ಶಿವಮೊಗ್ಗ: ಮಲೆನಾಡಿನಲ್ಲಿ ಕಳೆದ ೩-೪ ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು ಗಾಜನೂರಿನ ತುಂಗಾ ಜಲಾಶಯ ಭರ್ತಿಯಾಗಿದ್ದು, ನೀರಿನ ಸಂಗ್ರಹ ೫೮೮.೨೪ ಮೀಟರ್ ಗರಿಷ್ಠ ಮಟ್ಟ ತಲುಪಿದ ಹಿನ್ನೆಲೆಯಲ್ಲಿ ಭಾನುವಾರ ಬೆಳಿಗ್ಗೆಯಿಂದ ಡ್ಯಾಂನಿಂದ ೧ ಸಾವಿರ ಕ್ಯೂಸೆಕ್ ನೀರನ್ನು ಪವರ್ ಹೌಸ್ ಮೂಲಕ ನದಿಗೆ ಹೊರ ಬಿಡಲಾಗುತ್ತಿದೆ. ಇದರಿಂದ ತುಂಗಾ ನದಿಯ ನೀರಿನ ಮಟ್ಟ ಏರುತ್ತಿದೆ.
ಸದ್ಯ ಡ್ಯಾಂನ ಒಳಹರಿವು ೫ ಸಾವಿರ ಕ್ಯೂಸೆಕ್ ಇದೆ. ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ, ಒಳಹರಿವಿನ ಪ್ರಮಾಣದಲ್ಲಿ ಏರಿಕೆ ಕಂಡುಬರುತ್ತಿದೆ ಎಂದು ಡ್ಯಾಂ ವ್ಯಾಪ್ತಿಯ ಎಂಜಿನಿಯರ್ ತಿಪ್ಪನಾಯ್ಕ್ ಮಾಹಿತಿ ನೀಡಿದ್ದಾರೆ.
ತುಂಗಾ ಜಲಾಶಯವು ೩.೨೪ ಟಿಎಂಸಿ ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿದೆ. ಪ್ರತಿ ಮಳೆ ಗಾಲದ ವೇಳೆ, ಶಿವಮೊಗ್ಗ ಜಿಲ್ಲೆಯಲ್ಲಿ ಮೊದಲಿಗೆ ಭರ್ತಿಯಾಗುವ ಜಲಾಶಯ ಇದಾಗಿದೆ.
ಇನ್ನೊಂದೆಡೆ ರಾಜ್ಯದ ಪ್ರಮುಖ ಜಲವಿದ್ಯುತ್ ಉತ್ಪಾದನಾ ಕೇಂದ್ರವಾದ ಲಿಂಗನಮಕ್ಕಿ ಜಲಾಶ ಯದ ಒಳಹರಿವಿನಲ್ಲಿಯೂ ಏರಿಕೆ ಕಂಡುಬಂದಿದ್ದು ಭಾನುವಾರದ ಬೆಳಿಗಿನ ಮಾಹಿತಿ ಪ್ರಕಾರ ಡ್ಯಾಂನ ಒಳಹರಿವು ೧೦,೯೫೪ ಕ್ಯೂಸೆಕ್ ಇದ್ದು, ಡ್ಯಾಂನ ನೀರಿನ ಮಟ್ಟ ೧,೭೬೪ (ಗರಿಷ್ಠ ಮಟ್ಟ: ೧೮೧೯) ಅಡಿಯಿದೆ.