ಗದಗ: ಹುಲಕೋಟಿಯ ಹುಲಿ ಎಂದೇ ಖ್ಯಾತರಾಗಿದ್ದ ಸಹಕಾರಿ ರಂಗದ ಭೀಷ್ಮ ದಿ.ಕೆ.ಎಚ್. ಪಾಟೀಲ ಜನ್ಮಶತಮಾನೋತ್ಸವ ಅಂಗವಾಗಿ ಕಾಟನ್ ಸೇಲ್ಸ್ ಸೊಸೈಟಿಯ ನವೀಕೃತ ಕಟ್ಟಡವನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾನುವಾರ ಲೋಕಾರ್ಪಣೆಗೊಳಿಸಿದರು.
ಸುಮಾರು ೫.೫೦ ಕೋಟಿ ರೂ. ವೆಚ್ಚದಲ್ಲಿ ೨೩೫*೭೦ ವಿಸ್ತೀರ್ಣದಲ್ಲಿ ನಿರ್ಮಾಣವಾಗಿರುವ ಕಟ್ಟಡದಲ್ಲಿ ದಿ.ಕೆ.ಎಚ್. ಪಾಟೀಲರ ಮ್ಯೂಸಿಯಂ ಸ್ಥಾಪಿಸಲಾಗಿದೆ. ಮ್ಯೂಸಿಯಂನಲ್ಲಿ ದಿ.ಕೆ. ಎಚ್.ಪಾಟೀಲರು ರಾಜಕೀಯ ಪ್ರಾರಂಭಿಸಿದಾಗಿನಿಂದ ಅವರ ಕೊನೆಗಾಲದವರೆಗೆ ವಿವಿಧ ಗಣ್ಯರೊಂದಿಗೆ ಇರುವ ಭಾವಚಿತ್ರಗಳು, ಅವರು ಕೈಗೊಂಡಿದ್ದ ಅಭಿವೃದ್ಧಿ ಕಾಮಗಾರಿಗಳ ವಿವರಗಳು, ಸಹಕಾರಿ ರಂಗದಲ್ಲಿ ಅವರು ಕೈಗೊಂಡ ಸುಧಾರಣೆಗಳು, ಅವರ ಕಂಚಿನ ಪುತ್ಥಳಿಯನ್ನು ಕಾಣಬಹುದಾಗಿದೆ. ಅಲ್ಲದೆ, ಇದೇ ಕಟ್ಟಡದಲ್ಲಿ ಹತ್ತಿ ಅರಳಿ ಟೆಂಡರ್ಗೆ ಆಗಮಿಸುವ ರೈತರಿಗೆ ತಂಗಲು ವಿಶೇಷ ಕೊಠಡಿಗಳು, ರೈತರಿಗೆ ವಿವಿಧ ರೀತಿಯ ತರಬೇತಿ ನೀಡಲು ನೆನಪಿನಂಗಳದಲ್ಲಿ ಕೆ.ಎಚ್. ಪಾಟೀಲ ಸಭಾಭವನ ನಿರ್ಮಾಣ ಮಾಡಲಾಗಿದೆ.
`ಮ್ಯೂಸಿಯಂ’ನಲ್ಲಿ ಇರಿಸಲಾಗಿದ್ದ ದಿ.ಕೆ.ಎಚ್. ಪಾಟೀಲ ಅವರ ಅಪರೂಪದ ಚಿತ್ರಗಳನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವೀಕ್ಷಿಸಿದರು. ಸಚಿವರಾದ ಎಚ್.ಕೆ ಪಾಟೀಲ ವಿವರಣೆ ನೀಡಿದರು.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಸಚಿವ ಎಚ್.ಕೆ. ಪಾಟೀಲ, ವಿ.ಪ.ಸಭಾಪತಿ ಬಸವರಾಜ ಹೊರಟ್ಟಿ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಮತ್ತು ಲೋಕಶಿಕ್ಷಣ ಟ್ರಸ್ಟ್ನ ಧರ್ಮದರ್ಶಿ ಯು.ಬಿ. ವೆಂಕಟೇಶ ಇದ್ದರು.