ಬಳ್ಳಾರಿ: ನಗರದ ರಾಣಿತೋಟದ ಕಾಟನ್ ಮಿಲ್ ಬಳಿ ಗುರುವಾರ ತಡರಾತ್ರಿ ವ್ಯಕ್ತಿಯೊಬ್ಬರನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆಯಾದ ವ್ಯಕ್ತಿಯ ಪತ್ನಿ ಸೇರಿ ಒಂಬತ್ತು ಆರೋಪಿಗಳು ಹಾಗೂ ಇಬ್ಬರು ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕರನ್ನು ಶನಿವಾರ ಬಂಧಿಸಲಾಗಿದೆ.
ಕೊಲೆಗೆ ಒಳಗಾಗಿದ್ದ ವೆಂಕಟೇಶನ ಪತ್ನಿ ನೀಲಾವೇಣಿ ಸೇರಿ ಆನಂದ, ಮಹಮ್ಮದ್ ಗೌಸ್, ಶಿವಶಂಕರ, ಮಹಮ್ಮದ್ ಸಾಹಿದ್, ಷಾಷವಲಿ, ಮಹಮ್ಮದ್ ಷರೀಪ್, ಮಹಮ್ಮದ್ ಆಸೀಪ್, ಮಹಮ್ಮದ್ ಸೋಹಿಲ್ ಬಂಧಿತರು. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಮೂರು ಬೈಕ್, ಐದು ಮೊಬೈಲ್, ಎರಡು ಮಚ್ಚು ಹಾಗೂ ಮೂರು ಕಟ್ಟಿಗೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಕೊಲೆಯಾದ 24 ಗಂಟೆಯೊಳಗೆ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶ್ವಸಿಯಾಗಿದ್ದಾರೆ.
ಘಟನೆ ವಿವರ: ನಗರದ ರಾಣಿತೋಟ ನಿವಾಸಿ ವೆಂಕಟೇಶ್(39) ಮೃತ. ಗುರುವಾರ ಮೃತನ ಮಗಳ ವೃತುಮತಿ ಸಮಾರಂಭದಲ್ಲಿ ಹೆಂಡತಿಯನ್ನು ಸಂಬಂಧಿಕರ ಮುಂದೆ ಶೀಲ ಶಂಕಿಸಿ ಹಾಗೂ ಅವ್ಯಾಚ ಶಬ್ಧಗಳಿಂದ ನಿಂದಿಸಿದ್ದ. ಇದರಿಂದ ಕೋಪಗೊಂಡಿದ್ದ ಪತ್ನಿ ನೀಲಾವೇಣಿ ಸಂಬಂಧಿ ಆನಂದ ಜತೆ ಸೇರಿಕೊಂಡು ಕೊಲೆಗೆ ಸಂಚು ರೂಪಿಸಿದ್ದರು. ಮಗಳ ವೃತುಮತಿ ಕಾರ್ಯಕ್ರಮದಲ್ಲಿ ಮದ್ಯ ಸೇವಿಸಿದ್ದ ವೆಂಕಟೇಶ್ ಮೇಲೆ ಆರೋಪಿಗಳು ಹಲ್ಲೆ ನಡೆಸಿ ಕೊಲೆ ಮಾಡಿದ್ದರು. ಈ ಕುರಿತು ಬ್ರೂಸ್ ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.