ಬಳ್ಳಾರಿ: ರಾಜ್ಯದ ಕರ್ನಾಟಕ ಲೋಕ ಸೇವಾ ಆಯೋಗ(ಕೆಪಿಎಸ್ಸಿ) ಇಲಾಖೆಯಲ್ಲಿ ಭ್ರಷ್ಟಚಾರ ಹಗರಣಗಳು ತುಂಬಿವೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಆರೋಪಿಸಿದರು.
ನಗರದ ಗುರುವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕೆಪಿಎಸ್ಸಿ ನೇಮಕಾತಿಯಲ್ಲಿ ವಿಳಂಬವಾಗುತ್ತಿರುವುದರಿಂದ ಪರೀಕ್ಷೆ ಬರೆದ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತಿದೆ. ಆದ್ದರಿಂದ, ಮರುಪರೀಕ್ಷೆಗೆ ಅವಕಾಶ ಒದಗಿಸಬೇಕು. ಅಲ್ಲದೆ, ಯುಪಿಎಸ್ಸಿ ಮಾದರಿಯಲ್ಲಿ ಕೆಪಿಎಸ್ಸಿ ನಡೆಯಬೇಕು ಎಂದರು.
ಮೈಸೂರು ರಾಜಮನೆತನದ ಆಸ್ತಿಯನ್ನು ಸರ್ಕಾರ ಭೂ ಸ್ವಾಧೀನ ಕಾಯ್ದೆ ಮೂಲಕ ಏಕಾಏಕಿ ಸುಗ್ರಿವಾಜ್ಞೆ ಹೊರಡಿಸಿ ಕಬಳಿಸಲು ಯತ್ನಿಸುತ್ತಿದೆ. ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಬಿಜೆಪಿಗೆ ಸೇರಿ ಸಂಸದರಾಗಿ ಆಯ್ಕೆಯಾಗಿದ್ದರಿಂದ ಕಾಂಗ್ರೆಸ್ ಸರ್ಕಾರ ಅವರ ವಿರುದ್ಧ ದ್ವೇಷ ರಾಜಕಾರಣ ಮಾಡುತ್ತಿದೆ. 2009ರಲ್ಲಿ ರಸ್ತೆ ಅಗಲೀಕರಣಕ್ಕೆ ವಶಪಡಿಸಿಕೊಂಡಿದ್ದ ಹದಿನೈದು ಎಕರೆ ಭೂಮಿಗೆ 3,400 ಕೋಟಿ ರೂ. ಟಿಡಿಆರ್ ನೀಡಲು ನ್ಯಾಯಾಲಯ ಸೂಚಿಸಿತ್ತು. ಅದರಂತೆ, ಸದ್ಯ ರಾಜಮನೆತನದ ಪ್ರಾಂಗಣದಲ್ಲಿರುವ 422 ಎಕರೆ ವಶಪಡಿಸಿಕೊಳ್ಳಲಿರುವ ಸರ್ಕಾರ ನ್ಯಾಯಯುತ ಪರಿಹಾರ ಒದಗಿಸುವುದು ಬಿಟ್ಟು ದ್ವೇಷ ರಾಜಕಾರಣ ಮಾಡುತ್ತಿದೆ ಎಂದು ಗುಡುಗಿದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸಮಿತಿಗೆ ವಾರ್ಷಿಕ ಮೂವತ್ತು ಕೋಟಿ ರೂ. ವ್ಯಯಿಸುತ್ತಿರುವುದು ಖಂಡನೀಯ. ಆ ಸಮಿತಿಯನ್ನು ಯಾವ ಮಾನದಂಡ ಮೇಲೆ ಆಯ್ಕೆ ಮಾಡಲಾಗಿದೆ. ಅಲ್ಲದೆ, ಸಾಮಾಜಿಕ ನ್ಯಾಯದ ಆಧಾರದಲ್ಲಿ ಎಲ್ಲರನ್ನೂ ನೇಮಕ ಮಾಡಿಕೊಳ್ಳಲಾಗಿದೆ ಎಂದು ಪ್ರಶ್ನಿಸಿದರು.
ಪಕ್ಷವೇ ಅಂತಿಮ: ರಾಜ್ಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಬಿಜೆಪಿ ಹೈಕಮಾಂಡ್ ಏನು ತಿರ್ಮಾನ ತೆಗೆದುಕೊಳ್ಳುತ್ತದೆ ಅದಕ್ಕೆ ಬದ್ಧನಾಗಿರುವೆ. ರಾಷ್ಟ್ರೀಯ ನಾಯಕರ ತೀರ್ಮಾನವೇ ಅಂತಿಮವಾಗಿದೆ. ರಾಮುಲು ಕೇವಲ ಒಂದು ತಾಲೂಕಿಗೆ ಸೀಮಿತವಾದ ವಕ್ತಿ ಅಲ್ಲ ರಾಜ್ಯಕ್ಕೆ ಬೇಕಾಗಿರುವ ವ್ಯಕ್ತಿಯಾಗಿದ್ದಾರೆ ಎಂದರು. ರಾಜ್ಯದಲ್ಲಿ ನಾನು ಕಟ್ಟಿದ ಬಿಎಸ್ಆರ್ ಪಕ್ಷ ಸೇರಿದಂತೆ ಪ್ರಾದೇಶಿಕ ಪಕ್ಷಗಳಿಗೆ ಮಾನ್ಯತೆಯಿಲ್ಲ. ದೇಶದಲ್ಲಿ ಡಿ ಲಿಮಿಟಿಷೇನ್ ಜಾರಿಯಾದರೆ ರಾಜ್ಯದಲ್ಲಿ 90ಕ್ಕೂ ಅಧಿಕ ವಿಧಾನಸಭಾ ಕ್ಷೇತ್ರಗಳು ಹೆಚ್ಚಾಗಲಿವೆ ಎಂದು ಹೇಳಿದರು.