ಗೋದಾಮು ವ್ಯವಸ್ಥಾಪಕರು, ಹಾಸ್ಟೆಲ್ ವಾರ್ಡನ್ ಅಮಾನತು

ಅಮಾನತು

ಬಳ್ಳಾರಿ: ಕರ್ನಾಟಕ ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಎಚ್.ಕೃಷ್ಣ ಮತ್ತು ಸದಸ್ಯರು ನಾಲ್ಕು ದಿನಗಳ ಕಾಲ ಬಳ್ಳಾರಿಯಲ್ಲಿ ಹಲವು ಕಡೆ ಅನಿರೀಕ್ಷಿತವಾಗಿ ಭೇಟಿ ನೀಡಿ ನ್ಯೂನ್ಯತೆಗಳನ್ನು ಪತ್ತೆ ಹಚ್ಚಿ ಆಹಾರ ಉಗ್ರಾಣ ನಿಗಮ ಗೋದಾಮು ವ್ಯವಸ್ಥಾಪಕರಾದ ಫ್ರಕ್ರುದ್ದಿನ್, ಎಂ.ಸೆಲ್ವಕುಮಾರ್, ಅಲ್ಪಸಂಖ್ಯಾತ ಇಲಾಖೆ ವಸತಿ ನಿಲಯ ವಾರ್ಡನ್ ಭಾಗ್ಯರಾಜ್ ಹಾಗೂ ೧೦ ನ್ಯಾಯಬೆಲೆ ಅಂಗಡಿಗಳ ಪರವಾನಗಿಯನ್ನು ರದ್ದು ಮಾಡಿದ್ದಾರೆ.
ಈ ಬಗ್ಗೆ ಇಲ್ಲಿನ ಸರಕಾರಿ ಅತಿಥಿಗೃಹದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಡಾ.ಎಚ್.ಕೃಷ್ಣ ಬಳ್ಳಾರಿಯಲ್ಲಿ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಗಳಲ್ಲಿ ಲೋಪದೋಷಗಳು ಇರುವ ಬಗ್ಗೆ ದೂರು ಬಂದಿದ್ದವು. ನಾವು ಯಾವುದೇ ಶಿಷ್ಟಾಚಾರ, ಪ್ರವಾಸ ಪಟ್ಟಿ ನೀಡದೇ ರೈಲು, ಬಸ್‌ಗಳ ಮೂಲಕ ಬಳ್ಳಾರಿಗೆ ಆಗಮಿಸಿ ಯಾರಿಗೂ ಮಾಹಿತಿ ನೀಡದೇ ನ್ಯಾಯಬೆಲೆ ಅಂಗಡಿ, ಆಹಾರ ಇಲಾಖೆ ಪಡಿತರ ದಾಸ್ತಾನು ಇಡುವ ಗೋದಾಮು, ವಸತಿ ನಿಲಯಗಳು, ಪೆಟ್ರೋಲ್‌ಬಂಕ್, ಹೋಟೆಲ್, ಬೀದಿ ಬದಿ ಅಂಗಡಿ ಸೇರಿ ಹಲವು ಕಡೆಗಳಲ್ಲಿ ಭೇಟಿ ನೀಡಿದ್ದೇವೆ. ಬಳ್ಳಾರಿ ಜಿಲ್ಲಾ ಕೇಂದ್ರ, ಕಂಪ್ಲಿ, ಕುರುಗೋಡು, ಸಿರುಗುಪ್ಪ ತಾಲೂಕುಗಳಲ್ಲಿ ಭೇಟಿ ನೀಡಿದ ವೇಳೆ ಹಲವು ಅಚ್ಚರಿ ಸಂಗತಿಗಳು ಕಂಡು ಬಂದವು. ಸುಮಾರು ೧೫ಕ್ಕೂ ಹೆಚ್ಚು ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿದ ವೇಳೆ ಪಡಿತರ ವಿತರಣೆಯಲ್ಲಿ ಲೋಪಗಳ ಕಂಡು ಬಂದಿದ್ದು, ಪಡಿತರದಾರರಿಗಿಂತಲೂ ಅಧಿಕ ಅಕ್ಕಿ, ಗೋಧಿ ದಾಸ್ತಾನು ಇರುವುದು ಕಂಡು ಬಂದಿದ್ದರಿಂದ ೧೦ ನ್ಯಾಯಬೆಲೆ ಅಂಗಡಿಗಳ ಪರವಾನಗಿಯನ್ನು ರದ್ದು ಮಾಡಲಾಗಿದೆ ಎಂದರು. ಬಳ್ಳಾರಿಯ ಉಗ್ರಾಣ ನಿಗಮಕ್ಕೆ ಭೇಟಿ ನೀಡಿದ ವೇಳೆ ಪ್ರಸಕ್ತ ತಿಂಗಳ ಪಡಿತರ ಹಂಚಿಕೆ ಬಳಿಕವೂ ಹೆಚ್ಚುವರಿ ೧೨೫೦ಕ್ವಿಂಟಲ್ ಅಕ್ಕಿ, ಸಿರುಗುಪ್ಪ ಗೋದಾಮಿನಲ್ಲಿ ೮೧೩ ಕ್ವಿಂಟಲ್ ಅಕ್ಕಿ ಉಳಿಸಿಕೊಂಡಿದ್ದಾರೆ ಹೀಗಾಗಿ ಬಳ್ಳಾರಿ ಗೋದಾಮು ವ್ಯವಸ್ಥಾಪಕ ಫಕ್ರುದ್ದೀನ್, ಸಿರುಗುಪ್ಪ ವ್ಯವಸ್ಥಾಪಕ ಎಂ.ಸೆಲ್ವಕುಮಾರ್ ಅವರನ್ನು ಅಮಾನತು ಮಾಡಲಾಗಿದೆ. ಡಿಡಿ ಸಕೀನಾ ಅವರಿಗೂ ಶೋಕಾಸ್ ನೋಟಿಸ್ ನೀಡಲಾಗಿದೆ ಎಂದು ವಿವರಿಸಿದರು.
ನೋಟಿಸ್ ಜಾರಿ: ಸಿರುಗುಪ್ಪದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿದ ವೇಳೆ ಹಲವು ಲೋಪದೋಷ ಕಂಡು ಬಂದಿದ್ದು ಅಲ್ಲಿನ ಅಧಿಕಾರಿ ಹೇಮ್ಲಾö್ಯ ನಾಯ್ಕ್, ಅಕೌಂಟ್ ಅಧಿಕಾರಿ ಈಶ್ವರ್ ಅವರಿಗೆ ನೋಟಿಸ್ ನೀಡಲಾಗಿದೆ. ಸಾರ್ವಜನಿಕರಿಗೆ ಕುಡಿವ ನೀರು, ಶೌಚಾಲಯ, ವಾಹನಗಳಿಗೆ ಏರ್ ಸೌಲಭ್ಯ ಇಲ್ಲದ ಎರಡು ಪೆಟ್ರೋಲ್ ಬಂಕ್‌ಗಳಿಗೆ ನೋಟಿಸ್ ನೀಡಲಾಗಿದೆ ಎಂದು ವಿವರಿಸಿದರು.
ಅಸಮಾಧಾನ: ಕಳೆದ ಐದು ದಿನಗಳಿಂದ ಜಿಲ್ಲಾದ್ಯಂತ ಆಯೋಗದ ಸದಸ್ಯರು ಒಳಗೊಂಡಂತೆ ಆಹಾರ ಇಲಾಖೆ ಅಧಿಕಾರಿಗಳೊಂದಿಗೆ ಆಹಾರ ನಾಗರಿಕ ಸರಬರಾಜು ನಿಗಮದ ಸಗಟು ಗೋದಾಮುಗಳಿಗೆ ಭೇಟಿ ನೀಡಿ ತಪಾಸಣೆ ಕೈಗೊಳ್ಳಲಾಗಿದ್ದು, ಅಲ್ಲಿ ಸ್ವಚ್ಛತೆ ಕಾಯ್ದುಕೊಳ್ಳದೇ ಇರುವ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಅಧ್ಯಕ್ಷ ಎಚ್.ಕೃಷ್ಣಾ ಜಿಲ್ಲೆಯ ವಿವಿಧ ತಾಲ್ಲೂಕುಗಳ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿದಾಗ ಅಲ್ಲಿ ಯಾವುದೇ ರೀತಿಯ ಆಹಾರ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರ ಮಾಹಿತಿ ವಿವರ ಫಲಕ ಪ್ರದರ್ಶಿಸುವುದು ಕಂಡುಬಂದಿಲ್ಲ. ಗ್ರಾಹಕರಿಗೆ ನ್ಯೂನತೆ ಕಂಡುಬಂದಲ್ಲಿ ಅವರು ಯಾರನ್ನು ವಿಚಾರಿಸಬೇಕು ಎಂಬುದರ ಕುರಿತ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರ ಹೆಸರು ಮತ್ತು ಸಂಪರ್ಕ ವಿವರ ಸಹಿತ ಮಾಹಿತಿ ಪ್ರದರ್ಶಿಸಬೇಕು ಎಂದು ಸೂಚಿಸಲಾಗಿದೆ ಎಂದರು. ನ್ಯಾಯ ಬೆಲೆ ಅಂಗಡಿಗಳಲ್ಲಿಯೂ ಸಹ ಸ್ವಚ್ಚತಾ ಮರೀಚಿಕೆ ಆಗಿದೆ. ಜಾಗೃತಿ ಸಮಿತಿ ಸದಸ್ಯರ ಪಟ್ಟಿ ಹಾಗೂ ಆಹಾರ ಆಯೋಗದ ಸದಸ್ಯರ ನಾಮಫಲಕ ಅಳವಡಿಸಿಲ್ಲ. ಜಾಗೃತಿ ಸಮಿತಿ ಕೊರತೆ, ಭೌತಿಕ ಹಾಗೂ ತಾಂತ್ರಿಕ ದಾಸ್ತಾನು ವ್ಯತ್ಯಾಸ ಕಂಡುಬಂದಿದೆ. ಅದಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲಾಗಿದೆ ಎಂದು ಅಧ್ಯಕ್ಷರು ತಿಳಿಸಿದರು. ಮಂಗಳವಾರ ಹಾಗೂ ಸರ್ಕಾರಿ ರಜೆ ಹೊರತು ಪಡಿಸಿ, ನ್ಯಾಯ ಬೆಲೆ ಅಂಗಡಿ ತೆರೆದಿರಬೇಕು. ಪಡಿತರ ವಿತರಣೆ ಕಾರ್ಯ, ಪಡಿತರ ವಿತರಣೆ ಸಮರ್ಪಕವಾಗಿ ವಿತರಿಸಿರುವ ಬಗ್ಗೆ ಫಲಾನುಭವಿಗಳ ಮನೆ-ಮನೆ ಭೇಟಿ ನೀಡಿ ಖುದ್ದು ಪರಿಶೀಲನೆ ಮಾಡಲಾಗಿದೆ ಎಂದರು. ವಿವಿಧ ವಸತಿ ಶಾಲೆಯಲ್ಲಿ ಮೂಲಭೂತ ಸೌಕರ್ಯಗಳು ಇಲ್ಲ. ಗುಣಮಟ್ಟದ ಆಹಾರ ನೀಡುತ್ತಿಲ್ಲ. ಈ ಕುರಿತು ನಿಲಯ ಪಾಲಕರ ಅಮಾನತಿಗೆ ಶಿಫಾರಸ್ಸು ಮಾಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಆಹಾರ ಆಯೋಗದ ಸದಸ್ಯರಾದ ಲಿಂಗರಾಜ್ ಕೋಟೆ, ರೋಹಿಣಿ ಪ್ರಿಯ, ಮಾರುತಿ ಎಂ.ದೊಡ್ಡಲಿಂಗಣ್ಣನವರ್, ಸುಮಂತ್ ರಾವ್ ಸೇರಿದಂತೆ ಇತರರಿದ್ದರು.

ಬೀಗ ಹೊಡೆದು ಎತ್ತುವಳಿ
ಬಳ್ಳಾರಿ ನಗರದ ನ್ಯಾಯಬೆಲೆ ಅಂಗಡಿ ಸಂಖ್ಯೆ ೧೭೫ಕ್ಕೆ ಆಹಾರ ಆಯೋಗದ ಅಧ್ಯಕ್ಷರು ಭೇಟಿ ನೀಡಿದ ವೇಳೆ ಪಡಿತರದಾರರಿಗಿಂತ ೧೭ ಅಕ್ಕಿ ಮೂಟೆಗಳು(೮.೫೦ಕ್ವಿಂಟಲ್) ಹೆಚ್ಚುವರಿ ಇರುವುದು ಕಂಡು ಬಂದಿದೆ. ಇದನ್ನು ಜಪ್ತಿ ಮಾಡಿದ ಅಧಿಕಾರಿಗಳು ನ್ಯಾಯಾಬೆಲೆ ಅಂಗಡಿಗೆ ಬೀಜ ಜಡಿದಿದ್ದಾರೆ. ವಾಪಸ್ಸು ಬರುವ ವೇಳೆಗೆ ಇಲ್ಲಿನ ಬೀಗ ಮುರಿದು ೧೭ಚೀಲದ ಮೂಟೆ ಅಕ್ಕಿಯನ್ನು ಬೇರೆಡೆ ಸಾಗಿಸಲಾಗಿದ್ದು, ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಆಯೋಗದ ಅಧ್ಯಕ್ಷರು ಆಹಾರ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ವಿರುದ್ಧ ದೂರು
ಇಲ್ಲಿನ ಅವ್ಯವಸ್ಥೆ ಕುರಿತು ಜಿಲ್ಲಾಧಿಕಾರಿ ಗಮನ ಸೆಳೆದರೆ ಸರಿಯಾದ ಸಹಕಾರ ಮಾಡುತ್ತಿಲ್ಲ. ಈ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಗಮನ ಸೆಳೆದಿದ್ದೇನೆ. ಆಹಾರ ಖಾತೆ ಮಂತ್ರಿ ಮುನಿಯಪ್ಪ ಅವರಿಗೂ ವಿಚಾರ ತಿಳಿಸಿದ್ದೇನೆ ಎಂದು ಜಿಲ್ಲಾಧಿಕಾರಿ ವಿರುದ್ದ ಅತೃಪ್ತಿ ವ್ಯಕ್ತಪಡಿಸಿದ ಆಹಾರ ಆಯೋಗದ ಅಧ್ಯಕ್ಷ ಎಚ್.ಕೃಷ್ಣಾ ಅವರು ಈ ಬಗ್ಗೆ ಸರಕಾರದ ಗಮನ ಸೆಳೆಯುತ್ತೇನೆ ಎಂದು ಹೇಳಿದರು.