ಹಾವೇರಿ: ಅಮೆರಿಕ ಅಧ್ಯಕ್ಷ ಟ್ರಂಪ್ ಹೋಟೆಲ್ ರೆಂಟೆಲ್ ಎಂಬ ಸಾಮಾಜಿಕ ಜಾಲತಾಣದಲ್ಲಿ ಬಂದ ಜಾಹೀರಾತು ಶೀರ್ಷಿಕೆ(AI) ನೋಡಿ ಜಿಲ್ಲೆಯ ವಕೀಲರೊಬ್ಬರು ಸುಮಾರು 6 ಲಕ್ಷ ರೂ. ಕಳೆದುಕೊಂಡಿರುವ ಘಟನೆ ನಡೆದಿದೆ.
ಈ ಕುರಿತು ಇಲ್ಲಿನ ಸೈಬರ್ ಪೊಲೀಸ್ ಠಾಣೆಯಲ್ಲಿ ಇತ್ತೀಚಿಗೆ ವಕೀಲರೊಬ್ಬರು ದೂರು ದಾಖಲಿಸಿದ್ದಾರೆ. ಜನವರಿ 25ರಿಂದ ಏಪ್ರಿಲ್ 4ರವರೆಗಿನ ಅವಧಿಯಲ್ಲಿ ಯೂಟ್ಯೂಬ್ ನೋಡುತ್ತಿದ್ದಾಗ ಟ್ರಂಪ್ ಹೋಟೆಲ್ ರೆಂಟೆಲ್ ಎಂಬ ದುಪ್ಪಟ್ಟು ಹಣ ಮಾಡುವ ಶೀರ್ಷಿಕೆಯಿಂದ ಜಾಹೀರಾತು ಬಂದಿದ್ದು ಗಮನಿಸಿ ಯೂಜರ್ ಐಡಿ, ಪಾಸ್ ವರ್ಡ್ ಕ್ರಿಯೇಟ್ ಮಾಡಿ ಲಾಗಿನ್ ಆಗಿದ್ದೆ, ನನ್ನ ಅಕೌಂಟ್ ಆ್ಯಕ್ಟಿವ್ ಮಾಡಲು ಅವರು 1500 ರೂ. ರಿಜಾರ್ಜ್ ಮಾಡಲು ತಿಳಿಸಿದ್ದರು.
ಆ ಪ್ರಕಾರ ರಿಜಾರ್ಜ್ ಮಾಡಲಾಗಿತ್ತು. ಹೂಡಿಕೆ ಮಾಡಿದ್ದ ಹಣಕ್ಕೆ ಶೇ. 3ರಂತೆ ಲಾಭಾಂಶ ಕೊಡುವಂತೆ ನಂಬಿಸಿದ್ದರು. ಅದನ್ನು ನಂಬಿ ಹೆಚ್ಚಿನ ಲಾಭಾಂಶದ ಆಸೆಯಿಂದ ನನ್ನ ಹಾಗೂ ನನ್ನ ಹೆಂಡತಿಯ ಖಾತೆಯಿಂದ 5,93,240 ರೂ., ಹಣ ಹೂಡಿಕೆ ಮಾಡಲಾಗಿತ್ತು. ಆದರೆ, ಲಾಭಾಂಶ ನೀಡದೆ ಮೋಸ ಮಾಡಿರುವ ಕುರಿತು ವಕೀಲರೊಬ್ಬರು ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದೇ ರೀತಿ ಜಿಲ್ಲೆಯ ಹಲವರಿಗೆ ವಂಚನೆಯಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.