ದೆವ್ವ ಬಿಡಿಸುವ ನೆಪದಲ್ಲಿ  ಥಳಿತ : ಮಹಿಳೆ ಸಾವು

ಶಿವಮೊಗ್ಗ: ದೆವ್ವ ಹಿಡಿದಿದೆ ಎಂದು ಹಿಗ್ಗಾಮುಗ್ಗಾ ಥಳಿತಕ್ಕೊಳಗಾದ ಮಹಿಳೆಯೋರ್ವರು ಮೃತಪಟ್ಟ ದಾರುಣ ಘಟನೆ,   ಹೊಳೆಹೊನ್ನೂರು ಸಮೀಪದ ಜಂಬರಗಟ್ಟೆ ಗ್ರಾಮದಲ್ಲಿ  ಭಾನುವಾರ ತಡರಾತ್ರಿ ನಡೆದಿದೆ.
ಹೊಸ ಜಂಬರಘಟ್ಟೆ ಗ್ರಾಮದ ಗೀತಮ್ಮ (55) ಮೃತಪಟ್ಟ ಮಹಿಳೆ ಎಂದು ಗುರುತಿಸಲಾಗಿದೆ. ಈ ಸಂಬಂಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆ ನಡೆಸಿದ ಆರೋಪಿದ ಮೇರೆಗೆ ಆಶಾ (45) ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ.

ಭಾನುವಾರ ಸಂಜೆ ಮೃತೆ ಗೀತಮ್ಮಅಸ್ವಾಭಾವಿಕವಾಗಿ ವರ್ತಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಅವರ ಪುತ್ರ ಸಂಜಯ್ ಎಂಬುವರು,  ಅದೇ ಗ್ರಾಮದ ನಿವಾಸಿಯಾದ ಆರೋಪಿ ಆಶಾಳನ್ನು ಮನೆಗೆ ಕರೆಯಿಸಿದ್ದ. ಮಂಕಾಗಿದ್ದ ಗೀತಮ್ಮಳಿಗೆ ದೆವ್ವ ಹಿಡಿದಿದೆ. ಅದನ್ನು ಬಿಡಿಸುವುದಾಗಿ ಆಶಾ ಹೇಳಿದ್ದಾಳೆ.
ನಂತರ ಆಪಾದಿತೆ ಆಶಾ, ‘ನನ್ನ ಮೇಲೆ ಚೌಡಮ್ಮ ದೇವರು ಬಂದಿದೆ. ಗೀತಮ್ಮಳ ಮೇಲಿನ ದೆವ್ವ ಬಿಟ್ಟು ಹೋಗು…’ ಎಂದು ಕೋಲಿನಿಂದ ಹೊಡೆಯಲು ಆರಂಭಿಸಿದ್ದಾಳೆ.
ಬಳಿಕ  ರಾತ್ರಿ 9-30ಕ್ಕೆ ಮನೆಯಿಂದ ಎರಡೂವರೆ ಕಿಲೋಮೀಟರ್ ದೂರವಿರುವ ಹಳೇ ಜಂಬರಘಟ್ಟೆ ಚೌಡಮ್ಮನ ದೇವಸ್ಥಾನದವರೆಗೂ ಹೊಡೆದುಕೊಂಡು ಹೋಗಿದ್ದಾಳೆ. ಆದರೂ ದೆವ್ವ ಬಿಟ್ಟಿಲ್ಲವೆಂದು, ಬೆಳಗಿನ ಜಾವ 2-30 ರವರೆಗೂ ಥಳಿಸುವುದನ್ನು ಬಿಟ್ಟಿಲ್ಲ ಎನ್ನಲಾಗಿದೆ.
ಹಲ್ಲೆಯಿಂದ ತೀವ್ರ ಅಸ್ವಸ್ಥಗೊಂಡು ಗೀತಮ್ಮ ಕುಸಿದು ಬಿದ್ದಿದ್ದಾರೆ. ಗೀತಮ್ಮನ ಮೈಯಲ್ಲಿದ್ದ ಆತ್ಮ ಹೋರ ಹೋಗಿದೆ. ಇನ್ನೂ ಮುಂದೆ ಯಾವುದೇ ತೊಂದರೆ ಇಲ್ಲ. ಎಲ್ಲವೂ ಸರಿಯಾಗಿದೆ ಎಂದು ಆಶಾ ಹೇಳಿದ್ದಾಳೆ ಎನ್ನಲಾಗಿದೆ.
ತೀವ್ರವಾಗಿ ಅಸ್ವಸ್ಥಗೊಂಡಿದ್ದ ಗೀತಮ್ಮರನ್ನು ಹೊಳೆಹೊನ್ನೂರಿನ ಸಮುದಾಯ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಪರೀಕ್ಷಿಸಿದ ವೈದ್ಯರು ಗೀತಮ್ಮ ಮೃತಪಟ್ಟಿದ್ದಾರೆ ಎಂದು ದೃಡ ಪಡಿಸಿದ್ದಾರೆ.
ಮೃತೆ ಗೀತಮ್ಮಳಿಗೆ ಒಂದು ಹೆಣ್ಣು ಹಾಗೂ ಇಬ್ಬರು ಗಂಡು ಮಕ್ಕಳಿದ್ದಾರೆ. ಗೀತಮ್ಮಳ ಮೇಲೆ ನಡೆದ ಹಲ್ಲೆಯ ವೀಡಿಯೋ ತುಣುಕುಗಳು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.