ದುಬಾರಿ ತೆರಿಗೆ ಮೂಲಕ ಟ್ರಂಪ್ ದೊಡ್ಡ ಜೂಜಾಟ

ಗೆಳೆಯ ನೀ ನನಗಿದ್ದರೆ ನಾ ನಿನಗೆ ಎಂಬ ತತ್ವವನ್ನು ಅನುಸರಿಸುತ್ತಿರುವ ಟ್ರಂಪ್ ಭಾರತದ ಮೇಲೆ ಶೇ. ೨೬ರಷ್ಟು ಪ್ರತಿ ತೆರಿಗೆಯನ್ನು ವಿಧಿಸುವುದರ ಮೂಲಕ ಸ್ನೇಹ ಬೇರೆ ವ್ಯಾಪಾರ ಬೇರೆ ಎಂಬುದನ್ನು ಮೋದಿಗೆ ತಿಳಿಸಿದ್ದಾರೆ. ಮುಂದೆ ನಡೆಯುವ ಮಾತುಕತೆ- ಒಪ್ಪಂದದ ಮೂಲಕ ಇವುಗಳನ್ನು ಸರಿಪಡಿಸಿಕೊಳ್ಳಬಹುದು ಎಂಬ ಅಭಿಪ್ರಾಯವೂ ಅವರಿಂದ ಬಂದಿದೆ. ಟ್ರಂಪ್ ಹೊಸ ತೆರಿಗೆ ಘೋಷಣೆಗೆ ಬಲಿಯಾಗುವುದು ೧೪ ಬಿಲಿಯನ್ ಡಾಲರ್ ವಹಿವಾಟು ಹೊಂದಿರುವ ಎಲೆಕ್ಟ್ರಾನಿಕ್ಸ್ ವಸ್ತುಗಳು ಹಾಗೂ ೯ ಬಿಲಿಯನ್ ಡಾಲರ್ ವಜ್ರ ಮತ್ತು ಆಭರಣಗಳ ವ್ಯಾಪಾರ. ಆದೇರೀತಿ ಆಟೊಮೊಬೈಲ್, ಜವಳಿ ಮತ್ತು ಐಟಿ ಕ್ಷೇತ್ರಗಳ ಮೇಲೆ ಪರೋಕ್ಷ ಪ್ರಭಾವ ಆಗಲಿದೆ. ಸುದೈವದಿಂದ ಔಷಧ ಮತ್ತು ಇಂಧನ ಕ್ಷೇತ್ರ ಪಾರಾಗಿದೆ. ಒಟ್ಟು ಅಮೆರಿಕ-ಭಾರತದ ನಡುವೆ ೪೬ ಬಿಲಿಯನ್ ಡಾಲರ್‌ನಷ್ಟು ವ್ಯಾಪಾರ ಕೊರತೆ ಇದೆ. ತಕ್ಷಣದಲ್ಲಿ ಭಾರತಕ್ಕೆ ಶೇ. ೧೦ರಷ್ಟು ತೆರಿಗೆ ಭಾರ ಬೀಳಲಿದೆ. ಎರಡನೇ ಹಂತದಲ್ಲಿ ಶೇ. ೧೬ರಷ್ಟು ತೆರಿಗೆ ಹೊರೆ ಬೀಳಲಿದೆ. ಅಷ್ಟರಲ್ಲಿ ದ್ವಿಪಕ್ಷೀಯ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ಭಾರತ ಮುಂದಾಗಬಹುದು. ಭಾರತಕ್ಕೆ ಅಮೆರಿಕದಿಂದ ಬರುವ ಕೃಷಿಯುತ್ಪನ್ನ ವಸ್ತುಗಳ ಮೇಲೆ ಹೆಚ್ಚಿನ ಸುಂಕ ವಿಧಿಸಲಾಗಿದೆ ಎಂಬುದು ಟ್ರಂಪ್ ಆಕ್ಷೇಪ. ಸ್ವದೇಶಿ ಕೃಷಿ ವಸ್ತುಗಳನ್ನು ಕಾಪಾಡಲು ಈ ತೆರಿಗೆ ಇದೆ ಎಂಬುದು ಭಾರತದ ವಾದ. ಹೀಗಾಗಿ ಈಗ ಮಾತುಕತೆ ಮೂಲಕ ಇದನ್ನು ಬಗೆಹರಿಸಿಕೊಳ್ಳಬೇಕಿದೆ. ಅಮೆರಿಕದ ಉತ್ಪನ್ನಗಳಿಗೆ ಭಾರತ ಶೇ. ೫೦ಕ್ಕಿಂತ ಹೆಚ್ಚು ತೆರಿಗೆ ವಿಧಿಸುತ್ತಿದೆ. ಅದರಲ್ಲಿ ಅರ್ಧ ಎಂದರೆ ಶೇ. ೨೬ರಷ್ಟು ಪ್ರತಿ ತೆರಿಗೆಯನ್ನು ಅಮೆರಿಕ ವಿಧಿಸಿದೆ. ಇದು ಭಾರತಕ್ಕೆ ತೋರಿದ ರಿಯಾಯಿತಿ ಎಂಬುದು ಟ್ರಂಪ್ ನಿಲುವು. ಬಹುತೇಕ ದೇಶಗಳು ಅಮೆರಿಕಕ್ಕೆ ವಿಧಿಸಿದ್ದ ತೆರಿಗೆ ಭಾರವನ್ನು ದ್ವಿಪಕ್ಷೀಯ ಮಾತುಕತೆ ಮೂಲಕ ಕಡಿಮೆ ಮಾಡಲು ಮುಂದಾಗಿವೆ. ಅಲ್ಲದೆ ಭಾರತ, ಮಧ್ಯಪ್ರಾಚ್ಯ ಮತ್ತು ಐರೋಪ್ಯ ದೇಶಗಳಿಗೆ ಅಮೆರಿಕ ಕಡಿಮೆ ತೆರಿಗೆ ವಿಧಿಸಿರುವುದರಿಂದ ಆ ದೇಶಗಳ ಮೂಲಕ ಅಮೆರಿಕದ ಮಾರುಕಟ್ಟೆ ಪ್ರವೇಶಿಸಲು ಸಾಧ್ಯವೇ ಎಂಬುದನ್ನು ಚಿಂತಿಸುತ್ತಿದೆ. ಪರ್ಯಾಯ ಮಾರುಕಟ್ಟೆ ಕೂಡ ಮುಂದಿನ ದಿನಗಳಲ್ಲಿ ಪ್ರಮುಖ ಆಗಲಿದೆ. ಟ್ರಂಪ್ ನಿಲುವು ಈಗಾಗಲೇ ಷೇರು ಮಾರುಕಟ್ಟೆಯ ಮೇಲೆ ಪ್ರಭಾವ ಬೀರಿದೆ. ಎಸ್‌ಬಿಐ ನಿರೀಕ್ಷೆಯಂತೆ ಭಾರತದ ಮಾರುಕಟ್ಟೆ ಪಾಲು ಶೇ. ೩.೫ರಷ್ಟು ಕಡಿಮೆಯಾಗಬಹುದು ಎಂದಿದೆ. ಹೊಸ ತೆರಿಗೆ ನೀತಿ ಜಾರಿಗೆ ಬರುವ ಮುನ್ನ ಭಾರತ ಶೇ. ೧೭ರಷ್ಟು ತೆರಿಗೆ ವಿಧಿಸುತ್ತಿದ್ದರೆ, ಅಮೆರಿಕ ಶೇ. ೩.೩ ಮಾತ್ರ ತೆರಿಗೆ ವಿಧಿಸಿತ್ತು. ಇದು ಒಂದು ದಶಕದ ಕಾಲ ಜಾರಿಯಲ್ಲಿತ್ತು. ಟ್ರಂಪ್ ಹೇಳಿಕೆ ನೀಡಿದ ಕೂಡಲೇ ಭಾರತ ೮೫೦೦ ವಸ್ತುಗಳ ಮೇಲಿದ್ದ ತೆರಿಗೆ ಭಾರವನ್ನು ಕಡಿಮೆ ಮಾಡಿದೆ. ಅದರಲ್ಲಿ ದುಬಾರಿ ಮೋಟಾರ್ ಬೈಕ್ ಕೂಡ ಸೇರಿದೆ. ಆದರೆ ಅದಕ್ಕೆ ಟ್ರಂಪ್ ಮಣಿದಿಲ್ಲ.
ನಿಜವಾಗಿ ಟ್ರಂಪ್ ಕಣ್ಣು ಬಿದ್ದಿರುವುದು ಚೀನಾ ದೇಶದ ವಸ್ತುಗಳ ಮೇಲೆ. ಅದಕ್ಕಾಗಿ ಚೀನಾ ವಸ್ತುಗಳ ಮೇಲೆ ಹೆಚ್ಚಿನ ತೆರಿಗೆ ವಿಧಿಸಿದ್ದಾರೆ. ಇಸ್ರೇಲ್ ವಸ್ತುಗಳಿಗೂ ಯಾವುದೇ ರಿಯಾಯಿತಿ ತೋರಿಸಿಲ್ಲ. ಇಸ್ರೇಲ್ ಆಗಲೇ ಅಮೆರಿಕದಿಂದ ಬರುವ ಯಾವ ವಸ್ತುಗಳಿಗೂ ತೆರಿಗೆ ಇಲ್ಲ ಎಂದು ಘೋಷಿಸಿಬಿಟ್ಟಿದೆ. ಟ್ರಂಪ್ ಚುನಾವಣೆ ಕಾಲದಲ್ಲಿ ನೀಡಿದ್ದ ಭರವಸೆಯನ್ನು ಈಗ ಕಾರ್ಯರೂಪಕ್ಕೆ ತಂದಿದ್ದಾರೆ. ಅಮೆರಿಕ ಮೊದಲು ಎಂಬ ಘೋಷಣೆಗೆ ಅನುಗುಣವಾಗಿ ಈ ಕ್ರಮ ಜಾರಿಗೆ ಬಂದಿದೆ. ಇದರಿಂದ ಜಾಗತಿಕ ಮಟ್ಟದಲ್ಲಿ ವ್ಯಾಪಾರ-ವ್ಯವಹಾರ ಬದಲಾವಣೆ ಕಾಣಲಿದೆ. ಅಕ್ರಮ ವಲಸಿಗರನ್ನು ಹೊರ ಹಾಕುವ ಕೆಲಸದ ನಂತರ ಟ್ರಂಪ್ ಕೈಗೊಂಡ ತೀರ್ಮಾನಗಳಲ್ಲಿ ಇದು ಹಲವು ದೇಶಗಳ ಆರ್ಥಿಕ ಪರಿಸ್ಥಿತಿಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸುವುದಂತೂ ನಿಶ್ಚಿತ.
ವಾಸ್ತವವಾಗಿ ಟ್ರಂಪ್ ಬಹುದೊಡ್ಡ ಜೂಜಾಟಕ್ಕೆ ಕೈಹಾಕಿದ್ದಾರೆ. ಅವರ ತೆರಿಗೆ ನೀತಿ ಕೇವಲ ಜಾಗತಿಕ ವ್ಯಾಪಾರ ಕ್ಷೇತ್ರದ ಮೇಲೆ ಮಾತ್ರ ಪರಿಣಾಮ ಬೀರುವುದಿಲ್ಲ. ಅದರ ಜೊತೆಗೆ ರಾಜಕೀಯ ಮತ್ತು ರಾಜತಾಂತ್ರಿಕ ಸಮೀಕರಣವನ್ನೂ ಬದಲಿಸಬಹುದು. ಚೀನಾಕ್ಕೆ ಅತಿಹೆಚ್ಚು ತೆರಿಗೆ ವಿಧಿಸಿರುವ ಅವರು, ರಷ್ಯಾಕ್ಕೆ ಯಾವುದೇ ತೆರಿಗೆ ವಿಧಿಸಿಲ್ಲ. ಚೀನಾವನ್ನು ಎದುರಿಸಲು ಅವರು ರಷ್ಯಾದ ಜೊತೆ ಕೈಜೋಡಿಸುವ ಸನ್ನಾಹದಲ್ಲಿದ್ದಾರೆ. ಆದರೆ ಉಕ್ರೇನ್ ವಿಷಯದಲ್ಲಿ ರಷ್ಯಾಕ್ಕೆ ಎಚ್ಚರಿಕೆಯನ್ನೂ ನೀಡುತ್ತಿದ್ದಾರೆ. ಚೀನಾವನ್ನು ಎದುರಿಸಲು ರಷ್ಯಾದ ಜೊತೆಗೆ ಅವರಿಗೆ ಭಾರತದ ನೆರವೂ ಬೇಕು. ಆದರೆ ದುಬಾರಿ ತೆರಿಗೆ ಮೂಲಕ ಭಾರತವನ್ನೂ ಕೆಣಕಿದ್ದಾರೆ. ಇನ್ನೊಂದೆಡೆ, ಅಮೆರಿಕದಲ್ಲಿನ್ನು ಆಮದು ವಸ್ತುಗಳು ದುಬಾರಿಯಾಗುತ್ತವೆ. ಅದರ ಭಾರ ಅಮೆರಿಕನ್ನರ ಮೇಲೆ ಬೀಳುತ್ತದೆ. ಸ್ಥಳೀಯ ಉತ್ಪಾದನೆ ಹೆಚ್ಚಿಸಲು ಹೀಗೆ ಮಾಡಿದ್ದೇನೆಂದು ಟ್ರಂಪ್ ಹೇಳಿದರೂ, ತಕ್ಷಣ ಸ್ಥಳೀಯ ಉತ್ಪಾದನೆ ಹೆಚ್ಚುವುದಿಲ್ಲ. ಹೀಗಾಗಿ ಅಮೆರಿಕದ ಜನರ ಕಿಸೆ ಸುಡಲಿದೆ. ಅದು ಟ್ರಂಪ್‌ರ ಜನಪ್ರಿಯತೆ ಮತ್ತು ಅಮೆರಿಕದ ಆರ್ಥಿಕತೆಯ ಮೇಲೇನು ಪರಿಣಾಮ ಬೀರಲಿದೆ ಎಂಬುದಕ್ಕೆ ಕಾಲವೇ ಉತ್ತರ ಹೇಳಬೇಕು.