ಆರೋಗ್ಯಶೀಲ ಜನಾಂಗವಾಗಬೇಕಿರುವ ಇಂದಿನ ಮಕ್ಕಳು

ಇಂದಿನ ಮಕ್ಕಳು ಮುಂದಿನ ಜನಾಂಗ. ಇಂದಿನ ಮಕ್ಕಳು ಆರೋಗ್ಯಶೀಲರಾಗಿದ್ದರೆ ಮುಂದಿನ ಜನಾಂಗವು ಆರೋಗ್ಯವಂತವಾಗಿರುತ್ತದೆ. ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ನೀರಿಗೆ ಬಹುಮುಖ್ಯ ಸ್ಥಾನ. “ನೀರು” ಅತ್ಯಂತ ಹೊಂದಿಕೊಳ್ಳುವ, ಅತ್ಯಂತ ಘನ, ಅತ್ಯಂತ ವಿನಾಶಕಾರಿ; ಆದರೆ ಜೀವನದ ಅತ್ಯಂತ ಅವಶ್ಯಕ ವಸ್ತು. ಬ್ರಹ್ಮಾಂಡದ ಮುಕ್ಕಾಲು ಭಾಗ ಹಾಗೂ ಮಾನವದೇಹದ ಮುಕ್ಕಾಲು ಭಾಗ ನೀರಿನಿಂದ ಒಳಗೊಂಡಿದೆ. ಶುದ್ಧ ನೀರು ಸೃಷ್ಟಿಯ ತಾಯಿ. ನೀರು ಮನುಷ್ಯ ಅನುಭವದಿಂದ ಅನುಭವಕ್ಕೆ ಚಲಿಸುವ ಹಾದಿಯಲ್ಲಿನ ಶುದ್ಧೀಕರಣ ಶಕ್ತಿ. ರಕ್ತದ ಉತ್ಪಾದನೆಯಲ್ಲಿ ನೀರಿನ ಪಾತ್ರ ಮಹತ್ವದ್ದು. “ರಕ್ತ” ಶಕ್ತಿಯ ಅಭಿವ್ಯಕ್ತಿ. ರಕ್ತದ ಮೂಲಕ ಜೀವನವು ವಿವಿಧ ರೂಪಗಳಲ್ಲಿ ಪ್ರಕಟವಾಗುತ್ತದೆ. ನೀರಡಿಕೆ ಜೀವಂತಿಕೆಯ ಲಕ್ಷಣ. ನೀರು ಅಮೃತವೂ. ಎಲ್ಲ ಔಷಧಿ ನೀರಿನಲ್ಲಿರುವುದೂ ಸತ್ಯ. ನೀರಿನಲ್ಲಿ ಮುಳುಗಿ ಸತ್ತವರೆಷ್ಟು ಜನ? ಕುಡಿದು ಸತ್ತವರೂ ಸಾಕಷ್ಟು. ಬಳಸುವ ನೀರಿಗೊಂದು ನೆಲೆ ಬೇಕು; ಬಳಸುವುದರಲ್ಲಿ ಇತಿ-ಮಿತಿ-ನೀತಿ-ಮತಿ ಬೇಕು.
ದೇಹದಲ್ಲಿ ನೀರಿನ ತೀವ್ರ ಕೊರತೆ ಉಂಟಾದಾಗ ರಕ್ತದ ಉತ್ಪಾದನೆಗೆ ಮತ್ತು ರಕ್ತದ ಸರಾಗವಾದ ಹರಿವಿಗೆ ಅಡಚಣೆ ಉಂಟಾಗಿ ರಕ್ತದೊತ್ತಡ ಹಾಗೂ ಹೃದಯ ಸಂಬಂಧಿ ಸಮಸ್ಯೆಗಳಿಗೆ ಆಹ್ವಾನ ನೀಡುತ್ತದೆ. ಸೂಕ್ತ ಆಹಾರದೊಂದಿಗೆ ಸೇವಿಸುವ ನೀರಿನ ಪ್ರಮಾಣ ರಕ್ತದಲ್ಲಿನ ಕೊಲೆಸ್ಟಾçಲ್ ಮಟ್ಟವನ್ನು ನಿಯಂತ್ರಿಸುತ್ತದೆ. ಇಂದಿನ ಮಕ್ಕಳು ಸಾದಾನೀರಿನ ಬದಲು ಸಂರಕ್ಷಕಗಳು ಮತ್ತು ಬಣ್ಣದ ಆಹಾರಗಳಿಂದ ಸಮೃದ್ಧವಾದ ಬಹಳಷ್ಟು ಹಣ್ಣಿನ ರಸ, ಸಕ್ಕರೆ ತುಂಬಿದ ಸೋಡಾ, ತಂಪುಪಾನೀಯಗಳನ್ನು ಕುಡಿಯುತ್ತಿದ್ದು, ಮುಂದಿನ ಅಸ್ವಸ್ಥಪೀಳಿಗೆಯಾಗಿ ಬದಲಾಗುತ್ತಿರುವುದು ರೋಗಗ್ರಸ್ಥ ಸಮಾಜ ನಿರ್ಮಾಣಕ್ಕೆ ನಾಂದಿಹಾಡುತ್ತಿದೆ. ದೇಹದ ಕರೆಗಿಂತ ಜಾಹೀರಾತುಗಳ ಬಣ್ಣದ ಮಾತುಗಳೇ ಪ್ರಭಾವಿಯಾಗಿವೆ. ಬಹುತೇಕ ಮಕ್ಕಳ ಪಿತ್ತಕೋಶ, ಪಿತ್ತಜನಕಾಂಗದಲ್ಲಿ ಕಲ್ಲುಗಳು ಸೂಕ್ಷ್ಮರೂಪದಲ್ಲಿದ್ದು ಆಧುನಿಕಯಂತ್ರಗಳಲ್ಲಿ ಗೋಚರಿಸುವುದಿಲ್ಲ. ಕೆಫೀನ್ ಹೊಂದಿರುವ ಕೃತಕ ತಂಪುಪಾನೀಯಗಳು ಮೂತ್ರವರ್ಧಕ ಪರಿಣಾಮ ಹೊಂದಿದ್ದು, ಮೂತ್ರವಿಸರ್ಜನೆ ಹೆಚ್ಚಿಸುತ್ತವೆ. ಈ ಸಂಶ್ಲೇಷಿತ ದ್ರವಗಳನ್ನು ಹೀರಿಕೊಳ್ಳಲು ದೇಹ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಅಪೇಕ್ಷಿಸುತ್ತದೆ. ಇವುಗಳ ಸೇವನೆ ದೇಹದಲ್ಲಿನ ನೈಸರ್ಗಿಕ ನೀರಿನ ನಿಕ್ಷೇಪಗಳನ್ನು ಬರಿದುಮಾಡಿದಂತೆಯೇ. ಈ ರೀತಿಯ ಬರಿದಾಗುವಿಕೆ ದೇಹದ ಮೂಳೆ, ಸ್ನಾಯು, ಕೀಲು, ಲೋಳೆಪೊರೆ, ಗ್ರಂಥಿಗಳನ್ನು ಇನ್ನಿಲ್ಲದಂತೆ ಬಾಧಿಸಲಾರಂಭಿಸುತ್ತದೆ. ನಿರ್ಜಲೀಕರಣ ಹಲವಾರು ಶಾರೀರಿಕ ಅಸ್ವಸ್ಥತೆಗಳ ಆರಂಭಿಕಹಂತ ಮಾತ್ರವಲ್ಲ; ಭವಿಷ್ಯದ ಅಪಾಯದ ಮುನ್ಸೂಚನೆಯೂ. ನೀರು ದೈಹಿಕ ಕಾರ್ಯನಿರ್ವಹಣೆ, ಕಾರ್ಯಕ್ಷಮತೆಗೆ ಮಾತ್ರವಲ್ಲದೆ ಆರೋಗ್ಯವಂತ ಭಾವನಾತ್ಮಕ ಮತ್ತು ಮಾನಸಿಕಸ್ಥಿತಿಯನ್ನು ಕಾಪಾಡಿಕೊಳ್ಳಲೂ ಅತ್ಯಗತ್ಯ.
ಸ್ಥೂಲಕಾಯ ಹೊಂದಿರುವವರು ಬಾಯಾರಿಕೆಯನ್ನು ಹಸಿವೆಂದು ತಪ್ಪಾಗಿ ತಿಳಿದು ಹೊಟ್ಟೆತುಂಬಾ ತಿಂದನಂತರವೂ ಮತ್ತೆ ಪುನಃ ತಿನ್ನುವಂತೆ ಪ್ರೇರೇಪಿಸುತ್ತದೆ. ಹೀಗಾಗಿ ಪ್ರತಿ ಆಹಾರಸೇವನೆಯ ಅರ್ಧಗಂಟೆ ಮೊದಲು ಒಂದು ಲೋಟ ನೀರುಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳುವ ಮೂಲಕ ಎರಡು ಸಂವೇದನೆಗಳನ್ನು (ಬಾಯಾರಿಕೆ ಮತ್ತು ಹಸಿವು) ಪ್ರತ್ಯೇಕಿಸಲು ಹಾಗೂ ಅತಿಯಾಗಿ ತಿನ್ನುವ ಚಟವನ್ನು ತಪ್ಪಿಸಬಹುದು. ಸ್ಥೂಲಕಾಯ ಹೊಂದಿರುವವರಿಗೆ ನಡಿಗೆ ಮತ್ತು ವ್ಯಾಯಾಮ ಅನಿವಾರ್ಯವಾದರೂ ಸ್ಥೂಲಕಾಯತೆಯ ವಿರುದ್ಧ ಹೋರಾಡಲು ಹೆಚ್ಚಿನ ನೀರುಸೇವನೆ ನಿರ್ಣಾಯಕ. ಮೆದುಳು ದೇಹದ ಶಕ್ತಿ ಹಾಗೂ ನೀರಿನ ಅವಶ್ಯಕತೆಗಳನ್ನು ಹಸಿವು ಮತ್ತು ಬಾಯಾರಿಕೆಯ ಕಡುಬಯಕೆಗಳೆಂದೇ ಪರಿಗಣಿಸುತ್ತದೆ. ಜನರು ಇದನ್ನು ಸಾಮಾನ್ಯವಾಗಿ ‘ತಿನ್ನುವ ಬಯಕೆ’ ಎಂದು ತಪ್ಪಾಗಿ ಭಾವಿಸಿ ನೀರುಕುಡಿದು ಬಾಯಾರಿಕೆ ಹಿಂಗಿಸುವ ಬದಲು ಹೊಟ್ಟೆತುಂಬಾ ತಿಂದು ಹಸಿವನ್ನು ನೀಗಿಸಿಕೊಳ್ಳುತ್ತಾರೆ. ಸಾಮಾನ್ಯವಾಗಿ ಬೆಳಗಿನ ಉಪಾಹಾರ, ಮಧ್ಯಾಹ್ನದ ಊಟ ಹಾಗೂ ರಾತ್ರಿ ಆಹಾರದ ಸಮಯಗಳಲ್ಲಿ ಕಾಣಿಸಿಕೊಳ್ಳುವುದನ್ನು ಹೊರತುಪಡಿಸಿ ಉಳಿದಂತೆ ಕಾಣಿಸುವುದು ನೀರಿನ ಕೊರತೆಯಿಂದ ಉಂಟಾದ ಬಾಯಾರಿಕೆಯೇ ಹೊರತು ಹಸಿವಲ್ಲ. ನೀರು ಕೇವಲ ಒಂದು ದ್ರವವಲ್ಲ ಮತ್ತು ನೀರಿಗೆ ಪರ್ಯಾಯವಿಲ್ಲ. ಕಾಫಿ, ಚಹಾ, ಬಿಯರ್, ಮದ್ಯದಂತಹ ಪಾನೀಯಗಳ ದಿನನಿತ್ಯದ ಸೇವನೆ ದೇಹದಲ್ಲಿ ಮಾತ್ರವಲ್ಲ; ನರಮಂಡಲದಲ್ಲೂ ನಿರ್ಜಲೀಕರಣ ಉಂಟುಮಾಡುತ್ತದೆ. ಈ ರೀತಿಯ ನಿರ್ಜಲೀಕರಣದಿಂದ ಕಣ್ಣಿನ ದೃಷ್ಟಿ ಮತ್ತು ಮೆದುಳಿನ ಸ್ಮರಣಶಕ್ತಿಗೆ ತೀವ್ರ ಅಡಚಣೆ ಉಂಟುಮಾಡುತ್ತದೆ. ಮರೆವಿನ ಕಾಯಿಲೆ ಇರುವವರು ನೀರನ್ನು ಹೊರತುಪಡಿಸಿ ಬೇರಾವುದೇ ಪಾನೀಯ ಸೇವಿಸಬಾರದು. ವಯಸ್ಸಾದವರಲ್ಲಿ ಬಾಯಾರಿಕೆಯ ಗ್ರಹಿಕೆಯ ತೀಕ್ಷ್ಣತೆ ಕ್ರಮೇಣ ಕುಂಠಿತವಾಗುತ್ತದೆ. ಎಲ್ಲಿವರೆಗೆಂದರೆ; ಬಾಯಾರಿಕೆ ಪ್ರಾರಂಭವಾಗಿ ೨೪ಗಂಟೆ ಕಳೆದರೂ ಅವರಿಗೆ ಬಾಯಾರಿಕೆಯಾಗಿದೆ ಎಂಬುದು ಪ್ರಜ್ಞೆಗೇ ಬರುವುದಿಲ್ಲ. ಹೀಗಾಗಿ ವಯಸ್ಸಾದವರಿಗೆ ಆಗಾಗ ನೀರುಕುಡಿಯುವಂತೆ ನೆನಪಿಸಬೇಕು. ಮಿದುಳು ಸದಾ ಸಕ್ರಿಯವಾಗಿರುವುದರಿಂದ ಸಹಜವಾಗಿಯೇ ಸಮೃದ್ಧ ನೀರಿನ ಪೂರೈಕೆ ಅಪೇಕ್ಷಿಸುತ್ತದೆ. ಮಿದುಳಿನ ಅಂಗಾಂಶಗಳಿಗೆ ನೀರಿನ ಕೊರತೆ ಉಂಟಾದಾಗ ಭಯ, ಆತಂಕ, ಅಭದ್ರತೆ, ನಿರಂತರ ಭಾವನಾತ್ಮಕ ಮತ್ತು ವೈವಾಹಿಕಸಂಬಂಧಗಳಲ್ಲಿನ ಸಮಸ್ಯೆ, ಖಿನ್ನತೆ, ಒತ್ತಡಗಳಿಗೆ ಕಾರಣವಾಗುತ್ತದೆ.
ನೆಗಡಿಯ ತಪ್ಪುನಿರ್ವಹಣೆಯೇ ಇಂದು ಕಾಯಿಲೆಯಾಗಿ ಬದಲಾಗುತ್ತಿದೆ. ಆರೋಗ್ಯವಂತ ಮನುಷ್ಯನ ದೇಹದಲ್ಲಿ ಶೇಖರಗೊಂಡಿರುವ ಅಧಿಕ ಉಷ್ಣಾಂಶವನ್ನು ದೇಹ ವರ್ಷದಲ್ಲಿ ಎರಡು ಬಾರಿ ಸೀನುಗಳು ಮತ್ತು ಮೂಗುಸೋರುವ ಮೂಲಕ ಹೊರಹಾಕುವ ಪ್ರಕ್ರಿಯೆಯೇ ನೆಗಡಿ. ಸಾಮಾನ್ಯವಾಗಿ ಈ ಪ್ರಕ್ರಿಯೆ ೩-೪ ದಿನಗಳಲ್ಲಿ ಮುಗಿದುಹೋಗುತ್ತದೆ. ನೆಗಡಿ ನಿಲ್ಲಲು ಔಷಧಿಸೇವಿಸಿದರೆ ಆರುದಿನಗಳವರೆಗೂ ಮುಂದುವರಿಯುತ್ತದೆ. ನೆಗಡಿಯನ್ನು ಹತ್ತಿಕ್ಕಿದರೆ ಅಥವಾ ತಡೆಹಿಡಿದರೆ ಗಂಜಿಯಂಥ ಲೋಳೆ ತಯಾರಾಗಿ ತಲೆಯಲ್ಲಿ ಮತ್ತು ಮೂಗಿನ ಒಳಪದರದ ಸುತ್ತಲೂ ಇರುವ ಚೀಲದಂತಹ ಪಾಕೆಟ್‌ನಲ್ಲಿ ಶೇಖರಣೆಗೊಳ್ಳುತ್ತಾ ಹೋಗುತ್ತದೆ. ಇದನ್ನೇ ‘ಸೈನಸ್’ ಎನ್ನುವುದು. ಕೆಲವೊಂದು ಸಾರಿ ಈ ದ್ರವವನ್ನು ಚುಚ್ಚುವ ಮೂಲಕ ಹೊರಬರುವಂತೆ ಮಾಡುತ್ತಾರೆ; ಆದರೆ ನೆಗಡಿಯ ಮೂಲಸಮಸ್ಯೆ ನಿವಾರಣೆಯಾಗಿರುವುದಿಲ್ಲ. ಮತ್ತೆ ಅರೆಬರೆ ದ್ರವ ತುಂಬಿಕೊಂಡು ಸೈನಸ್ ಸಮಸ್ಯೆ ದೀರ್ಘಕಾಲೀನವಾಗುತ್ತದೆ.
ಔಷಧಿಯಿಂದ ನೆಗಡಿಯನ್ನು ತಡೆಯುವ ಪ್ರಯತ್ನದಲ್ಲಿ ತಾತ್ಕಾಲಿಕವಾಗಿ ಒಣಗಿದಂತೆ ಕಂಡರೂ, ದೇಹ ಸಾಮಾನ್ಯಸ್ಥಿತಿಗೆ ಮರಳುತ್ತಿದ್ದಂತೆ ಸಮಸ್ಯೆ ಮತ್ತೆ ಮರುಕಳಿಸುತ್ತದೆ. ಪುನಃ ಔಷಧಿ ಸೇವನೆಮಾಡಿದಾಗ ಹಿಂದಿಗಿಂತ ಹೆಚ್ಚಿನ ಶಕ್ತಿಶಾಲಿಯಾದ ಔಷಧಿಯನ್ನು ಅಪೇಕ್ಷಿಸುತ್ತದೆ. ಈ ರೀತಿಯ ಪುನರಾವರ್ತನೆ ಅಲರ್ಜಿಯಾಗಿ ಪರಿವರ್ತಿತವಾಗಿ ಅಲ್ಲಿವರೆಗೆ ಸಹಜವಾಗಿ ಕಾರ್ಯನಿರ್ವಹಿಸುತ್ತಿದ್ದ ಥೈರಾಯ್ಡ್/ಪ್ಯಾರಾಥೈರಾಯ್ಡ್ ಗ್ರಂಥಿಗಳಿಗೆ ತೀವ್ರತೆರನ ಹಾನಿಯುಂಟಾಗುತ್ತದೆ. ನೆಗಡಿಯ ಅಸಮರ್ಪಕ ನಿರ್ವಹಣೆ ಪ್ರಥಮವಾಗಿ ಥೈರಾಯ್ಡ್/ಪ್ಯಾರಾಥೈರಾಯ್ಡ್ ಗ್ರಂಥಿಗಳು, ನಂತರದಲ್ಲಿ ಲೈಂಗಿಕಗ್ರಂಥಿಗಳು, ಅದರ ಪರಿಣಾಮವಾಗಿ ಶ್ವಾಸಕೋಶಗಳ ಮೇಲೆ ಒತ್ತಡ ಬಿದ್ದ ಪರಿಣಾಮವಾಗಿ ಅಸ್ತಮಾ ಸಮಸ್ಯೆ ಉಂಟಾದಾಗ ಅಸ್ತಮಾಕ್ಕಾಗಿ ಸೇವಿಸುವ ಆಂಟಿಬಯೋಟಿಕ್ ಮತ್ತು ಶಕ್ತಿಶಾಲಿ ಔಷಧಿಗಳಿಂದಾಗಿ ದೇಹದಲ್ಲಿ ಅತ್ಯಧಿಕ ಪ್ರಮಾಣದ ಉಷ್ಣಾಂಶ ಉಂಟಾಗುತ್ತದೆ. ಈ ಉಷ್ಣತೆ ಪಿತ್ತವಿಕಾರಗಳು ಹಾಗೂ ಕರುಳುಹುಣ್ಣಿಗೆ ಕಾರಣವಾಗಿ ಬದುಕು ಯಾತನಾಮಯ! ದೇಹದಲ್ಲಿ ನೀರಿನಂಶ ಜೀರ್ಣಶಕ್ತಿಯ ಮೇಲೆ ಅವಲಂಬಿತವಾಗಿದೆ. ಜೀರ್ಣಶಕ್ತಿ ಕುಂಠಿತವಾದಾಗಲೆಲ್ಲ ದೇಹದ ಉಷ್ಣತೆ ಕಡಿಮೆಯಾಗಿ ನೀರು ಶೇಖರಣೆಯಾಗುತ್ತಾ ದೇಹ ಶೀತಮಯವಾಗುತ್ತದೆ. ಜೀರ್ಣಗೊಂಡ ಆಹಾರ ರಕ್ತವಾಗುವ ಕ್ರಿಯೆಯೂ ಅತ್ಯಂತ ನಿಧಾನಗತಿಗೆ ಇಳಿಯುವುದರಿಂದ ಶ್ವಾಸಕೋಶ, ಗಂಟಲು, ಎದೆಭಾಗದಲ್ಲಿ ಹೆಚ್ಚಿನ ಕಫ ಸೇರಿಕೊಳ್ಳುತ್ತದೆ. ಆರಂಭದ ಹಂತದಲ್ಲಿ ತಡೆಗಟ್ಟದೇ ಹೋದರೆ ಬ್ರಾಂಕೈಟಿಸ್ ಆಗಿ ಪರಿವರ್ತನೆಗಳ್ಳುತ್ತದೆ. ಸರಳವಾದ ಶೀತ ಔಷಧಗಳ ಬಾಹ್ಯ ಹಸ್ತಕ್ಷೇಪದಿಂದ ನ್ಯೂಮೋನಿಯಾ ಆಗಿ ಬದಲಾದಾಗ; ಮರುಕಳಿಸುವ ಮೈಗ್ರೇನ್ ಮುಂದೊಂದು ದಿನ ಮಾನಸಿಕಸ್ಥಗಿತಕ್ಕೆ ಕಾರಣವಾದಾಗ; ಅಧಿಕ ರಕ್ತದೊತ್ತಡ ಹೃದಯಾಘಾತಕ್ಕೆ ಕಾರಣವಾದಾಗ;
ಹೊಟ್ಟೆಯ ಉರಿಯೂತ ಕ್ಯಾನ್ಸರ್ ಆದಾಗ ಜೀವಕ್ಕೆ ಮಾರಕ. ಇದರ ಬದಲಿಗೆ ನಾಲ್ಕುದಿನದ ಸಾಮಾನ್ಯ ನೆಗಡಿಯನ್ನು ಅನುಭವಿಸುವುದೇ ಒಳ್ಳೆಯದಲ್ಲವೇ? ಶೇ. ೮೦ರಷ್ಟು ಮಂದಿ ಅಸ್ತಮಾರೋಗಿಗಳಲ್ಲಿ ಸಾಮಾನ್ಯ ನೆಗಡಿಯನ್ನು ಸರಿಯಾಗಿ ನಿರ್ವಹಿಸದಿರುವುದೇ ಕಾರಣ. “ಪ್ರಿವೆಂಟ್ ಡಿಹೈಡ್ರೇಷನ್ ಪ್ರಿವೆಂಟ್ ಡಿಸೀಸ್” ಎಂಬುದು ಜೀವನದ ಧ್ಯೇಯವಾಕ್ಯವಾಗಬೇಕು.