ನೀನು ಏನು ಮಾಡುತ್ತಿ? ಎಲ್ಲಿ ಹೋಗುತ್ತಿ ಎಂದು ನನಗೆ ಗೊತ್ತಿರಬೇಕು. ನೀನು ನನಗೆ ಹೇಳಬೇಕು ಇಲ್ಲದಿದ್ದರೆ ಅಷ್ಟೇ ಎಂದು ತಿಗಡೇಸಿ ಬಾಸು ಕಟ್ಟಪ್ಪಣೆ ಮಾಡಿದ್ದ. ಮೊದಲಿನಿಂದಲೂ ಬಾಸು ಇದೇ ರೀತಿ ಕೇಳುತ್ತಿದ್ದ. ಇದರಿಂದ ತಿಗಡೇಸಿ ತೀರ ಕಿರಿಕಿರಿ ಅನುಭವಿಸುತ್ತಿದ್ದ. ಗೆಳೆಯರ ಮುಂದೆ, ಹೆಂಡತಿಯ ಮುಂದೆ ತನಗಾದ ನೋವನ್ನು ತೋಡಿಕೊಳ್ಳುತ್ತಿದ್ದ. ಈತನಿಗೆ ಹೇಗಾದರೂ ಮಾಡಿ ಪಾಠ ಕಲಿಸಬೇಕು ಎಂದು ಅಂದುಕೊಳ್ಳುತ್ತಿದ್ದ. ತಿಗಡೇಸಿಯ ಜೀವದ ಗೆಳೆಯ ತಳವಾರ್ಕಂಟಿ ಕೊಡುತ್ತಿದ್ದ ಸಲಹೆಗಳು ಪಾಲಿಸಲಾರದ ಹಾಗೆ ಇದ್ದವು. ಕೆಲವೊಂದು ಪ್ರಯೋಗ ಮಾಡಿದರೂ ಬಾಸು ಏನೂ ಪೀಸು ಆಗಲೇ ಇಲ್ಲ. ಕೊನೆ ಪ್ರಯತ್ನವೆಂಬಂತೆ ಕಂಟ್ರಂಗಮ್ಮತ್ತಿಯ ಹತ್ತಿರ ಹೋದಾಗ ಹೇಗಿದ್ದಿ ಅಂದದ್ದೇ ತಡ ತನ್ನ ಗೋಳು ತೋಡಿಕೊಂಡ, ಈ ಬಾಸು ಇದ್ದಾನಲ್ಲ ನನಗೆ ಹೆಂಡತಿಗಿಂತಲೂ ಜಾಸ್ತಿ ಕಿರಿಕಿರಿ ಮಾಡುತ್ತಿದ್ದಾನೆ, ಇನ್ನು ನನ್ನನ್ನು ದೇವರೇ ಕಾಪಾಡಬೇಕು ಎಂದು ಹೇಳಿದ. ಒಂದೆರಡು ನಿಮಿಷ ಸುಮ್ಮನೇ ಕುಳಿತ ಕಂಟ್ರಂಗಮ್ಮತ್ತಿಯು ನೋಡು ಬಾಸ್ ಈಸ್ ಬಾಸ್. ನೀನು ಅವರಿಗೆ ಪ್ರಶ್ನೆ ಮಾಡುವ ಹಾಗಿಲ್ಲ. ಆದ್ದರಿಂದ ಅವರು ಏನು ಕೇಳುತ್ತಾರೆ ಅದನ್ನು ಹೇಳಿಬಿಟ್ಟರೆ ಮುಗಿಯಿತು ಎಲ್ಲಿ ಹೋಗಿದ್ದೆ? ಏನು ಮಾಡಿದೆ ಎಂದು ಹೇಳಿಬಿಡು ಸುಮ್ಮನೇ ಯಾಕೆ ತಲೆಕೆಡೆಸಿಕೊಳ್ಳುತ್ತಿ ಅಂದಳು. ಹೂಂ ಅಂದು ಬಂದ ತಿಗಡೇಸಿ ಮರುದಿನ ಮುಂಜಾನೆ ಏಳು ಗಂಟೆಗೆ ಎದ್ದು ಬಾಸ್ ನಂಬರ್‌ಗೆ ರಿಂಗ್ ಮಾಡಿ ಸಾ… ನಾನು ವಾಕಿಂಗ್ ಹೋಗುತ್ತಿದ್ದೇನೆ ಎಂದು ಹೇಳಿದ ಆ ಕಡೆಯಿಂದ ವೇರಿಗುಡ್ ಹೋಗ್ಬಾ ಅಂದರು. ವಾಕಿಂಗ್‌ನಿಂದ ಬಂದು, ಸಾ.. ನಾನು ವಾಕಿಂಗ್‌ನಿಂದ ಬಂದೆ ಅಂದ. ಹೂಂ ಅಂದರು ಬಾಸು, ನಂತರ ಮತ್ತೆ ರಿಂಗ್ ಮಾಡಿ ಸಾ… ನಾನು ಸ್ನಾನಕ್ಕೆ ಹೋಗುತ್ತೇನೆ ಅಂದ. ಆಯಿತು ಅಂದರು, ಅಲ್ಲಿಂದ ಬಂದು ಬಾಸ್ ದೋಸೆ ಮಾಡು ಅಂದರೆ ನನ್ನ ಹೆಂಡತಿ ಉಪ್ಪಿಟ್ಟು ಮಾಡಿದ್ದಾಳೆ ಅದನ್ನೇ ತಿನ್ನುತ್ತಿದ್ದೇನೆ ಅಂದ. ನಂತರ ಸಾರ್… ಬೈಕ್ ಸ್ಟಾರ್ಟ್ ಮಾಡ್ತಾ ಇದೇನೆ ಎಂದು ಹೇಳಿದ. ಬ್ಲೂಟೂತ್ ಹಾಕಿಕೊಂಡು ಸಾ… ನಾನು ಗೋವಿಂದಪ್ಪನ ಅಂಗಡಿ ಕರ್ವ್ನಲ್ಲಿದ್ದೇನೆ ಎಂದು ಹೇಳಿದ. ತಿಗಡೇಸಿ ಹೇಳಿದ್ದು ಕೇಳಿ ಕೇಳಿ ಬಾಸ್‌ಗೆ ತಲೆ ಗರ‍್ರೆಂದಿತ್ತು. ಕಚೇರಿಗೆ ಬಂದ ಕೂಡಲೇ ತನ್ನ ಕೊಠಡಿಗೆ ಕರೆಯಿಸಿದ ಬಾಸು… ತಿಗಡೇಸಿ ನೀನು ಎಲ್ಲೆರ ಹೋಗು, ಏನರ ಮಾಡು, ಕಚೇರಿಗೆ ಎಷ್ಟುಗಂಟೆಗಾದ್ರೂ ಬಾ… ಕೆಲಸ ಮಾಡಿದ್ರೆ ಮಾಡು ಇಲ್ಲಂದರೆ ಬುಡು… ನನಗೆ ಫೋನ್ ಮಾಡೋಕೆ ಹೋಗಬೇಡ ಎಂದು ಹೇಳಿ ನಡಿ ಇನ್ನ ಅಂದ.