ಸಚಿವಾಲಯದಿಂದ ಆರು ಅಂಶಗಳ ಕಾರ್ಯತಂತ್ರ
ನವದೆಹಲಿ: ದೇಶಾದ್ಯಂತ ಇದೇ ಮೇ 29ರಂದು ಒರಿಸ್ಸಾದ ಪುರಿಯಿಂದ ವಿಕಸಿತ ಕೃಷಿ ಸಂಕಲ್ಪ ಅಭಿಯಾನಕ್ಕೆ ಚಾಲನೆ ನೀಡಲಾಗುವುದು ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್ ತಿಳಿಸಿದ್ದಾರೆ.
ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಹಾಗು ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಇಂದು ಹೊಸದಿಲ್ಲಿಯ ರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ. 2025ರ ಮೇ 29 ರಿಂದ ಜೂನ್ 12 ರವರೆಗೆ ನಡೆಯುವ ರಾಷ್ಟ್ರವ್ಯಾಪಿ “ವಿಕಸಿತ ಕೃಷಿ ಸಂಕಲ್ಪ ಅಭಿಯಾನ”ದ ಉದ್ಘಾಟನೆಯ ಕುರಿತು ಮಾತನಾಡಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ, ಅಭಿವೃದ್ಧಿ ಹೊಂದಿದ ಭಾರತದ ದೃಷ್ಟಿಕೋನವನ್ನು ಸಕ್ರಿಯವಾಗಿ ಅನುಸರಿಸಲಾಗುತ್ತಿದೆ ಮತ್ತು ಈ ಗುರಿಯನ್ನು ಸಾಧಿಸಲು, ಅಭಿವೃದ್ಧಿ ಹೊಂದಿದ ಕೃಷಿ, ಆಧುನಿಕ ಕೃಷಿ ಪದ್ಧತಿಗಳು ಮತ್ತು ಸಮೃದ್ಧ ರೈತರನ್ನು ಒಳಗೊಂಡ ಅಡಿಪಾಯವನ್ನು ನಿರ್ಮಿಸುವುದು ಅತ್ಯಗತ್ಯ, ಭಾರತೀಯ ಆರ್ಥಿಕತೆಯ ಬೆನ್ನೆಲುಬಾಗಿ ಉಳಿದಿರುವ ಕೃಷಿಯು ಜನಸಂಖ್ಯೆಯ ಅರ್ಧದಷ್ಟು ಜನರಿಗೆ ಜೀವನೋಪಾಯವನ್ನು ಒದಗಿಸುವುದಲ್ಲದೆ, ರಾಷ್ಟ್ರೀಯ ಆಹಾರ ಭದ್ರತೆಗೂ ಅದು ತಳಹದಿಯಾಗಿದೆ. ದೇಶದ 700 ಜಿಲ್ಲೆಗಳಲ್ಲಿ ಕೃಷಿ ಸಂಕಲ್ಪ ಅಭಿಯಾನ ನಡೆಯಲಿದ್ದು, ಕೃಷಿ ವಿಜ್ಞಾನಿಗಳು ಹಳ್ಳಿಗಳಿಗೆ ಭೇಟಿ ನೀಡಿ ನೇರವಾಗಿ ರೈತರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ.
731 ಕೃಷಿ ವಿಜ್ಞಾನ ಕೇಂದ್ರಗಳು, ಭಾರತೀಯ ಕೃಷಿ ಸಂಶೋಧನಾ ಮಂಡಳಿಯ 113 ಘಟಕಗಳು, ಕೃಷಿ, ತೋಟಗಾರಿಕೆ,ಪಶುಸಂಗೋಪನೆ ಹಾಗೂ ಮೀನುಗಾರಿಕ ವಲಯದ ಸಿಬ್ಬಂದಿ, ಪ್ರಗತಿ ಪರ ಕೃಷಿಕರು ಸೇರಿದಂತೆ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು ಅಭಿಯಾನದಲ್ಲಿ ಪಾಲ್ಗೊಳ್ಳಲಿವೆ ಎಂದರು. ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ ಕೃಷಿ ವಿಜ್ಞಾನಿಗಳು ಹಾಗೂ ರೈತರೊಂದಿಗೆ ನೇರ ಸಂಪರ್ಕ ಕಲ್ಪಿಸುವ ಇಂತಹ ವಿಶೇಷ ಅಭಿಯಾನವನ್ನು ಆಯೋಜಿಲಾಗಿದ್ದು, ಸುಮಾರು 1.5 ಕೋಟಿ ರೈತರು ಭಾಗವಹಿಸುವ ನಿರೀಕ್ಷೆ ಇದೆ ಎಂದರು. ದೇಶದ 1.45 ಶತಕೋಟಿ ಜನರಿಗೆ ಆಹಾರ ಭದ್ರತೆಯನ್ನು ಖಚಿತಪಡಿಸುವುದು ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಪ್ರಾಥಮಿಕ ಉದ್ದೇಶವಾಗಿದೆ, ಜೊತೆಗೆ ಪೌಷ್ಟಿಕ ಆಹಾರದ ಲಭ್ಯತೆಯನ್ನು ಖಾತರಿಪಡಿಸುವುದು, ರೈತರ ಆದಾಯವನ್ನು ಸುಧಾರಿಸುವುದು ಮತ್ತು ಭವಿಷ್ಯದ ಪೀಳಿಗೆಗೆ ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸುವುದು ಅದರಲ್ಲಿ ಸೇರಿದೆ. ಈ ಗುರಿಗಳನ್ನು ಪೂರೈಸಲು, ಸಚಿವಾಲಯವು ಆರು ಅಂಶಗಳ ಕಾರ್ಯತಂತ್ರವನ್ನು ರೂಪಿಸಿದೆ: ಉತ್ಪಾದನೆಯನ್ನು ಹೆಚ್ಚಿಸುವುದು, ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡುವುದು, ಉತ್ಪನ್ನಗಳಿಗೆ ನ್ಯಾಯಯುತ ಬೆಲೆಯನ್ನು ಖಚಿತಪಡಿಸುವುದು, ನೈಸರ್ಗಿಕ ವಿಕೋಪಗಳಿಂದ ಉಂಟಾಗುವ ನಷ್ಟವನ್ನು ಸರಿದೂಗಿಸುವುದು, ಮೌಲ್ಯವರ್ಧನೆ ಮತ್ತು ಆಹಾರ ಸಂಸ್ಕರಣೆಯೊಂದಿಗೆ ಬೆಳೆ ವೈವಿಧ್ಯೀಕರಣವನ್ನು ಉತ್ತೇಜಿಸುವುದು ಹಾಗು ನೈಸರ್ಗಿಕ ಮತ್ತು ಸಾವಯವ ಕೃಷಿಯನ್ನು ಪ್ರೋತ್ಸಾಹಿಸುವುದು ಇದರಲ್ಲಿ ಸೇರಿದೆ ಎಂದರು.