ಚಾಮರಾಜನಗರ ಡಿಸಿ‌ ಕಚೇರಿಗೆ ಬಾಂಬ್ ಬೆದರಿಕೆ ಸಂದೇಶ

ಚಾಮರಾಜನಗರ: ಚಾಮರಾಜನಗರ ಜಿಲ್ಲಾಡಳಿತ ಭವನವನ್ನು ಸ್ಫೋಟಿಸುವುದಾಗಿ ಅಪರಿಚಿತನಿಂದ ಇ-ಮೇಲ್ ಸಂದೇಶವೊಂದು ಜಿಲ್ಲಾಧಿಕಾರಿಗಳ ಖಾತೆಗೆ ಬಂದಿದ್ದು ಆತಂಕ ಸೃಷ್ಟಿಯಾಗಿದೆ.
ಬೆಳಗ್ಗಿನ ಜಾವ 2.40ರ ಸುಮಾರಿನಲ್ಲಿ ಮೇಲ್ ಬಂದಿದ್ದು, ಮಧ್ಯಾಹ್ನ 3 ಗಂಟೆಯೊಳಗೆ ಜಿಲ್ಲಾಡಳಿತ ಭವನವನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಲಾಗಿದೆ.
ಇ-ಮೇಲ್‌ನಲ್ಲಿ ಬಾಂಬ್ ಬೆದರಿಕೆ ಸಂದೇಶ ಬಂದಿರುವುದು ಬೆಳಗ್ಗೆ 11.30ರ ಸಮಯದಲ್ಲಿ ಅಧಿಕಾರಿಗಳ ಗಮನಕ್ಕೆ ಬಂದಿದ್ದು, ಕೂಡಲೇ ಜಿಲ್ಲಾಡಳಿತ ಭವನದಲ್ಲಿದ್ದ ಇತರೆ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ, ಸಾರ್ವಜನಿಕರನ್ನು ಕಚೇರಿಗಳಿಂದ ಹೊರಗೆ ಕಳುಹಿಸಲಾಗಿದೆ.
ವಿಷಯ ತಿಳಿದು ಸ್ಥಳಕ್ಕೆ‌ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ. ಕವಿತಾ ಹಾಗೂ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಭವನದ ಪರಿಶೀಲನೆ ನಡೆಸುತ್ತಿದ್ದಾರೆ. ಜಿಲ್ಲಾಡಳಿತ ‌ಭವನದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಸಂದೇಶದಲ್ಲಿ ತಮಿಳುನಾಡಿನ ಬಾಂಬ್ ಬ್ಲಾಸ್ ಪ್ರಕರಣಗಳನ್ನು ಉಲ್ಲೇಖಿಸಿ ಮೇಲ್ ಸಂದೇಶ ರವಾನೆ ಮಾಡಲಾಗಿದ್ದು ಡಿಎಂಕೆ ನಾಯಕರ ಹೆಸರು ಉಲ್ಲೇಖಿಸಿ ಕೊನೆಯಲ್ಲಿ ಅಲ್ಲಾಹು ಅಕ್ಟ‌ರ್ ಎಂದು ಬರೆಯಲಾಗಿದೆ. ಇಂದು ಮಧ್ಯಾಹ್ನ 3ಗಂಟೆ ವೇಳೆಗೆ ಪೈಪ್‌ಗಳಲ್ಲಿ ಅಡಗಿಸಿಟ್ಟಿರುವ ಬಾಂಬ್‌ಗಳು ಸ್ಫೋಟಗೊಳಿಸುವುದಾಗಿ ಅಪರಿಚಿತ ಸಂದೇಶ ರವಾನೆ ಮಾಡಿದ್ದಾನೆ.