ಕಲಬುರಗಿ: ‘ಒಂದು ರಾಷ್ಟ್ರ ಒಂದು ಚುನಾವಣೆ’ಯು ದೇಶದ ಚುನಾವಣಾ ವ್ಯವಸ್ಥೆಯನ್ನು ಸುಧಾರಿಸುವ ಮಹತ್ವದ ಹೆಜ್ಜೆಯಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.
ನಗರದ ಪಿ.ಡಿ.ಎ. ಇಂಜಿನಿಯರಿಂಗ್ ಕಾಲೇಜ್ ಆಡಿಟೋರಿಯಂನಲ್ಲಿ ಪಕ್ಷದ ಜಿಲ್ಲಾ ಘಟಕ ಆಯೋಜಿಸಿದ್ದ ‘ಒಂದು ರಾಷ್ಟ್ರ ಒಂದು ಚುನಾವಣೆ’ ವಿಚಾರ ಸಂಕೀರ್ಣದಲ್ಲಿ ಮುಖ್ಯ ವಕ್ತಾರನಾಗಿ ಮಾತನಾಡಿ ‘ಒಂದು ರಾಷ್ಟ್ರ, ಒಂದು ಚುನಾವಣೆ’ ಎಂಬ ಪರಿಕಲ್ಪನೆಯು ಭಾರತದಲ್ಲಿ ಲೋಕಸಭೆ ಮತ್ತು ರಾಜ್ಯ ವಿಧಾನಸಭೆ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸುವ ಗುರಿಯನ್ನು ಹೊಂದಿದೆ. ಇದರಿಂದ ಆರ್ಥಿಕ ಸಂಪನ್ಮೂಲಗಳ ಉಳಿತಾಯವಾಗುವುದರ ಜೊತೆಗೆ ಆಡಳಿತದ ದಕ್ಷತೆ ಹೆಚ್ಚಲಿದೆ. ಸ್ವತಂತ್ರ ನಂತರದ ಭಾರತದಲ್ಲಿ ಒಂದೇ ಬಾರಿ ದೇಶದೆಲ್ಲೆಡೆ ಚುನಾವಣೆ ನಡೆಯುತ್ತಿತ್ತು. ಆದರೆ ಅಧಿಕಾರದ ದಾಹದಿಂದ ಕಾಂಗ್ರೆಸ್ ಪಕ್ಷ, ಸಂವಿಧಾನ ದುರುಪಯೋಗ ಪಡಿಸಿಕೊಂಡು, ಚುನಾವಣಾ ಚಕ್ರವನ್ನೇ ಹದಗೆಡಿಸಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು 2014 ರಿಂದ ಈ ಪರಿಕಲ್ಪನೆಯನ್ನು ರಾಷ್ಟ್ರೀಯ ಒಗ್ಗಟ್ಟಿನ ಸಂಕೇತವಾಗಿ ಉತ್ತೇಜಿಸುತ್ತಿದ್ದಾರೆ ಎಂದರು.