ಚಿಕ್ಕಮಗಳೂರಿನಲ್ಲಿ ಧಾರಾಕಾರ ಮಳೆ

ಚಿಕ್ಕಮಗಳೂರು: ಪೂರ್ವ ಮುಂಗಾರು ಮಳೆ ಬಿಟ್ಟು ಬಿಡದೇ ನಿರಂತರವಾಗಿ ಅಬ್ಬರಿಸುತ್ತಿದ್ದು, ಜಿಲ್ಲೆಯ ಮಲೆನಾಡು ಹಾಗೂ ಬಯಲು ಭಾಗದಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ.
ಕಳೆದ ರಾತ್ರಿಯಿಂದಲೇ ಜೋರು ಮಳೆ ಆರಂಭವಾಗಿದ್ದು, ಎಡಬಿಡದೆ ಸುರಿಯುತ್ತಿದೆ. ಕುದುರೆಮುಖ, ಕಳಸ, ಶೃಂಗೇರಿ, ಕೆರೆಕಟ್ಟೆ, ಬಾಳೆಹೊನ್ನೂರು, ಜಯಪುರ, ಕೊಪ್ಪ, ಕೊಟ್ಟಿಗೆಹಾರ, ಬಣಕಲ್‌, ಮೂಡಿಗೆರೆ, ಆಲ್ಲೂರು, ಎನ್.ಆರ್.ಪುರ, ಚಿಕ್ಕಮಗಳೂರು ನಗರ, ಮುಳ್ಳಯ್ಯನಗಿರಿ, ಬಾಬಾಬಡುನ್‌ಗಿರಿ, ಅತ್ತಿಗುಂಡಿ, ಕೆಮ್ಮಣ್ಣುಗುಂಡಿ, ಕಡೂರು, ತರೀಕೆರೆ, ಲಿಂಗದಹಳ್ಳಿ ಸುತ್ತಮುತ್ತ ಮಳೆ ಸುರಿಯುತ್ತಿದೆ.

ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ ಪ್ರದೇಶದಲ್ಲಿ ನಿನ್ನೆ ರಾತ್ರಿಯಿಂದ ಭಾರೀ ಮಳೆಯಾಗುತ್ತಿದೆ. ಕಳೆದ ರಾತ್ರಿಯಿಂದ ಇಂದು ಬೆಳಗ್ಗೆವರೆಗೂ ಮೂರು ಇಂಚು ಮಳೆಯಾಗಿದೆ. ತಾಲೂಕಿನ ಚಾರ್ಮಾಡಿ ಘಾಟ್ ತಪ್ಪಲು, ಕೊಟ್ಟಿಗೆಹಾರ, ಬಾಳೂರು, ಬಣಕಲ್, ದೇವರಮನೆಗಳಲ್ಲಿ ಭಾರೀ ಮಳೆಯಾಗಿದೆ. ಇಂದು ಕೂಡ ಮೋಡ ಕವಿದ ವಾತಾವರಣವಿದ್ದು ಧಾರಾಕಾರ ಮಳೆಯಗಲಿದೆ ಅಂತ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮಳೆ ಹೆಚ್ಚಾಗಿದ್ದ ಕಾರಣ ಚಾರ್ಮಾಡಿ ಘಾಟ್ ಪ್ರದೇಶದಲ್ಲಿ ವಾಹನ ಸವಾರರು ಪರದಾಡುವಂತಾಯಿತು.

ಚಿಕ್ಕಮಗಳೂರು ನಗರದಲ್ಲಿ ನಿನ್ನೆ ರಾತ್ರಿಯಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು ಜನ ಜೀವನ ಅಸ್ತವ್ಯಸ್ತಗೊಂಡಿದೆ.ಹವಾಮಾನ ಇಲಾಖೆ ವರದಿಯ ಮುನ್ಸೂಚನೆಯ ಪ್ರಕಾರ, ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ರಾಜ್ಯಾದ್ಯಂತ ಮುಂದಿನ 3 ದಿನಗಳ ಕಾಲ ಗಾಳಿ ಸಹಿತ ಭಾರೀ ಮಳೆಯಾಗಲಿದೆ.

ಅದರಲ್ಲೂ ನಾಳೆ ಬುಧವಾರ (ಮೇ 21) ಚಂಡಮಾರುತವಾಗಿ ಪರಿವರ್ತನೆಯಾಗುವ ಸಾಧ್ಯತೆ ಇದೆ. ಸೈಕ್ಲೋನ್ ಪ್ರಭಾವದಿಂದ ಚಿಕ್ಕಮಗಳೂರಿನಲ್ಲಿ ಮೇ 21ರಿಂದ ಮುಂದಿನ 2 ದಿನ ಭಾರಿ ಮಳೆ ಸುರಿಯುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ರೆಡ್ ಅಲರ್ಟ್ ಕೊಟ್ಟಿದೆ.