ಇಂಗ್ಲಿಷ್ ಮಾತಾಡಲು ನಾಚಿಕೆಪಡುವ ಕಾಲ ಬರುತ್ತೆ

ನವದೆಹಲಿ: ದೇಶದಲ್ಲಿ ಇಂಗ್ಲಿಷ್ ಮಾತನಾಡುವವರು ನಾಚಿಕೆಪಡುವಂತಹ ಸಮಯ ಬಹಳ ದೂರವಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ಹೇಳಿದ್ದಾರೆ. ಮಾಜಿ ಐಎಎಸ್ ಅಧಿಕಾರಿ ಅಶುತೋಷ್ ಅಗ್ನಿಹೋತ್ರಿ ಅವರ ಮೈ ಬೂಂದ್ ಸ್ವಯಂ ಖುದ್ ಸಾಗರ್ ಹೂ ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ವಿದೇಶಿ ಭಾಷೆಗಳ ಮುಖೇನ ಭಾರತವನ್ನು ಕಲ್ಪಿಸಿಕೊಳ್ಳುವುದೂ ಅಸಾಧ್ಯ. ಏಕೆಂದರೆ ಯಾರೇ ವ್ಯಕ್ತಿಯು ಅನ್ಯ ಭಾಷೆಯ ಮೂಲಕ ನಮ್ಮ ಇತಿಹಾಸ, ಸಂಸ್ಕೃತಿ ಹಾಗೂ ಧರ್ಮವನ್ನು ಅರ್ಥ ಮಾಡಿಕೊಳ್ಳುವುದು ಅಸಾಧ್ಯ ಎಂದು ಅಭಿಪ್ರಾಯಪಟ್ಟರು.
ನಮ್ಮ ದೇಶದ ಭಾಷೆಗಳು ನಮ್ಮ ಸಂಸ್ಕೃತಿಯ ರತ್ನಗಳು. ನಮ್ಮ ಭಾಷೆಗಳಿಲ್ಲದೇ ಭಾರತೀಯರಾಗುವುದು ಅಸಾಧ್ಯ ಎಂದ ಅವರು, ಭಾರತೀಯ ಭಾಷೆಗಳಿಗೆ ಮರಳಿ ಪ್ರಾಮುಖ್ಯತೆ ತಂದುಕೊಡುವಲ್ಲಿ ಎದುರಾಗುವ ತೊಂದರೆಗಳು ನಮಗೆ ತಿಳಿದಿದೆ. ಈ ಸಂಘರ್ಷದಲ್ಲಿ ಭಾರತೀಯ ಸಮಾಜ ಗೆಲ್ಲುತ್ತದೆ ಎಂಬ ಸಂಪೂರ್ಣ ನಂಬಿಕೆ ತಮಗಿದೆ ಎಂದರು.
ನಮ್ಮ ಭಾಷೆಗಳಿಂದಲೇ ನಮ್ಮ ದೇಶವನ್ನು ಮುನ್ನಡೆಸುತ್ತೇವೆ ಎಂದು ನಾನು ಬಹಳ ಹೆಮ್ಮೆಯಿಂದಲೇ ಹೇಳುತ್ತೇನೆ. ಜೊತೆಗೆ ನಮ್ಮ ಭಾಷೆಯಲ್ಲೇ ಶಿಕ್ಷಣ, ಸಂಶೋಧನೆ, ತೀರ್ಮಾನಗಳನ್ನು ಕೈಗೊಂಡು ಜಗತ್ತನ್ನೂ ಮುನ್ನಡೆಸುತ್ತೇವೆ ಎಂದರು.