಕಿಸ್ತಾನ ಭಯೋತ್ಪಾದನೆಗೆ ಬೆಂಬಲ ನೀಡುತ್ತಿದೆ ಎಂದು ಜಗತ್ತಿಗೆ ತಿಳಿಯಬೇಕು.ಇಂದಿನ ಪಾಕಿಸ್ತಾನ ಬಹಳಷ್ಟು ದುರ್ಬಲವಾಗಿದೆ, ಆಂತರಿಕವಾಗಿ ಒಡೆದು ಹೋಗಿದೆ. ಭಾರತದೊಡನೆ ಯುದ್ಧ ನಡೆಸಲಾಗದಷ್ಟು ಬಡವಾಗಿದೆ. ಇಷ್ಟಾದರೂ ಅದು ಪರೋಕ್ಷ ದಾಳಿಗಳನ್ನು ನಡೆಸುತ್ತಿದೆ. ಭಾರತ ಇದನ್ನು ಲಘುವಾಗಿ ಪರಿಗಣಿಸುವಂತಿಲ್ಲ. ಶಾಂತಿ ಸದ್ಯಕ್ಕೆ ಸಾಧ್ಯವಿಲ್ಲದಿದ್ದರೂ, ಭಾರತ ಯುದ್ಧಕ್ಕೂ ಸದಾ ಸಿದ್ಧವಾಗಿರುವುದೊಳಿತು.