ಕೃಷ್ಣ ನದಿಯ ಗುರ್ಜಾಪುರ ಬ್ಯಾರೇಜ್ ಗೇಟ್ ತೆರವು

ರಾಯಚೂರು: ಕೃಷ್ಣಾ ನದಿಯ ಅಚ್ಚುಕಟ್ಟು ಪ್ರದೇಶದಲ್ಲಿ ಭಾರೀ ಮಳೆಯಿಂದಾಗಿ ಜಲಾಶಯಗಳು ಬಹುತೇಕ ಭರ್ತಿಯಾಗಿದ್ದು, ಗುರ್ಜಾಪುರ ಬ್ಯಾರೇಜ್‌ನ ಗೇಟ್ ಓಪನ್ ಮಾಡಲಾಗಿದೆ. ಸದ್ಯ ಮುಂಗಾರು ಅಬ್ಬರ ಜೋರಾಗಿರುವುದರಿಂದ ಆಲಮಟ್ಟಿ, ಬಸವಸಾಗರ ಜಲಾಶಯಗಳಿಗೆ ಒಳಹರಿವು ಹೆಚ್ಚಾಗುತ್ತಿದೆ. ಹೀಗಾಗಿ ಯಾವುದೇ ಕ್ಷಣದಲ್ಲಿ ಕೃಷ್ಣಾ ನದಿಗೆ ನೀರು ಹರಿಬಿಡುವ ಸಾಧ್ಯತೆಯಿದ್ದು, ನದಿ ಪಾತ್ರದಲ್ಲಿ ಜಿಲ್ಲಾಡಳಿತ ಅಲರ್ಟ್ ಆಗಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ರಾಯಚೂರು ತಾಲೂಕಿನ ಗುರ್ಜಾಪುರ ಬ್ಯಾರೇಜ್‌ನ ಗೇಟ್‌ಗಳನ್ನ ತೆರೆಯಲಾಗುತ್ತಿದೆ. 1.5 ಟಿಎಂಸಿ ಸಾಮರ್ಥ್ಯದ ಬ್ಯಾರೇಜ್‌ನ್ನು ಆರ್‌ಟಿಪಿಎಸ್ ಶಾಖೋತ್ಪನ್ನ ವಿದ್ಯುತ್ ಕೇಂದ್ರಕ್ಕೆ ನೀರನ್ನು ಒದಗಿಸಲು ನಿರ್ಮಿಸಲಾಗಿದೆ. ಇಲ್ಲಿನ 194 ಗೇಟ್‌ಗಳನ್ನ ತೆರೆದು ನೀರನ್ನ ಹರಿಬಿಡಲು ಕೆಬಿಜೆಎಲ್‌ಎಲ್ ಅಧಿಕಾರಿಗಳು ಮುಂದಾಗಿದ್ದಾರೆ.
ಕ್ರೇನ್ ಮೂಲಕ ಒಂದೊಂದೇ ಗೇಟ್‌ಗಳನ್ನ ತೆರೆಯಲಾಗುತ್ತಿದೆ. ಈ ಹಿಂದೆ ನದಿಗೆ ನೀರು ಬಿಟ್ಟಾಗ ಗೇಟ್‌ಗಳು ಓಪನ್ ಆಗದೇ ಸಮಸ್ಯೆ ಉಂಟಾಗಿತ್ತು. ಈ ಹಿನ್ನೆಲೆ ಮುನ್ನೆಚ್ಚರಿಕೆಯಾಗಿ ನದಿಗೆ ನೀರು ಹರಿಸುವ ಮೊದಲೇ ಗೇಟ್‌ಗಳನ್ನ ತೆರೆಯಲಾಗುತ್ತಿದೆ