ಬಾಗಲಕೋಟೆ: ಮಣ್ಣು ಲಿಫ್ಟ್ ಮಾಡುವ ಟಿಪ್ಪರ್‌ಗೆ ವಿದ್ಯುತ್ ತಂತಿ ತಲುಗಿ ಚಾಲಕ ಮೃತಪಟ್ಟಿರುವ ಘಟನೆ ನವನಗರ ಮೂರನೇ ಯೂನಿಟ್ ಕಾಮಗಾರಿ ಸ್ಥಳದಲ್ಲಿ ನಡೆದಿದೆ.
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ತಂಗಡಗಿ ಗ್ರಾಮದ ರೇವಣಸಿದ್ದಪ್ಪ ಗಂಜಿಹಾಳ(೩೪) ಮೃತ ದುರ್ದೈವಿ. ರೋಟರಿ ಸರ್ಕಲ್ ಬಳಿ ನವನಗರದ ಮೂರನೇ ಯುನಿಟ್ ನಿರ್ಮಾಣ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಘಟನೆ ನಡೆದಿದೆ. ನಿವೇಶನದಲ್ಲಿ ಮಣ್ಣು ಹಾಕಿದ ಚಾಲಕ ಟಿಪ್ಪರ್‌ನ ಡಂಪರ್ ಕೆಳಗಿಳಿಸದೇ ಮೇಲೆತ್ತಿ ವಾಹನ ಚಲಾಯಿಸಿದ್ದು ಅವಘಡಕ್ಕೆ ಕಾರಣವಾಗಿದೆ. ಡಂಪರ್‌ಗೆ ವಿದ್ಯುತ್ ತಂತಿ ತಗುಲಿ ಚಾಲಕನಿಗೆ ಆಘಾತವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಈ ಮಧ್ಯೆ ಶಾರ್ಟ್ ಸರ್ಕ್ಯೂಟ್‌ನಿಂದ ಟಿಪ್ಪರ್ ಅರ್ಧದಷ್ಟು ಬೆಂಕಿಗಾಹುತಿಯಾಗಿದೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.