ನಾಗರಿಕ ಅಣ್ವಸ್ತ್ರ ಬಳಕೆಗೆ ಹೊಸ ಒಪ್ಪಂದ ಮಾಡಿಕೊಳ್ಳುವಂತೆ ಅಮೆರಿಕ ಇರಾನ್ ಮೇಲೆ ಒತ್ತಡ ಹೇರುತ್ತಿದ್ದು, ಅದಕ್ಕೆ ಒಪ್ಪದಿದ್ದಲ್ಲಿ ಬಾಂಬ್ ದಾಳಿ ನಡೆಸುವುದಾಗಿ ಟ್ರಂಪ್ ಬೆದರಿಕೆವೊಡ್ಡಿರುವುದು ಈಗ ಭಾರತಕ್ಕೆ ತಲೆನೋವಾಗಿದೆ. ಇರಾನ್ ಬೃಹತ್ ಬಂದರು ಚಬಹಾರ್ ಅಭಿವೃದ್ಧಿಯಲ್ಲಿ ಭಾರತ ಬಂಡವಾಳ ಹೂಡಿದೆ. ಈಗ ಯುದ್ಧ ನಡೆದಲ್ಲಿ ಈ ಬಂಡವಾಳ ಹೂಡಿಕೆ ನೀರಿನಲ್ಲಿ ಹೋಮ ಮಾಡಿದಂತಾಗುತ್ತದೆ. ಟ್ರಂಪ್ ತೀರ್ಮಾನಗಳು ವಿಚಿತ್ರವಾಗಿ ಕಂಡರೂ ಅದರ ಪರಿಣಾಮಗಳು ತೀವ್ರ. ಅಕ್ರಮ ವಲಸೆಗಾರರನ್ನು ಟ್ರಂಪ್ ಕೈಕೋಳ ತೊಡಿಸಿ ಭಾರತಕ್ಕೆ ಕಳುಹಿಸಿದ್ದು, ಅಮೆರಿಕಕ್ಕೆ ಹೋಗುವ ೨೪ ವಸ್ತುಗಳ ಮೇಲಿನ ಸುಂಕವನ್ನು ಭಾರತ ರದ್ದುಪಡಿಸಿರುವುದನ್ನು ನೋಡಿದರೆ ಭಾರತ ನಿಜಕ್ಕೂ ಕಷ್ಟಕ್ಕೆ ಸಿಲುಕಿರುವಂತೆ ಕಂಡುಬರುತ್ತಿದೆ. ರಷ್ಯಾ-ಉಕ್ರೇನ್, ಇಸ್ರೇಲ್-ಹಮಾಸ್ ಯುದ್ಧದಲ್ಲೂ ಭಾರತ ತಟಸ್ಥ ನಿಲುವು ತಳೆಯಿತು. ಈಗ ಇರಾನ್-ಅಮೆರಿಕ ಯುದ್ಧ ಆರಂಭಗೊಂಡರೆ ಮೊದಲು ಹೊಡೆತ ಬೀಳುವುದು ನಮ್ಮ ಕಚ್ಚಾ ತೈಲ ಆಮದಿಗೆ ಎಂಬುದು ಸ್ಪಷ್ಟ. ನಮಗೆ ಕಚ್ಚಾ ತೈಲ ಬರುವುದೇ ಅಲ್ಲಿಂದ. ಅಮೆರಿಕ ಅದರ ಮೇಲೆ ಆರ್ಥಿಕ ದಿಗ್ಬಂಧನ ವಿಧಿಸಿದರೆ ಅದರ ಪರಿಣಾಮ ನಮ್ಮ ಮೇಲೆ ಆಗುತ್ತದೆ. ಕೆಂಪು ಸಮುದ್ರದ ಮೂಲಕ ನಮ್ಮ ವ್ಯಾಪಾರ-ವ್ಯವಹಾರ ನಡೆಯುತ್ತಿದೆ. ಅದಕ್ಕೆ ಕೊಡಲಿ ಪೆಟ್ಟು ಬೀಳುವುದಂತೂ ಖಂಡಿತ.
ಅಮೆರಿಕ-ಇರಾನ್ ಜಟಾಪಟಿ ಇಂದು ನಿನ್ನೆಯದಲ್ಲ. ೧೯೬೭ರಿಂದಲೂ ನಡೆಯುತ್ತಿದೆ. ಹಾಗೆ ನೋಡಿದರೆ ೧೯೬೭ರಲ್ಲಿ ಇರಾನ್ ಮೊದಲ ಅಣು ರಿಯಾಕ್ಟರ್ ಕಾರ್ಯಾರಂಭ ಮಾಡಿದ್ದು ಅಮೆರಿಕದ ನೆರವಿನಿಂದ. ೧೯೭೪ರಲ್ಲಿ ಇರಾನ್ ೨೩ ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಅಣು ವಿದ್ಯುತ್ ಕೇಂದ್ರಗಳನ್ನು ಹೊಂದಿತು. ಇರಾನ್ ತನ್ನ ಅಣುಶಕ್ತಿ ಸಾಮರ್ಥ್ಯ ಹೆಚ್ಚಿಸಿಕೊಂಡಂತೆ ಅಮೆರಿಕದ ಕೆಂಗಣ್ಣಿಗೆ ಗುರಿಯಾಯಿತು. ೧೯೯೬ರಲ್ಲೇ ಅಮೆರಿಕ-ಇರಾನ್ ಮತ್ತು ಲಿಬ್ಯಾ ಮೇಲೆ ಆರ್ಥಿಕ ದಿಗ್ಬಂಧನ ವಿಧಿಸಿತ್ತು. ೨೦೧೫ರಲ್ಲಿ ಅಮೆರಿಕ, ಚೀನಾ, ಬ್ರಿಟನ್, ರಷ್ಯಾ, ಫ್ರಾನ್ಸ್, ಜರ್ಮನಿ, ಐರೋಪ್ಯ ದೇಶಗಳು ಇರಾನ್ಗೆ ನಾಗರಿಕ ಅಣ್ವಸ್ತç ಬಳಕೆ ಒಪ್ಪಂದಕ್ಕೆ ಸಹಿ ಮಾಡಲು ಹೇಳಿತು. ಆದರೆ ಇರಾನ್ ಒಪ್ಪಲಿಲ್ಲ. ಈಗ ಅಮೆರಿಕ ಮತ್ತೆ ಒಪ್ಪಂದಕ್ಕೆ ಬರುವಂತೆ ಇರಾನ್ ಮೇಲೆ ಒತ್ತಡ ಹೇರುತ್ತಿದೆ. ಜಾಗತಿಕ ಮಟ್ಟದಲ್ಲಿ ಎಲ್ಲ ದೇಶಗಳೂ ಇರಾನ್ ಮೇಲೆ ಒತ್ತಡ ಹೇರಿದರೆ ಒಪ್ಪಂದಕ್ಕೆ ಸಹಿ ಹಾಕಬಹುದು. ಆದರೆ ಇರಾನ್ ನಾಯಕರು ಟ್ರಂಪ್ನನ್ನು ನಂಬುತ್ತಿಲ್ಲ. ಇಸ್ರೇಲ್ ಹಮಾಸ್ ಮೇಲೆ ದಾಳಿ ನಡೆಸುವಾಗ ಇರಾನ್ಗೆ ಸೇರಿದಂತೆ ಕೆಲವು ನೆಲೆಗಳ ಮೇಳೆ ದಾಳಿ ನಡೆಸಿದ್ದರಿಂದ ಇಸ್ರೇಲ್ ಕೂಡ ಈಗ ಇರಾನ್ ಸಖ್ಯವನ್ನು ಕಳೆದುಕೊಂಡಿದೆ. ಈಗ ಮತ್ತೆ ಟ್ರಂಪ್ ಹಳೆಯ ಗಾಯಗಳನ್ನು ಮತ್ತೆ ಕೆದಕುವ ಕೆಲಸ ಕೈಗೊಂಡಿದ್ದಾರೆ. ಟ್ರಂಪ್ ತೀರ್ಮಾನಗಳು ಹಲವು ದೇಶಗಳಿಗೆ ತಲೆನೋವಾಗಿದೆ. ಟ್ರಂಪ್ ಜಾಗತಿಕ ಮಟ್ಟದಲ್ಲಿ ಎಲ್ಲ ದೇಶಗಳಿಗೆ ನೇರ ಬೆದರಿಕೆ ಇಲ್ಲವೆ ಹೆಚ್ಚಿನ ಸುಂಕ ವಿಧಿಸುವ ಬ್ಲಾಕ್ ಮೇಲ್ ತಂತ್ರವನ್ನು ಬಳಸಲು ಆರಂಭಿಸಿದ್ದಾರೆ. ಆದರೆ ಇರಾನ್ ತಲೆಬಾಗಿಸುವ ಸ್ಥಿತಿಯಲ್ಲಿಲ್ಲ. ಅಮೆರಿಕ ೨.೧ ದಶಲಕ್ಷ ಮಿಲಿಟರಿ ಸೇನೆ ಹೊಂದಿದ್ದರೆ, ಇರಾನ್ ೧ ದಶಲಕ್ಷ ಸೇನೆಯನ್ನು ಹೊಂದಿದೆ. ಅಮೆರಿಕ ಅತಿ ಹೆಚ್ಚು ಸೇನೆಯನ್ನು ಹೊಂದಿದ್ದರೂ ಇರಾನ್ ಅಣ್ವಸ್ತçದಲ್ಲಿ ಮುಂದಿದೆ. ನೇರ ಯುದ್ಧ ನಡೆಯುವುದು ಬಹಳ ಕಡಿಮೆ. ಯುರೋನಿಯಂ ಉನ್ನತೀಕರಣದಲ್ಲಿ ಇರಾನ್ ಮುಂದಿದೆ. ಅತಿಹೆಚ್ಚು ಅಣ್ವಸ್ತç ಸಾಮರ್ಥ್ಯ ಇರುವ ಕ್ಷಿಪಣಿಗಳು ಇರಾನ್ ಬಳಿ ಇದೆ. ಅಮೆರಿಕದ ಆಯಕಟ್ಟಿನ ಮೇಲೆ ದಾಳಿ ನಡೆಸಲು ಸಿದ್ಧವಾಗಿದೆ. ಈಗ ಜಾಗತಿಕ ಮಟ್ಟದಲ್ಲಿ ಇದರ ಬಗ್ಗೆ ಬಿಸಿಬಿಸಿ ಚರ್ಚೆ ನಡೆಯುತ್ತಿವೆ. ರಷ್ಯಾ ಈಗ ಇರಾನ್ಗೆ ಬೆಂಬಲ ಸೂಚಿಸಿದೆ. ಅಕ್ರಮ ವಲಸೆಗಾರರ ಸಮಸ್ಯೆ ಬಗ್ಗೆ ಟ್ರಂಪ್ ತೆಗೆದುಕೊಂಡ ತೀರ್ಮಾನ ಐರೋಪ್ಯ ದೇಶಗಳ ಕಣ್ಣು ಕೆಂಪಗಾಗಿಸಿದೆ. ಅಮೆರಿಕದ ಎಚ್ಚರಿಕೆಯನ್ನು ಇರಾನ್ ಈಗಾಗಲೇ ತಿರಸ್ಕರಿಸಿ ಐರೋಪ್ಯ ದೇಶಗಳಿಗೆ ಸಂದೇಶ ರವಾನಿಸಿದೆ. ಒಂದು ವೇಳೆ ಅಮೆರಿಕ ಏಕಾಂಗಿಯಾದರೆ ಆಗ ಯುದ್ಧದ ಕಾರ್ಮೋಡ ಚದುರಿಹೋಗಲಿದೆ. ಟ್ರಂಪ್ ತನ್ನ ನಿಲುವಿಗೆ ಅಂಟಿಕೊಂಡಲ್ಲಿ ರಾಜಕೀಯ ಬದಲಾವಣೆ ಬರುವುದು ನಿಶ್ಚಿತ. ಬಹುತೇಕ ಪ್ರಬಲ ದೇಶಗಳಿಗೆ ತಮ್ಮಲ್ಲಿರುವ ಯುದ್ಧೋಪಕರಣಗಳ ವ್ಯಾಪಾರ ನಡೆಯಬೇಕಿದೆ. ಅದಕ್ಕಾಗಿ ದ್ವೇಷ ಬಿತ್ತುವ ಕೆಲಸ ಕೈಗೊಳ್ಳುತ್ತವೆ. ಬಡ ದೇಶಗಳು ಯಾವುದಾದರೊಂದು ಗುಂಪಿಗೆ ಸೇರುವುದು ಅನಿವಾರ್ಯ. ಅದರಲ್ಲೂ ನೈಸರ್ಗಿಕ ಸಂಪತ್ತು ಹೊಂದಿರುವ ದೇಶಗಳು ಪ್ರಬಲ ದೇಶಗಳೊಂದಿಗೆ ಅದನ್ನು ಹಂಚಿಕೊಳ್ಳಬೇಕು. ಇಲ್ಲದಿದ್ದಲ್ಲಿ ದಾಳಿ ಖಂಡಿತ. ಈಗ ಇರಾನ್ ಸರದಿ ಬಂದಿದೆ. ಆದರೆ ಇರಾನ್ ತಲೆಬಾಗುವ ಸ್ಥಿತಿಯಲ್ಲಿಲ್ಲ. ಅದಕ್ಕೆ ಅಮೆರಿಕದ ಆರ್ಥಿಕ ದಿಗ್ಬಂಧನ ಹೊಸತೇನಲ್ಲ. ಆತಂಕದ ಕ್ಷಣಗಳಂತೂ ತಲೆಎತ್ತುವುದು ಖಚಿತ.