ದಾವಣಗೆರೆ: ಲೋಕಸಭಾ ಚುನಾವಣೆಯಲ್ಲಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಅವರು ಹಣ ಪಡೆದು ಕಾಂಗ್ರೆಸ್ ಅಭ್ಯರ್ಥಿ ಪರ ಕೆಲಸ ಮಾಡಿದ್ದಾರೆ ಎಂದು ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜು ಆರೋಪ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಂ.ಪಿ. ರೇಣುಕಾಚಾರ್ಯ ಅವರು ಹಣ ಪಡೆದ ವಿಚಾರದಲ್ಲಿ ದಾಖಲೆ ಸಮೇತ ಬಹಿರಂಗ ಪಡಿಸಲು ಸಿದ್ದನಿದ್ದೇನೆ. ಯಾವಾಗ, ಯಾವ ಸ್ಥಳದಲ್ಲಿ ಹಣ ಪಡೆದರು ಎಂದು ನನಗೆ ಗೊತ್ತಿದೆ ಎಂದು ಹೇಳಿದರು. ಲೋಕಸಭಾ ಚುನಾವಣೆಯಲ್ಲಿ ದಾವಣಗೆರೆ ಜಿಲ್ಲೆಗೆ ಬಿಜೆಪಿ ಅಭ್ಯರ್ತಿ ಘೋಷಣೆಯಾದ ಬಳಿಕ ಎಂ.ಪಿ. ರೇಣುಕಾಚಾರ್ಯ ಕಾಂಗ್ರೆಸ್ ಬೆಂಬಲಿಸಲು ನಿರ್ಧರಿಸಿದರು. ಆ ಮೂಲಕ ಪಕ್ಷ ನಿಷ್ಠೆದ ಮರೆತು ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಕೆಲಸ ಮಾಡಿದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ದಾಖಲೆಗಳಿವೆ. ಸಮಯ ಬಂದಾಗ ಬಹಿರಂಗ ಪಡಿಸುವೆ ಎಂದು ತಿಳಿಸಿದರು.
ವಿಧಾನಸಭೆಯಲ್ಲಿ ಸೋಲು ಕಂಡ ನಂತರ ಎಂ.ಪಿ. ರೇಣುಕಾಚಾರ್ಯ ಬಿಜೆಪಿ ತೊರೆದು ಕಾಂಗ್ರೆಸ್ ಸೇರಲು ಮುಂದಾಗಿದ್ದರು. ಈ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಭೇಟಿ ಮಾಡಿದ್ದರು. ಅಷ್ಟೆ ಅಲ್ಲದೇ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರ ಮನೆ ಬಾಗಿಲಿಗೂ ಬಂದಿದ್ದರು. ನಂತರ ಬಿ.ವೈ. ವಿಜಯೇಂದ್ರ ಅವರು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾದ ಬಳಿಕ ಅವರ ನಿರ್ಧಾರ ಬದಲಿಸಿದರು ಎಂದರು.