ಆ ಹುಡುಗಿಯನ್ನು ನನ್ನ ಬಳಿಗೆ ಕಳುಹಿಸುವಾಗ ಅವಳು ಓದುತ್ತಿದ್ದ ವಿಭಾಗದ ಮುಖ್ಯಸ್ಥೆಗೆ ಇವಳ ಬದುಕು ನೆಟ್ಟಗಾಗುತ್ತೆ ಎನ್ನುವ ಯಾವ ಭರವಸೆಯೂ ಇರಲಿಲ್ಲ. ಏನಾದರೂ ಆಗಲಿ ಒಮ್ಮೆ ಪ್ರಯತ್ನಪಡೋಣ ಎನ್ನುವ ಮನಃಸ್ಥಿತಿಯಿಂದ ಕಳಿಸಿದ್ದಿದು. ಚೇತನಾಳನ್ನು (ಹೆಸರು ಬದಲಾಯಿಸಲಾಗಿದೆ) ಓರ್ವ ಶಿಕ್ಷಕಿಯ ಜೊತೆ ಕಳುಹಿಸಿದ್ದರು. ಸ್ವಲ್ಪ ಹಿಂಜರಿಕೆಯಲ್ಲೇ ಬಂದ ಚೇತನಾಳನ್ನು ನಾನು ಗಮನಿಸಿದಾಗ ಇವಳಿಗೆ ಸಾಯುವ ಅಂತಹದ್ದು ಏನಾಗಿದೆ ಅಂತಲೂ ಅನ್ನಿಸಿತ್ತು. ಉತ್ತಮ ಮೈಕಟ್ಟು ಹೊಂದಿದ್ದ ಚೇತನಾ ಸ್ವಲ್ಪ ಎತ್ತರಕ್ಕಿದ್ದಳು. ಕೂದಲನ್ನು ಬಾಬ್ ಮಾಡಿದ್ದರಿಂದ ಪೊಲೀಸ್ ಕೆಲಸಕ್ಕೆ ಅಥವಾ ಮಾಡೆಲಿಂಗ್ ಕ್ಷೇತ್ರಕ್ಕೆ ಸಲ್ಲುವ ಹುಡುಗಿ ಎಂದು ಯಾರಾದರೂ ಭಾವಿಸಬಹುದಿತ್ತು. ಯಾವ ಭಯ, ಅಂಜಿಕೆ ಇಲ್ಲದೆ ನಿಮ್ಮ ಸಮಸ್ಯೆ ಹೇಳಿಕೊಳ್ಳಬಹುದು, ನೀವು ತುಂಬಾ ಸುರಕ್ಷಿತವಾದ ಸ್ಥಳದಲ್ಲಿದ್ದೀರಿ' ಎಂದು ಒತ್ತಿ ಹೇಳಿದೆ. ಅವಳ ಜೊತೆ ಬಂದಿದ್ದ ಶಿಕ್ಷಕಿ ಹೋದ ಮೇಲೆ, ತಾನು ಹೇಳುವ ವಿಚಾರ ಎಷ್ಟರಮಟ್ಟಿಗೆ ರಹಸ್ಯವಾಗಿ ಇಟ್ಟುಕೊಳ್ಳುತ್ತೀರಿ ಎಂದು ಪ್ರಾರಂಭಿಸಿದ ಚೇತನ, ಅವಳ ಅಪ್ಪಣೆಯಿಲ್ಲದೆ ಯಾವ ವಿಚಾರವನ್ನೂ ಹೊರಗಿನವರಿಗೆ ಹೇಳುವುದಿಲ್ಲ ಎಂದು ಗೊತ್ತಾದ ನಂತರ ತನ್ನ ಸಮಸ್ಯೆಯನ್ನು ಹೇಳಿಕೊಳ್ಳಲು ಪ್ರಾರಂಭಿಸಿದಳು. ಈಶಾನ್ಯ ರಾಜ್ಯಕ್ಕೆ ಸೇರಿದ ಚೇತನಾಳ ತಂದೆ ಎಂಬಿಎ ಮಾಡಲು ನವದೆಹಲಿಗೆ ಹೋದಾಗ ಅವರು ವಾಸಿಸುತ್ತಿದ್ದ ಮನೆಯ ಮಾಲೀಕರ ಮಗಳನ್ನೇ ಪ್ರೀತಿಸಿ ಮದುವೆಯಾದರು. ತುಂಬಾ ಸಂಪ್ರದಾಯಸ್ಥ ಮಧ್ಯಮ ವರ್ಗದ ತಂದೆಯ ಬದುಕಿನ ಶೈಲಿಗೆ ಆಗರ್ಭ ಶ್ರೀಮಂತ ಮನೆತನದ, ಆಧುನಿಕ, ಪಾಶ್ಚಿಮಾತ್ಯ ಜೀವನಶೈಲಿ ಹೊಂದಿದ್ದ ಅವಳ ತಾಯಿ ಹೇಗೆ ಪ್ರೀತಿಸಿದರು ಎನ್ನುವುದು ನನ್ನ ಸಂಶಯವಾದರೂ ಪ್ರೀತಿ ಕುರುಡು ಎನ್ನುವುದನ್ನು ನಂಬಿದ್ದ ನನಗೆ, ಅದು ವಿಶೇಷವಾಗಿಯೇನೂ ತೋರಲಿಲ್ಲ. ಚೇತನಾಳ ಪೋಷಕರ ಮಧುರ ಕ್ಷಣಗಳು ಬಹಳ ವರ್ಷ ಕಾಣಲಿಲ್ಲ, ಅವರ ಎರಡನೆಯ ವಾರ್ಷಿಕೋತ್ಸವ ಆಗುವುದರೊಳಗೆ ಚೇತನಾಳ ತಾಯಿ ಗರ್ಭಿಣಿಯಾದರು. ಅದು ಆಕೆಗೆ ಬೇಡವಾಗಿತ್ತು, ಗರ್ಭಪಾತ ಮಾಡಿಸಿಕೊಳ್ಳಬೇಕಾ ಬೇಡವಾ ಎನ್ನುವುದರ ಬಗ್ಗೆಯೇ ಚರ್ಚೆಯಾಗಿ, ಆ ಚರ್ಚೆ ಮುಗಿಯುವುದರ ಒಳಗೆ ಸಮಯ ಮೀರಿ ಹೋಗಿತ್ತು, ಸಲಹೆ ಕೇಳಲು ಹೋದ ಸ್ತ್ರೀ ವೈದ್ಯರು ಹೇಳಿದ್ದು, ಗರ್ಭಪಾತ ತಾಯಿಯ ಜೀವಕ್ಕೆ ಕುತ್ತು ತರಬಹುದು ಎಂದು. ಹೀಗೆ ಹುಟ್ಟುವ ಮೊದಲೇ ಬೇಡದ ಜೀವವಾಗಿ, ತನ್ನ ಜೀವಕ್ಕೆ ಕುತ್ತು ತರುವ ಪ್ರಾಣಿಯಾಗಿ ಕಾಣಿಸಿದ್ದ, ಚೇತನಾಳನ್ನು ಅವಳ ತಾಯಿ ಯಾವತ್ತೂ ಪ್ರೀತಿಸಲಿಲ್ಲ, ಆದರೆ ಸಮಯಕ್ಕೆ ಬೇಕಾದ, ಅಗತ್ಯವಿದ್ದ ಪೋಷಣೆಯಲ್ಲಿ ಕಡಿಮೆ ಮಾಡಿರಲಿಲ್ಲ, ಚೇತನಾ ಅಂತೂ ಮಾತು ಕಲಿತು ಹೆಜ್ಜೆ ಇಟ್ಟು ಓಡಲು ಕಲಿಯುವಷ್ಟರಲ್ಲಿ ಅವಳ ತಾಯಿಯ ಬಾಳಲ್ಲಿ ಇನ್ನೊಬ್ಬ ಪುರುಷನ ಆಗಮನವಾಗಿತ್ತು. ಅಷ್ಟರಲ್ಲಿ ಚೇತನಾಳ ತಂದೆಗೆ ಬೆಂಗಳೂರಿಗೆ ವರ್ಗವಾಗಿತ್ತು. ಹಾಗಾಗಿ ತಾಯಿಯ ಹೊಸ ಪ್ರಣಯಕ್ಕೆ ಕತ್ತರಿ ಬಿತ್ತು. ಶಾಲೆಯಲ್ಲಿ ಉತ್ತಮ ವಿದ್ಯಾರ್ಥಿನಿ ಎನಿಸಿಕೊಂಡಿದ್ದ ಚೇತನಾ ಹೆಚ್ಚಿನ ಪ್ರಯತ್ನವಿಲ್ಲದೆ ಇಂಜಿನಿಯರಿಂಗ್ ಸೇರಿಕೊಂಡಳು. ಆದರೆ ಮನೆಯಲ್ಲಿನ ಪರಿಸ್ಥಿತಿ ಹದಗೆಟ್ಟಿತ್ತು. ದಿನನಿತ್ಯ ಜಗಳ, ಪ್ರತಿ ಬಾರಿಯ ಜಗಳದಲ್ಲೂ ಚೇತನಾಳ ಹೆಸರು ಪ್ರಸ್ತಾಪವಾಗುತ್ತಿತ್ತು. ಚೇತನಾ ಇರದಿದ್ದರೆ ಎಂದು ಶುರುವಾಗುವ ಜಗಳ, ಅದರಲ್ಲಿಯೇ ಅಂತ್ಯ ಕಾಣುತ್ತಿತ್ತು. ಇನ್ನೂ ಪಕ್ವವಾಗಿರದ ಚೇತನಾಳ ಮನಸ್ಸಲ್ಲಿ,
ತಾನೊಂದು ಬೇಡದ ಜೀವ’ ಎನ್ನುವುದು ಆಳವಾಗಿ ಬೇರೂರಿತ್ತು. ಕೆಲವೊಮ್ಮೆ ತಾಯಿಯ ಹತಾಶೆ ಚೇತನಾಳತ್ತ ತಿರುಗಿ, ಅವಳ ಬೆನ್ನ ಮೇಲೆ ಬಾಸುಂಡೆ ಬೀಳುತ್ತಿತ್ತು. ಎರಡನೆಯ ವರ್ಷದ ಇಂಜಿನಿಯರಿಂಗ್ ಓದುವಾಗ ಚೇತನಾಳಿಗೆ ಗೊತ್ತಾಗಿದ್ದು, ತನ್ನ ತಾಯಿಗೆ ಮತ್ತೊಬ್ಬ ಪುರುಷನೊಂದಿಗೆ ಸಂಬಂಧವಿದೆ ಎಂದು. ಅದೂ, ತನ್ನ ತಾಯಿ ಮತ್ತು ತಂದೆಯ ನಡುವೆ ತೀರಾ ಕ್ಷುಲ್ಲಕ ಕಾರಣಕ್ಕೆ ಜಗಳವಾಗುತ್ತಿದ್ದಾಗ, ಇಬ್ಬರೂ ಸದ್ಯದಲ್ಲೇ ವಿಚ್ಛೇದನ ತೆಗೆದುಕೊಳ್ಳುತ್ತಿದ್ದಾರೆಂದು ಗೊತ್ತಾದಾಗ.
ಇವೆಲ್ಲವುಗಳು ಚೇತನಾಳನ್ನು ಘಾಸಿಗೊಳಿಸಿದ್ದಕ್ಕಿಂತ ಅಮ್ಮ ಹೇಳುತ್ತಿದ್ದ ಮಾತುಗಳು, `ನಾನು ಬಿಟ್ಟು ಹೋದ ಮೇಲೆ ನಿನ್ನ ಅಪ್ಪ ಇನ್ನೊಂದು ಹುಡುಗೀನ ಮದುವೆ ಆಗ್ತಾನೆ, ಆಗ ನಿನ್ನನ್ನು ಯಾರೂ ನೋಡ್ಕೊಳಲ್ಲ, ನೀನು ಬೀದಿಗೆ ಬರ್ತೀಯಾ, ಅದರ ಬದಲು, ನೀನೇ ಯಾರ್ನಾದ್ರು ನೋಡ್ಕೊಂಡು ಬಿಡು’ ಎನ್ನುವುದು ಆಘಾತ ತಂದಿತ್ತು. ಈ ಯಾವ ಮಾತುಕತೆ ನಡೆಯುವಾಗಲೂ ಚೇತನಾಳ ತಂದೆ ಇರುತ್ತಿರಲಿಲ್ಲ. ಜಗಳದ ನಂತರ ಇವರ ಗೊಡವೆಯೇ ಬೇಡ ಎಂದು ಮನೆಯಿಂದ ಹೊರಗೆ ಹೋಗಿಬಿಡುತ್ತಿದ್ದ.
ಇತ್ತ ಅಮ್ಮನೂ ಒಪ್ಪಿಕೊಳ್ಳದ, ಎಲ್ಲದಕ್ಕೂ ನಿರ್ಲಿಪ್ತತೆಯೇ ಉತ್ತರವಾಗಿದ್ದ ಅಪ್ಪ, ಇದರಿಂದ ರೋಸಿ ಹೋಗಿದ್ದ, ಚೇತನಾ ಕಲಿಕೆಯಲ್ಲಿ ಆಸಕ್ತಿ ಕಳೆದುಕೊಂಡಳು, ಅವಳ ಅಂಕಗಳು ಕಡಿಮೆಯಾಗುತ್ತಾ ಬಂದವು. ಇದನ್ನು ಗಮನಿಸಿದ ಚೇತನಾಳ ಶಿಕ್ಷಕಿಯೊಬ್ಬರು ಅವಳನ್ನು ಮಾತಿಗೆ ಕರೆದರು. ಕೆಲವೊಂದು ವಿಷಯಗಳನ್ನು ಹೇಳಿಕೊಂಡರೂ ಎಲ್ಲವನ್ನೂ ಹೇಳಿಕೊಳ್ಳಲಿಲ್ಲ, ಇದರ ಮಧ್ಯೆ ಚೇತನಾಳನ್ನು ಸೂಕ್ಷ್ಮವಾಗಿ ಗಮನಿಸಿದ ಆ ಶಿಕ್ಷಕಿ, ಅವಳ ಕೈಯಲ್ಲಿ ಆದ ಗಾಯವನ್ನು ಗಮನಿಸಿ, ವಿಚಾರಿಸಿದಾಗ ಅದು ಅವಳೇ ಮಾಡಿಕೊಂಡ ಗಾಯ ಅಂತ ಗೊತ್ತಾದಾಗ ವಿಭಾಗದ ಮುಖ್ಯಸ್ಥರ ಬಳಿಗೆ ಕರೆದುಕೊಂಡು ಹೋದರು. ಆದರೆ ಚೇತನಾ ಅವರ ಬಳಿ ಏನನ್ನೂ ಬಾಯಿ ಬಿಟ್ಟಿರಲಿಲ್ಲ. ಆಗ ಆ ಶಿಕ್ಷಕಿ ಕೊಟ್ಟ ಸಲಹೆಯ ಮೇರೆಗೆ ಮುಖ್ಯಸ್ಥರು ಚೇತನಾಳನ್ನು ನನ್ನ ಬಳಿಗೆ ಕಳಿಸಿದ್ದಿದು.
ಸುಮಾರು ಐದಾರು ಆಪ್ತ-ಸಲಹೆಯ ಭೇಟಿಯ ಬಳಿಕ ಚೇತನಾಳ ಆತಂಕ, ದುಗುಡ ಕಡಿಮೆಯಾಗುತ್ತಾ ಬಂದಿತು. ಅವಳ ಖಿನ್ನತೆ ಮಾಯವಾಗಿತ್ತು, ತರಗತಿಯಲ್ಲಿ ಮೊದಲಿನ ಹಾಗೆ ಹಸನ್ಮುಖಿಯಾಗಿ ಕೂರಲು ಪ್ರಾರಂಭಿಸಿದಳು. ಆದರೆ ಅವಳ ಆತಂಕವು ಪೂರ್ಣವಾಗಿ ಕಡಿಮೆಯಾಗಬೇಕಾದರೆ ಅವರ ಪೋಷಕರ ಬಳಿ ಮಾತನಾಡಬೇಕಿತ್ತು. ತಂದೆಯನ್ನು ಕರೆಸಲು ಚೇತನ ಒಪ್ಪಲಿಲ್ಲ, ತಾಯಿಯಂತೂ ಇದ್ಯಾವುದನ್ನೂ ನಂಬುವುದೇ ಇಲ್ಲ ಎಂದಳು. ಕೊನೆಗೆ ಸಾಕಷ್ಟು ಪ್ರಯತ್ನದ ಬಳಿಕ ತಂದೆಯನ್ನು ಕರೆಸಲು ಒಪ್ಪಿದಳು.
ಅವರ ತಂದೆ ಕರೆದ ಮರುದಿನವೇ ಬಂದರು. ಅವರ ಬಳಿ ಮಾತನಾಡಿದಾಗ ನನಗೆ ತಿಳಿದದ್ದು: ಅವರು ಅವರ ಪತ್ನಿಯ ಎಲ್ಲವನ್ನೂ ಸಹಿಸಿಕೊಂಡಿದ್ದಿದು ಕೇವಲ ಚೇತನಾಳಿಗಾಗಿ ಎಂದು. ವಿಚ್ಛೇದನವನ್ನು ಮುಂದೂಡುತ್ತಾ ಬಂದಿರುವುದು, ನಿರ್ಲಿಪ್ತವಾಗಿ ಜೀವನ ಸಾಗಿಸುತ್ತಿರುವುದು ಎಲ್ಲವೂ ಕೇವಲ ಮಗಳಿಗಾಗಿ ಎಂದು ಹೇಳಿಕೊಂಡು ಅತ್ತರು. ಆದರೆ ಇದ್ಯಾವುದನ್ನೂ ಅವರು ಚೇತನಾಳಿಗೆ ಹೇಳಿರಲಿಲ್ಲ, ಅದು, ಈ ಎಲ್ಲ ಸಮಸ್ಯೆಯ ಮೂಲವಾಗಿತ್ತು. ಇದನ್ನೆಲ್ಲಾ ಚೇತನಾಳಿಗೆ ಹೇಳಿ ಅವಳ ತಂದೆಯದು ತುಂಬಾ ನಿಸ್ವಾರ್ಥ ಮನಸ್ಸು, ವಿಶಾಲವಾದ ಹೃದಯ ಎಂದು ಹೇಳಿದಾಗ ಚೇತನಾಳ ಕಣ್ಣಲ್ಲಿ ನೀರು ತುಂಬಿಕೊಂಡಿತ್ತು. ಮುಂದಿನ ಭೇಟಿಗಳನ್ನು ಚೇತನಾಳ ಸಕಾರಾತ್ಮಕ ಗುಣಗಳನ್ನು ಹೆಚ್ಚಿಸಲು ಇಟ್ಟುಕೊಂಡೆ. ಕೇವಲ ಮೂರು ತಿಂಗಳಲ್ಲಿ, ತಂದೆಯನ್ನು ಅತಿಯಾಗಿ ದ್ವೇಷಿಸುತ್ತಿದ್ದ, ತಾಯಿಯನ್ನು ಪ್ರೀತಿಸಲು ಆಗದ, ಬದುಕಿ ಸಾಧಿಸಬೇಕು ಎನ್ನುವ ಆಸೆಯನ್ನೇ ಬಿಟ್ಟಿದ್ದ ಚೇತನಾ ಅಂತಿಮ ಪರೀಕ್ಷೆಯಲ್ಲಿ ಉತ್ತಮ ಶ್ರೇಣಿಯಲ್ಲೇ ಉತ್ತೀರ್ಣಳಾದಳು. ನಮ್ಮ ಕೊನೆಯ ಭೇಟಿಯಲ್ಲಿ ಅವಳು ಹೇಳಿದ್ದಿದು: ನನಗೆ ಅಪ್ಪನಂತಹ ಅಮ್ಮ ಬೇಕಿತ್ತು ಎಂದು. ನನಗೂ ಅವಳು ಹೇಳಿದುದನ್ನು ಅಲ್ಲಗಳೆಯಲಾಗಲಿಲ್ಲ.