ಆತ್ಮಹತ್ಯೆಗೆ ಶರಣಾದ ಸಚಿನ್ ಗುತ್ತಿಗೆದಾರನೇ ಅಲ್ಲ…

ಬೆಂಗಳೂರು: ಸಚಿನ್ ಪಂಚಾಳ ಗುತ್ತಿಗೆದಾರನೇ ಅಲ್ಲ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಜಗನ್ನಾಥ್ ಶೆಗಜಿ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ಜಗನ್ನಾಥ್ ಶೆಗಜಿ, ಸಚಿನ್ ಗುತ್ತಿಗೆದಾರ ಎಂದು ಎಲ್ಲೂ ನೋಂದಣಿ ಇಲ್ಲ. ಗುತ್ತಿಗೆದಾರರ ಸಂಘದ ಬೀದರ್ ಘಟಕದಿಂದಲೂ ಮಾಹಿತಿ ಪಡೆಯಲಾಗಿದೆ. ಇತರೆ ಜಿಲ್ಲೆಗಳಿಂದಲೂ ಗುತ್ತಿಗೆದಾರ ಅಲ್ಲವೆಂದು ಮಾಹಿತಿ ಲಭ್ಯವಾಗಿದೆ, ಧಾರವಾಡ ಇಂಜಿನಿಯರ್ ಕಚೇರಿಯಲ್ಲೂ ಗುತ್ತಿಗೆದಾರ ಎಂದು ಎಲ್ಲೂ ಕೂಡ ನೋಂದಣಿ ದಾಖಲೆ ಇಲ್ಲ. ಎಲ್ಲೂ ಕೂಡ ಸಚಿನ್ ಪಂಚಾಳ್ ಹೆಸರು ಗುತ್ತಿಗೆದಾರ ಎಂದು ನಮೂದು ಆಗಿಲ್ಲ ಎಂದಿದ್ದಾರೆ.

ಪ್ರಧಾನಿ ಮೋದಿಗೆ ಪತ್ರ: ಸಚಿನ್‌ ಪ್ರಕರಣ ಮುಚ್ಚಿ ಹಾಕಲು ರಾಜ್ಯ ಕಾಂಗ್ರೆಸ್ ಸರ್ಕಾರ ಯತ್ನಿಸುತ್ತಿದೆ ಎಂದು ಎಂದು ಸಚಿನ್ ಸಹೋದರಿ ಸುರೇಖಾ ಆರೋಪಿಸಿದ್ದಾರೆ. ಸಚಿನ್ ಗುತ್ತಿಗೆದಾರ ಇದಾನೆ ಅಂತಾ ನಾವು ಯಾವತ್ತು ಹೇಳಿಕೊಂಡಿಲ್ಲ. ಸಂಘದವರೇ ಬಂದು ಕೇಳಿದ್ರು ಅವನ ಹತ್ರ ಲೈಸೆನ್ಸ್ ಇದೆಯಾ ಎಂದು.? ಲೈಸೆನ್ಸ್ ಇರುವ ಬಗ್ಗೆ ನಮಗೆ ಗೊತ್ತಿಲ್ಲ, ಎಲ್ಲಾ ಡಾಕ್ಯುಮೆಂಟ್ಸ್ ಕಲಬುರಗಿ ಆಫೀಸ್‌ನಲ್ಲಿದ್ದವು. ಈಗಾಗಲೇ ಕಲಬುರಗಿ ಕಚೇರಿಯಲ್ಲಿ ಎಲ್ಲಾ ದಾಖಲೆಗಳು ನಾಶ ಮಾಡಿದ್ದಾರೆ, ಡೆತ್ ನೋಟ್​ನಲ್ಲಿ ಉಲ್ಲೇಖವಾದ ಆರೋಪಿಗಳನ್ನು ಈವರೆಗೆ ತನಿಖೆಗೆ ಒಳಪಡಿಸಿಲ್ಲ. ಇಲ್ಲಿವರೆಗೆ ತನಿಖಾಧಿಕಾರಿಗಳು ಯಾವುದೇ ಮಾಹಿತಿ ಕೊಟ್ಟಿಲ್ಲ, ಸಚಿನ್‌ ಸಾವು ಹೊಂದಿ 7 ದಿನ ಆದರೂ ಸಹ ಯಾವುದೇ ಎಫ್​ಎಸ್​ಎಲ್ ವರದಿ, ಮರಣೋತ್ತರ ಪರೀಕ್ಷೆ ವರದಿ ಬಗ್ಗೆ ನಮಗೆ ಮಾಹಿತಿ ನೀಡಿಲ್ಲ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯುತ್ತೇವೆ ಎಂದಿದ್ದಾರೆ