ಗುಲಾಬಿ ಹೂ ಕೊಟ್ಟು ದುಶ್ಚಟ ಬಿಡುವಂತೆ  ಮನವಿ

ವಿಶ್ವ ತಂಬಾಕು ರಹಿತ ದಿನ ಆಚರಣೆ

ಕುಳಗೇರಿ ಕ್ರಾಸ್: ತಂಬಾಕು ಸೇವನೆಯಿಂದ ಲಕ್ಷಾಂತರ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ, ದುಶ್ಚಟಕ್ಕೆ ದಾಸರಾಗಿ ದಾರಿ ತಪ್ಪುವ ಯುವಕರನ್ನ ಸರಿ ದಾರಿಗೆ ತರುವ ಕೆಲಸ ಪೋಷಕರೇ ಮಾಡಬೇಕು ಎಂದು ಪ್ರಾಥಮಿಕ ಆರೋಗ್ಯ ಕೇಂದ್ರದ ವೈಧ್ಯಾಧಿಕಾರಿ ಡಾ.ವಾಸುದೇವರಾವ್ ಅರಕೇರಿ ಹೇಳಿದರು.

ವಿಶ್ವ ತಂಬಾಕು ರಹಿತ ದಿನದ ಅಂಗವಾಗಿ ಗ್ರಾಮದ ಬಸ್ ನಿಲ್ದಾಣದಲ್ಲಿ ಆರೋಗ್ಯ ಸಿಬ್ಬಂದಿ ಜೊತೆ ಫಿಲ್ಡಿಗಿಳಿದ ವೈದ್ಯಾಧಿಕಾರಿ ಬಸ್ ಏರಿ ತಂಬಾಕು, ಗುಟಕಾ ಸೇವಿಸುವ ಪ್ರಯಾಣ ಕರನ್ನ ಗುರುತಿಸಿ ಗುಲಾಬಿ ಹೂ ಕೊಟ್ಟು ಮನವಿ ಮಾಡಿದರು. ತಂಬಾಕು ಸೇವನೆಯಿಂದ ಕ್ಯಾನ್ಸರ್ ಸೇರಿದಂತೆ ಬೇರೆ ಬೇರೆ ಕಾಯಿಲೆಗಳು ಬರುತ್ತವೆ. ನಿಮ್ಮ ಮೇಲೆ ಬರವಸೆ ಇಟ್ಟು ನಿಮ್ಮ ಹೆಂಡರು ಮಕ್ಕಳು ಬದುಕುತ್ತಾರೆ. ಅದನ್ನ ಅರಿತುಕೊಂಡು ಇಂದಿನಿಂದ ತಂಬಾಕು ಸೇವನೆ ಬಿಡಿ ಎಂದು ಬಸ್ ಚಾಲಕರಿಗೆ ಪ್ರಯಾಣ ಕರಿಗೆ ಮನವಿ ಮಾಡಿ ಕೇಳಿಕೊಂಡರು.

ಗ್ರಾಮದ ಬಸ್ ನಿಲ್ದಾಣಕ್ಕೆ ಬರುವ ಎಲ್ಲ ಬಸ್‌ಗಳನ್ನ ಏರಿದ ಆರೋಗ್ಯ ಹಾಗೂ ಆಶಾ ಕಾರ್ಯಕರ್ತೆಯರು ತಂಬಾಕು ಸೇವಿಸುವ ಜನರಿಗೆ ಗುಲಾಬಿ ಹೂ ಕೊಡುವ ಮೂಲಕ ದುಶ್ಛಟ ಬಿಡಿ ಎಂದು ಹೇಳುತ್ತಿದ್ದರು. ಹೆದ್ದಾರಿ ಮೂಲಕ ಗ್ರಾಮದ ಬೀದಿಗಳಲ್ಲಿ ಜಾಥಾ ನಡೆಸಿ ಜನರಲ್ಲಿ ಜಾಗೃತಿ ಮೂಡಿಸಿದರು.

ಪೊಲೀಸ್ ಠಾಣೆ ಆವರಣದಲ್ಲಿ ಸಾರ್ವಜನಿಕ ಸಭೆ ನಡೆಸಿ ದುಶ್ಛಟಗಳ ಕುರಿತು ಜಾಗೃತಿ ಮೂಡಿಸಲಾಯಿತು ಬಾದಾಮಿ ಸಿಪಿಐ ಕರಿಯಪ್ಪ ಬನ್ನೆ ಮಾತನಾಡಿದರು.

ಪಿಎಸ್‌ಐ ವಿಠಲ ನಾಯಿಕ ಮಾತನಾಡಿ ದುಶ್ಚಟ ಮಾಡುವುದರಿಂದ ಅಪಘಾತಗಳು ಹೆಚ್ಚು ಸಂಭವಿಸುತ್ತವೆ. ಕೆಮಿಕಲ್ ಪದಾರ್ಥಗಳಿರುವ ಗುಟಕಾ-ಸಿಗರೇಟ್ ಸೇವನೆಯಿಂದ ಕ್ಯಾನ್ಸರ್ ರೋಗ ಗ್ಯಾರಂಟಿ. ಆದರೆ ಆ ರೋಗದಿಂದ ಹೊರಗೆ ಬರೋದು ಬಹಳ ಕಷ್ಟ ಅದನ್ನ ಅರಿತುಕೊಳ್ಳಿ. ಕೋಟಿ ಕೋಟಿ ದುಡ್ಡು ಪಡೆದು ಪ್ರಚಾರ ಮಾಡುವ ನಟಿ-ನಟಿಯರು ಅವುಗಳನ್ನ ಸೇವಿಸೋದಿಲ್ಲ. ಅವುಗಳನ್ನ ತಯಾರಿಸುವ ಮಾಲಿಕ ಅವುಗಳನ್ನ ಸೇವಿಸುವುದಿಲ್ಲ ಇದನ್ನ ಅರ್ಥ ಮಾಡಿಕೊಳ್ಳಿ ಎಂದು ತಿಳಿ ಹೇಳಿದರು.

ಆರೋಗ್ಯ ಸಿಬ್ಬಂದಿಗಳಾದ ವಿ ಐ ಅಂಗಡಿ, ಬಿ ಎಸ್ ಎತ್ತಿನಮನಿ, ಆನಂದ ಕಮತಗಿ, ಶಯಲಾ ಬನ್ನೂರ, ಎಸ್ ಎಫ್ ಯಕ್ಕಪ್ಪನವರ, ಅಕ್ಷತಾ ಬಡಿಗೇರ, ಭೀಮಸಿ ಬಂದಕೇರಿ, ಧರಿಯಪ್ಪ ನಾಯ್ಕರ್, ಜ್ಯೋತಿ ಸೋಮಾಪೂರ ಸೇರಿದಂತೆ ಆಶಾ ಕಾರ್ಯಕರ್ತೆಯರು ಇದ್ದರು.