ನಾನೇ ರಾಜಾ-ಬ್ಯಾಂಡ್ ಬಾಜಾ

ಕುಲ್ಡೇಸಿ ಎಸ್‌ಎಸ್‌ಎಲ್‌ಸಿ ಎರಡು ಚಾನ್ಸಿಗೆ ಪಾಸಾಗಿ ಫಿಟ್ಟರ್‌ನಲ್ಲಿ ಐಟಿಐ ಮಾಡಿದ್ದ. ಹಗಲೆಲ್ಲ ನಾನು ಫಿಟ್ಟರ್ ಫಿಟ್ಟರ್ ಎಂದು ಹೇಳಿಕೊಳ್ಳುತ್ತಿದ್ದ. ಆ ಹೆಸರಿಗೆ ಸೂಟ್ ಆಗುವಂತೆಯೂ ಅವನಿದ್ದ. ಅವರದ್ದು ಇವರಿಗೆ, ಇವರದ್ದು ಅವರಿಗೆ ಹೇಳುತ್ತ ಅವರು ಜಗಳವಾಡಿದರೆ ವಿಘ್ನಸಂತೋಷ ಪಡುತ್ತ ಕಾಲ ಕಳೆಯುತ್ತಿದ್ದ. ರಾಜಕೀಯ ಗೊತ್ತಿಲ್ಲದಿದ್ದರೂ ಕುಲ್ಡೇಸಿ ನನಗೆ ಎಲ್ಲವೂ ಗೊತ್ತು ಆ ರಾಜಕಾರಣಿ ಹೀಗೆ ಹಾಗೆ ಎಂದು ಗೊತ್ತಿಲ್ಲದವರ ಮುಂದೆ ಹೇಳಿಕೊಂಡು ತಿರುಗಾಡುತ್ತಿದ್ದ. ಅವರೆಲ್ಲ ನನ್ನ ಮಾತು ಕೇಳುತ್ತಾರೆ… ನಾನಿಲ್ಲದೇ ಅವರಿಲ್ಲ ಎಂದು ಅನ್ನುತ್ತಿದ್ದ. ಜಗತ್ತಿನಲ್ಲಿ ಇಂಟಲಿಜೆನ್ಸ್ ಅಂತ ಇದ್ದರೆ ಅದು ನನಗೆ ಒಬ್ಬನಿಗೆ ಮಾತ್ರ ಅಂದುಕೊಂಡಿದ್ದ. ಹೀಗಿದ್ದ ಕುಲ್ಡೇಸಿ ಅವತ್ತು ಮದ್ರಾಮಣ್ಣನ ಹತ್ತಿರ ಹೋಗಿ ನೋಡಿ ಇವರೆ ಬಂಡೆಸಿವು ಇದಾನಲ್ಲ ಅವರು ಬರೇ ಎಲ್ಡು ವರ್ಸ… ಎಲ್ಡು ವರ್ಸ ಎಂದು ಎರಡೆರಡು ಬಾರಿ ಹೇಳುತ್ತಿದ್ದಾರೆ… ನೀವು ಸುಮ್ನೆ ಇರಬೇಡಿ ಸಾರ್ ಎಂದು ಹೇಳಿದ. ಈ ಕಡೆ ಬಂಡೆ ಸಿವು ಮನೆಗೆ ಹೋಗಿ ನೋಡಿ… ಆ ಮದ್ರಾಮಣ್ಣ ನಾನೇ ರಾಜಾ… ಐದು ವರ್ಸ ಬ್ಯಾಂಡ್ ಬಾಜಾ ಎಂದು ಹಾಡು ಕಟ್ಟಿ ಹಾಡುತ್ತಿದ್ದಾರೆ ಎಂದು ಹೇಳಿದ. ಅವರಿಬ್ಬರೂ ಒಬ್ಬರಿಗೊಬ್ಬರು ಸಿಟ್ಟಿಗೆದ್ದು ಬೈಯ್ದಾಡಿಕೊಂಡು ಮಾತು ಬಿಟ್ಟರು. ತಿಂಗಳ ವರೆಗೆ ನನ್ನನ್ನು ಮಾತನಾಡಿಸಬೇಡ ಎಂದು ಪರಸ್ಪರ ವಾಟ್ಸಾಪ್ ಮೆಸೇಜ್ ಮಾಡಿಕೊಂಡರು. ಕುಲ್ಡೇಸಿ ಮಾತ್ರ ಹೆಂಗೆ ಮಾಡಿದೆ ನೋಡು ಎಂದು ಅವರಿವರ ಮುಂದೆ ಹೇಳಿ ಮುಸಿ ಮುಸಿ ನಕ್ಕ. ಎಲ್ಲರಿಗೂ ಇದೇ ರೀತಿ ಮಾಡುತ್ತಿದ್ದ ಕುಲ್ಡೇಸಿಗೆ ಪಾಠ ಕಲಿಸಲೇಬೇಕು ಎಂದು ಪಣತೊಟ್ಟಿದ್ದ ತಿಗಡೇಸಿ ಸಮಯಕ್ಕಾಗಿ ಕಾಯ್ದು.. ಒಂದಿನ ಮದ್ರಾಮಣ್ಣನ ಮುಂದೆ ಹೋಗಿ ನೋಡಿ ಇಂಗಿಂಗೆ ನಿಮಗೆ ಹೀಗೆ ಹೇಳಿದ್ದಾನೆ ಎಂದು ಹೇಳಿದ. ಬಂಡೆಸಿವುನನ್ನು ಭೇಟಿಯಾಗಿ ನೋಡಿ ಅಣ್ಣ ಎಂದು ಎಲ್ಲ ವಿವರಿಸಿದ. ಮರುದಿನದಿಂದ ಕುಲ್ಡೇಸಿಯನ್ನು ಅವರು ಎಲ್ಲಿ ಕಳಿಸಬೇಕೋ ಅಲ್ಲಿ ಕಳಿಸಿದರು.