ಯಾದಗಿರಿ: ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಬಸ್ ನಿಲ್ದಾಣಕ್ಕೆ ಭಾನುವಾರ ಕಲ್ಯಾಣ ಕರ್ನಾಟಕ ಸಾರಿಗೆಯ ಮುಖ್ಯ ಸಂಚಾರ ವ್ಯವಸ್ಥಾಪಕ ಸಂತೋಷಕುಮಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಶನಿವಾರ ತಡರಾತ್ರಿ ಸುರಿದ ಭಾರಿ ಮಳೆಯಿಂದ ಕೆಂಭಾವಿ ಪಟ್ಟಣದ ಬಸ್ ನಿಲ್ದಾಣದ ತುಂಬೆಲ್ಲಾ ನೀರು ನಿಂತು ಸಂಚಾರಕ್ಕೆ ಅಡೆತಡೆ ಉಂಟಾದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿದ ಅವರು, ಶಕ್ತಿ ಯೋಜನೆಯಿಂದ ಈ ಬಸ್ ನಿಲ್ದಾಣದ ಅಭಿವೃದ್ಧಿಯತ್ತ ಸಾಗುತ್ತಿದ್ದು ಹಾಗಾಗಿ ಮಳೆ ಬಂದಾಗೆಲ್ಲ ಆಗುತ್ತಿರುವ ಸಮಸ್ಯೆ ಪರಿಹಾರಕ್ಕೆ ತಕ್ಷಣವೇ ಕ್ರಮ ವಹಿಸುವುದಾಗಿ ತಿಳಿಸಿದರು.
ಇದೇ ವೇಳೆ ಶೌಚಾಲಯ ವ್ಯವಸ್ಥೆ, ಕಲಿಕೇರಿ, ತಾಳಿಕೋಟಿ, ಶಹಾಪುರ ಮಾರ್ಗದ ಬಸ್ಗಳು ಸರಿಯಾಗಿ ಓಡುತ್ತಿಲ್ಲ, ಹೊಸ ಮಾರ್ಗ ಯಾವು ಇಲ್ಲ ಎನ್ನುವುದು ಸೇರಿ ಹಲವು ದೂರುಗಳು ನಮ್ಮ ಗಮನಕ್ಕೆ ಬಂದಿದ್ದು, ಈ ಕುರಿತು ಶೀಘ್ರವೇ ಸಭೆ ಕರೆದು ಸಮಸ್ಯೆ ಪರಿಹರಿಸಲಾಗುವುದು. ಜೊತೆಗೆ ಶಕ್ತಿ ಯೋಜನೆ ನಂತರ ಹೊಸ ಮಾರ್ಗದಲ್ಲಿ ಇಲ್ಲಿಂದ ಬಸ್ ಸಂಚಾರ ಆರಂಭಿಸಿಲ್ಲ ಎನ್ನುವುದನ್ನು ಗಂಭೀರವಾಗಿ ಪರಿಗಣಿಸಿದ್ದು, ನೂತನ ಮಾರ್ಗ ಆರಂಭಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದರು.