ಜೋಗನಹಕ್ಕಲು ಜಲಪಾತ: ಕೊಚ್ಚಿ ಹೋದ ಯುವಕನಿಗಾಗಿ NDRF ತಂಡದಿಂದ ಶೋಧ

ಕಾರವಾರ: ಶಿರಸಿ ತಾಲೂಕಿನ ಮತ್ತಿಘಟ್ಟ ಸಮೀಪದ ಜೋಗನಹಕ್ಕಲು ಜಲಪಾತದಲ್ಲಿ ನಾಲ್ಕು ದಿನಗಳ ಹಿಂದೆ ಕಾಣೆಯಾಗಿದ್ದ ಯುವಕ ಪವನ್ ಗಣಪತಿ ಜೋಗಿ (24) ಅವರ ಶೋಧ ಕಾರ್ಯಕ್ಕಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ತಂಡವನ್ನು ರವಾನಿಸಲಾಗಿದೆ.
ಸೋಮನಳ್ಳಿ ಗ್ರಾಮದ ಉಂಬಳೆ ಕೊಪ್ಪದವರಾದ ಪವನ್, ಭಾನುವಾರ ತನ್ನ ಸ್ನೇಹಿತ ವಾಸುದೇವ್ ಜೊತೆ ಜೋಗನಹಕ್ಕಲು ಜಲಪಾತ ವೀಕ್ಷಣೆಗೆ ಹೋಗಿದ್ದರು. ಜಲಪಾತದ ಸಮೀಪ ರಭಸವಾಗಿ ಹರಿಯುತ್ತಿದ್ದ ಹಳ್ಳವನ್ನು ದಾಟುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿ ಕಣ್ಮರೆಯಾಗಿದ್ದರು.
ಕಳೆದ ನಾಲ್ಕು ದಿನಗಳಿಂದ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದರು. ಆದರೆ, ಜಲಪಾತದಲ್ಲಿ ಹೆಚ್ಚಿನ ಪ್ರಮಾಣದ ನೀರು ಹರಿಯುತ್ತಿರುವುದರಿಂದ ಶೋಧ ಕಾರ್ಯಕ್ಕೆ ಅಡ್ಡಿಯಾಗಿತ್ತು. ಈ ಹಿನ್ನೆಲೆಯಲ್ಲಿ NDRF ತಂಡಕ್ಕೆ ಮನವಿ ಮಾಡಲಾಗಿತ್ತು.
ಇದೀಗ, NDRF ತಂಡದ 28 ಸದಸ್ಯರು ಸ್ಥಳಕ್ಕೆ ಆಗಮಿಸಿದ್ದು, ಯುವಕನ ಶೋಧ ಕಾರ್ಯವನ್ನು ಮುಂದುವರೆಸಿದ್ದಾರೆ.